ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

INDW vs AUSW | ತಿತಾಸ್ ಸಾಧು ಬೌಲಿಂಗ್‌ಗೆ ಒಲಿದ ಜಯ

Published 5 ಜನವರಿ 2024, 23:59 IST
Last Updated 5 ಜನವರಿ 2024, 23:59 IST
ಅಕ್ಷರ ಗಾತ್ರ

ನವಿ ಮುಂಬೈ: ಮಧ್ಯಮವೇಗಿ ತಿತಾಸ್ ಸಾಧು ದಾಳಿಯ ಬಲದಿಂದ ಭಾರತ ತಂಡವು ಶುಕ್ರವಾರ ಇಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಜಯಿಸಿತು. 

ಡಿ.ವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 9 ವಿಕೆಟ್‌ ಗಳಿಂದ ಜಯಿಸಿದ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. 19 ವರ್ಷದ ಪ್ರತಿಭೆ ತಿತಾಸ್ (17ಕ್ಕೆ4) ಆಸ್ಟ್ರೇಲಿಯಾದ ಪ್ರಮುಖ ಬ್ಯಾಟರ್‌ಗಳ ವಿಕೆಟ್ ಕಬಳಿಸಿದರು. ಇದರಿಂದಾಗಿ ತಂಡವು 19.2 ಓವರ್‌ಗಳಲ್ಲಿ 141 ರನ್‌ಗಳ ಸಾಧಾರಣ ಮೊತ್ತ ಗಳಿಸಿತು. 

ಅದಕ್ಕುತ್ತರವಾಗಿ ಆತಿಥೇಯ ತಂಡವು 17.4 ಓವರ್‌ಗಳಲ್ಲಿ 1 ವಿಕೆಟ್‌ಗೆ 145 ರನ್ ಗಳಿಸಿ ಜಯಿಸಿತು. ಆರಂಭಿಕ ಜೋಡಿ ಸ್ಮೃತಿ ಮಂದಾನ (54; 52ಎ, 4X7, 6X1) ಮತ್ತು ಶಫಾಲಿ ವರ್ಮಾ (ಔಟಾಗದೆ 64; 44ಎ, 4X6, 6X3) ಮೊದಲ ವಿಕೆಟ್ ಜೊತೆಯಾಟದಲ್ಲಿ 137 ರನ್‌ ಸೇರಿಸಿದರು. ಇದರಿಂದಾಗಿ ತಂಡದ ಜಯದ ಹಾದಿ ಸುಲಭವಾಯಿತು.

ಐದನೇ ಅಂತರರಾಷ್ಟ್ರೀಯ ಟಿ20 ಪಂದ್ಯ ಆಡಿದ ತಿತಾಸ್ ಅವರು ತಮ್ಮ ಜೀವನಶ್ರೇಷ್ಠ ಬೌಲಿಂಗ್ ಸಾಧನೆಯನ್ನು ಇಲ್ಲಿ ದಾಖಲಿಸಿದರು. ಅವರು ಆಸ್ಟ್ರೇಲಿಯಾದ ಅನುಭವಿ ಬ್ಯಾಟರ್‌ಗಳಾದ ಬೆತ್ ಮೂನಿ, ತಹಲಿಯಾ ಮೆಕ್‌ಗ್ರಾ, ಆ್ಯಷ್ಲೆ ಗಾರ್ಡನರ್ ಮತ್ತು ಅನಾಬೆಲ್ ಸದರ್ಲೆಂಡ್ ಅವರ ವಿಕೆಟ್‌ಳನ್ನು ಗಳಿಸಿದರು.

ಕರ್ನಾಟಕದ ಶ್ರೇಯಾಂಕಾ ಪಾಟೀಲ (19ಕ್ಕೆ2) ಮತ್ತು ಸ್ಪಿನ್ನರ್ ದೀಪ್ತಿ ಶರ್ಮಾ (24ಕ್ಕೆ2) ಅವರು ತಿತಾಸ್‌ಗೆ ಉತ್ತಮ ಜೊತೆ ನೀಡಿದರು.

ಆಸ್ಟ್ರೇಲಿಯಾದ ಫೊಯೆಬಿ ಲಿಚ್‌ಫೀಲ್ಡ್‌ (49; 32ಎ, 4X4, 6X3) ಅವರು ತಮಗೆ ಲಭಿಸಿದ ಮೂರು ‘ಜೀವದಾನ’ಗಳನ್ನು ಸಮರ್ಥವಾಗಿ ಬಳಸಿಕೊಂಡರು. ಆದರೆ ಒಂದು ರನ್ ಅಂತರದಿಂದ ಅರ್ಧಶತಕ ತಪ್ಪಿಸಿಕೊಂಡರು. ಆಸ್ಟ್ರೇಲಿಯಾದ ಫೀಲ್ಡರ್‌ಗಳೂ ಕೂಡ ಭಾರತದ ಬ್ಯಾಟರ್ ಶಫಾಲಿ ವರ್ಮಾ ಅವರ ಎರಡು ಕ್ಯಾಚ್‌ಗಳನ್ನು ಕೈಚೆಲ್ಲಿದರು.

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ:  19.2 ಓವರ್‌ಗಳಲ್ಲಿ 141 (ಬೆತ್ ಮೂನಿ 17, ಎಲಿಸ್ ಪೆರಿ 37, ಫೊಯೆಬಿ ಲಿಚ್‌ಫೀಲ್ಡ್ 49, ತಿತಾಸ್ ಸಾಧು 17ಕ್ಕೆ4, ಶ್ರೇಯಾಂಕಾ ಪಾಟೀಲ 19ಕ್ಕೆ2, ದೀಪ್ತಿ ಶರ್ಮಾ 24ಕ್ಕೆ2) ಭಾರತ: 17.4 ಓವರ್‌ಗಳಲ್ಲಿ 1 ವಿಕೆಟ್‌ಗಳಿಗೆ 145 (ಸ್ಮೃತಿ ಮಂದಾನ 54, ಶಫಾಲಿ ವರ್ಮಾ ಔಟಾಗದೆ 64, ಜೆಮಿಮಾ ರಾಡ್ರಿಗಸ್ ಔಟಾಗದೆ 6, ಜಾರ್ಜಿಯಾ ವೇರ್‌ಹ್ಯಾಮ್ 20ಕ್ಕೆ1) ಫಲಿತಾಂಶ: ಭಾರತ ತಂಡಕ್ಕೆ 9 ವಿಕೆಟ್‌ಗಳ ಜಯ. ಸರಣಿಯಲ್ಲಿ 1–0 ಮುನ್ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT