ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ನ್ಯೂಜಿಲೆಂಡ್ ಏಕದಿನ ಕ್ರಿಕೆಟ್ ಸರಣಿ: ಮಯಂಕ್–ಪೃಥ್ವಿ ‘ಆರಂಭ’ಕ್ಕೆ ವೇದಿಕೆ

ಮೊದಲ ಪಂದ್ಯ ಇಂದು
Last Updated 4 ಫೆಬ್ರುವರಿ 2020, 20:01 IST
ಅಕ್ಷರ ಗಾತ್ರ

ಹ್ಯಾಮಿಲ್ಟನ್: ಅಂತೂ ಇಂತೂ ಕರ್ನಾಟಕದ ಮಯಂಕ್ ಅಗರವಾಲ್ ಅವರ ದೀರ್ಘವಾದ ಕಾಯುವಿಕೆಯು ಅಂತ್ಯವಾಗಲಿದೆ. ಅವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಪದಾರ್ಪಣೆ ಮಾಡುವುದು ಖಚಿತವಾಗಿದೆ.

ಬುಧವಾರ ಇಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಅವರು ಇನಿಂಗ್ಸ್ ಆರಂಭಿಸಲಿದ್ದಾರೆ. ರೋಹಿತ್ ಶರ್ಮಾ ಗಾಯಗೊಂಡು ಹೊರಬಿದ್ದಿರುವುದರಿಂದ ಮಯಂಕ್ ಅವಕಾಶ ಗಿಟ್ಟಿಸಿದ್ದಾರೆ. ಮಂಗಳವಾರದ ಪತ್ರಿಕಾಗೋಷ್ಠಿಯಲ್ಲಿ ತಂಡದ ನಾಯಕ ವಿರಾಟ್ ಕೊಹ್ಲಿ ಈ ವಿಷಯವನ್ನು ಖಚಿತಪಡಿಸಿದ್ದಾರೆ.

ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಗಾಯದಿಂದ ಚೇತರಿಸಿಕೊಂಡಿಲ್ಲ. ಆದ್ದರಿಂದ ಮಯಂಕ್ ಜೊತೆಗೆ ಮುಂಬೈನ ಪೃಥ್ವಿ ಶಾ ಅವರೂ ಇನಿಂಗ್ಸ್‌ಗೆ ಮುನ್ನುಡಿ ಬರೆಯಲಿದ್ದಾರೆ. ಅವರಿಗೂ ಇದು ಚೊಚ್ಚಲ ಏಕದಿನ ಪಂದ್ಯವಾಗಲಿದೆ. ಪೃಥ್ವಿ ಗಾಯದ ಸಮಸ್ಯೆ ಮತ್ತು ಉದ್ದೀಪನ ಮದ್ದು ಸೇವನೆ ಆರೋಪದಲ್ಲಿ ಅಮಾನತು ಶಿಕ್ಷೆ ಅನುಭವಿಸಿದ ನಂತರ ಮತ್ತೊಮ್ಮೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಭಾರತ ‘ಎ’ ತಂಡದಲ್ಲಿ ಅವರು ಉತ್ತಮವಾಗಿ ಆಡಿದ್ದರಿಂದ ಈ ಅವಕಾಶ ಲಭಿಸಿದೆ.

ಇಬ್ಬರು ಪದಾರ್ಪಣೆಯ ಆಟ ಗಾರರು ಇನಿಂಗ್ಸ್‌ ಆರಂಭಿಸುತ್ತಿರು ವುದು ಇದೇ ಮೊದಲೇನಲ್ಲ. 2016ರಲ್ಲಿ ಕೆ.ಎಲ್. ರಾಹುಲ್ ಮತ್ತು ಕರುಣ್ ನಾಯರ್ ಜಿಂಬಾಬ್ವೆ ವಿರುದ್ಧ; 1974ರಲ್ಲಿ ಸುನಿಲ್ ಗಾವಸ್ಕರ್ ಮತ್ತು ಸುಧೀರ್ ನಾಯ್ಕ್ ಅವರು ಇಂಗ್ಲೆಂಡ್ ವಿರುದ್ಧ ಮತ್ತು 1976ರಲ್ಲಿ ಪಾರ್ಥಸಾರಥಿ ಶರ್ಮಾ ಮತ್ತು ದಿಲೀಪ್ ವೆಂಗಸರ್ಕಾರ್ ಅವರೂ ತಮ್ಮ ಚೊಚ್ಚಲ ಪಂದ್ಯಗಳಲ್ಲಿ ಇನಿಂಗ್ಸ್‌ ಆರಂಭಿಸಿದ್ದರು.

ದೇಶಿ ಮತ್ತು ಟೆಸ್ಟ್‌ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಯಶಸ್ವಿಯಾಗಿರುವ ಮಯಂಕ್ ಅವರಿಗೆ ಸೀಮಿತ ಓವರ್‌ಗಳಲ್ಲಿ ತಮ್ಮ ಸಾಮರ್ಥ್ಯ ತೋರಿಸುವ ಅವಕಾಶ ಈಗ ಸಿಕ್ಕಿದೆ. ಮತ್ತೊಬ್ಬ ಕನ್ನಡಿಗ ಕೆ.ಎಲ್. ರಾಹುಲ್ ಈ ಸರಣಿಯಲ್ಲಿಯೂ ವಿಕೆಟ್ ಕೀಪಿಂಗ್ ಮುಂದುವರಿಸಲಿದ್ದಾರೆ. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಲಿದ್ದಾರೆ. ಇದರಿಂದಾಗಿ ರಿಷಭ್ ಪಂತ್ ಬೆಂಚ್‌ ಕಾಯಬೇಕಾಗಬಹುದು. ಮನೀಷ್ ಪಾಂಡೆ ನೆಟ್ಸ್‌ನಲ್ಲಿ ಬಹಳ ಹೊತ್ತು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಅದರಿಂದ ಅವರು ಕಣಕ್ಕಿಳಿಯುವ ನಿರೀಕ್ಷೆ ಇದೆ.

ನಾಲ್ವರು ಮಧ್ಯಮವೇಗಿಗಳು ಮತ್ತು ಒಬ್ಬ ಸ್ಪಿನ್ನರ್ ಕಣಕ್ಕಿಳಿದರೆ ನವದೀಪ್ ಸೈನಿ ಮತ್ತು ಶಾರ್ದೂಲ್ ಠಾಕೂರ್ ಅವರಿಗೆ ಅವಕಾಶ ಸಿಗಬಹುದು. ಮೂವರು ಮಧ್ಯಮವೇಗಿಗಳಷ್ಟೇ ಆಡಿದರೆ ಇವರಿಬ್ಬರಲ್ಲಿ ಒಬ್ಬರು ಕಣಕ್ಕಿಳಿಯಬಹುದಷ್ಟೇ. ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಆಡಬಹುದು. ಆಲ್‌ರೌಂಡರ್‌ ಸ್ಥಾನಕ್ಕಾಗಿ ರವೀಂದ್ರ ಜಡೇಜ, ಕೇದಾರ್ ಜಾಧವ್, ಶಿವಂ ದುಬೆ ಸ್ಪರ್ಧೆಯಲ್ಲಿದ್ದಾರೆ.

ಟ್ವೆಂಟಿ–20 ಸರಣಿಯಲ್ಲಿ ‘ವೈಟ್‌ ವಾಷ್’ ಮುಖಭಂಗ ಅನುಭವಿಸಿರುವ ಆತಿಥೇಯ ನ್ಯೂಜಿಲೆಂಡ್ ಬಳಗ ದಲ್ಲಿಯೂ ಗಾಯಾಳುಗಳ ಸಮಸ್ಯೆ ಹೆಚ್ಚಾಗಿದೆ. ನಾಯಕ ಕೇನ್ ವಿಲಿಯಮ್ಸನ್ ಅವರೇ ಈಗ ಆ ಪಟ್ಟಿಯಲ್ಲಿ ಸೇರಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಅವರ ಬದಲಿಗೆ ಟಾಮ್ ಲಥಾಮ್ ನಾಯಕತ್ವ ವಹಿಸಲಿದ್ದಾರೆ. ಭಾರತದ ವಿರುದ್ಧ 13 ಪಂದ್ಯಗಳನ್ನು ಆಡಿರುವ ಟಾಮ್, 593 ರನ್‌ಗಳನ್ನು ಗಳಿಸಿದ್ದಾರೆ. ಇದರಿಂದಾಗಿ ಅವರ ಮೇಲೆ ಹೆಚ್ಚು ನಿರೀಕ್ಷೆ ಇದೆ.

ವೇಗಿ ಟ್ರೆಂಟ್‌ ಬೌಲ್ಟ್ ಅವರು ಗಾಯದಿಂದಾಗಿ ಟಿ20 ಸರಣಿಯಲ್ಲಿ ಆಡಿರಲಿಲ್ಲ. ಈಗಲೂ ಅಲಭ್ಯರಾಗಿದ್ದಾರೆ. ಮಾರ್ಟಿನ್ ಗಪ್ಟಿಲ್, ರಾಸ್ ಟೇಲರ್ ಅವರು ತಮ್ಮ ಲಯಕ್ಕೆ ಮರಳದಿದ್ದರೆ ಬ್ಯಾಟಿಂಗ್ ಬಲ ಕಳೆಗುಂದುವುದು ಖಚಿತ. ಆಲ್‌ರೌಂಡರ್‌ ಜಿಮ್ಮಿ ನಿಶಾಮ್ ಮತ್ತು ಕಾಲಿನ್ ಡಿ ಗ್ರ್ಯಾಂಡ್ ಹೋಮ್ ತಂಡಕ್ಕೆ ಮರಳಿರುವುದು ಸಮಾಧಾನಕರ ಸಂಗತಿ.

ಪಂದ್ಯ ಆರಂಭ: ಬೆಳಿಗ್ಗೆ 7.30

ನೇರ ಪ್ರಸಾರ: ಸ್ಟಾರ್‌ ನೆಟ್‌ವರ್ಕ್‌.

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ಪೃಥ್ವಿ ಶಾ, ಮಯಂಕ್ ಅಗರವಾಲ್, ಕೆ.ಎಲ್. ರಾಹುಲ್ (ವಿಕೆಟ್‌ಕೀಪರ್), ಮನೀಷ್ ಪಾಂಡೆ, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಶಿವಂ ದುಬೆ, ರವೀಂದ್ರ ಜಡೇಜ, ಕುಲದೀಪ್ ಯಾದವ್ ಯಜುವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ, ಶಾರ್ದೂಲ್ ಠಾಕೂರ್, ನವದೀಪ್ ಸೈನಿ.

ನ್ಯೂಜಿಲೆಂಡ್: ಟಾಮ್ ಲಾಥಮ್ (ನಾಯಕ/ವಿಕೆಟ್‌ಕೀಪರ್), ಮಾರ್ಟಿನ್ ಗಪ್ಟಿಲ್, ರಾಸ್ ಟೇಲರ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಜಿಮ್ಮಿ ನಿಶಾಮ್, ಸ್ಕಾಟ್ ಕಗೇಲಿಜಿನ್, ಟಾಮ್ ಬ್ಲಂಡೆಲ್, ಹೆನ್ರಿ ನಿಕೋಲ್ಸ್‌, ಮಿಚೆಲ್ ಸ್ಯಾಂಟನರ್, ಹಮೀಷ್ ಬೆನೆಟ್, ಈಶ್ ಸೋಧಿ, ಟಿಮ್ ಸೌಥಿ, ಕೈಲ್ ಜೇಮಿಸನ್, ಮಾರ್ಕ್ ಚಾಪ್‌ಮನ್.

6.8 ಅಡಿ ಎತ್ತರದ ಕೈಲ್!

ಕಿವೀಸ್ ತಂಡದ ಬಲಗೈ ಮಧ್ಯಮವೇಗಿ ಕೈಲ್ ಜೇಮಿಸನ್ ಅವರು ವಿನೂತನ ದಾಖಲೆಯನ್ನು ಬರೆಯಲಿದ್ದಾರೆ. ನ್ಯೂಜಿಲೆಂಡ್ ಪರವಾಗಿ ಆಡಲಿರುವ ಅತಿ ಎತ್ತರದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅವರು 6.8 ಅಡಿ ಎತ್ತರವಿದ್ದಾರೆ. ಅನುಭವಿ ಬೌಲರ್‌ಗಳಾದ ಟ್ರೆಂಟ್ ಬೌಲ್ಟ್‌, ಲಾಕಿ ಫರ್ಗ್ಯುಸನ್ ಮತ್ತು ಮ್ಯಾಟ್‌ ಹೆನ್ರಿ ಗಾಯಗೊಂಡಿದ್ದಾರೆ. ಆದ್ದರಿಂದ 25 ವರ್ಷದ ಕೈಲ್‌ಗೆ ಅವಕಾಶ ಲಭಿಸಿದೆ. ಭಾರತ ಎದುರು ಇವರು ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT