ಸೋಮವಾರ, ಅಕ್ಟೋಬರ್ 21, 2019
26 °C
ಟಾಸ್ ಗೆದ್ದ ಭಾರತ ತಂಡದಿಂದ ಬ್ಯಾಟಿಂಗ್

ಭಾರತ–ದಕ್ಷಿಣ ಆಫ್ರಿಕಾ ಟೆಸ್ಟ್‌: ಆರಂಭಿಕನಾಗಿ ಮೊದಲ ಪಂದ್ಯದಲ್ಲೇ ರೋಹಿತ್ ಶತಕ

Published:
Updated:

ವಿಶಾಖಪಟ್ಟಣ: ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕ್ರೀಸ್‌ಗೆ ಇಳಿದ ರೋಹಿತ್ ಶರ್ಮಾ ಮನಮೋಹಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಕನ್ನಡಿಗ ಮಯಂಕ್‌ ಅಗರವಾಲ್ ಜೊತೆಗೂಡಿ ಮೊದಲ ವಿಕೆಟ್‌ಗೆ ದ್ವಿಶತಕದ ಜೊತೆಯಾಟ ಆಡಿ ರಂಜಿಸಿದರು.

ಇಲ್ಲಿ ಬುಧವಾರ ಆರಂಭಗೊಂಡ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಮಯಂಕ್‌ (84; 183 ಎಸೆತ, 2 ಸಿಕ್ಸರ್‌, 11 ಬೌಂಡರಿ) ಮತ್ತು ರೋಹಿತ್ (115; 174 ಎಸೆತ, 5 ಸಿಕ್ಸರ್‌, 12 ಬೌಂಡರಿ) ಅವರ ಮುರಿಯದ ಮೊದಲ ವಿಕೆಟ್‌ ಜೊತೆಯಾಟದ ನೆರವಿನಿಂದ ಭಾರತ 59.1 ಓವರ್‌ಗಳಲ್ಲಿ 202 ರನ್‌ ಗಳಿಸಿದೆ. ಮಳೆ ಅಡ್ಡಿಪಡಿಸಿದ ಕಾರಣ ಚಹಾ ವಿರಾಮದ ನಂತರ ದಿನದಾಟವವನ್ನು ಮುಕ್ತಾಯಗೊಳಿಸಲಾಯಿತು.

ವಿಶಾಖಪಟ್ಟಣದಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂಬ ಆತಂಕವಿತ್ತು. ಆದರೆ ಬೆಳಿಗ್ಗೆ ಶುಭ್ರ ವಾತಾವರಣ ಭರವಸೆ ಮೂಡಿಸಿತು. ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದು ಕೊಂಡರು. 

ಈ ಟೆಸ್ಟ್‌ ಪಂದ್ಯವನ್ನು ರೋಹಿತ್ ಅವರ ಕ್ರಿಕೆಟ್ ಜೀವನದ ಹೊಸ ಹಾದಿ ಎಂದೇ ಬಣ್ಣಿಸಲಾಗಿತ್ತು. ತಂಡದ ಆಡಳಿತದ ಭರವಸೆಯನ್ನು ಅವರು ಹುಸಿಗೊಳಿಸಲಿಲ್ಲ. ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಸ್ಫೋಟಕ ಬ್ಯಾಟಿಂಗ್ ಮಾಡುವ ರೋಹಿತ್ ಟೆಸ್ಟ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಇಲ್ಲಿ ಹೊಸ ಚೆಂಡಿಗೂ ಬೆದರದೆ, ನಿರಾಯಾಸವಾಗಿ ಬೌಲರ್‌ಗಳನ್ನು ಎದುರಿಸಿದರು.

ಮೊದಲ ಅವಧಿಯಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಸ್ವಲ್ಪ ಮಟ್ಟಿಗೆ ಕಾಡುವಲ್ಲಿ ದಕ್ಷಿಣ ಆಫ್ರಿಕಾ ಬೌಲರ್‌ಗಳು ಯಶಸ್ವಿಯಾದರು. ಆದರೆ ಎರಡನೇ ಅವಧಿಯಲ್ಲಿ ಮಯಂಕ್‌–ರೋಹಿತ್‌ ಜೋಡಿಯನ್ನು ನಿಯಂತ್ರಿಸಲಾಗದೆ ಕಕ್ಕಾಬಿಕ್ಕಿಯಾದರು.

ಭೋಜನ ವಿರಾಮಕ್ಕೆ ಮೊದಲು ಅರ್ಧಶತಕ ಗಳಿಸಿದ ರೋಹಿತ್ ನಂತರ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಸ್ಪಿನ್ನರ್‌ಗಳನ್ನು ನಿರಂತರವಾಗಿ ದಂಡಿಸಿ ಚೆಂಡನ್ನು ಬೌಂಡರಿ ಗೆರೆಯಾಚೆ ಅಟ್ಟಿದರು. ಆಫ್‌ ಸ್ಪಿನ್ನರ್‌ ಡ್ಯಾನಿ ಪೀಟ್ ಅವರ ಓವರ್‌ನಲ್ಲಿ ಸತತ ಸಿಕ್ಸರ್‌ಗಳನ್ನು ಸಿಡಿಸಿ 90 ರನ್ ಗಡಿ ದಾಟಿದ ರೋಹಿತ್ ಪದಾರ್ಪಣೆ ಪಂದ್ಯ ಆಡಿದ ಸ್ಪಿನ್ನರ್ ಸೆನುರನ್ ಮುತ್ತುಸಾಮಿ ಎಸೆತದಲ್ಲಿ ಒಂದು ರನ್ ಗಳಿಸಿ 4ನೇ ಶತಕ ಪೂರೈಸಿದರು. ಅಷ್ಟರಲ್ಲಿ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಡ್ರೆಸಿಂಗ್ ಕೊಠಡಿಯಲ್ಲಿದ್ದ ಸಹ ಆಟಗಾರರು ಮತ್ತು ಸಿಬ್ಬಂದಿ ಎದ್ದು ನಿಂತು ಚಪ್ಪಾಳೆಯ ಮಳೆ ಸುರಿಸಿದರು.

ಈ ಶತಕದೊಂದಿಗೆ ಆರಂಭಿಕನಾಗಿ ಎಲ್ಲ ಮಾದರಿಯಲ್ಲಿಯೂ ಮೂರಂಕಿ ದಾಟಿದ ಭಾರತದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಅವರದಾಯಿತು.

ಎದುರಿಸಿದ ಮೊದಲ ಎಸೆತವನ್ನು (ಬೌಲರ್ ಕಗಿಸೊ ರಬಾಡ) ಆಡಲು ನಿರಾಕರಿಸಿದ ರೋಹಿತ್ ನಂತರದ ಎಸೆತವನ್ನು ಬ್ಯಾಕ್‌ವರ್ಡ್ ಪಾಯಿಂಟ್‌ ಕಡೆಯಿಂದ ಬೌಂಡರಿಗೆ ತಳ್ಳಿದರು. ನಂತರ ರಬಾಡ ಅವರನ್ನು ತಾಳ್ಮೆಯಿಂದ ಎದುರಿಸಿದ ಅವರು ವೆರ್ನಾನ್ ಫಿಲ್ಯಾಂಡರ್‌ ಎಸೆತದಲ್ಲೂ ಬೌಂಡರಿ ಗಳಿಸಿದರು.

ಸಿಕ್ಸರ್‌ ಮೂಲಕ ಅರ್ಧಶತಕ: ರೋಹಿತ್‌ಗೆ ಮಯಂಕ್ ಅಗರವಾಲ್ ಸಮರ್ಪಕ ಬೆಂಬಲ ನೀಡಿದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಆರಂಭದ ಕೆಲವು ಓವರ್‌ಗಳಲ್ಲಿ ತಾಳ್ಮೆಯಿಂದಲೇ ಆಡಿದರು. ರೋಹಿತ್‌ ಮುನ್ನುಗ್ಗಿ ಹೊಡೆಯಲು ಆರಂಭಿಸುತ್ತಿದ್ದಂತೆ ಮಯಂಕ್ ಅಗರವಾಲ್ ಕೂಡ ಭರ್ಜರಿ ಬ್ಯಾಟಿಂಗ್‌ಗೆ ಮುಂದಾದರು. ಭೋಜನ ವಿರಾಮದ ನಂತರ ಸ್ಪಿನ್ನರ್ ಕೇಶವ್ ಮಹಾರಾಜ್ ಅವರ ಎಸೆತವನ್ನು ಎಕ್ಸ್‌ಟ್ರಾ ಕವರ್‌ ಮೇಲಿಂದ ಸಿಕ್ಸರ್‌ಗೆ ಅಟ್ಟಿದ ಅವರು ಅರ್ಧಶತಕ ದಾಟಿದರು. ಮೊದಲ ದಿನವೇ ಶತಕದತ್ತ ಹೆಜ್ಜೆ ಹಾಕಿದ್ದ ಅವರಿಗೆ ಮಳೆ ನಿರಾಸೆ ಮೂಡಿಸಿತು.

Post Comments (+)