ಭಾನುವಾರ, ಜನವರಿ 19, 2020
27 °C

ಕ್ರಿಕೆಟ್‌ನಲ್ಲಿ ನಾನಿನ್ನೂ ವಿದ್ಯಾರ್ಥಿ, ನಿತ್ಯವೂ ಕಲಿಯುತ್ತಿದ್ದೇನೆ: ಪಂತ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ‘ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ವಾಭಾವಿಕ ಆಟಕ್ಕಿಂತಲೂ ಮುಖ್ಯವಾಗಿ ಪರಿಸ್ಥಿತಿ ಮತ್ತು ತಂಡದ ಅಗತ್ಯಕ್ಕೆ ಅನುಗುಣವಾಗಿ ಬ್ಯಾಟಿಂಗ್‌ ಮಾಡಬೇಕು. ಈ ಗುಣವನ್ನು ಮೈಗೂಡಿಸಿಕೊಂಡಾಗ ಮಾತ್ರ ತಂಡದಲ್ಲಿ ದೀರ್ಘಕಾಲ ಸ್ಥಾನ ಉಳಿಸಿಕೊಳ್ಳಬಹುದು’ ಎಂದು ಭಾರತ ತಂಡದ ಆಟಗಾರ ರಿಷಭ್‌ ಪಂತ್‌ ತಿಳಿಸಿದ್ದಾರೆ.

ಸತತ ವೈಫಲ್ಯದ ಕಾರಣ ಸಾಕಷ್ಟು ಟೀಕೆಗೆ ಗುರಿಯಾಗಿದ್ದ 22 ವರ್ಷದ ರಿಷಭ್‌, ಭಾನುವಾರ ಏಕದಿನ ಮಾದರಿಯಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ್ದರು. ವೆಸ್ಟ್‌ ಇಂಡೀಸ್‌ ಎದುರಿನ ಪಂದ್ಯದಲ್ಲಿ 69 ಎಸೆತಗಳಲ್ಲಿ 71ರನ್‌ ಬಾರಿಸಿದ್ದರು. ಈ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್‌ಗಳಿಂದ ಸೋತಿತ್ತು.

‘ಕ್ರಿಕೆಟ್‌ನಲ್ಲಿ ನಾನಿನ್ನೂ ವಿದ್ಯಾರ್ಥಿ. ನಿತ್ಯವೂ ಒಂದಿಲ್ಲೊಂದು ವಿಷಯಗಳನ್ನು ಕಲಿಯುತ್ತಿದ್ದೇನೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪರಿಸ್ಥಿತಿಗೆ ಹೊಂದಿಕೊಂಡು ಆಡಬೇಕಿರುವುದು ಬಹಳ ಮುಖ್ಯ. ಇದನ್ನು ಈಗ ಅರಿತುಕೊಂಡಿದ್ದೇನೆ. ಟೀಕೆಗಳಿಗೆ ಕಿವಿಗೊಡದೆ ಆಟದತ್ತ ಮಾತ್ರ ಚಿತ್ತಹರಿಸುತ್ತೇನೆ’ ಎಂದು ನುಡಿದಿದ್ದಾರೆ.

‘ಸ್ವ ಸಾಮರ್ಥ್ಯದ ಮೇಲೆ ನನಗೆ ನಂಬಿಕೆ ಇದೆ. ಜನ ಏನು ಹೇಳುತ್ತಾರೆ ಎಂಬುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆಟದಲ್ಲಿ ಏಳು ಬೀಳು ಸಾಮಾನ್ಯ. ಚೆನ್ನಾಗಿ ಆಡಿದಾಗ ಹಿಗ್ಗದೇ, ವೈಫಲ್ಯ ಕಂಡಾಗ ಕುಗ್ಗದೇ ಮುಂದಡಿ ಇಡಬೇಕು. ಆ ಕೆಲಸವನ್ನು ಮಾಡುತ್ತಿದ್ದೇನೆ’ ಎಂದಿದ್ದಾರೆ.

ಜಸ್‌ಪ್ರೀತ್‌ ಬೂಮ್ರಾ ಅನುಪಸ್ಥಿತಿ ಕಾಡುತ್ತಿದೆಯೇ ಎಂಬ ಪ್ರಶ್ನೆಗೆ ‘ಬೂಮ್ರಾ ವಿಶ್ವದ ಅಗ್ರಮಾನ್ಯ ಬೌಲರ್‌ ಎಂಬುದು ಎಲ್ಲರಿಗೂ ತಿಳಿದಿದೆ. ಗಾಯದಿಂದಾಗಿ ಅವರು ಕೆಲ ಸರಣಿಗಳಿಗೆ ಅಲಭ್ಯರಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಇತರ ಬೌಲರ್‌ಗಳು ಉತ್ತಮ ಸಾಮರ್ಥ್ಯವನ್ನೇ ತೋರುತ್ತಿದ್ದಾರೆ’ ಎಂದರು.

ಇದು ಸ್ಮರಣೀಯ ಶತಕ: ‘ಭಾರತದ ವಿರುದ್ಧ ಭಾನುವಾರ ದಾಖಲಿಸಿದ ಶತಕ ನನ್ನ ಪಾಲಿಗೆ ಅತ್ಯಂತ ವಿಶೇಷ ಮತ್ತು ಸ್ಮರಣೀಯವಾದುದು’ ಎಂದು ವೆಸ್ಟ್‌ ಇಂಡೀಸ್‌ ತಂಡದ ಯುವ ಬ್ಯಾಟ್ಸ್‌ಮನ್‌ ಶಿಮ್ರೊನ್‌ ಹೆಟ್ಮೆಯರ್‌ ಹೇಳಿದ್ದಾರೆ.

ಚೆಪಾಕ್‌ ಅಂಗಳದಲ್ಲಿ ಅಬ್ಬರಿಸಿದ್ದ ಶಿಮ್ರೊನ್‌, 106 ಎಸೆತಗಳಲ್ಲಿ 139ರನ್‌ ಬಾರಿಸಿ ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು.

‘ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾನು ದಾಖಲಿಸಿದ ಗರಿಷ್ಠ ಮೊತ್ತ ಇದಾಗಿದೆ. ಹೀಗಾಗಿ ಸಹಜವಾಗಿಯೇ ಖುಷಿಯಾಗಿದೆ. ಸವಾಲಿನ ಗುರಿ ಬೆನ್ನಟ್ಟಿ ತಂಡಕ್ಕೆ ಗೆಲುವು ತಂದುಕೊಟ್ಟಾಗ ಆಗುವ ಸಂತಸ ಪದಗಳಿಗೆ ನಿಲುಕದ್ದು. ಭಾರತದ ಎದುರಿನ ಪಂದ್ಯದಲ್ಲಿ ಕೊನೆಯವರೆಗೂ ಬ್ಯಾಟಿಂಗ್‌ ಮಾಡಬೇಕೆಂಬ ಬಯಕೆ ಇತ್ತು. ಅದು ಈಡೇರದ ಕಾರಣ ಸ್ವಲ್ಪ ಬೇಸರವಾಯಿತು’ ಎಂದರು. 

ವೆಸ್ಟ್‌ ಇಂಡೀಸ್‌ ತಂಡಕ್ಕೆ ದಂಡ
ಭಾನುವಾರದ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌, ತನ್ನ ಪಾಲಿನ ಓವರ್‌ಗಳನ್ನು ಪೂರ್ಣಗೊಳಿಸಲು ನಿಗದಿಗಿಂತಲೂ ಹೆಚ್ಚು ಸಮಯ ತೆಗೆದುಕೊಂಡ ಕಾರಣ ಈ ತಂಡದ ಆಟಗಾರರಿಗೆ ಪಂದ್ಯದ ಸಂಭಾವನೆಯ ಶೇಕಡ 80ರಷ್ಟು ದಂಡ ವಿಧಿಸಲಾಗಿದೆ.

‘ವಿಂಡೀಸ್‌ ತಂಡವು ತನಗೆ ನಿಗದಿಪಡಿಸಿದ ಸಮಯದಲ್ಲಿ 46 ಓವರ್‌ಗಳನ್ನಷ್ಟೇ ಪೂರ್ಣಗೊಳಿಸಿತ್ತು. ಉಳಿದ ನಾಲ್ಕು ಓವರ್‌ಗಳನ್ನು ಪೂರೈಸಲು ಹೆಚ್ಚುವರಿ ಅವಧಿ ತೆಗೆದುಕೊಂಡಿತ್ತು. ಹೀಗಾಗಿ ಪಂದ್ಯದ ರೆಫರಿ ಡೇವಿಡ್‌ ಬೂನ್‌ ಅವರು ಆಟಗಾರರಿಗೆ ದಂಡ ವಿಧಿಸಿದ್ದಾರೆ’ ಎಂದು ಐಸಿಸಿ ಪ್ರಕಟಣೆಯಲ್ಲಿ ಹೇಳಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು