ಗುರುವಾರ , ಸೆಪ್ಟೆಂಬರ್ 23, 2021
23 °C
ಭಾರತ ತಂಡಕ್ಕೆ 6 ವಿಕೆಟ್‌ಗಳ ಜಯ

IND vs WI ಟಿ20 | ವಿರಾಟ್ ವೀರಾವೇಶಕ್ಕೆ ವಿಂಡೀಸ್ ಧೂಳೀಪಟ

ಪಿಟಿಐ Updated:

ಅಕ್ಷರ ಗಾತ್ರ : | |

ಹೈದರಾಬಾದ್: ವಿರಾಟ್ ಕೊಹ್ಲಿಯನ್ನು ಕೆಣಕಿ ಔಟ್ ಮಾಡಲು ಪ್ರಯತ್ನಿಸಿದ ವೆಸ್ಟ್ ಇಂಡೀಸ್ ತಂಡವು ದುಬಾರಿ ದಂಡ ತೆರಬೇಕಾಯಿತು.

ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ವೈಯಕ್ತಿಕ ಶ್ರೇಷ್ಠ ಸ್ಕೋರ್ ದಾಖಲಿಸಿದ ವಿರಾಟ್ (ಔಟಾಗದೆ 94; 50ಎಸೆತ, 6ಬೌಂಡರಿ, 6ಸಿಕ್ಸರ್) ಆಟದಿಂದ ಭಾರತ ತಂಡವು ವೆಸ್ಟ್ ಇಂಡೀಸ್ ಎದುರಿನ  ಪಂದ್ಯದಲ್ಲಿ  6 ವಿಕೆಟ್‌ಗಳಿಂದ ಗೆದ್ದಿತು. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ  ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡದ ಬೌಲರ್‌ಗಳನ್ನು ವಿಂಡೀಸ್ ಬ್ಯಾಟ್ಸ್‌ಮನ್‌ಗಳು ವಿಪರೀತ ದಂಡಿಸಿದರು. ಶಿಮ್ರೊನ್ ಹೆಟ್ಮೆಯರ್ (56; 41ಎ, 2ಬೌಂ, 4 ಸಿ) ಅರ್ಧಶತಕ ಬಾರಿಸಿದರು. ಉಳಿದ ಬ್ಯಾಟ್ಸ್‌ಮನ್‌ ಗಳೂ ಅಬ್ಬರಿಸಿದರು. ಇದರಿಂದಾಗಿ ವಿಂಡೀಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 207 ರನ್ ಗಳಿಸಿತು. ಈ ಕಠಿಣ ಗುರಿಯನ್ನು ಬೆನ್ಟಟ್ಟಿದ ಭಾರತ ತಂಡವು ವಿರಾಟ್ ಮತ್ತು ಕರ್ನಾಟಕದ ಕೆ.ಎಲ್. ರಾಹುಲ್ (62; 40ಎ, 5ಬೌಂ, 4ಸಿ) ನೂರು ರನ್‌ಗಳ ಜೊತೆಯಾಟದಿಂದ 18.4 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 209 ರನ್‌ ಗಳಿಸಿ ಗೆದ್ದಿತು. 2009ರಲ್ಲಿ ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧವೂ ಭಾರತ ತಂಡವು 207 ರನ್‌ಗಳನ್ನು ಬೆನ್ನತ್ತಿ ಜಯಿಸಿತ್ತು.

ಕೆ.ಎಲ್‌ ರಾಹುಲ್‌ ಜೊತೆ ಇನಿಂಗ್ಸ್‌ ಆರಂಭಿಸಿದ ರೋಹಿತ್ ಶರ್ಮಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಆಗ ಬಂದ ಕೊಹ್ಲಿ ಮತ್ತು ಕ್ರೀಸ್‌ನಲ್ಲಿದ್ದ ರಾಹುಲ್ ಅಮೋಘ ಆಟವಾಡಿದರು. ವಿಕೆಟ್‌ ಮಧ್ಯೆ ವೇಗವಾಗಿ ಓಡುವ ವಿರಾಟ್ ಅವರ ಹಾದಿಯಲ್ಲಿ ಬೌಲರ್ ಕೆಸ್ರಿಕ್ ವಿಲಿಯಮ್ಸ್‌ ಒಂದು ಸಲ ಅಡ್ಡಬಂದರು. ಆ ಸಂದರ್ಭದಲ್ಲಿ ಕೆಸ್ರಿಕ್, ವಿರಾಟ್‌ ಅವರನ್ನು ತಮ್ಮ ಮಾತಿನಿಂದ ಕೆಣಕಿದರು. ಇದರಿಂದ ಆಕ್ರೋಶಗೊಂಡ ವಿರಾಟ್ ಅವರು ಕೆಸ್ರಿಕ್ ಸೇರಿದಂತೆ ವಿಂಡೀಸ್‌ನ ಎಲ್ಲ ಬೌಲರ್‌ಗಳ ಎಸೆತಗಳನ್ನು ದಂಡಿಸಿದರು. 16ನೇ ಓವರ್‌ನಲ್ಲಿ ಕೆಸ್ರಿಕ್‌ ಎಸೆತವನ್ನು ಸಿಕ್ಸರ್‌ಗೆ ಎತ್ತಿದ ವಿರಾಟ್ ತಮ್ಮ ಬ್ಯಾಟ್‌ ಅನ್ನು ಪುಸ್ತಕದಂತೆ ಕೈಯಲ್ಲಿ ಹಿಡಿದು ಬೆರಳಿನಿಂದ ಟಿಕ್ ಮಾರ್ಕ್ ಎಳೆದಂತೆ ಅಣಕವಾಡಿದರು.

‘ನಾವು ಜಮೈಕಾದಲ್ಲಿ ಆಡಿದ್ದಾಗ ವಿಲಿಯಮ್ಸ್‌ ನಮ್ಮ ತಂಡದ ವಿಕೆಟ್ ಪಡೆದಾಗಲೊಮ್ಮೆ ತಮ್ಮ ಅಂಗೈ ಮೇಲೆ ಟಿಕ್ ಮಾರ್ಕ್ ಮಾಡಿಕೊಂಡು ಅಣಕವಾಡಿದ್ದರು. ಅದಕ್ಕೆ ಇವತ್ತು ಅವರಿಗೆ ಮರಳಿಸಿದೆ’ ಎಂದು ಪಂದ್ಯದ ನಂತರ ವಿರಾಟ್ ಹೇಳಿದರು.

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಇದುವರೆಗೆ ಅವರು ಒಂದೂ ಶತಕ ದಾಖಲಿಸಿಲ್ಲ. ಇಲ್ಲಿಯವರೆಗೆ ಅವರ ವೈಯಕ್ತಿಕ ಶ್ರೇಷ್ಠ ಸ್ಕೋರ್ 90 ರನ್ ಆಗಿತ್ತು.  ಆದರೆ ರಿಷಭ್ ಪಂತ್ (18 ರನ್)ಪಾದಚಲನೆಯ ಲಯ ಸಾಧಿಸುವಲ್ಲಿ ವಿಫಲರಾದರು.

ಬ್ಯಾಟ್ಸ್‌ಮನ್‌ಗಳ ಪಿಚ್‌ನಲ್ಲಿ ಭಾರತದ ಬೌಲರ್‌ಗಳು ತೀವ್ರ ದಂಡನೆಗೊಳಗಾದರು. ದೀಪಕ್ ಚಾಹರ್ ನಾಲ್ಕು ಓವರ್‌ಗಳಲ್ಲಿ 56 ರನ್‌ ಕೊಟ್ಟು ಎಲ್ಲರಿಗಿಂತ ದುಬಾರಿಯಾದರು. ವಿಂಡೀಸ್‌ನ ಎವಿನ್ ಲೂಯಿಸ್ (40; 17ಎಸೆತ, 3ಬೌಂಡರಿ, 4 ಸಿಕ್ಸರ್) ಮತ್ತು ಬ್ರೆಂಡನ್ ಕಿಂಗ್ (31; 23ಎ, 3ಬೌಂ, 1ಸಿ) ಎರಡನೇ ವಿಕೆಟ್ ಜೊತೆಯಾಟದಲ್ಲಿ 51 ರನ್‌ಗಳನ್ನು ಗಳಿಸಿದರು.  ಈ ಪಂದ್ಯದಲ್ಲಿ ಒಟ್ಟು 27 ಸಿಕ್ಸರ್‌ ಮತ್ತು 23 ಬೌಂಡರಿಗಳು ದಾಖಲಾದವು.

ಸಂಕ್ಷಿಪ್ತ ಸ್ಕೋರು: ವೆಸ್ಟ್ ಇಂಡೀಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 207 (ಎವಿನ್ ಲೂಯಿಸ್ 40, ಬ್ರೆಂಡನ್ ಕಿಂಗ್ 31, ಶಿಮ್ರೊನ್ ಹೆಟ್ಮೆಯರ್ 56, ಕೀರನ್ ಪೊಲಾರ್ಡ್ 37, ಜೇಸನ್ ಹೋಲ್ಡರ್ ಔಟಾಗದೆ 24, ದಿನೇಶ್ ರಾಮ್ದಿನ್ ಔಟಾಗದೆ 11 , ಯಜುವೇಂದ್ರ ಚಾಹಲ್ 36ಕ್ಕೆ2).

ಭಾರತ: 18.4 ಓವರ್‌ಗಳಲ್ಲಿ 4 ವಿಕೆಟ್‌ಗೆ 209 (ರೋಹಿತ್ ಶರ್ಮಾ 8, ಕೆ.ಎಲ್. ರಾಹುಲ್ 62, ವಿರಾಟ್ ಕೊಹ್ಲಿ ಔಟಾಗದೆ 94, ರಿಷಭ್ ಪಂತ್ 18; ಕೀರನ್ ಪೀಎರ್ 44ಕ್ಕೆ2) ಫಲಿತಾಂಶ: ಭಾರತ ತಂಡಕ್ಕೆ 6 ವಿಕೆಟ್‌ಗಳ ಜಯ, ಸರಣಿಯಲ್ಲಿ 1–0 ಮುನ್ನಡೆ.

ಮುಂದಿನ ಪಂದ್ಯ: ಭಾನುವಾರ,

ಸ್ಥಳ: ತಿರುವನಂತಪುರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು