ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟೆಸ್ಟ್ ಕ್ರಿಕೆಟ್ | ಭಾರತ ಮಹಿಳೆಯರ ಚಾರಿತ್ರಿಕ ಜಯ

Published 16 ಡಿಸೆಂಬರ್ 2023, 13:03 IST
Last Updated 16 ಡಿಸೆಂಬರ್ 2023, 13:03 IST
ಅಕ್ಷರ ಗಾತ್ರ

ನವಿ ಮುಂಬೈ: ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ಕ್ರಿಕೆಟ್‌ ತಂಡವು ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಚಾರಿತ್ರಿಕ ಜಯ ಸಾಧಿಸಿತು.

ಡಿ.ವೈ ಪಾಟೀಲ ಕ್ರೀಡಾಂಗಣದಲ್ಲಿ ಪಂದ್ಯ ಮೂರನೇ ದಿನವಾದ ಶನಿವಾರ ಆತಿಥೇಯ ತಂಡವು 347 ರನ್‌ಗಳಿಂದ ಜಯಿಸಿತು. ಮಹಿಳಾ ಟೆಸ್ಟ್ ಇತಿಹಾಸದಲ್ಲಿಯೇ ಇದು ಅತಿ ದೊಡ್ಡ ಅಂತರದ ಗೆಲುವಿನ ದಾಖಲೆಯಾಗಿದೆ. 1998ರಲ್ಲಿ ಶ್ರೀಲಂಖಾ ತಂಡವು ಪಾಕಿಸ್ತಾನ ಎದುರು 309 ರನ್‌ಗಳಿಂದ ಜಯಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

ಅಲ್ಲದೇ ಭಾರತಕ್ಕೆ ತವರು ನೆಲದಲ್ಲಿ ಇಂಗ್ಲೆಂಡ್ ವಿರುದ್ಧ ಜಯಿಸಿದ ಮೊದಲ ಪಂದ್ಯವೂ ಹೌದು.

ಮೊದಲ ಇನಿಂಗ್ಸ್‌ನಲ್ಲಿ ಏಳು ರನ್‌ಗಳನ್ನು ಕೊಟ್ಟು ಐದು ವಿಕೆಟ್ ಗಳಿಸಿದ್ದ ಸ್ಪಿನ್ನರ್ ದೀಪ್ತಿ ಶರ್ಮಾ, ಎರಡನೇ ಇನಿಂಗ್ಸ್‌ನಲ್ಲಿಯೂ ನಾಲ್ಕು ವಿಕೆಟ್ ಕಬಳಿಸಿದರು. ಅವರಿಗೆ ಪೂಜಾ (23ಕ್ಕೆ3) ಉತ್ತಮ ಜೊತೆ ನೀಡಿದರು.

ಪ್ರವಾಸಿ ಬಳಗವು ಎರಡನೇ ಇನಿಂಗ್ಸ್‌ನಲ್ಲಿ 479 ರನ್‌ಗಳ  ಗೆಲುವಿನ ಗುರಿ ಬೆನ್ನಟ್ಟಿತು ಆದರೆ 27.3 ಓವರ್‌ಗಳಲ್ಲಿ 131 ರನ್‌ ಗಳಿಸಿ ಆಲೌಟ್ ಆಯಿತು.

ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡವು 428 ರನ್‌ ಗಳಿಸಿತ್ತು. ಆದರೆ ಎರಡನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡವು138 ರನ್‌ ಗಳಿಸಿತ್ತು. ಭಾರತವು ಎರಡನೇ ಇನಿಂಗ್ಸ್‌ನಲ್ಲಿ ಶುಕ್ರವಾರ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ಗಳಿಗೆ 186 ರನ್‌ ಗಳಿಸಿತ್ತು.

ಶನಿವಾರ ಬೆಳಿಗ್ಗೆ ಡಿಕ್ಲೇರ್ ಮಾಡಿಕೊಂಡಿತು. ಆತಿಥೇಯ ಸ್ಪಿನ್ನರ್‌ಗಳ ಮುಂದೆ ಊಟದ ವಿರಾಮದ ಹೊತ್ತಿಗೆ ಹೀಥರ್ ನೈಟ್ ಬಳಗವು  ಶರಣಾಯಿತು.  ನೈಟ್ (21 ರನ್) ಅವರು ತಂಡದ ಗರಿಷ್ಠ ವೈಯಕ್ತಿಕ ಸ್ಕೋರರ್ ಆದರು.

ಈ ಅವಧಿಯಲ್ಲಿ ಭಾರತವು ಎರಡು ಡಿಆರ್‌ಎಸ್‌ (ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ) ಅವಕಾಶಗಳನ್ನು ವ್ಯರ್ಥ ಮಾಡಿಕೊಂಡಿತು.

ಶುಭಾಗೆ ಗಾಯ

ಈ ಪಂದ್ಯದ ಮೂಲಕ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮೈಸೂರಿನ ಶುಭಾ ಸತೀಶ್ ಅವರು ಗಾಯಗೊಂಡಿದ್ದಾರೆ. ಅವರ ಕೈಬೆರಳಿನ ಮೂಳೆ ಮುರಿದಿದ್ದು ಪಂದ್ಯದ ಎರಡು ಮತ್ತು ಮೂರನೇ ದಿನದಾಟದಲ್ಲಿ ಅವರು ಕಣಕ್ಕಿಳಿಯಲಿಲ್ಲ.  ಮೊದಲ ಇನಿಂಗ್ಸ್‌ನಲ್ಲಿ ಅವರು ಅರ್ಧಶತಕ ದಾಖಲಿಸಿದ್ದರು. ಶುಕ್ರವಾರ ದಿನದಾಟಕ್ಕೂ ಮುನ್ನ ಅಭ್ಯಾಸ ನಡೆಸುವ ಸಂದರ್ಭದಲ್ಲಿ ಅವರ ಕೈಬೆರಳಿಗೆ ಪೆಟ್ಟಾಗಿತ್ತು. ಇದರಿಂದಾಗಿ ಅವರು ಮುಂದಿನ ವಾರ ನಡೆಯಲಿರುವ ಆಸ್ಟ್ರೇಲಿಯಾ ಎದುರಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಈ ಕುರಿತು ಬಿಸಿಸಿಐ ಇನ್ನೂ ವಿವರಗಳನ್ನು ನೀಡಿಲ್ಲ.

ಸಂಕ್ಷಿಪ್ತ ಸ್ಕೋರು (ಮೊದಲ ಇನಿಂಗ್ಸ್)

ಭಾರತ: 104.3 ಓವರ್‌ಗಳಲ್ಲಿ 428, ಇಂಗ್ಲೆಂಡ್:35.3 ಓವರ್‌ಗಳಲ್ಲಿ 136. ಎರಡನೇ ಇನಿಂಗ್ಸ್: ಭಾರತ: 42 ಓವರ್‌ಗಳಲ್ಲಿ 6ಕ್ಕೆ186 ಡಿಕ್ಲೇರ್ಡ್.

ಇಂಗ್ಲೆಂಡ್: 27.3 ಓವರ್‌ಗಳಲ್ಲಿ 131 (ಹೀಥರ್ ನೈಟ್ 21, ಶಾರ್ಲೊಟ್ ಡೀನ್ ಔಟಾಗದೆ 20, ಪೂಜಾ ವಸ್ತ್ರಕರ್ 23ಕ್ಕೆ3, ದೀಪ್ತಿ ಶರ್ಮಾ 32ಕ್ಕೆ4, ರಾಜೇಶ್ವರಿ ಗಾಯಕವಾಡ 20ಕ್ಕೆ2)

ಫಲಿತಾಂಶ: ಭಾರತಕ್ಕೆ 347 ರನ್‌ಗಳ ಜಯ. ಪಂದ್ಯದ ಆಟಗಾರ್ತಿ: ದೀಪ್ತಿ ಶರ್ಮಾ.

ಇಂಗ್ಲೆಂಡ್ ಎದುರು ಟೆಸ್ಟ್ ಪಂದ್ಯ ಜಯಿಸಿದ ಭಾರತ ತಂಡದ ಆಟಗಾರ್ತಿಯರು ಟ್ರೋಫಿಯೊಂದಿಗೆ ಸಂಭ್ರಮಿಸಿದರು  –ಪಿಟಿಐ ಚಿತ್ರ
ಇಂಗ್ಲೆಂಡ್ ಎದುರು ಟೆಸ್ಟ್ ಪಂದ್ಯ ಜಯಿಸಿದ ಭಾರತ ತಂಡದ ಆಟಗಾರ್ತಿಯರು ಟ್ರೋಫಿಯೊಂದಿಗೆ ಸಂಭ್ರಮಿಸಿದರು  –ಪಿಟಿಐ ಚಿತ್ರ
ಇಂಗ್ಲೆಂಡ್ ಎದುರು ಟೆಸ್ಟ್ ಪಂದ್ಯ ಜಯಿಸಿದ ಭಾರತ ತಂಡದ ಆಟಗಾರ್ತಿಯರು ಟ್ರೋಫಿಯೊಂದಿಗೆ ಸಂಭ್ರಮಿಸಿದರು  –ಪಿಟಿಐ ಚಿತ್ರ
ಇಂಗ್ಲೆಂಡ್ ಎದುರು ಟೆಸ್ಟ್ ಪಂದ್ಯ ಜಯಿಸಿದ ಭಾರತ ತಂಡದ ಆಟಗಾರ್ತಿಯರು ಟ್ರೋಫಿಯೊಂದಿಗೆ ಸಂಭ್ರಮಿಸಿದರು  –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT