ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಆಸ್ಟ್ರೇಲಿಯಾ ಟಿ20 ಸರಣಿಗೆ ಗುರುವಾರ ನಾಂದಿ

ಮೆಗ್‌ಲ್ಯಾನಿಂಗ್ ಪಡೆಯ ಎದುರು ಹರ್ಮನ್‌ಪ್ರೀತ್ ಕೌರ್ ಬಳಗದ ಚುಟುಕು ಸರಣಿ ಇಂದಿನಿಂದ
Last Updated 6 ಅಕ್ಟೋಬರ್ 2021, 18:51 IST
ಅಕ್ಷರ ಗಾತ್ರ

ಗೋಲ್ಡ್ ಕೋಸ್ಟ್‌: ಗಾಯದಿಂದ ಗುಣಮುಖರಾಗಿ ಮರಳಿರುವ ಹರ್ಮನ್‌ಪ್ರೀತ್ ಕೌರ್ ಅವರು ಆಸ್ಟ್ರೇಲಿಯಾ ಎದುರು ಗುರುವಾರ ಆರಂಭವಾಗಲಿರುವಮೂರು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ. ಗೆಲುವಿನೊಂದಿಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರೆ ಎಳೆಯುವ ಗುರಿಯೊಂದಿಗೆ ಭಾರತ ಕಣಕ್ಕೆ ಇಳಿಯಲಿದೆ.

ಏಕದಿನ ಸರಣಿಯಲ್ಲಿ 1–2ರಿಂದ ಸೋತಿರುವ ಭಾರತ ಏಕೈಕ ಟೆಸ್ಟ್ ಪಂದ್ಯದಲ್ಲಿ ಅಮೋಘ ಆಟವಾಡಿತ್ತು. ಚೊಚ್ಚಲ ಹಗಲು ರಾತ್ರಿ ಟೆಸ್ಟ್‌ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. 32 ವರ್ಷದ ಹರ್ಮನ್‌ಪ್ರೀತ್ ಕೌರ್ ಅವರು ಮಿಥಾಲಿ ರಾಜ್ ಮುನ್ನಡೆಸಿದ್ದ ಏಕದಿನ ಮತ್ತು ಟೆಸ್ಟ್‌ನಲ್ಲಿ ಹೆಬ್ಬೆರಳಿನ ಗಾಯದಿಂದಾಗಿ ಆಡಿರಲಿಲ್ಲ. ಅವರು ಮರಳಿರುವುದರಿಂದ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬಲ ಬಂದಿದೆ. ಸ್ಫೋಟಕ ಶೈಲಿಯ ಬ್ಯಾಟರ್‌ಗಳಾದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂದಾನ ಅವರನ್ನು ಒಳಗೊಂಡಿರುವ ಅಗ್ರ ಕ್ರಮಾಂಕ ಈಗ ನಿರಾಳವಾಗಿದೆ.

ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿ ಆಸ್ಟ್ರೇಲಿಯಾ ನೆಲದಲ್ಲಿ ಮೂರಂಕಿ ದಾಟಿದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡಿರುವ ಮಂದಾನ ಟಿ20 ಸರಣಿಯಲ್ಲಿ ಭರವಸೆಯೊಂದಿಗೆ ಕಣಕ್ಕೆಇಳಿಯಲಿದ್ದಾರೆ. ಜೆಮಿಮಾ ರಾಡ್ರಿಗಸ್ ಕೂಡ ಟಿ20 ತಂಡದ ಆಸ್ತಿಯಾಗಿದ್ದಾರೆ. ಮೇಘನಾ ಸಿಂಗ್‌, ಪೂಜಾ ವಸ್ತ್ರಕಾರ್ ಮತ್ತು ಶಿಖಾ ಪಾಂಡೆ ಅವರು ಬೌಲಿಂಗ್ ವಿಭಾಗದ ಚುಕ್ಕಾಣಿ ಹಿಡಿಯುವರು.

ಆಸ್ಟ್ರೇಲಿಯಾ ತಂಡ ಆಲ್‌ರೌಂಡ್ ಆಟವಾಡುವ ನಿರೀಕ್ಷೆಯಲ್ಲಿದೆ. ಏಕದಿನ ಮತ್ತು ಟೆಸ್ಟ್‌ನಲ್ಲಿ ಅತ್ಯುತ್ತಮ ಆಟದ ಮೂಲಕ ಮಿಂಚಿರುವ ತಹಲಿಯಾ ಮೆಗ್ರಾ ಅವರು ಟಿ20 ಕ್ರಿಕೆಟ್‌ಗೆ ‍ಪದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ತಂಡಗಳು: ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ಸ್ನೇಹ್ ರಾಣಾ, ಯಷ್ಟಿಕಾ ಭಾಟಿಯ, ಶಿಖಾ ಪಾಂಡೆ, ಮೇಘನಾ ಸಿಂಗ್‌, ಪೂಜಾ ವಸ್ತ್ರಕಾರ್‌, ರಾಜೇಶ್ವರಿ ಗಾಯಕವಾಡ್‌, ಪೂನಂ ಯಾದವ್‌, ರಿಚಾ ಘೋಷ್ (ವಿಕೆಟ್ ಕೀಪರ್), ಹರ್ಲೀನ್ ಡಿಯೋಲ್‌, ಅರುಂಧತಿ ರೆಡ್ಡಿ, ರಾಧಾ ಯಾದವ್‌, ರೇಣುಕಾ ಸಿಂಗ್‌.

ಆಸ್ಟ್ರೇಲಿಯಾ: ಮೆಗ್ ಲ್ಯಾನಿಂಗ್ (ನಾಯಕಿ), ಡಾರ್ಸಿ ಬ್ರೌನ್‌, ಮೈಟ್ಲಾನ್ ಬ್ರೌನ್‌, ಸ್ಟೆಲ್ಲಾ ಕ್ಯಾಂಪ್‌ಬೆಲ್‌, ನಿಕೋಲಾ ಕ್ಯಾರಿ, ಹನಾ ಡಾರ್ಲಿಂಗ್ಟನ್‌, ಆ್ಯಶ್ಲಿ ಗಾರ್ಡನರ್‌, ಅಲಿಸಾ ಹೀಲಿ, ತಹಲಿಯಾ ಮೆಗ್ರಾ, ಸೋಫಿ ಮೋಲಿನೆಕ್ಸ್‌, ಬೇಥ್ ಮೂನಿ, ಎಲಿಸ್ ಪೆರಿ, ಜಾರ್ಜಿಯಾ ರೆಡ್‌ಮೇಯ್ನೆ, ಮೋಲಿ ಸ್ಟ್ರಾನೊ, ಅನಾಬೆಲ್ ಸೂಥರ್ಲೆಂಡ್‌, ಟೈಲಾ ವೆಲ್ಮೆನಿಕ್, ಜಾರ್ಜಿಯಾ ವಾರೆಹಂ.

ಆರಂಭ: ಮಧ್ಯಾಹ್ನ 2.10 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸೋನಿ ಸಿಕ್ಸ್‌, ಸೋನಿ ಟೆನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT