ಮಂಗಳವಾರ, ಜುಲೈ 5, 2022
22 °C
ನ್ಯೂಜಿಲೆಂಡ್ ಎದುರಿನ ಟ್ವೆಂಟಿ–20 ಕ್ರಿಕೆಟ್ ಸರಣಿ: ಸತತ ಎರಡನೇ ಪಂದ್ಯ ಟೈ

ಭಾರತಕ್ಕೆ ಮತ್ತೆ ‘ಸೂಪರ್’ ಗೆಲುವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವೆಲಿಂಗ್ಟನ್ : ಮತ್ತೊಮ್ಮೆ ಪಂದ್ಯ ಟೈ, ಮತ್ತೊಂದು ಸೂಪರ್ ಓವರ್‌; ಭಾರತಕ್ಕೆ ಮತ್ತೆ ಗೆಲುವಿನ ಸಂಭ್ರಮ. ಶುಕ್ರವಾರ ಇಲ್ಲಿ ನಡೆದ ನಾಲ್ಕನೇ ಟ್ವೆಂಟಿ–20 ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡದ ಸವಾಲನ್ನು ಭಾರತ ಸೂಪರ್ ಓವರ್‌ನಲ್ಲಿ ಮೆಟ್ಟಿ ನಿಂತಿತು.

ಭುಜದ ನೋವಿನಿಂದಾಗಿ ಕೇನ್‌ ವಿಲಿಯಮ್ಸನ್ ಕಣಕ್ಕೆ ಇಳಿಯಲಿಲ್ಲ. ಟಾಸ್ ಗೆದ್ದ ನಾಯಕ ಟಿಮ್ ಸೌಥಿ ಫೀಲ್ಡಿಂಗ್ ಆಯ್ದುಕೊಂಡರು. ಭಾರತವನ್ನು 165 ರನ್‌ಗಳಿಗೆ ನಿಯಂತ್ರಿಸಲು ನ್ಯೂಜಿಲೆಂಡ್ ಬೌಲರ್‌ಗಳು ಯಶಸ್ವಿಯಾದರು. ಗುರಿ ಬೆನ್ನಟ್ಟಿದ ಆತಿಥೇಯರು ಒಂದು ಹಂತದಲ್ಲಿ ಸುಲಭ ಜಯದತ್ತ ಹೆಜ್ಜೆ ಹಾಕಿದ್ದರು. ಕಾಲಿನ್ ಮನ್ರೊ (64; 47 ಎಸೆತ, 3 ಸಿಕ್ಸರ್‌, 6 ಬೌಂಡರಿ) ಮತ್ತು ಟಿಮ್ ಸೀಫರ್ಟ್ (57; 39 ಎಸೆತ, 3 ಸಿ, 4 ಬೌಂ) ಎರಡನೇ ವಿಕೆಟ್‌ಗೆ 74 ರನ್ ಸೇರಿಸಿದಾಗ ತಂಡದಲ್ಲಿ ಸಂತಸ ಮನೆ ಮಾಡಿತ್ತು.

ಆದರೆ 13ನೇ ಓವರ್‌ನಿಂದ ಪಂದ್ಯ ಕೊಹ್ಲಿ ಬಳಗದ ನಿಯಂತ್ರಣಕ್ಕೆ ಬಂದಿತು. ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಂಡ ನ್ಯೂಜಿಲೆಂಡ್ ಕೊನೆಯ ಓವರ್‌ಗಳ ಒತ್ತಡವನ್ನು ಮೆಟ್ಟಿ ನಿಲ್ಲುವಲ್ಲಿ ಎಡವಿತು. ಕೊನೆಯ ಓವರ್‌ನಲ್ಲಿ ಮೂರು ವಿಕೆಟ್‌ಗಳನ್ನು ಉರುಳಿಸಿದ ಭಾರತ, ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಸರಣಿಯಲ್ಲಿ 4–0 ಮುನ್ನಡೆ ಸಾಧಿಸಿತು.

ಸೂಪರ್ ಓವರ್‌ನಲ್ಲಿ ಮೊದಲು ಬೌಲಿಂಗ್ ಮಾಡಿದ ಜಸ್‌ಪ್ರೀತ್ ಬೂಮ್ರಾ 13 ರನ್ ಬಿಟ್ಟುಕೊಟ್ಟರು. ಆದರೆ ಭಾರತ, ಕೆ.ಎಲ್‌.ರಾಹುಲ್ ಅವರ ಸ್ಫೋಟಕ ಬ್ಯಾಟಿಂಗ್ ಬಲದಿಂದ ಇನ್ನೂ ಒಂದು ಎಸೆತ ಬಾಕಿ ಇರುವಾಗ ಗೆದ್ದು ಬೀಗಿತು. ಟಿಮ್ ಸೌಥಿ ಅವರ ಸೂಪರ್ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ರಾಹುಲ್ 10 ರನ್ ಕಬಳಿಸಿದರು. ಮೂರನೇ ಎಸೆತದಲ್ಲಿ ಔಟಾದರು. ನಂತರ ವಿರಾಟ್ ಕೊಹ್ಲಿ ಮತ್ತು ಸಂಜು ಸ್ಯಾಮ್ಸನ್ ತಾಳ್ಮೆಯಿಂದ ಆಡಿ ಜಯ ಕಸಿದುಕೊಂಡರು.

ಮನೀಷ್‌ ಪಾಂಡೆ ಅರ್ಧಶತಕ: ರೋಹಿತ್ ಶರ್ಮಾ ಬದಲಿಗೆ ಅವಕಾಶ ಪಡೆದ ಸಂಜು ಸ್ಯಾಮ್ಸನ್‌ಗೆ ಸಾಮರ್ಥ್ಯ ಸಾಬೀತು ಮಾಡಲು ಆಗಲಿಲ್ಲ. ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಶಿವಂ ದುಬೆ ಕೂಡ ಬೇಗನೇ ವಾಪಸಾದರು. ಆದರೆ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್‌.ರಾಹುಲ್ ಮತ್ತು ಆರನೇ ಕ್ರಮಾಂಕದ ಮನೀಷ್ ಪಾಂಡೆ (50; 36 ಎ, 3 ಬೌಂ) ಗಮನಾರ್ಹ ಆಟವಾಡಿದರು.

ಮೂರನೇ ಪಂದ್ಯವೂ ಸೂಪರ್ ಓವರ್‌ನಲ್ಲಿ ಮುಕ್ತಾಯಗೊಂಡಿತ್ತು. ಆ ಪಂದ್ಯ ಗೆಲ್ಲುವುದರೊಂದಿಗೆ ಸರಣಿ ತನ್ನದಾಗಿಸಿಕೊಂಡಿದ್ದ ಭಾರತ ಶುಕ್ರವಾರ ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್‌ ಮತ್ತು ನವದೀಪ್ ಸೈನಿಗೆ ಅವಕಾಶ ನೀಡಿತ್ತು. ರೋಹಿತ್ ಶರ್ಮಾ, ರವೀಂದ್ರ ಜಡೇಜ ಮತ್ತು ಮೊಹಮ್ಮದ್ ಶಮಿ ಅವರಿಗೆ ವಿಶ್ರಾಂತಿ ನೀಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು