ಶುಕ್ರವಾರ, ಡಿಸೆಂಬರ್ 9, 2022
21 °C

ಭಾರತ Vs ಆಸ್ಟ್ರೇಲಿಯಾ ಟಿ20: ರೋಹಿತ್ ಪಡೆಗೆ ಸರಣಿ ಕಿರೀಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಸೂರ್ಯಕುಮಾರ್ ಯಾದವ್ ಮಿಂಚಿ ನಾಟ ಹಾಗೂ ವಿರಾಟ್ ಕೊಹ್ಲಿಯ ಜವಾಬ್ದಾರಿಯುತ ಬ್ಯಾಟಿಂಗ್ ಬಲದಿಂದ ಭಾನುವಾರ ನಡೆದ ಆಸ್ಟ್ರೇಲಿಯಾ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡವು ರೋಚಕ ಜಯಸಾಧಿಸಿತು. 

ಇದರೊಂದಿಗೆ 2–1ರಿಂದ ಸರಣಿಯನ್ನು ಗೆದ್ದ ತಂಡವು ಸಂಭ್ರಮಿಸಿತು.  ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡಕ್ಕೆ ಆಸ್ಟ್ರೇಲಿಯಾವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 186 ರನ್‌ ಗಳಿಸಿ ಕಠಿಣ ಸವಾಲೊಡ್ಡಿತು. 

ಗುರಿ ಬೆನ್ನಟ್ಟಿದ ಆತಿಥೇಯ ತಂಡವು ಪಂದ್ಯದಲ್ಲಿ ಇನ್ನೂ ಒಂದು ಎಸೆತ ಬಾಕಿಯಿರುವಾಗಲೇ  6 ವಿಕೆಟ್‌ಗಳಿಂದ ಜಯಿಸಿತು. ಸೂರ್ಯ (69; 36ಎ, 4X5, 6X5) ಹಾಗೂ ವಿರಾಟ್ (63; 48ಎ, 4X3, 6X4) ಮೂರನೇ ವಿಕೆಟ್ ಜೊತೆಯಾಟದಲ್ಲಿ ಸೇರಿಸಿದ 104 ರನ್‌ಗಳಿಂದಾಗಿ ತಂಡದ ಗೆಲುವು ಸಾಧ್ಯವಾಯಿತು. ಹಾರ್ದಿಕ್ ಪಾಂಡ್ಯ (ಔಟಾಗದೆ 25; 16ಎ) ಕೂಡ ಮಹತ್ವದ ಕಾಣಿಕೆ ನೀಡಿದರು. 

ಆದರೆ ಹೋದ ಪಂದ್ಯದಲ್ಲಿ ಅಬ್ಬರಿಸಿದ್ದ ರೋಹಿತ್ ಶರ್ಮಾ ಹಾಗೂ ಕೆ.ಎಲ್. ರಾಹುಲ್ ಇಲ್ಲಿ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಈ ಹಂತದಲ್ಲಿ ಕ್ರೀಸ್‌ಗೆ ಬಂದ ಕೊಹ್ಲಿ ವಿಕೆಟ್ ಪತನ ತಡೆ ದರು. ಚೆಂದದ ಹೊಡೆತಗಳನ್ನೂ ಪ್ರಯೋಗಿಸಿದರು. ಆದರೆ, ಸೂರ್ಯಕುಮಾರ್ ಮಾತ್ರ ವಿರಾಟ್‌ಗಿಂತಲೂ ವೇಗವಾಗಿ ರನ್‌ ಗಳಿಸಿದರು. ಎಲ್ಲ ಬೌಲರ್‌ಗಳ ಎಸೆತ ಗಳನ್ನೂ ದಂಡಿಸಿದರು. 191.67ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಸೂರೆ ಮಾಡಿದರು.

ಗ್ರೀನ್, ಡೇವಿಡ್ ಅರ್ಧಶತಕ: ಆಸ್ಟ್ರೇಲಿಯಾ ತಂಡದ ಕ್ಯಾಮರಾನ್ ಗ್ರೀನ್ (52; 21ಎ, 4X7, 6X3) ಹಾಗೂ ಟಿಮ್ ಡೇವಿಡ್ (54; 27ಎ, 4X3) ಅರ್ಧಶತಕಗಳು ವ್ಯರ್ಥವಾದವು.  

ಪಂದ್ಯದ ಆರಂಭದಲ್ಲಿ ಗ್ರೀನ್ ಮಿಂಚಿದರೆ, ಕೊನೆಯ ಹಂತದಲ್ಲಿ ಡೇವಿಡ್‌ ಅಬ್ಬರಿಸಿದ್ದರು. ಮಧ್ಯದಲ್ಲಿ ಅಕ್ಷರ್ ಪಟೇಲ್ (33ಕ್ಕೆ3) ಸ್ಪಿನ್ ಮೋಡಿಯು ಗಮನ ಸೆಳೆಯಿತು. 

ಗ್ರೀನ್ ಅಬ್ಬರದಿಂದಾಗಿ ಆಸ್ಟ್ರೇ ಲಿಯಾ ತಂಡವು ಮೊದಲ ಐದು ಓವರ್‌ಗಳಲ್ಲಿಯೇ 62 ರನ್‌ಗಳು ತಂಡದ ಖಾತೆ ಸೇರಿದವು.  ಡೇವಿಡ್ ಹಾಗೂ ಡೇನಿಲ್ ಸ್ಯಾಮ್ಸ್ (ಔಟಾಗದೆ 28) ಜೊತೆಯಾಟದಿಂದಾಗಿ ಕೊನೆಯ  ಐದು ಓವರ್‌ಗಳಲ್ಲಿ 63 ರನ್‌ಗಳು ಸೇರ್ಪಡೆಯಾದವು. 

ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಆ್ಯರನ್ ಫಿಂಚ್, ಜೋಷ್ ಇಂಗ್ಲಿಸ್ ಹಾಗೂ ಮ್ಯಾತ್ಯೂ ವೇಡ್ ಔಟಾಗದರು. ಗ್ಲೆನ್ ಮ್ಯಾಕ್ಸ್‌ವೆಲ್ ರನೌಟ್‌ಗೂ ಅಕ್ಷರ್ ಚುರುಕಿನ ಫೀಲ್ಡಿಂಗ್ ಮತ್ತು ನಿಖರ ಥ್ರೋ ಕಾರಣವಾದವು. 

ಮ್ಯಾಕ್ಸ್‌ವೆಲ್‌ಗೆ ಕೈಕೊಟ್ಟ ಬೇಲ್ಸ್!

ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್‌ ಅವರಿಗೆ ಅದೃಷ್ಟ ಜೊತೆಗಿರಲಿಲ್ಲ. ಅದರಿಂದಾಗಿ ಅವರು ವಿಚಿತ್ರ ರೀತಿಯಲ್ಲಿ ರನ್‌ಔಟ್‌ ಆಗಬೇಕಾಯಿತು.

ಎಂಟನೇ  ಓವರ್‌ನಲ್ಲಿ ಚಾಹಲ್ ಎಸೆತವನ್ನು ಡೀಪ್ ಸ್ಕ್ವೇರ್‌ಲೆಗ್‌ನತ್ತ ಹೊಡೆದು ಒಂದು ರನ್ ಗಳಿಸಿದರು. ಎರಡನೇ ರನ್‌ಗೆ ಮರಳಿದರು. ಈ ಸಂದರ್ಭದಲ್ಲಿ ಫೀಲ್ಡರ್ ಅಕ್ಷರ್ ಪಟೇಲ್ ಥ್ರೋ ಮಾಡಿದ ಚೆಂಡು ಕಲೆಕ್ಟ್ ಮಾಡುವ ಪ್ರಯತ್ನದಲ್ಲಿ ವಿಕೆಟ್‌ಕೀಪರ್ ದಿನೇಶ್ ಕೈಗವಸು ಸ್ಟಂಪ್‌ಗೆ ಬಡಿದಿತ್ತು. ಆದರೆ ಬೇಲ್ಸ್‌ ಉದುರಲಿಲ್ಲ.  ಆದರೆ ಅಕ್ಷರ್ ಮಾಡಿದ ನಿಖರ ಥ್ರೋ ಸ್ಟಂಪ್ಸ್‌ಗೆ ಅಪ್ಪಳಿಸಿ ಬೇಲ್ಸ್‌ ಉದುರಿದವು. ಇದೆಲ್ಲವೂ ಕ್ಷಣಾರ್ಧದಲ್ಲಿ ನಡೆದುಹೋಗಿದ್ದು ಮೂರನೇ ಅಂಪೈರ್ ಪರಿಶೀಲನೆಯಲ್ಲಿ ಗೋಚರಿಸಿತು. 

ಮ್ಯಾಕ್ಸ್‌ವೆಲ್ ತಮ್ಮ ದುರದೃಷ್ಟಕ್ಕೆ ಬೇಸರಗೊಂಡು ಪೆವಿಲಿಯನ್‌ನತ್ತ ಹೆಜ್ಜೆಹಾಕಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು