ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಡಗೈ ಜೋಡಿ’ಯ ಮೋಡಿ; ಅರಳಿದ ಸಿಹಿಗನಸು

ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿ: ಹಿನ್ನಡೆಯ ಭೀತಿಯಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡ
Last Updated 5 ಜನವರಿ 2019, 20:26 IST
ಅಕ್ಷರ ಗಾತ್ರ

ಸಿಡ್ನಿ: ಶನಿವಾರ ಸಂಜೆಯ ವೇಳೆಗೆ ಸಿಡ್ನಿ ಕ್ರಿಕೆಟ್ ಮೈದಾನದ ಮೇಲೆ ಆಗಸದಲ್ಲಿ ಮೋಡಗಳು ದಟ್ಟೈಸಿದ್ದವು. ಇತ್ತ ಆಸ್ಟ್ರೇಲಿಯಾ ಪಾಳಯದಲ್ಲಿಯೂ ನಿರಾಸೆಯ ಕಾರ್ಮೋಡಗಳು ತೇಲಾಡುತ್ತಿದ್ದವು. ಅದಕ್ಕೆ ಕಾರಣವಾಗಿದ್ದು ಭಾರತ ತಂಡದ ಚೈನಾಮೆನ್ ಬೌಲರ್ ಕುಲದೀಪ್ ಯಾದವ್ (71ಕ್ಕೆ3) ಮತ್ತು ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ (62ಕ್ಕೆ2) ಅವರ ಸ್ಪಿನ್ ಮೋಡಿ.

ಇಲ್ಲಿ ನಡೆಯುತ್ತಿರುವ ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಕೊನೆಯ ಪಂದ್ಯದ ಮೊದಲ ಎರಡು ದಿನಗಳಲ್ಲಿ ಚೇತೇಶ್ವರ್ ಪೂಜಾರ, ರಿಷಭ್ ಪಂತ್ ಅವರಿಬ್ಬರ ಶತಕ, ಮಯಂಕ್ ಅಗರವಾಲ್ ಮತ್ತು ಜಡೇಜ ಅವರ ಅರ್ಧಶತಕಗಳ ಅಬ್ಬರದಲ್ಲಿ ಆತಿಥೇಯರು ಸುಸ್ತಾಗಿದ್ದರು. ಇದರಿಂದಾಗಿ ಭಾರತವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ 622 ರನ್‌ಗಳ ದೊಡ್ಡ ಬೆಟ್ಟವನ್ನು ಬೆನ್ನಟ್ಟಿದ್ದ ಆತಿಥೇಯರು ಶನಿವಾರ 83.3 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 236 ರನ್ ಗಳಿಸಿದರು. ದಿನದಾಟ ಮುಗಿಯುವ ಒಂದು ಗಂಟೆ ಮೊದಲು ಸುರಿದ ಮಳೆಯಿಂದಾಗಿ ಪಂದ್ಯ ಸ್ಥಗಿತವಾಯಿತು. ಪೀಟರ್ ಹ್ಯಾಂಡ್ಸ್‌ಕಂಬ್ (ಬ್ಯಾಟಿಂಗ್ 28) ಮತ್ತು ಪ್ಯಾಟ್ ಕಮಿನ್ಸ್‌ (ಬ್ಯಾಟಿಂಗ್ 25) ಕ್ರೀಸ್‌ನಲ್ಲಿದ್ದಾರೆ. ಇನಿಂಗ್ಸ್‌ ಲೆಕ್ಕ ಚುಕ್ತಾ ಮಾಡಲು ಇನ್ನೂ 386 ರನ್‌ಗಳನ್ನು ಗಳಿಸಬೇಕು. ಫಾಲೋ ಆನ್ ತಪ್ಪಿಸಿಕೊಳ್ಳಲು ಇನ್ನೂ 186 ರನ್‌ಗಳನ್ನು ಹೊಡೆಯಬೇಕು.

ಭಾರತವು ಸರಣಿಯಲ್ಲಿ ಈಗಾಗಲೇ 2–1ರಿಂದ ಮುಂದಿದೆ. ವಿರಾಟ್ ಕೊಹ್ಲಿ ಬಳಗವು ಸಿಡ್ನಿಯಲ್ಲಿಯೂ ಗೆದ್ದು ಆಸ್ಟ್ರೇಲಿಯಾದಲ್ಲಿ ಇದೇ ಮೊದಲ ಸಲ ಸರಣಿ ಗೆಲುವಿನ ಪಟಾಕಿ ಸಿಡಿಸುವ ಕನಸು ಕಾಣುತ್ತಿದೆ.

ಬೆಳಿಗ್ಗೆಯ ಅವಧಿಯಲ್ಲಿ ಭಾರತದ ಬೌಲರ್‌ಗಳನ್ನು ಎಚ್ಚರಿಕೆಯಿಂದ ಎದುರಿಸಿದ ಮಾರ್ಕಸ್ ಹ್ಯಾರಿಸ್ (79; 120ಎಸೆತ, 8ಬೌಂಡರಿ) ಮತ್ತು ಉಸ್ಮಾನ್ ಖ್ವಾಜಾ (27; 71ಎಸೆತ, 3ಬೌಂಡರಿ) ಮೊದಲ ವಿಕೆಟ್‌ಗೆ 72 ರನ್ ಸೇರಿಸಿದರು. ಶುಕ್ರವಾರ ಸಂಜೆ ಉಸ್ಮಾನ್ ಅವರ ಕ್ಯಾಚ್‌ ಅನ್ನು ರಿಷಭ್ ಪಂತ್ ಕೈ ಚೆಲ್ಲಿದ್ದರು. ಮೂರನೇ ದಿನದ 22ನೇ ಓವರ್‌ನಲ್ಲಿ ಕುಲದೀಪ್ ತಮ್ಮ ಮೊದಲ ಬಲಿಯನ್ನು ಉಸ್ಮಾನ್ ರೂಪದಲ್ಲಿ ಪಡೆದರು.

ಇನ್ನೊಂದು ಬದಿಯಲ್ಲಿ ನೆಲಕಚ್ಚಿ ಆಡುತ್ತಿದ್ದ ಮಾರ್ಕಸ್ 67ನೇ ಎಸೆತದಲ್ಲಿ ಅರ್ಧಶತಕದ ಗಡಿ ಮುಟ್ಟಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಇದು ಅವರ ಎರಡನೇ ಅರ್ಧಶತಕ.

ಕೆಳಮಟ್ಟದಲ್ಲಿ ಪುಟಿದು ತಿರುವು ಪಡೆಯುತ್ತಿದ್ದ ಎಸೆತಗಳನ್ನು ಸ್ವೀಪ್ ಮತ್ತು ಫ್ರಂಟ್‌ಫುಟ್ ಹೊಡೆತಗಳ ಮೂಲಕ ಎದುರಿಸಿದರು.

43ನೇ ಓವರ್‌ನಲ್ಲಿ ಮಾರಿಸ್‌ ಅವರ ಕಣ್ತಪ್ಪಿಸಿದ ರವೀಂದ್ರ ಜಡೇಜ ಎಸೆತವು ಸ್ಟಂಪ್‌ಗೆ ಮುತ್ತಿಕ್ಕಿತು. ಹ್ಯಾರಿಸ್ ಆಟ ಮುಗಿಯಿತು.

ಅನುಭವಿ ಬ್ಯಾಟ್ಸ್‌ಮನ್ ಶಾನ್ ಮಾರ್ಷ್‌ಗೂ ಜಡೇಜ ಪೆವಿಲಿಯನ್ ದಾರಿ ತೋರಿಸಿದ್ದು ಆಸ್ಟ್ರೇಲಿಯಾದ ಗಾಯಕ್ಕೆ ಉಪ್ಪು ಸುರಿದಂತಾಯಿತು. ಮಧ್ಯಮವೇಗಿ ಮೊಹಮ್ಮದ್ ಶಮಿ ಅವರು 38 ರನ್‌ ಗಳಿಸಿ ಆಡುತ್ತಿದ್ದ ಮಾರ್ನಸ್ ಲಬುಚಾನೆ ಆವರ ವಿಕೆಟ್ ಕಬಳಿಸಿದರು. ಭರವಸೆ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಅವರ ಕ್ಯಾಚ್ ಅನ್ನು ತಮ್ಮದೇ ಬೌಲಿಂಗ್‌ನಲ್ಲಿ ಪಡೆದ ಕುಲದೀಪ್ ಸಂಭ್ರಮಿಸಿದರು. ನಾಯಕ ಟಿಮ್ ಪೇನ್ ಅವರನ್ನೂ ಕುಲದೀಪ್ ಕ್ಲೀನ್‌ಬೌಲ್ಡ್ ಮಾಡಿದರು. ಇದರೊಂದಿಗೆ ಪಂದ್ಯದ ಮೇಲೆ ಭಾರತದ ಹಿಡಿತ ಮತ್ತಷ್ಟು ಬಿಗಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT