ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರೀಕ್ಷಿತವೇ ಆಗಿದ್ದ ಮಹಿ ನಿರ್ಧಾರ

Last Updated 15 ಆಗಸ್ಟ್ 2020, 20:04 IST
ಅಕ್ಷರ ಗಾತ್ರ

ನಿರೀಕ್ಷಿತವೇ ಆಗಿದ್ದ ನಿರ್ಧಾರವನ್ನು ಮಹೇಂದ್ರ ಸಿಂಗ್‌ ಧೋನಿ, ಭಾರತದ ಸ್ವಾತಂತ್ರ್ಯ ದಿನದಂದು, ಶನಿವಾರ ರಾತ್ರಿ 7.29ಕ್ಕೆ ಹಠಾತ್ತಾಗಿ ಘೋಷಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ನಿರ್ಧಾರವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿದ್ದಾರೆ. ಆ ಮೂಲಕ 2019ರ ಏಕದಿನ ವಿಶ್ವಕಪ್‌ ಟೂರ್ನಿಯ ನಂತರದಿಂದ ನಡೆಯುತ್ತಿದ್ದ ನಿವೃತ್ತಿ ಕುರಿತ ಚರ್ಚೆ, ಊಹಾಪೋಹಗಳಿಗೆಲ್ಲಾ ತೆರೆ ಎಳೆದಿದ್ದಾರೆ.

ಅವರ ನಿರ್ಧಾರ ಅನಿರೀಕ್ಷಿತವೇನೂ ಆಗಿರಲಿಲ್ಲ. ಆದರೆ ಯಾವಾಗ ನಿರ್ಧಾರ ಪ್ರಕಟಿಸಬಹುದೆಂಬ ಕುತೂಹಲವಷ್ಟೇ ಉಳಿದಿತ್ತು. 39ರ ವಯಸ್ಸಿನಲ್ಲೂ ಅವರು ಆಸ್ಟ್ರೇಲಿಯಾದಲ್ಲಿ ಟಿ–20 ವಿಶ್ವಕಪ್‌ ಆಡುತ್ತಾರೆಯೇ ಎಂಬ ಕುತೂಹಲವಿತ್ತು. ಆದರೆ ಕೊರೊನಾ ಸೋಂಕಿನ ಈ ಟೂರ್ನಿ ಮುಂದಕ್ಕೆ ಹೋದ ಕಾರಣ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಆಡುವ ಸಾಧ್ಯತೆಗಳು ದೂರವಾಗಿದ್ದವು. ಐಪಿಎಲ್‌ ವಿದೇಶದಲ್ಲಿ (ಯುಎಇಯಲ್ಲಿ ಸೆಪ್ಟೆಂಬರ್‌ 19ರಿಂದ) ನಡೆಯುತ್ತಿರುವ ಕಾರಣ ಅವರು ಅದಕ್ಕೆ ಮೊದಲೇ ತಮ್ಮ ನಿರ್ಧಾರ ಘೋಷಿಸಿರಬಹುದು. ಅವರು ಐಪಿಎಲ್‌ನಲ್ಲಿ ಮುಂದುವರಿಯಲಿದ್ದಾರೆ.

ಅವರ ನಿರ್ಧಾರ ನಿರೀಕ್ಷಿತವಾದರೂ ಅಪಾರ ಅಭಿಮಾನಿಗಳಿಗೆ ಆಘಾತವಾಗಿದೆ. ಅವರ ಬೆನ್ನಹಿಂದೆಯೇ ಅವರ ಅಭಿಮಾನಿಯೂ ಆಗಿರುವ, ಎಡಗೈ ಆಟಗಾರ ಸುರೇಶ್‌ ರೈನಾ ಕೂಡ ನಿವೃತ್ತಿ ಘೋಷಿಸಿದ್ದಾರೆ.

ಈ ವರ್ಷದ ಇತರ ಕೆಲವು ಬೆಳವಣಿಗೆಗಳೂ ಧೋನಿ ಅವರ ನಿರ್ಧಾರಕ್ಕೆ ಪೀಠಿಕೆ ಹಾಕಿದಂತಿದ್ದವು. ಈ ವರ್ಷದ ಜನವರಿಯಲ್ಲಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅವರ ಗುತ್ತಿಗೆಯನ್ನು ನವೀಕರಿಸಿರಲಿಲ್ಲ. ಭಾರತ ತಂಡದ ಕೋಚ್‌ ರವಿಶಾಸ್ತ್ರಿ ಕೂಡ ಧೋನಿ ರಾಷ್ಟ್ರೀಯ ತಂಡಕ್ಕೆ ಮರಳುವುದು ಕಷ್ಟ ಎನ್ನುವ ಅರ್ಥದಲ್ಲೇ ಮಾತನಾಡಿದ್ದರು. ಚೆನ್ನೈ ಸೂಪರ್‌ ಕಿಂಗ್ಸ್‌ನಲ್ಲಿ ಅವರ ಜೊತೆ ಆಡುವ ಇನ್ನೊಬ್ಬ ಹಿರಿಯ ಆಟಗಾರ ಹರಭಜನ್‌ ಸಿಂಗ್‌ ಕೂಡ ಏಪ್ರಿಲ್‌ ಕೊನೆಯಲ್ಲಿ, ‘ಧೋನಿ ಇನ್ನು ಮುಂದೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವುದಿಲ್ಲ’ ಎಂದೇ ಹೇಳಿದ್ದರು.

ಅವರು ‘ಮೊದಲಿನ ಧೋನಿ’ ರೀತಿ ಆಡುತ್ತಿಲ್ಲ ಎಂಬ ಮಾತುಗಳೂ ಕಳೆದ ವರ್ಷದ ಆರಂಭದಲ್ಲಿ ಕೇಳಿಬಂದಿದ್ದವು. ನ್ಯೂಜಿಲೆಂಡ್‌ ವಿರುದ್ಧ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಅವರು ಕುದುರಿಕೊಂಡರೂ, ಅಂತಿಮವಾಗಿ ರನೌಟ್‌ ಆಗುವ ಮೊದಲು ಎಂದಿನಂತೆ ರಟ್ಟೆಯರಳಿಸಿ ಆಡಲು ಪರದಾಡಿದಂತೆ ಕಂಡುಬಂದಿತ್ತು. ಆಗಿನ ನ್ಯೂಜಿಲೆಂಡ್‌ ದಾಳಿಯೆದುರು ಅದು ಸುಲಭವೂ ಆಗಿರಲಿಲ್ಲ ಎಂಬುದು ಬೇರೆ ಮಾತು.

ಕೆ.ಎಲ್‌.ರಾಹುಲ್‌, ರಿಷಬ್‌ ಪಂತ್‌ ಅಂಥ ಬ್ಯಾಟ್ಸ್‌ಮನ್‌– ಕೀಪರ್‌ಗಳು ಧೋನಿ ನೆರಳಿನಲ್ಲಿಯೇ ಬೆಳೆದಿದ್ದಾರೆ. ಅವರನ್ನು ಕೀಪರ್‌ ಸ್ಥಾನದಲ್ಲೂ ನೆಲೆಗೊಳಿಸಲು ತಂಡದ ಚಿಂತಕರ ಚಾವಡಿ ಕೆಲಸ ಸಮಯದಿಂದ ಪ್ರಯತ್ನಿಸುತ್ತಿದೆ. ಕೆಲಮಟ್ಟಿಗೆ ಯಶಸ್ವಿಯೂ ಆಗಿದೆ.

ಕ್ಯಾಪ್ಟನ್‌ ಕೂಲ್‌:ಎಂಥದ್ದೇ ಒತ್ತಡದ ಸನ್ನಿವೇಶವಿರಲಿ ಅಥವಾ ತಂಡ ಸೋಲಿನತ್ತ ಮುಖಮಾಡಲಿ, ಅದನ್ನು ಸಂಯಮದಿಂದ ನಿಭಾಯಿಸುತ್ತಿದ್ದ ಆಟಗಾರ ಧೋನಿ. ಕ್ರೀಡಾಂಗಣದಲ್ಲಿ ಸಹ ಆಟಗಾರರ ಮೇಲೆ ಅಸಹನೆ ತೋರಿದ್ದು ವಿರಳ. ಮುಗುಳ್ನಗುತ್ತಲೇ ಚಾಣಾಕ್ಷತೆಯಿಂದ ಬೌಲರ್‌ಗಳನ್ನು ಬಳಸಿ ಜೊತೆಯಾಟಗಳನ್ನು ಮುರಿದು ತಂಡಕ್ಕೆ ಮೇಲುಗೈ ಒದಗಿಸುತ್ತಿದ್ದ ರೀತಿಯೂ ಅನನ್ಯ.

ಇನ್ನು ಅಗತ್ಯವಿರುವಾಗ ರನ್‌ವೇಗ ಹೆಚ್ಚಿಸಿ ತಂಡವನ್ನು ಗೆಲುವಿನ ಹೊಸ್ತಿಲಿನತ್ತ ಒಯ್ದ ಸಂದರ್ಭಗಳೂ ಹಲವಾರು. ಬೆಸ್ಟ್‌ ಫಿನಿಷರ್‌ ಎಂಬ ಖ್ಯಾತಿ ಹೊಂದಿದ್ದ ಕೆಲವೇ ಆಟಗಾರರಲ್ಲಿ ಮಹಿ ಒಬ್ಬರು. ವೈಯಕ್ತಿಕ ಆಟದ ಜೊತೆಗೆ, ನಾಯಕತ್ವ, ಚಾಣಾಕ್ಷ ತಂತ್ರಗಳಿಂದಲೇ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಅವರು ಯಶಸ್ಸು ಗಳಿಸಿದರು. ದಶಕಕ್ಕೂ ಹೆಚ್ಚು ಕಾಲ ತಂಡಕ್ಕೆ ಅನಿವಾರ್ಯ ಎಂಬಂತಾದರು. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವೂ ತಮ್ಮ ಮೇಲಿಟ್ಟ ನಂಬಿಕೆಯನ್ನು ಅವರು ಹುಸಿಗೊಳಿಸಲಿಲ್ಲ.

ತಂಡದ ಆಟಗಾರರಿಂದ ಉತ್ತಮ ಆಟ ಹೊರಬರುವಂತೆ ಮಾಡುವಲ್ಲೂ ಅವರು ಯಶಸ್ಸು ಕಂಡರು. ರೋಹಿತ್‌ ಶರ್ಮಾ, ಸುರೇಶ್‌ ರೈನಾ, ರವಿಚಂದ್ರನ್‌ ಅಶ್ವಿನ್‌, ರವೀಂದ್ರ ಜಡೇಜಾ ಮೊದಲಾದ ಪ್ರತಿಭಾನ್ವಿತರು ನೆಲೆ ಕಂಡುಕೊಳ್ಳುವಲ್ಲಿ ಧೋನಿ ಪಾತ್ರ ಪ್ರಮುಖ. ಧೋನಿ ವಿಶ್ವಾಸಕ್ಕೆ ಪಾತ್ರರಾದ ಕಾರಣ ಸತತವಾಗಿ ವಿಫಲರಾಗುತ್ತಿದ್ದ ರೋಹಿತ್ ತಂಡದಲ್ಲಿ ನೆಲೆಕಂಡು ಯಶಸ್ವಿಯಾದರು. ಗಂಗೂಲಿ ನಾಯಕರಾಗಿದ್ದಾಗ ತಂಡದೊಳಕ್ಕೆ ಬಂದಿದ್ದ ಎಡಗೈ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್‌ ಆಲ್‌ರೌಂಡ್‌ ಆಟ ಉತ್ತುಂಗ ಕಂಡಿದ್ದು ಧೋನಿ ನಾಯಕತ್ವದ ದಿನಗಳಲ್ಲಿ.

ಅನುಭವಿಗಳಾದ ಸೌರವ್‌ ಗಂಗೂಲಿ, ರಾಹುಲ್‌ ದ್ರಾವಿಡ್‌, ಸಚಿನ್‌ ತೆಂಡೂಲ್ಕರ್‌ ನಿವೃತ್ತಿಯ ನಂತರ ಸಮರ್ಥ ಯುವ ಆಟಗಾರರನ್ನು ಬೆಳೆಸಿ ತಂಡವನ್ನು ಕಟ್ಟಿದ ರೀತಿ ಕಡಿಮೆಯೇನಲ್ಲ. ಧೋನಿ ಟೆಸ್ಟ್‌ಗೆ ವಿದಾಯ ಹೇಳಿ ಆರು ವರ್ಷಗಳಾಗಿವೆ. ಭಾರತ ತಂಡ ಇನ್ನೊಬ್ಬ ಪ್ರಬಲ ವಿಕೆಟ್‌ ಕೀಪರ್‌ ಕಂಡುಕೊಳ್ಳಲು ಪರದಾಡುತ್ತಿದೆ.

ಶ್ರೇಯಗಳು ಹಲವು: 90 ಟೆಸ್ಟ್‌ ಪಂದ್ಯಗಳಲ್ಲಿ 4,876 ರನ್‌ ಗಳಿಸಿರುವ ಧೋನಿ, 256 ಕ್ಯಾಚ್‌, 38 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ. 350 ಏಕದಿನ ಪಂದ್ಯಗಳಲ್ಲಿ 50.57 ಸರಾಸರಿಯಲ್ಲಿ 10,773 ರನ್‌ ಗಳಿಸಿದ್ದಾರೆ. ಈ ಮಾದರಿಯಲ್ಲಿ 321 ಕ್ಯಾಚ್‌, 123 ಸ್ಟಂಪಿಂಗ್‌. 98 ಟಿ–20 ಪಂದ್ಯಗಳಲ್ಲಿ 38.60 ಸರಾಸರಿಯಲ್ಲಿ 1,617 ರನ್‌. ಜೊತೆಗೆ 57 ಕ್ಯಾಚ್‌, 37 ಸ್ಟಂಪಿಂಗ್‌.

ಭಾರತ ತಂಡ ಮೊದಲ ಬಾರಿ, 2009ರಲ್ಲಿ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದಾಗ ತಂಡದ ನಾಯಕರಾಗಿದ್ದವರು ಧೋನಿ. ಐಸಿಸಿಯ ಮೂರು ಪ್ರಮುಖ ಟ್ರೋಫಿಗಳನ್ನು ಗೆದ್ದುಕೊಂಡ ಭಾರತದ ಏಕೈಕ ನಾಯಕ.

2007ರಲ್ಲಿ ಭಾರತ ತಂಡ, ಮಹಿ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕದಲ್ಲಿ ನಡೆದ ಚೊಚ್ಚಲ ಟಿ–20 ವಿಶ್ವಕಪ್‌ ಗೆದ್ದುಕೊಂಡಿತ್ತು. 2011ರಲ್ಲಿ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್‌ ಗೆಲುವು ಅವರ ಕಪ್ತಾನಗಿರಿಯಲ್ಲಿ ಒಲಿಯಿತು. 2013ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಆತಿಥೇಯರನ್ನು 4 ರನ್‌ಗಳಿಂದ ಸೋಲಿಸಿ ಭಾರತ ಚಾಂಪಿಯನ್‌ ಆಗಿತ್ತು.

ಮಹಿ ‘ಮಹಿಮೆ’ ಸಾರಲು ಇನ್ನೇನು ಬೇಕು? ಧೋನಿ ದಾಖಲೆಗಳನ್ನು ಮುಂದೆ ಮತ್ತೊಬ್ಬ ಆಟಗಾರ ಮುರಿಯಬಹುದು. ಆದರೆ ಭಾರತಕ್ಕೆ ಧೋನಿಯಂಥ ವ್ಯಕ್ತಿತ್ವದ ಆಗುವುದು ಕಷ್ಟ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT