ಶನಿವಾರ, ಜುಲೈ 31, 2021
23 °C

ಇಂಗ್ಲೆಂಡ್ ಎದುರಿನ ಭಾರತ ತಂಡದ ಏಕದಿನ ಕ್ರಿಕೆಟ್‌ ಸರಣಿ ರದ್ದು ಸಾಧ್ಯತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಇಂಗ್ಲೆಂಡ್ ತಂಡದ ವಿರುದ್ಧ ಭಾರತದ ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್ ಸರಣಿ ರದ್ದಾಗುವ ಸಾಧ್ಯತೆ ಹೆಚ್ಚಾಗಿದೆ. ಒಟ್ಟು ಆರು ಪಂದ್ಯಗಳ ಸರಣಿಯನ್ನು ಸೆಪ್ಟೆಂಬರ್‌ನಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಕೋವಿಡ್–19 ಪ್ರಕರಣಗಳು ದಿನೇ ದಿನೇ ಏರುಗತಿಯಲ್ಲಿ ಸಾಗುತ್ತಿರುವುದರಿಂದ ಸರಣಿಯ ಮೇಲೆ ಕರಿನೆರಳು ಬಿದ್ದಿದೆ. ಮುಂದಿನ ತಿಂಗಳಲ್ಲಿ ನ್ಯೂಜಿಲೆಂಡ್ ’ಎ‘ ತಂಡದ ವಿರುದ್ಧ ನಡೆಸಲು ಉದ್ದೇಶಿಸಿದ್ದ ಪಂದ್ಯಗಳನ್ನು ಕೂಡ ಕೈಬಿಡುವ ಸಾಧ್ಯತೆಗಳು ಇವೆ.

ಸರಣಿಗಳನ್ನು ರದ್ದು ಮಾಡುವ ಕುರಿತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕೃತವಾಗಿ ಈ ವರೆಗೆ ಘೋಷಣೆ ಮಾಡಿಲ್ಲ. ಆದರೆ ಸದ್ಯದಲ್ಲೇ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

’ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ತಲಾ ಮೂರು ಏಕದಿನ ಮತ್ತು ಟ್ವೆಂಟಿ–20 ಪಂದ್ಯಗಳ ಸರಣಿಯನ್ನು ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ ತಂಡವು ಭಾರತಕ್ಕೆ ಬರಲು ಒಪ್ಪುವ ಸಾಧ್ಯತೆಗಳಿಲ್ಲ‘ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 

’ಭಾರತ ತಂಡದ ಪ್ರವಾಸ ಮತ್ತು ಭವಿಷ್ಯದ ಕಾರ್ಯಕ್ರಮಗಳ ಬಗ್ಗೆ ಶುಕ್ರವಾರ ನಡೆಯಲಿರುವ ಅಪೆಕ್ಸ್ ಸಮಿತಿ ಸಭೆಯಲ್ಲಿ ಚರ್ಚೆಗೆ ಬರುವ ಪ್ರಮುಖ ವಿಷಯವಾಗಲಿದೆ. ನಂತರವಷ್ಟೇ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ‘ ಎಂದು ಕೂಡ ಅವರು ವಿವರಿಸಿದರು.

ಭಾರತ ಪ್ರವಾಸದ ಬಗ್ಗೆ ಇಂಗ್ಲೆಂಡ್‌ನ ಮಾಧ್ಯಮಗಳಲ್ಲೂ ಸುದ್ದಿಗಳು ಪ್ರಕಟವಾಗುತ್ತಿವೆ. ಭಾರತದಲ್ಲಿ ಇಂಗ್ಲೆಂಡ್ ತಂಡದ ಏಕದಿನ ಮತ್ತು ಟ್ವೆಂಟಿ–20 ಸರಣಿ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದೆ. ಆದರೆ ಅದು ಈ ವರ್ಷ ಅಲ್ಲ, ಮುಂದಿನ ವರ್ಷದ ಸೆಪ್ಟೆಂಬರ್‌ನಲ್ಲಿ ಎಂದು ವರದಿಗಳು ಹೇಳುತ್ತಿವೆ.

ಇಂಗ್ಲೆಂಡ್‌ನಲ್ಲಿ ಕ್ರಿಕೆಟ್ ಚಟುವಟಿಕೆ ಈಗಾಗಲೇ ಆರಂಭಗೊಂಡಿದ್ದು ಕಳೆದ ವಾರ ವೆಸ್ಟ್ ಇಂಡೀಸ್ ಎದುರಿನ ಮೊದಲ ಟೆಸ್ಟ್ ಪಂದ್ಯ ನಡೆದಿದೆ. ಎರಡನೇ ಟೆಸ್ಟ್ ಈ ವಾರ ನಡೆಯಲಿದೆ. ಮೂರನೇ ಪಂದ್ಯದ ನಂತರ ಪಾಕಿಸ್ತಾನ ಎದುರು ಇಂಗ್ಲೆಂಡ್ ತಂಡ ಮೂರು ಟೆಸ್ಟ್ ಮತ್ತು ಮೂರು ಟ್ವೆಂಟಿ–20 ಪಂದ್ಯಗಳ ಸರಣಿಯನ್ನು ಆಡಲಿದೆ. 

ಕೋವಿಡ್ –19 ನಿಯಂತ್ರಣಕ್ಕೆ ಬಂದರೆ ಆಗಸ್ಟ್ ತಿಂಗಳಲ್ಲಿ ತರಬೇತಿ ಶಿಬಿರಗಳನ್ನು ಆಯೋಜಿಸಬಹುದಾಗಿದೆ. ಆದರೆ ಯಾವುದೇ ಕಾರಣಕ್ಕೂ ಪಂದ್ಯಗಳನ್ನು ಆಯೋಜಿಸಲಾಗದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾ ತಂಡವು ಮಾರ್ಚ್ ತಿಂಗಳಲ್ಲಿ ಭಾರತ ಪ್ರವಾಸ ಕೈಗೊಂಡಿತ್ತು. ಧರ್ಮಶಾಲಾದಲ್ಲಿ ನಡೆಯಬೇಕಾಗಿದ್ದ ಮೊದಲ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಉಳಿದ ಎರಡು ಪಂದ್ಯಗಳನ್ನು ಕೋವಿಡ್ ಸೋಂಕು ಹರಡುವ ಆತಂಕದಿಂದ ಅರ್ಧಕ್ಕೇ ಸ್ಥಗಿತಗೊಳಿಸಲಾಗಿತ್ತು.

ನಂತರ ಲಾಕ್‌ಡೌನ್ ಅವಧಿಯಲ್ಲಿ ಕ್ರಿಕೆಟ್ ಆಟಗಾರರು ಮನೆಗಳಲ್ಲೇ ಕಾಲ ಕಳೆದಿದ್ದರು. ಅನ್‌ಲಾಕ್ ಆರಂಭಗೊಂಡ ನಂತರ ಕ್ರೀಡಾ ಅಭ್ಯಾಸಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದರೂ ಸಮರ್ಪಕವಾದ ಅಭ್ಯಾಸ ಇನ್ನೂ ಆರಂಭಗೊಂಡಿಲ್ಲ.

ಫೆಬ್ರುವರಿಯಲ್ಲಿ ಭಾರತ ತಂಡ ಕೊನೆಯದಾಗಿ ಪಂದ್ಯಗಳನ್ನು ಆಡಿತ್ತು. ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದ ತಂಡ ಎರಡು ಟೆಸ್ಟ್ ಪಂದ್ಯಗಳನ್ನು ಆಡಿತ್ತು. ಈ ವರ್ಷದ ಅಕ್ಟೋಬರ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು ಮೂರು ಟ್ವೆಂಟಿ–20 ಪಂದ್ಯಗಳನ್ನು ಆಡಲಿದೆ. ನಂತರ ಟ್ವೆಂಟಿ–20 ವಿಶ್ವಕಪ್ ಟೂರ್ನಿ ನಡೆಯಲಿದೆ. ಆದರೆ ಅದರ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಹೊರಬೀಳಲಿಲ್ಲ. ಈ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಭವಿಷ್ಯವೂ ತೂಗುಯ್ಯಾಲೆಯಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು