ಬುಧವಾರ, ಮಾರ್ಚ್ 3, 2021
18 °C

ರಿಷಬ್ ಪಂತ್ ಈಗ ವಿಶ್ವದ ಅಗ್ರ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್

ಪಿಟಿಐ Updated:

ಅಕ್ಷರ ಗಾತ್ರ : | |

ದುಬೈ: ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ ಅಜೇಯ 89 ರನ್ ಸಿಡಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್, ಟೆಸ್ಟ್ ಬ್ಯಾಟಿಂಗ್  ಶ್ರೇಯಾಂಕದಲ್ಲಿ 13ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ರಿಷಬ್ ಪಂತ್ ಅವರ ನಿರ್ಭೀತ ಮತ್ತು ಪ್ರಬುದ್ಧ ಆಟದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯ, 691 ಪಾಯಿಂಟ್ಸ್ ಹೊಂದಿರುವ ಪಂತ್ ಸದ್ಯ ವಿಶ್ವದ ಅತ್ಯುತ್ತಮ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿದ್ದಾರೆ. 671 ಪಾಯಿಂಟ್ಸ್ ಹೊಂದಿರುವ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್ ನಂತರದ ಸ್ಥಾನದಲ್ಲಿದ್ದಾರೆ.

ಬ್ರಿಸ್ಬೇನ್‌ನಲ್ಲಿ ನಡೆದ ಪಂದ್ಯದಲ್ಲಿ ಶತಕ ದಾಖಲಿಸಿದ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಮಾರ್ನಸ್ ಲ್ಯಾಬುಷೇನ್ ಭಾರತದ ನಾಯಕ ವಿರಾಟ್ ಕೊಹ್ಲಿ (862 ಅಂಕ ಅವರನ್ನು ಹಿಂದಿಕ್ಕಿ,  878  ಪಾಯಿಂಟ್‌ಗಳೊಂದಿಗೆ ವೃತ್ತಿಜೀವನದ ಅತ್ಯುತ್ತಮ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ. 

ನಾಲ್ಕನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ನಿರ್ಣಾಯಕ 91 ರನ್ ಗಳಿಸಿದ ನಂತರ ಭಾರತದ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ 68ನೇ ಸ್ಥಾನದಿಂದ 47 ನೇ ಸ್ಥಾನಕ್ಕೆ ಏರಿದ್ದಾರೆ.

ಮಧ್ಯಮ ಕ್ರಮಾಂಕದ ಚೇತೇಶ್ವರ್ ಪೂಜಾರ, ಬ್ರಿಸ್ಬೇನ್ ಪಂದ್ಯದ ತಮ್ಮ ತಾಳ್ಮೆಯ ಆಟದ ಬಳಿಕ ಒಂದು ಸ್ಥಾನ ಜಿಗಿದಿದ್ದು, ಏಳನೇ ಸ್ಥಾನಕ್ಕೆ ಬಂದಿದ್ದಾರೆ. ಎರಡನೇ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ ಸೇರಿ ಪಂದ್ಯದಲ್ಲಿ ಒಟ್ಟು ಆರು ವಿಕೆಟ್‌ಗಳನ್ನು ಕಬಳಿಸಿದ ಮೊಹಮ್ಮದ್ ಸಿರಾಜ್ 32 ಸ್ಥಾನಗಳ ಜಿಗಿದು 45 ನೇ ಸ್ಥಾನಕ್ಕೆ ತಲುಪಿದ್ದಾರೆ.

ಚೊಚ್ಚಲ ಪಂದ್ಯದಲ್ಲೇ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉಪಯುಕ್ತ ಕೊಡುಗೆ ನೀಡಿದ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದುಲ್ ಠಾಕೂರ್ ಶ್ರೇಯಾಂಕದಲ್ಲಿ ಸ್ಥಾನ ಗಳಿಸಿದ್ದಾರೆ.

ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ವಿಭಾಗದಲ್ಲಿ 82 ನೇ ಸ್ಥಾನ ಮತ್ತು ಬೌಲಿಂಗ್ ವಿಭಾಗದಲ್ಲಿ ಬೌಲಿಂಗ್ ವಿಭಾಗದಲ್ಲಿ 97ನೇ ಸ್ಥಾನ ಪಡೆದಿದ್ದಾರೆ.  ಠಾಕೂರ್ ಬ್ಯಾಟಿಂಗ್ ಪಟ್ಟಿಯಲ್ಲಿ 113 ನೇ ಸ್ಥಾನ ಮತ್ತು ಬೌಲಿಂಗ್ ಪಟ್ಟಿಯಲ್ಲಿ 65ನೇ ಸ್ಥಾನ ಪಡೆದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.