ಸೋಮವಾರ, ಆಗಸ್ಟ್ 19, 2019
22 °C
ಭಾರತ–ವೆಸ್ಟ್ ಇಂಡೀಸ್ ನಡುವಣ ಮೂರನೇ ಏಕದಿನ ಪಂದ್ಯದಲ್ಲಿ ಮಳೆ ಆಟ

ಭಾರತ–ವೆಸ್ಟ್ ಇಂಡೀಸ್ ನಡುವಣ ಮೂರನೇ ಏಕದಿನ ಪಂದ್ಯ: ಗೇಲ್, ಲೂಯಿಸ್ ಸಿಡಿಲಬ್ಬರ

Published:
Updated:

ಪೋರ್ಟ್ ಆಫ್ ಸ್ಪೇನ್: ಕ್ವೀನ್ಸ್‌ಪಾರ್ಕ್ ಓವಲ್‌ನಲ್ಲಿ ಬುಧವಾರ ಅಗಾಗ ಮಳೆಯ ಆಟ. ಜೊತೆಗೆ ಕ್ರಿಸ್ ಗೇಲ್ ಮತ್ತು ಎವಿನ್ ಲೂಯಿಸ್ ಅವರಿಬ್ಬರ ಸಿಡಿಲಬ್ಬರದ ಬ್ಯಾಟಿಂಗ್.

ಸ್ಫೋಟಕ ಬ್ಯಾಟ್ಸ್‌ಮನ್ ಗೇಲ್ (72; 41ಎಸೆತ, 8ಬೌಂಡರಿ, 5ಸಿಕ್ಸರ್) ಮತ್ತು ಲೂಯಿಸ್ (43; 29ಎಸೆತ, 5ಬೌಂಡರಿ, 3ಸಿಕ್ಸರ್)  ಅವರು ಕೊಟ್ಟ ಅಬ್ಬರದ ಆರಂಭದಿಂದಾಗಿ ತಂಡವು ಹತ್ತು ಓವರ್‌ಗಳಾಗುಷ್ಟರಲ್ಲಿಯೇ ನೂರು ರನ್‌ಗಳ ಗಡಿ ದಾಟಿತು. ಆತಿಥೇಯ ಬಳಗವು 22 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 158 ರನ್‌ ಗಳಿಸಿತು. ಈ ಸಂದರ್ಭದಲ್ಲಿ ಮಳೆ ಬಂದ ಕಾರಣ ಆಟವನ್ನು ನಿಲ್ಲಿಸಲಾಗಿತ್ತು.

ಟಾಸ್ ಗೆದ್ದ ವಿಂಡೀಸ್‌ ತಂಡಕ್ಕೆ ಗೇಲ್ ಮತ್ತು ಲೂಯಿಸ್ ಭರ್ಜರಿ ಆರಂಭ ನೀಡಿದರು. 39 ವರ್ಷದ ಗೇಲ್ ಭಾರತದ ಬೌಲಿಂಗ್ ಪಡೆಯ ಎಸೆತಗಳನ್ನು ನುಚ್ಚುನೂರು ಮಾಡಿದರು.

ಹೋದ ಪಂದ್ಯದಲ್ಲಿ ಯಶಸ್ವಿ ಬೌಲರ್‌ ಆಗಿದ್ದ ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ಅವರ ಎಸೆತಗಳನ್ನು ಬೌಂಡರಿಯಾಚೆಗೆ ಎತ್ತಿದರು. ಇದರಿಂದಾಗಿ ಇಬ್ಬರೂ ದುಬಾರಿಯಾದರು. ಭುವಿ ಕೇವಲ ಐದು ಓವರ್‌ಗಳಲ್ಲಿ 48 ರನ್ ಮತ್ತು ಶಮಿ ಮೂರು ಓವರ್‌ಗಳಲ್ಲಿ 31 ರನ್‌ ಕೊಟ್ಟರು. ಗೇಲ್ ಅವರ ಅಬ್ಬರದ ಆಟದಿಂದ ಪ್ರೇರಣೆಗೊಂಡ ಲೂಯಿಸ್ ಕೂಡ ಬೀಸಾಟವಾಡಿದರು. ಅವರು ಹೊಡೆದ ಮೂರು ಸಿಕ್ಸರ್‌ಗಳು ಆಕರ್ಷಕವಾಗಿದ್ದವು. 

ಮೊದಲ ವಿಕೆಟ್ ಜೊತೆಯಾಟದಲ್ಲಿ 115 ರನ್‌ಗಳು ಸೇರಿದವು. 11ನೇ ಓವರ್‌ನಲ್ಲಿ ಲೂಯಿಸ್ ಅವರ ವಿಕೆಟ್ ಪಡೆಯುವಲ್ಲಿ ಸ್ಪಿನ್ನರ್ ಯಜುವೇಂದ್ರ ಚಾಹಲ್ ಯಶಸ್ವಿಯಾದರು. ಇದರಿಂದಾಗಿ ಕೊಹ್ಲಿ ಸಮಾಧಾನದ ನಿಟ್ಟುಸಿರುಬಿಟ್ಟರು. ಕುಲದೀಪ್ ಯಾದವ್ ಬದಲು ಸ್ಥಾನ ಪಡೆದ ಚಾಹಲ್ ಮಿಂಚಿದರು. 

12ನೇ ಓವರ್‌ನಲ್ಲಿ ಎಡಗೈ ಮಧ್ಯಮವೇಗಿ ಖಲೀಲ್ ಅಹಮದ್ ಎಸೆತವನ್ನು ಬೌಂಡರಿಗೆರೆಯನ್ನು ದಾಟಿಸಲು ಯತ್ನಿಸಿದ ಗೇಲ್ ದಂಡ ತೆತ್ತರು. ಕೊಹ್ಲಿ ಪಡೆದ ಕ್ಯಾಚ್‌ಗೆ ನಿರ್ಗಮಿಸಿದರು. ಇದರಿಂದಾಗಿ ಭಾರತಕ್ಕೆ ಇನಿಂಗ್ಸ್‌ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಯಿತು. ನಂತರದ ಆಟದಲ್ಲಿ ರನ್‌ ಗಳಿಕೆಯ ಮೇಲೆ ಕಡಿವಾಣ ಹಾಕುವಲ್ಲಿ ಬೌಲರ್‌ಗಳು ಯಶಸ್ವಿಯಾದರು. ಗೇಲ್ ಔಟಾದಾಗ 11.4 ಓವರ್‌ಗಳಲ್ಲಿ 121 ರನ್‌ಗಳು ಬೋರ್ಡ್‌ ಮೇಲೆ ಇದ್ದವು. ಆದರೆ, ನಂತರದ ಹತ್ತು ಓವರ್‌ಗಳಲ್ಲಿ ಸೇರಿದ್ದು 37 ರನ್‌ಗಳು ಮಾತ್ರ. ಆರಂಭದಲ್ಲಿ ದಂಡಿಸಿಕೊಂಡಿದ್ದ ಭುವಿ ಮತ್ತು ಶಮಿ ತಲಾ ಒಂದು ಮೇಡನ್ ಓವರ್ ಮಾಡಿದರು. 

ಭಾರತ ತಂಡವು ಸರಣಿಯ ಮೊದಲ ಪಂದ್ಯವು ಮಳೆಗೆ ಆಹುತಿಯಾಗಿತ್ತು. ಎರಡನೇ ಪಂದ್ಯದಲ್ಲಿ ಜಯಿಸಿದ್ದ ವಿರಾಟ್ ಬಳಗವು 1–0 ಮುನ್ನಡೆ ಸಾಧಿಸಿತ್ತು. ಇದು ಕೊನೆಯ ಪಂದ್ಯವಾಗಿದೆ.

ಸಂಕ್ಷಿಪ್ತ ಸ್ಕೋರು: 22 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 158 (ಕ್ರಿಸ್ ಗೇಲ್ 72, ಎವಿನ್ ಲೂಯಿಸ್ 43, ಶಾಯ್ ಹೋಪ್ ಬ್ಯಾಟಿಂಗ್ 19, ಶಿಮ್ರೊನ್ ಹೆಟ್ಮೆಯರ್ ಬ್ಯಾಟಿಂಗ್ 18, ಖಲೀಲ್ ಅಹಮದ್ 43ಕ್ಕೆ1, ಯಜುವೇಂದ್ರ ಚಾಹಲ್ 21ಕ್ಕೆ1)
ವಿವರ ಅಪೂರ್ಣ

 

Post Comments (+)