ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಚಾಹರ್ ಮನವಿಯನ್ನು ಧೋನಿ ನಿರಾಕರಿಸಲು ಕಾರಣವೇನು?

Last Updated 17 ಏಪ್ರಿಲ್ 2021, 13:12 IST
ಅಕ್ಷರ ಗಾತ್ರ

ಮುಂಬೈ: ಡಿಷಿಷನ್ ರಿವ್ಯೂ ಸಿಸ್ಟಂ (ಡಿಆರ್‌ಎಸ್) ಅಂದರೆ ಧೋನಿ ರಿವ್ಯೂ ಸಿಸ್ಟಂ ಎಂಬುದು ಮಗದೊಮ್ಮೆ ಸಾಬೀತಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ನಿಖರ ನಿರ್ಣಯದ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಪಂದ್ಯದ ಆರಂಭದಲ್ಲೇ ಸಿಎಸ್‌ಕೆ ತಂಡದ ಬಲಗೈ ವೇಗಿ ದೀಪಕ್ ಚಾಹರ್ ಮಾರಕ ದಾಳಿ ಸಂಘಟಿಸಿದ್ದರು. ಆಗಲೇ ಮೂರು ವಿಕೆಟ್‌ಗಳನ್ನು ಕಬಳಿಸಿ ಪ್ರಭಾವಿ ಎನಿಸಿಕೊಂಡಿದ್ದರು. ಪವರ್-ಪ್ಲೇನಲ್ಲೇ ಮೂರು ಓವರ್ ಎಸೆಯುವ ಮೂಲಕ ಗಮನ ಸೆಳೆದಿದ್ದರು.

ಈ ಸಂದರ್ಭದಲ್ಲಿ ದೀಪಕ್ ದಾಳಿ ನೇರವಾಗಿ ಬ್ಯಾಟ್ಸ್‌ಮನ್ ಶಾರೂಕ್ ಖಾನ್ ಕಾಲಿಗೆ ತಗುಲಿತ್ತು. ಆದರೆ ಬಲವಾದ ಮನವಿಯನ್ನು ಅಂಪೈರ್ ಪುರಸ್ಕರಿಸಲಿಲ್ಲ. ಅತೀವ ಉತ್ಸುಕರಾಗಿದ್ದ ಚಾಹರ್ ಡಿಆರ್‌ಎಸ್ ಮೇಲ್ಮನವಿ ಸಲ್ಲಿಸುವಂತೆ ಧೋನಿ ಅವರನ್ನು ವಿನಂತಿಸಿದ್ದರು.

ಆದರೆ ಮೈದಾನದಲ್ಲಿ ಅತ್ಯಂತ ಕೂಲ್ ಆಗಿ ವರ್ತಿಸುವ ಧೋನಿ, ಬೌಲರ್‌ಗೆ 'ಹೋಗು, ಹೋಗು, ಹೋಗಿ ಬೌಲ್ ಮಾಡು' ಎಂಬಂತೆ ನಗುಮುಖದಿಂದಲೇ ಸನ್ನೆ ಮಾಡಿದರು.

ಬಳಿಕ ತೋರಿಸಿದ ರಿಪ್ಲೈನಲ್ಲೂ ಧೋನಿ ನಿರ್ಧಾರ ಸರಿಯೆನಿಸಿತ್ತು. ಈ ಮೂಲಕ ಡಿಆರ್‌ಎಸ್ ನೆರವಿಲ್ಲದೆ ಸರಿಯಾದ ನಿರ್ಣಯ ತೆಗೆದುಕೊಳ್ಳಲು ಸಮರ್ಥರಾಗಿದ್ದಾರೆ ಎಂಬುದನ್ನು ಮಗದೊಮ್ಮೆ ಸಾಬೀತು ಮಾಡಿದ್ದಾರೆ.

ಪಂಜಾಬ್ ವಿರುದ್ಧ ಆರು ವಿಕೆಟ್ ಅಂತರದ ಗೆಲುವಿನ ಬಳಿಕ ಈ ಕುರಿತು ಪ್ರತಿಕ್ರಿಯಿಸಿರುವ ಧೋನಿ, ಎಲ್‌ಬಿಡಬ್ಲ್ಯುಗಾಗಿ ಬಲವಾದ ಮನವಿ ಮಾಡಲಾಗಿದೆ ಎಂದು ಭಾವಿಸುತ್ತೇನೆ. ಆದರೂ ರಿವ್ಯೂ ಮಾಡುತ್ತಿಲ್ಲ ಎಂದು ಚಾಹರ್‌ಗೆ ಹೇಳಿದ್ದೆ. ಅವಕಾಶದ ಜೊತೆಗೆ ಕಿರುಚಾಟವನ್ನು ದೂರವಿರಿಸಲು ಡಿಆರ್‌ಎಸ್ ಇದೆ ಎಂದು ಭಾವಿಸುತ್ತೇನೆ. ಹಾಗೊಂದು ವೇಳೆ ಪಂದ್ಯದ ಕೊನೆಯ ಓವರ್‌ನಂತಹ ನಿರ್ಣಾಯಕ ಘಟ್ಟ ಮತ್ತು ಪ್ರಮುಖ ಬ್ಯಾಟ್ಸ್‌ಮನ್ ಆಗಿದ್ದರೆ ಚಾನ್ಸ್ ಪಡೆಯುತ್ತಿದ್ದೆ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT