ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ಇಂಗ್ಲೆಂಡ್‌ನ ಬಾಝ್‌ಬಾಲ್‌ ಶೈಲಿಗೆ ಭಾರತದ ಸ್ಪಿನ್‌ ಅಸ್ತ್ರ

ಭಾರತ– ಇಂಗ್ಲೆಂಡ್ ಮೊದಲ ಕ್ರಿಕೆಟ್‌ ಟೆಸ್ಟ್‌ ಇಂದಿನಿಂದ
Published 24 ಜನವರಿ 2024, 13:59 IST
Last Updated 24 ಜನವರಿ 2024, 13:59 IST
ಅಕ್ಷರ ಗಾತ್ರ

ಹೈದರಾಬಾದ್‌: ಸುಮಾರು 12 ವರ್ಷಗಳಿಂದ ತವರಿನಲ್ಲಿ ಪ್ರಾಬಲ್ಯ ಮೆರೆದಿರುವ ಭಾರತ ತಂಡಕ್ಕೆ ಈಗ ವಿಭಿನ್ನ ರೀತಿಯ ಸವಾಲು ಎದುರಾಗಿದೆ. ಗುರುವಾರ ಆರಂಭವಾಗುವ ಐದು ಟೆಸ್ಟ್‌ಗಳ ದೀರ್ಘ ಸರಣಿಯ ಮೊದಲ ಪಂದ್ಯದಲ್ಲಿ ರೋಹಿತ್‌ ಶರ್ಮಾ ಪಡೆ, ಸಾಂಪ್ರದಾಯಿಕ ಶೈಲಿಯಿಂದ ವಿಮುಖವಾಗಿ ಅಕ್ರಮಣದ ಕ್ರಿಕೆಟ್ ಆಡುವ ಇಂಗ್ಲೆಂಡ್ ತಂಡವನ್ನು ಎದುರಿಸಲಿದ್ದು ಕುತೂಹಲಕ್ಕೆ ದಾರಿಮಾಡಿಕೊಟ್ಟಿದೆ.

2012ರಲ್ಲಿ ಆಲಿಸ್ಟರ್‌ ಕುಕ್‌ ನೇತೃತ್ವದ ಇಂಗ್ಲೆಂಡ್‌ ತಂಡಕ್ಕೆ 1–2 ರಿಂದ ಸೋತ ನಂತರ ಭಾರತ ತವರಿನಲ್ಲಿ ಅಜೇಯವಾಗಿ ಉಳಿದಿದೆ. ಸತತ 16 ಸರಣಿಗಳಲ್ಲಿ ಜಯಗಳಿಸಿದೆ. ಅದರಲ್ಲೂ ಏಳು ಸರಣಿಗಳನ್ನು ‘ಸ್ವೀಪ್‌’ ಮಾಡಿದೆ. ಈ ಅವಧಿಯಲ್ಲಿ ಆಡಿರುವ 44 ಟೆಸ್ಟ್‌ಗಳಲ್ಲಿ ಸೋತಿರುವುದು ಬರೇ ಮೂರನ್ನು. 1980ರ ದಶಕದಲ್ಲಿ ವೆಸ್ಟ್‌ ಇಂಡೀಸ್, ಶತಮಾನದ ಕೊನೆಯಲ್ಲಿ ಆಸ್ಟ್ರೇಲಿಯಾ ಕೂಡ ಇಂಥ ಪಾರಮ್ಯ ಮೆರೆದಿರಲಿಲ್ಲ.

ಪಿಚ್‌ಗಳ ಜೊತೆಗೆ, ಪರಿಸ್ಥಿತಿಗೆ ಅನುಗುಣವಾಗಿ ಬೌಲಿಂಗ್‌, ರನ್‌ ಹರಿಸುವ ಬ್ಯಾಟರ್‌ಗಳಿಂದ ತಂಡ ಮೇಲುಗೈ ಸಾಧಿಸಿದೆ. ಆಫ್‌ ಸ್ಪಿನ್ನರ್  ರವಿಚಂದ್ರನ್ ಅಶ್ವಿನ್ ಮತ್ತು ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಹಲವು ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಜೀವ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದ ಪಿಚ್‌ ದಿನಕಳೆದಂತೆ ಸ್ಪಿನ್ನರ್‌ಗಳಿಗೆ ನೆರವು ನೀಡುವ ನಿರೀಕ್ಷೆಯಿದ್ದು, ಇವರಿಬ್ಬರ ಮೇಲೆ ನಿರೀಕ್ಷೆಯಿದೆ.

‌ಕಳೆದ ಬಾರಿಯ ಸರಣಿಯಲ್ಲಿ ಇಂಗ್ಲೆಂಡ್‌, ಭಾರತದ ಸ್ಪಿನ್‌ ಬಲ ನೋಡಿದೆ. ಅಶ್ವಿನ್ 46 ಟೆಸ್ಟ್‌ಗಳಲ್ಲಿ 283 ವಿಕೆಟ್ ಪಡೆದು ಭಾರತದ ಸ್ಪಿನ್ನ ಬತ್ತಳಿಕೆಯ ಪ್ರಮುಖ ಅಸ್ತ್ರವಾಗಿದ್ದಾರೆ. 39 ಟೆಸ್ಟ್‌ಗಳಲ್ಲಿ 191 ವಿಕೆಟ್‌ ಕಿತ್ತಿರುವ ಜಡೇಜಾ ಅವರೂ ನಿರ್ಣಾಯಕ ಹೊಡೆತ ನೀಡಬಲ್ಲವರು. ಇವರ ಜೊತೆಗೆ ಭಾರತ ಅಕ್ಷರ್‌ ಪಟೇಲ್ ಅಥವಾ ಕುಲದೀಪ್ ಯಾದವ್ ಇವರಲ್ಲೊಬ್ಬರನ್ನು ಆಡಿಸುವುದು ಖಚಿತ.

ಇದರ ಅರಿವಿರುವ ಇಂಗ್ಲೆಂಡ್ ತಂಡ, ಸ್ಪಿನ್‌ ಆಡಲು ಅಬುಧಾಬಿಯಲ್ಲಿ ಸಿದ್ಧತಾ ಶಿಬಿರ ನಡೆಸಿದೆ.

ಭಾರತ, ಈ ಪಂದ್ಯವನ್ನು ಪ್ರಮುಖ ಬ್ಯಾಟರ್ ವಿರಾಟ್ ಕೊಹ್ಲಿ ಇಲ್ಲದೇ ಆಡಬೇಕಿದೆ. ವೈಯಕ್ತಿಕ ಕಾರಣಗಳಿಂದ ಎರಡು ಟೆಸ್ಟ್‌ಗಳಿಗೆ ಅವರು ಅಲಭ್ಯರಾಗಿದ್ದಾರೆ. ಅವರು ಇಂಗ್ಲೆಂಡ್ ಎದುರು 28 ಟೆಸ್ಟ್‌ಗಳಿಂದ 1991 ರನ್ ಗಳಿಸಿದ್ದು ಇದರಲ್ಲಿ ಐದು ಶತಕಗಳಿವೆ. ಇಲ್ಲಿ ಅವರ ಅನುಪಸ್ಥಿತಿ ಕಾಡಲಿದೆ. ಅವರ ನಾಲ್ಕನೇ ಕ್ರಮಾಂಕದ ಸ್ಥಾನದಲ್ಲಿ ರಜತ್ ಪಾಟೀದಾರ್ ಆಡುವ ಸಾಧ್ಯತೆಯಿದೆ.

ಇದರ ಜೊತೆಗೆ ಭಾರತ, ಎದುರಾಳಿಗಳ ಭಾಝ್‌ಬಾಲ್‌ ಶೈಲಿಯನ್ನೂ ಎದುರಿಸಬೇಕಾಗಿದೆ. 2022ರಲ್ಲಿ ಇಂಗ್ಲೆಂಡ್‌, ಪಾಕಿಸ್ತಾನದಲ್ಲಿ ಟೆಸ್ಟ್‌ ಸರಣಿಯನ್ನು 3–0ಯಿಂದ ಗೆದ್ದುಕೊಂಡಿದೆ.

ತಂಡದ ಆಫ್‌ ಸ್ಪಿನ್ನರ್ ಶೋಯೆಬ್‌ ಬಶೀರ್ ವೀಸಾ ಸಿಗದೇ ತವರಿಗೆ ಮರಳಿರುವುದು ತಂಡಕ್ಕೆ ಹಿನ್ನಡೆ. ಇದು 20 ವರ್ಷದ ಬೌಲರ್‌ನನ್ನು ‘ಗಾಸಿ‘ಗೊಳಿಸಿದೆ ಎಂದು ನಾಯಕ ಬೆನ್ ಸ್ಟೋಕ್ಸ್ ಹೇಳಿದ್ದಾರೆ.

ಬಾಝ್‌ಬಾಲ್ ಕ್ರಿಕೆಟ್‌ ಆಟದಿಂದ ಇಂಗ್ಲೆಂಡ್ ಹಲವು ಪಂದ್ಯಗಳನ್ನು ಹಿನ್ನಡೆಯಿಂದ ಗೆದ್ದಿದೆ. ಇಲ್ಲಿ ಈ ತಂತ್ರ ಕೈಗೂಡುವುದೇ ಎಂಬ ಕುತೂಹಲ ನೆಲೆಸಿದೆ.

ತಂಡ ಜೋ ರೂಟ್ ಮತ್ತು ಬೆನ್ ಸ್ಟೋಕ್ಸ್‌ ಅವರ ಪಾತ್ರ ನಿರ್ಣಾಯಕಾಗಿದ್ದು ಅವರಿಂದ ಹೆಚ್ಚಿನ ರನ್ನುಗಳನ್ನು ನಿರೀಕ್ಷಿಸಿದೆ. ಪಿಚ್‌ ಸ್ವಭಾವ ಗಮನಿಸಿ ತಂಡ ತಂಡ ಮೂವರು ಸ್ಪಿನ್ನರ್‌ಗಳಿಗೆ– ಎಗಡೈ ಸ್ಪಿನ್ನರ್‌ಗಳಾದ ಜಾಕ್ ಲೀಚ್‌, ಟಾಮ್‌ ಹಾರ್ಟ್ಲಿ ಮತ್ತು ಲೆಗ್‌ ಸ್ಪಿನ್ನರ್ ರೆಹಾನ್ ಅಹ್ಮದ್– ಅವಕಾಶ ನೀಡಿದೆ. ಈ ಅನನುಭವಿ ಬೌಲರ್‌ಗಳಿಗೆ ಇಲ್ಲಿನ ಸ್ಥಿತಿ ಸವಾಲಿನದ್ದಾಗಲಿದೆ. ಹಿರಿಯ ಬೌಲರ್ ಜೇಮ್ಸ್‌ ಆ್ಯಂಡರ್ಸನ್‌ಗೆ ವಿಶ್ರಾಂತಿ ನೀಡಲಾಗಿದೆ. ಮಾರ್ಕ್‌ ವುಡ್‌ ಏಕೈಕ ಪರಿಣತ ವೇಗದ ಬೌಲರ್ ಆಗಿ ಉಳಿದಿದ್ದಾರೆ.

ತಂಡಗಳು:

ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಕೆ.ಎಸ್‌.ಭರತ್ (ವಿಕೆಟ್‌ ಕೀಪರ್, ಧ್ರುವ್ ಜುರೇಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್‌, ಜಸ್‌ಪ್ರೀತ್ ಬೂಮ್ರಾ (ಉಪನಾಯಕ), ಆವೇಶ್ ಖಾನ್.

ಇಂಗ್ಲೆಂಡ್‌ (11): ಬೆನ್ ಸ್ಟೋಕ್ಸ್‌ (ನಾಯಕ), ಜಾಕ್ ಕ್ರಾಲಿ, ಬೆನ್ ಡಕೆಟ್‌, ಓಲಿ ಪೋಪ್, ಜೋ ರೂಟ್, ಜಾನಿ ಬೇಸ್ಟೊ, ಬೆನ್ ಫೋಕ್ಸ್‌, ರೆಹಾನ್ ಅಹ್ಮದ್, ಟಾಮ್‌ ಹಾರ್ಟ್ಲಿ, ಮಾರ್ಕ್ ವುಡ್‌, ಜಾಕ್ ಲೀಚ್.

ಪಂದ್ಯ ಆರಂಭ: ಬೆಳಿಗ್ಗೆ 9.30 ರಿಂದ.

ನೇರ ಪ್ರಸಾರ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT