ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS | ರಾಹುಲ್‌ ಅಬ್ಬರ, ಪಾಂಡೆ ಅದ್ಭುತ ಕ್ಯಾಚ್: ಭಾರತಕ್ಕೆ 36 ರನ್ ಜಯ

ಕ್ರಿಕೆಟ್: ಮೂರನೇ ಕ್ರಮಾಂಕದಲ್ಲಿ ಮಿಂಚಿದ ವಿರಾಟ್ ಕೊಹ್ಲಿ; ಅದ್ಭುತ ಕ್ಯಾಚ್ ಪಡೆದ ಮಿಷೆಲ್ ಸ್ಟಾರ್ಕ್
Last Updated 18 ಜನವರಿ 2020, 8:32 IST
ಅಕ್ಷರ ಗಾತ್ರ

ರಾಜ್‌ಕೋಟ್ : ಕೆ.ಎಲ್‌.ರಾಹುಲ್‌ ಅವರ (52 ಎಸೆತಗಳಲ್ಲಿ 80, 6 ಬೌಂಡರಿ, 3 ಸಿಕ್ಸರ್‌) ಮಿಂಚಿನ ಬ್ಯಾಟಿಂಗ್ ನಂತರ ಕುಲದೀಪ್‌ ಯಾದವ್‌ ಒಂದೇ ಓವರ್‌ನಲ್ಲಿ ಎರಡು ಮಹತ್ವದ ವಿಕೆಟ್‌ಗಳನ್ನು ಪಡೆದು ಮಿಂಚಿದರು.

ಹೀಗಾಗಿ ಭಾರತ ತಂಡ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 36 ರನ್‌ಗಳಿಂದ ಬಗ್ಗುಬಡಿಯಿತು. ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಅಂಗಳದಲ್ಲಿ ಚೊಚ್ಚಲ ಜಯದ ಸಂಭ್ರಮವನ್ನೂ ಆಚರಿಸಿತು. ಈ ಮೈದಾನದಲ್ಲಿ ಆಡಿದ್ದ ಹಿಂದಿನ ಎರಡು ಪಂದ್ಯಗಳಲ್ಲೂ ತಂಡ ಸೋತಿತ್ತು.

ಈ ಗೆಲುವಿನಿಂದ ಮೂರು ಪಂದ್ಯಗಳ ಸರಣಿ 1–1 ರಲ್ಲಿ ಸಮನಾಗಿದ್ದು, ಬೆಂಗಳೂರಿನಲ್ಲಿ ಭಾನುವಾರ ನಡೆಯುವ ಅಂತಿಮ ಪಂದ್ಯ ನಿರ್ಣಾಯಕವಾಗಿದೆ.

ಬ್ಯಾಟ್‌ ಮಾಡಲು ಕಳುಹಿಸಲ್ಪಟ್ಟ ಭಾರತ ಸುಧಾರಿತ ಆಟವಾಡಿ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 340 ರನ್‌ ಬಾರಿಸಿತು. ಐದನೇ ಕ್ರಮಾಂಕದಲ್ಲಿ ಆಡಲಿಳಿದ ರಾಹುಲ್‌ ಕೊನೆಯ ಓವರ್‌ನಲ್ಲಿ ನಿರ್ಗಮಿಸುವ ಮೊದಲು ಭಾರತ ಸವಾಲಿನ ಮೊತ್ತ ಪೇರಿಸಲು ಕಾರಣರಾದರು. ಶಿಖರ್‌ ಧವನ್‌ (90 ಎಸೆತಗಳಲ್ಲಿ 96), ನಾಯಕ ವಿರಾಟ್‌ ಕೊಹ್ಲಿ (76 ಎಸೆತಗಳಲ್ಲಿ 78) ಅವರು ದೊಡ್ಡ ಮೊತ್ತಕ್ಕೆ ಬುನಾದಿ ಹಾಕಿಕೊಟ್ಟಿದ್ದರು.

ಈ ಕಠಿಣ ಸವಾಲಿಗೆ ಆಸ್ಟ್ರೇಲಿಯಾ ಒಂದು ಹಂತದಲ್ಲಿ ತಕ್ಕ ಉತ್ತರ ನೀಡುವಂತೆ ಕಂಡಿತ್ತು. ಮೊದಲ ಪಂದ್ಯದಲ್ಲಿ ತಂಡವನ್ನು ಗೆಲುವಿನವರೆಗೆ ಒಯ್ದಿದ್ದ ಡೇವಿಡ್‌ ವಾರ್ನರ್‌ ಮತ್ತು ನಾಯಕ ಆ್ಯರನ್‌ ಫಿಂಚ್‌ ಅವರು ಹೆಚ್ಚು ಅಪಾಯಕಾರಿಯಾಗಲಿಲ್ಲ. ಆದರೆ ಸ್ಟೀವ್‌ ಸ್ಮಿತ್‌ (98) ಮತ್ತು ಮಾರ್ನಸ್‌ ಲಾಬುಶೇನ್‌ (46) ಹೋರಾಟ ತೋರಿದರು.

ಕುಲದೀಪ್‌ ಯಾದವ್‌ ತಮ್ಮ 9ನೇ ಓವರ್‌ನಲ್ಲಿ ಪಂದ್ಯಕ್ಕೆ ಮಹತ್ವದ ತಿರುವು ನೀಡಿದರು. ಮೊದಲು ಅಲೆಕ್ಸ್‌ ಕ್ಯಾರಿ (18) ಅವರನ್ನು ಬೌಲ್ಡ್‌ ಮಾಡಿದರು. ಮೂರು ಎಸೆತಗಳ ತರುವಾಯ ಸ್ಮಿತ್‌ ಹೆಚ್ಚು ಪುಟಿದ ಚೆಂಡನ್ನು ವಿಕೆಟ್‌ಗೆ ಆಡಿದರು. ಈ ಹಂತದಲ್ಲಿ ಭಾರತ ಮೇಲುಗೈ ಸಾಧಿಸಿತು. ಪ್ರವಾಸಿ ತಂಡ 49.1 ಓವರುಗಳಲ್ಲಿ 304 ರನ್‌ಗಳಿಗೆ ಆಟ ಮುಗಿಸಿತು.

‌ಎಡಗೈ ಬ್ಯಾಟ್ಸ್‌ಮನ್ ಶಿಖರ್, ತಾವು ಇನಿಂಗ್ಸ್‌ ಆರಂಭಕ್ಕೆ ಸಮರ್ಥ ಎಂಬ ಸಂದೇಶ ರವಾನಿಸಿದರು. ಮೂರನೇ ಕ್ರಮಾಂಕಕ್ಕೆ ಮರಳಿದ ವಿರಾಟ್ ಕೊಹ್ಲಿ ಕೂಡ ಚೆಂದದ ಆಟವಾಡಿದರು. 44ನೇ ಓವರ್‌ನಲ್ಲಿ ವಿರಾಟ್ ಸಿಕ್ಸರ್‌ ಎತ್ತುವ ಪ್ರಯತ್ನಕ್ಕೆ ಲಾಂಗ್‌ ಆಫ್‌ ಬೌಂಡರಿ ಗೆರೆಯಂಚಿನಲ್ಲಿ ಮಿಷೆಲ್‌ ಸ್ಟಾರ್ಕ್ ಅಡ್ಡಿಯಾದರು. ಮೇಲಕ್ಕೆ ಹಾರಿದ ಸ್ಟಾರ್ಕ್ ಚೆಂಡನ್ನು ಹಿಡಿತಕ್ಕೆ ಪಡೆದರು. ಅದರೊಂದಿಗೆ ಬೌಂಡರಿಗೆರೆಯಾಚೆ ತಾವು ಹೆಜ್ಜೆ ಇಡುವ ಸಾಧ್ಯತೆಯನ್ನು ಅರಿತು ಚೆಂಡನ್ನು ಇನ್ನೊಬ್ಬ ಫೀಲ್ಡರ್‌ಗೆ ಎಸೆದರು.

ಆದರೆ, ಇವರೆಲ್ಲರಿಗಿಂತಲೂ ಕನ್ನಡಿಗ ರಾಹುಲ್ ಆಟವೇ ವಿಶೇಷವೆನಿಸಿತು. ಸದಾ ಆರಂಭಿಕನಾಗಿ ಅಥವಾ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ರಾಹುಲ್ ಇಲ್ಲಿ ಐದನೇ ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಬಂದರು.

ಪಾಂಡೆ ಕ್ಯಾಚ್; ರಾಹುಲ್ ಸ್ಟಂಪಿಂಗ್: ಮೊದಲ ಪಂದ್ಯದಲ್ಲಿ ಅಜೇಯ ಶತಕಗಳನ್ನು ಬಾರಿಸಿ ಆಸ್ಟ್ರೇಲಿಯಾ ತಂಡಕ್ಕೆ 10 ವಿಕೆಟ್‌ಗಳ ಜಯದ ಕಾಣಿಕೆ ನೀಡಿದ್ದ ಫಿಂಚ್ ಮತ್ತು ವಾರ್ನರ್ ಅವರನ್ನು ಯೋಜನಾಬದ್ಧವಾಗಿ ಕಟ್ಟಿಹಾಕುವಲ್ಲಿ ಬೌಲರ್‌ಗಳು ಯಶಸ್ವಿಯಾದರು. ಅದಕ್ಕೆ ಕಾರಣರಾಗಿದ್ದು ಕರ್ನಾಟಕದ ಇಬ್ಬರು ಆಟಗಾರರು.

ಬೌಲರ್‌ಗಳ ಬಿಗಿ ದಾಳಿಯನ್ನು ತಾಳ್ಮೆಯಿಂದ ಎದುರಿಸಲು ಆರಂಭಿಸಿದ್ದ ವಾರ್ನರ್ ನಾಲ್ಕನೇ ಓವರ್‌ನಲ್ಲಿ ಮೊಹಮ್ಮದ್ ಶಮಿ ಎಸೆತವನ್ನು ಕವರ್ಸ್‌ನತ್ತ ಹೊಡೆದರು. ಕವರ್‌–ಪಾಯಿಂಟ್‌ ಬಳಿ ಇದ್ದ ಫೀಲ್ಡರ್ ಮನೀಷ್ ಪಾಂಡೆ ಎತ್ತರಕ್ಕೆ ಜಿಗಿದು ಕ್ಯಾಚ್ ಪಡೆದರು. ವೇಗವಾಗಿ ಸಾಗಿದ್ದ ಚೆಂಡು ಅವರ ಬಲಗೈನಲ್ಲಿ ಬಂಧಿಯಾಗಿತ್ತು. ವಾರ್ನರ್‌ ಆಘಾತದಿಂದ ಕೆಲಕ್ಷಣ ಕದಲಿಲ್ಲ. ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಭ್ರಮ ಮನೆಮಾಡಿತು.

ಕ್ರೀಸ್‌ಗೆ ಬಂದ ಸ್ಟೀವ್‌ ಸ್ಮಿತ್ ಜೊತೆಗೂಡಿದ ಫಿಂಚ್ ತಾಳ್ಮೆಯ ಇನಿಂಗ್ಸ್‌ ಕಟ್ಟಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 62 ರನ್ ಸೇರಿಸಿದರು. ಈ ಜೊತೆಯಾಟವನ್ನು ಮುರಿಯಲು ‘ಹಂಗಾಮಿ ವಿಕೆಟ್‌ಕೀಪರ್’ ರಾಹುಲ್ ಚುರುಕಿನ ಸ್ಟಂಪಿಂಗ್ ಕಾರಣವಾಯಿತು. 16ನೇ ಓವರ್‌ನಲ್ಲಿ ಜಡೇಜ ಎಸೆತದಲ್ಲಿ ಬೀಟ್ ಆದ ಫಿಂಚ್ ಕೂದಲೆಳೆಯ ಅಂತರದಷ್ಟು ಮಾತ್ರ ಕ್ರೀಸ್‌ನಿಂದ ಹೊರಗಿದ್ದರು. ಆತಿಥೇಯರ ಪಾಳೆಯದಲ್ಲಿ ಹುರುಪು ಪುಟಿದೆದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT