ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಟೆಸ್ಟ್ ಪಂದ್ಯ: ಹೊಸ ವರ್ಷಕ್ಕೆ ಜಯದ ರಂಗು ತುಂಬುವ ಛಲ

ನ್ಯೂಲ್ಯಾಂಡ್ಸ್‌ನಲ್ಲಿ ಭಾರತ–ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್ ನಾಳೆಯಿಂದ: ರೋಹಿತ್ ಬಳಗಕ್ಕೆ ಗೆಲುವಿನ ತುಡಿತ
Published 2 ಜನವರಿ 2024, 14:38 IST
Last Updated 2 ಜನವರಿ 2024, 14:38 IST
ಅಕ್ಷರ ಗಾತ್ರ

ಕೇಪ್‌ಟೌನ್: ಹೊಸ ವರ್ಷವನ್ನು ಜಯದ ಸಿಹಿಯೊಂದಿಗೆ ಆರಂಭಿಸುವ ಅವಕಾಶ ಈಗ ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡದ ಮುಂದಿದೆ.

ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಬುಧವಾರ ದಕ್ಷಿಣ ಆಫ್ರಿಕಾ ಎದುರಿನಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಜಯಿಸುವುದರೊಂದಿಗೆ ಹೋದ ವರ್ಷದ ಸೋಲುಗಳ ಕಹಿ ಮರೆಯಬಹುದು. ಅಲ್ಲದೇ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ತಂಡವು ಒಂದಿಷ್ಟು ಸ್ಥಾನಗಳ ಏರಿಕೆಯನ್ನೂ ಕಾಣಬಹುದು. ಸದ್ಯ ಪಟ್ಟಿಯಲ್ಲಿರುವ ಒಂಬತ್ತು ತಂಡಗಳ ಪೈಕಿ ಭಾರತದ ಖಾತೆಯಲ್ಲಿ 14 ಅಂಕಗಳು (38.89%) ಇವೆ.

ಹೋದ ವಾರ ಸೆಂಚುರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಇನಿಂಗ್ಸ್ ಮತ್ತು 32 ರನ್‌ಗಳ ಅಂತರದಿಂದ ಸೋತಿತ್ತು. ಆ ಕಹಿಯನ್ನು ಮರೆತು ಸರಣಿಯ ಕೊನೆ ಪಂದ್ಯದಲ್ಲಿ ಜಯಿಸುವ ಒತ್ತಡ ರೋಹಿತ್ ಬಳಗದ ಮೇಲಿದೆ. ಒಂದು ವೇಳೆ  ಈ ಪಂದ್ಯವು ಡ್ರಾದಲ್ಲಿ ಮುಕ್ತಾಯವಾದರೂ ಆತಿಥೇಯರಿಗೆ ಸರಣಿ ಗೆಲುವು ಒಲಿಯಲಿದೆ. ನ್ಯೂಲ್ಯಾಂಡ್ಸ್‌ನಲ್ಲಿ ಇದುವರೆಗೆ ಆಡಿರುವ ಪಂದ್ಯಗಳಲ್ಲಿ ಭಾರತವು ಒಂದು ಬಾರಿಯೂ ಜಯಿಸಿಲ್ಲ. ಮಹೇಂದ್ರಸಿಂಗ್ ಧೋನಿ ನಾಯಕತ್ವದ ತಂಡವು 13 ವರ್ಷಗಳ ಹಿಂದೆ ಇಲ್ಲಿ ಡ್ರಾ ಸಾಧಿಸಿತ್ತು. ಆಗ ತಂಡದಲ್ಲಿದ್ದ ರಾಹುಲ್ ದ್ರಾವಿಡ್ ಈಗ ಮುಖ್ಯ ಕೋಚ್ ಆಗಿದ್ದಾರೆ.

ಈ ಪಂದ್ಯಕ್ಕಾಗಿ ತಂಡ ಸಂಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ವ್ಯವಸ್ಥಾಪಕರು ಚಿತ್ತ ಹರಿಸಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಎಡಗೈ ಆಲ್‌ರೌಂಡರ್ ರವೀಂದ್ರ ಜಡೇಜ ಈ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಇದರಿಂದಾಗಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಬಲ ಹೆಚ್ಚಾದಂತಾಗಿದೆ.  ಕುಕಬುರಾ ಚೆಂಡಿನಲ್ಲಿ ತಮ್ಮ ಸ್ಪಿನ್ ಕೈಚಳಕವನ್ನೂ ಅವರು ತೋರಿಸಬಹುದು.

ಆದರೆ ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರೊಂದಿಗೆ ವೇಗದ ಹೊಣೆ ಹಂಚಿಕೊಳ್ಳುವ ಮೂರನೇ ವೇಗಿಯ ಆಯ್ಕೆ ರೋಹಿತ್ ಮುಂದಿರುವ ಸವಾಲಾಗಿದೆ. ಸೆಂಚುರಿಯನ್‌ನಲ್ಲಿ ಪದಾರ್ಪಣೆ ಮಾಡಿದ್ದ ಕನ್ನಡಿಗ ಪ್ರಸಿದ್ಧ ಕೃಷ್ಣ,  ಶಾರ್ದೂಲ್ ಠಾಕೂರ್, ಆವೇಶ್ ಖಾನ್ ಮತ್ತು ಮುಕೇಶ್ ಕುಮಾರ್ ಅವರಲ್ಲಿ ಯಾರಿಗೆ ಅವಕಾಶ ಸಿಗುವುದೆಂದು ಕಾದು ನೋಡಬೇಕಿದೆ.

ರೋಹಿತ್ ಸೇರಿದಂತೆ ಅಗ್ರಕ್ರಮಾಂಕದ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಲಯಕ್ಕೆ ಮರಳಿದರೆ ದೊಡ್ಡ ಮೊತ್ತ ಕಲೆಹಾಕುವುದು ಸುಲಭ.  ಸೆಂಚುರಿಯನ್‌ನಲ್ಲಿ ವೇಗಿಗಳ ಬೌನ್ಸರ್‌ಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಕೆ.ಎಲ್. ರಾಹುಲ್ ಮತ್ತು ವಿರಾಟ್‌ ಕೊಹ್ಲಿ ಅವರಿಬ್ಬರು ಯಶಸ್ವಿಯಾಗಿದ್ದರು. ಆದರೆ ಉಳಿದವರಿಂದ ಅಂತಹ ಆಟ ಮೂಡಿಬರಲಿಲ್ಲ. 

ಭಾರತ ತಂಡವು ಈ ಬಾರಿಯ ಡಬ್ಲ್ಯುಟಿಸಿಯಲ್ಲಿ ಮೂರು ಟೆಸ್ಟ್ ಆಡಿದೆ. ಅದರಲ್ಲಿ ಒಂದು ಜಯ, ಒಂದು ಸೋಲು ಮತ್ತು ಇನ್ನೊಂದು ಪಂದ್ಯದಲ್ಲಿ ಡ್ರಾ ಮಾಡಿಕೊಂಡಿದೆ. ತಂಡವು ಈ ಪಂದ್ಯದಲ್ಲಿ ಜಯಿಸಿದರೆ ಪಟ್ಟಿಯಲ್ಲಿ ಒಂದಿಷ್ಟು ಸ್ಥಾನಗಳ ಬಡ್ತಿ ಪಡೆಯುವ ಅವಕಾಶವಿದೆ. 

ಆದರೆ ತಮ್ಮ ವೃತ್ತಿಜೀವನದ ಕೊನೆಯ ಟೆಸ್ಟ್ ಅಡುತ್ತಿರುವ ದಕ್ಷಿಣ ಆಫ್ರಿಕಾದ ಬ್ಯಾಟರ್ ಡೀನ್ ಎಲ್ಗರ್ ರೋಹಿತ್ ಪಡೆಗೆ ಅಡ್ಡಗಾಲು ಹಾಕಲು ಸಿದ್ಧರಾಗಿದ್ದಾರೆ. ಮೊದಲ ಪಂದ್ಯದಲ್ಲಿಯೂ ಅವರು ಶತಕ ಗಳಿಸಿ ಭಾರತದ ಕೈಯಿಂದ ಗೆಲುವಿನ ಅವಕಾಶ ಕಸಿದುಕೊಂಡಿದ್ದರು. ತೆಂಬಾ ಬವುಮಾ ಗಾಯಗೊಂಡಿರುವುದರಿಂದ ಎಲ್ಗರ್ ತಂಡವನ್ನು ಮುನ್ನಡೆಸುವರು.

ಕೇಪ್‌ಟೌನ್‌ನಲ್ಲಿ ಉತ್ತಮ ವಾತಾವರಣವಿದೆ. ಮಳೆ ಬರುವ ಸಾಧ್ಯತೆ ಕಡಿಮೆ. ಹದವಾದ ಬಿಸಿಲಿಗೆ ಮೈಯೊಡ್ಡಿರುವ ಪಿಚ್‌ನಲ್ಲಿ ಸಮಪ್ರಮಾಣದಲ್ಲಿ ಕತ್ತರಿಸಿರುವ ಹಸಿರು ಗರಿಕೆಗಳು ಇವೆ. ಮೇಲ್ನೋಟಕ್ಕೆ ಬ್ಯಾಟರ್‌ಗಳ ಸ್ವರ್ಗದಂತೆ ಕಾಣುತ್ತಿದೆ.

ಈ ಪಿಚ್‌ನಲ್ಲಿ ಆತಿಥೇಯ ತಂಡದ ಕಗಿಸೊ ರಬಾಡ, ನಾಂದ್ರೆ ಬರ್ಗರ್ ಮತ್ತು  ಮಾರ್ಕೊ ಯಾನ್ಸೆನ್ ಅವರ ಬಿರುಗಾಳಿ ವೇಗದ ಎಸೆತಗಳನ್ನು ಭಾರತ ತಂಡವು ಎದುರಿಸಿ ನಿಲ್ಲುವುದೇ ಎಂಬ ಕುತೂಹಲ ಗರಿಗೆದರಿದೆ.

ಬಲಾಬಲ

ಪಂದ್ಯಗಳು;43

ಭಾರತ ಜಯ;15

ದ.ಅಫ್ರಿಕಾ ಜಯ;18

ಡ್ರಾ: 10

ದಕ್ಷಿಣ ಆಫ್ರಿಕಾ ತಂಡದ ನಾಯಕ ಡೀನ್ ಎಲ್ಗರ್   –ಪಿಟಿಐ ಚಿತ್ರ
ದಕ್ಷಿಣ ಆಫ್ರಿಕಾ ತಂಡದ ನಾಯಕ ಡೀನ್ ಎಲ್ಗರ್   –ಪಿಟಿಐ ಚಿತ್ರ

ತಂಡಗಳು:

ಭಾರತ: ರೋಹಿತ್ ಶರ್ಮಾ (ನಾಯಕ) ಯಶಸ್ವಿ ಜೈಸ್ವಾಲ್ ಶುಭಮನ್ ಗಿಲ್ ವಿರಾಟ್ ಕೊಹ್ಲಿ ಶ್ರೇಯಸ್ ಅಯ್ಯರ್ ಕೆ.ಎಲ್. ರಾಹುಲ್ (ವಿಕೆಟ್‌ಕೀಪರ್) ರವೀಂದ್ರ ಜಡೇಜ ಶಾರ್ದೂಲ್ ಠಾಕೂರ್ ಜಸ್‌ಪ್ರೀತ್ ಬೂಮ್ರಾ ಮೊಹಮ್ಮದ್ ಸಿರಾಜ್ ಆವೇಶ್ ಖಾನ್ ಪ್ರಸಿದ್ಧ ಕೃಷ್ಣ ಆರ್. ಅಶ್ವಿನ್ ಕೋನಾ ಭರತ್ ಅಭಿಮನ್ಯು ಈಶ್ವರನ್. ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್ (ನಾಯಕ) ಏಡನ್ ಮರ್ಕರಂ ಟೋನಿ ಡಿ ಝಾರ್ಜಿ ಕೀಗನ್ ಪೀಟರ್ಸನ್ ಡೇವಿಡ್ ಬೆಡಿಂಗ್‌ಹ್ಯಾಮ್ ಕೈಲ್ ವೆರೆಯನ್ (ವಿಕೆಟ್‌ಕೀಪರ್) ಮಾರ್ಕೊ ಯಾನ್ಸೆನ್ ಕಗಿಸೊ ರಬಾಡ ಲುಂಗಿ ಗಿಡಿ ನಾಂದ್ರೆ ಬರ್ಗರ್ ಕೇಶವ್ ಮಹಾರಾಜ್ ವಿಯಾನ್ ಮುಲ್ಡರ್ ಜುಬೇರ್ ಹಮ್ಜಾ ಟ್ರಿಸ್ಟನ್ ಸ್ಟಬ್ಸ್. ಪಂದ್ಯ ಆರಂಭ: ಮಧ್ಯಾಹ್ನ 1.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT