ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾದಿ ದುರ್ಗಮ; ಗೆಲುವು ಅನಿವಾರ್ಯ

ಮೊಹಾಲಿಯಲ್ಲಿ ರಾಯಲ್ ಚಾಲೆಂಜರ್ಸ್‌ಗೆ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಸವಾಲು
Last Updated 12 ಏಪ್ರಿಲ್ 2019, 20:29 IST
ಅಕ್ಷರ ಗಾತ್ರ

ಮೊಹಾಲಿ: ಸತತ ಆರು ಸೋಲಿನಿಂದ ಕಂಗೆಟ್ಟಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಶನಿವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಕಿಂಗ್ಸ್ ಇಲೆವನ್ ಪಂಜಾಬ್ ಎದುರು ಸೆಣಸಲಿದೆ. ಪ್ಲೇ ಆಫ್ ಕನಸು ಜೀವಂತವಾಗಿರಿಸಬೇಕಾದರೆ ಆರ್‌ಸಿಬಿ ತನ್ನ ಪಾಲಿನ ಮುಂದಿನ ಎಲ್ಲ ಪಂದ್ಯಗಳಲ್ಲೂ ಗೆಲ್ಲಬೇಕು. ಅದಕ್ಕೆ ಇಲ್ಲಿನ ಐ.ಎಸ್‌.ಬಿಂದ್ರಾ ಕ್ರೀಡಾಂಗಣದಲ್ಲಿ ನಾಂದಿ ಹಾಡಬೇಕು.

ಆರ್‌ಸಿಬಿ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಿತ್ತು. ಕಳೆದ ಶನಿವಾರ ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಕ್ಯಾಪಿಟಲ್ಸ್ ನಾಲ್ಕು ವಿಕೆಟ್‌ಗಳಿಂದ ಗೆದ್ದಿತ್ತು. ಒಂದು ವಾರದ ಬಿಡುವಿನ ನಂತರ ವಿರಾಟ್ ಕೊಹ್ಲಿ ಮತ್ತು ಬಳಗ ಮತ್ತೆ ಕಣಕ್ಕೆ ಇಳಿಯಲಿದ್ದು ಎಲ್ಲ ವಿಭಾಗಗಳಲ್ಲೂ ಸುಧಾರಣೆ ಕಾಣಬೇಕಾಗಿದೆ.

ನಾಲ್ಕು ದಿನಗಳ ಹಿಂದೆ ಸತತ ಮೂರನೇ ಬಾರಿ ವಿಸ್ಡನ್‌ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಾದರೂ ಗೆದ್ದು ಅದೃಷ್ಟ ಕುದುರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಇದು ಸಾಧ್ಯವಾಗಬೇಕಾದರೆ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ಹಿಂದಿನ ಕಹಿ ಮರೆತು ಭರವಸೆಯಿಂದ ಕಣಕ್ಕೆ ಇಳಿಯಬೇಕಾಗಿದೆ.

ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಎದುರಿನ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳು 232 ರನ್‌ ಬಿಟ್ಟುಕೊಟ್ಟಿದ್ದರು. ಜಾನಿ ಬೇಸ್ಟೊ ಮತ್ತು ಡೇವಿಡ್ ವಾರ್ನರ್ ಶತಕ ಗಳಿಸಿದ್ದರು. ಆದರೆ ಗುರಿ ಬೆನ್ನತ್ತಿದ ಆರ್‌ಸಿಬಿ ಕೇವಲ 113 ರನ್‌ಗಳಿಗೆ ಪತನಗೊಂಡಿತ್ತು. ಕೋಲ್ಕತ್ತ ನೈಟ್ ರೈಡರ್ಸ್‌ ವಿರುದ್ಧ ಎಬಿ ಡಿವಿಲಿಯರ್ಸ್‌ ಮತ್ತು ಕೊಹ್ಲಿ ಕ್ರಮವಾಗಿ 63 ಮತ್ತು 84 ರನ್‌ ಗಳಿಸಿದ್ದರು. ತಂಡ 205 ರನ್‌ ಕಲೆ ಹಾಕಿದ್ದರೂ ಎದುರಾಳಿ ತಂಡವನ್ನು ನಿಯಂತ್ರಿಸಲು ಬೌಲರ್‌ಗಳಿಗೆ ಸಾಧ್ಯವಾಗಿರಲಿಲ್ಲ. ಆ್ಯಂಡ್ರೆ ರಸೆಲ್‌ 13 ಎಸೆತಗಳಲ್ಲಿ 48 ರನ್‌ ಗಳಿಸಿ ಜಯವನ್ನು ಕಬಳಿಸಿಕೊಂಡಿದ್ದರು. ಒಂಬತ್ತು ವಿಕೆಟ್‌ ಗಳಿಸಿರುವ ಯಜುವೇಂದ್ರ ಚಾಹಲ್‌ ಅವರನ್ನು ಹೊರತುಪಡಿಸಿದರೆ ಇತರ ಯಾರಿಗೂ ನಿರೀಕ್ಷಿತ ಸಾಧನೆ ಮಾಡಲು ಆಗಲಿಲ್ಲ.

ಬ್ಯಾಟಿಂಗ್‌ ವೈಫಲ್ಯ: ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಎದುರು 70 ರನ್ ಗಳಿಸಲಷ್ಟೇ ಆರ್‌ಸಿಬಿ ಬೌಲರ್‌ಗಳಿಗೆ ಸಾಧ್ಯವಾಗಿತ್ತು. ಹರಭಜನ್ ಸಿಂಗ್ ಮತ್ತು ಇಮ್ರಾನ್ ತಾಹಿರ್‌ ಅವರ ಸ್ಪಿನ್ ಮೋಡಿಗೆ ತಂಡದ ಬ್ಯಾಟ್ಸ್‌ಮನ್‌ಗಳು ನಿರುತ್ತರರಾಗಿದ್ದರು. ಕಳೆದ ವಾರ ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದ ವರೆಗೂ ಬಹುತೇಕ ಎಲ್ಲ ಪಂದ್ಯಗಳಲ್ಲೂ ತಂಡ ಬ್ಯಾಟಿಂಗ್‌ ವೈಫಲ್ಯ ಕಂಡಿದೆ.

ತವರಿನ ಅಂಗಣದ ಬಲ: ಕಿಂಗ್ಸ್ ಇಲೆವನ್‌ ಪಂಜಾಬ್ ತಂಡ ಏಳು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದಿದೆ. ಆದರೆ ಎದುರಾಳಿಗಳ ವಿರುದ್ಧ ಸಂಪೂರ್ಣ ಆಧಿಪತ್ಯ ಸ್ಥಾಪಿಸಲು ತಂಡಕ್ಕೆ ಸಾಧ್ಯವಾಗಲಿಲ್ಲ. ತವರಿನ ಅಂಗಣದಲ್ಲಿ ತಂಡ ಉತ್ತಮ ಸಾಧನೆ ಮಾಡಿದೆ. ಕಳೆದ ಪಂದ್ಯದಲ್ಲಿ 197 ರನ್‌ ಗಳಿಸಿದರೂ ಮುಂಬೈ ಇಂಡಿಯನ್ಸ್ ಎದುರು ಸೋತಿರುವುದು ತಂಡದಲ್ಲಿ ಆತಂಕ ಮೂಡಿಸಿದೆ. ಪಂದ್ಯದಲ್ಲಿ ಕೀರನ್ ಪೊಲಾರ್ಡ್‌ 31 ಎಸೆತಗಳಲ್ಲಿ 83 ರನ್‌ ಗಳಿಸಿದ್ದಾರೆ. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮುಂತಾದ ಸಮರ್ಥ ಬ್ಯಾಟ್ಸ್‌ಮನ್‌ಗಳು ಇರುವ ಆರ್‌ಸಿಬಿ ಎದುರು ತಂಡದ ಬೌಲರ್‌ಗಳು ಯಾವ ಅಸ್ತ್ರ ಬಳಸುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ. ಕೆ.ಎಲ್‌.ರಾಹುಲ್‌, ಮಯಂಕ್ ಅಗರವಾಲ್ ಮುಂತಾದವರ ಬಲ ಕಿಂಗ್ಸ್ ತಂಡದ ಬ್ಯಾಟಿಂಗ್‌ ಬಳಗಕ್ಕೆ ಇದೆ. ಬೆನ್ನು ನೋವಿನಿಂದ ಬಳಲುತ್ತಿರುವ ಕ್ರಿಸ್‌ ಗೇಲ್‌ ಕಳೆದ ಪಂದ್ಯದಲ್ಲಿ ಆಡಿರಲಿಲ್ಲ. ಆರ್‌ಸಿಬಿ ಎದುರು ಅವರು ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

ಆರ್‌ಸಿಬಿಗೆ ಡೇಲ್‌ಸ್ಟೇನ್‌?
ನವದೆಹಲಿ:
ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್‌ ಸ್ಟೇನ್‌ ಅವರು ಪ್ರಸಕ್ತ ಆವೃತ್ತಿಯ ಐಪಿಎಲ್ ಆಡಲಿದ್ದು, ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ.

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾತನ್‌ ಕೌಂಟರ್‌–ನೈಲ್ ಬದಲು ಸ್ಟೇನ್‌ ಆಡುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ಸ್ಟೇನ್‌ ಅವರು 2008–10ರಲ್ಲಿ ಆರ್‌ಸಿಬಿ ಪರ 27 ವಿಕೆಟ್‌ ಪಡೆದಿದ್ದರು. 2016ರ ಐಪಿಎಲ್‌ ಪಂದ್ಯಗಳನ್ನು ಆಡಿದ್ದ ಅವರು, ಗುಜರಾತ್‌ ಲಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು.

*
ಅವಕಾಶಗಳನ್ನು ಕೈಚೆಲ್ಲಿದ್ದೇ ಸತತ ಸೋಲಿಗೆ ಕಾರಣ. ಇದನ್ನು ಯಾರೂ ಕ್ಷಮಿಸಲಾರರು. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕಾಗಿದೆ
-ವಿರಾಟ್ ಕೊಹ್ಲಿ, ಆರ್‌ಸಿಬಿ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT