ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಜಡೇಜ ಸೂಪರ್ ಡ್ಯೂಪರ್ ಹಿಟ್; ಆರ್‌ಸಿಬಿಗೆ ಹೀನಾಯ ಸೋಲಿನ ಮುಖಭಂಗ

Last Updated 25 ಏಪ್ರಿಲ್ 2021, 16:11 IST
ಅಕ್ಷರ ಗಾತ್ರ

ಮುಂಬೈ: ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಸೇರಿದಂತೆ ಕ್ರಿಕೆಟ್‌ನ ಎಲ್ಲ ಮೂರು ವಿಭಾಗಗಳಲ್ಲೂ ನಂಬಲಾಗದ ರೀತಿಯ ಆಲ್‌ರೌಂಡರ್ ಪ್ರದರ್ಶನ ನೀಡಿರುವ ರವೀಂದ್ರ ಜಡೇಜ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಲ್ಲಿನ ವಾಂಖೆಡೆ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ 69 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಇದರೊಂದಿಗೆ ಸತತ ನಾಲ್ಕು ಗೆಲುವುಗಳೊಂದಿಗೆ ಅಜೇಯ ಓಟ ಮುಂದುವರಿಸಿದ್ದ ವಿರಾಟ್ ಕೊಹ್ಲಿ ಪಡೆಗೆ ಟೂರ್ನಿಯಲ್ಲಿ ಮೊದಲ ಸೋಲಿನ ಶಾಕ್ ನೀಡಿದೆ. ಅಷ್ಟೇ ಯಾಕೆ ಅಂಕಪಟ್ಟಿಯಲ್ಲಿ ಆರ್‌ಸಿಬಿಯನ್ನು ಹಿಂದಿಕ್ಕಿದ ಮಹೇಂದ್ರ ಸಿಂಗ್ ಧೋನಿ ಬಳಗವು ಅಗ್ರಸ್ಥಾನಕ್ಕೇರಿದೆ.

ಮೊದಲು ಬ್ಯಾಟಿಂಗ್‌ನಲ್ಲಿ ಕೇವಲ 28 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಐದು ಸಿಕ್ಸರ್ ನೆರವಿನಿಂದ ಅಜೇಯ 62 ರನ್ ಗಳಿಸಿದ ಜಡೇಜ, ಚೆನ್ನೈ ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ 191 ರನ್‌ಗಳ ಬೃಹತ್ ಮೊತ್ತ ಪೇರಿಸಲು ನೆರವಾದರು. ಆರ್‌ಸಿಬಿ ವೇಗಿ ಹರ್ಷಲ್ ಪಟೇಲ್ ಎಸೆದ ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಐದು ಸಿಕ್ಸರ್ ಸೇರಿದಂತೆ ಒಟ್ಟು 37 ರನ್ ಚಚ್ಚಿದ್ದರು.

ಬಳಿಕ ಬೌಲಿಂಗ್‌ನಲ್ಲಿ ಮೂರು ವಿಕೆಟ್ ಹಾಗೂ ಒಂದು ರನೌಟ್ ಮಾಡಿದ ಜಡೇಜ, ಆರ್‌ಸಿಬಿ ತಂಡವನ್ನು 122 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ನೆರವಾದರು. ಈ ಮೂಲಕ ಚೆನ್ನೈ ತಂಡದ ಸತತ ನಾಲ್ಕನೇ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಬೃಹತ್ ಗುರಿ ಬೆನ್ನತ್ತಿದ ಆರ್‌ಸಿಬಿಗೆ ಯಾವ ಬ್ಯಾಟ್ಸ್‌ಮನ್ ನೆರವಾಗಲಿಲ್ಲ. ನಾಯಕ ವಿರಾಟ್ ಕೊಹ್ಲಿ (8) ನಿರಾಸೆ ಮೂಡಿಸಿದರು. ಕಳೆದ ಪಂದ್ಯದ ಶತಕವೀರದೇವದತ್ತ ಪಡಿಕ್ಕಲ್ (34ರನ್, 15 ಎಸೆತ) ಬಿರುಸಿನ ಆಟ ಪ್ರದರ್ಶಿಸಿದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಗ್ಲೆನ್ ಮ್ಯಾಕ್ಸ್‌ವೆಲ್ (22) ಹಾಗೂ ಎಬಿ ಡಿ ವಿಲಿರ್ಸ್ (4) ಕ್ಲೀನ್ ಬೌಲ್ಡ್ ಮಾಡಿದ ರವೀಂದ್ರ ಜಡೇಜ, ಆರ್‌ಸಿಬಿಗೆ ಪ್ರಹಾರ ನೀಡಿದರು. ಇಲ್ಲಿಂದ ಬಳಿಕ ಆರ್‌ಸಿಬಿ ಚೇತರಿಸಿಕೊಳ್ಳಲೇ ಇಲ್ಲ. ಅಂತಿಮವಾಗಿ ಒಂಬತ್ತು ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿಲಷ್ಟೇ ಶಕ್ತವಾಗಿತ್ತು. ಇನ್ನುಳಿದಂತೆ ವಾಷಿಂಗ್ಟನ್ ಸುಂದರ್ (7), ಡ್ಯಾನಿಯಲ್ ಕ್ರಿಸ್ಟಿಯನ್ (1), ಕೈಲ್ ಜೇಮಿಸನ್ (16), ಹರ್ಷಲ್ ಪಟೇಲ್ (0), ನವದೀಪ್ ಸೈನಿ (2), ಯಜುವೇಂದ್ರ ಚಾಹಲ್ (8*) ಹಾಗೂ ಮೊಹಮ್ಮದ್ ಸಿರಾಜ್ (12*) ರನ್ ಗಳಿಸಿದರು.

ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಕೇವಲ 13 ರನ್ ಮಾತ್ತ ತೆತ್ತ ಜಡೇಜ ಮೂರು ವಿಕೆಟ್ ಕಬಳಿಸಿ ಮಿಂಚಿದರು. ಇದರಲ್ಲಿ ಒಂದು ಮೇಡನ್ ಓವರ್ ಸಹ ಸೇರಿತ್ತು.

ಅಬ್ಬರಿಸಿದ ಜಡೇಜ, ಚೆನ್ನೈ 191/4
ಈ ಮೊದಲು ಫಾಫ್ ಡು ಪ್ಲೆಸಿಸ್ ಹಾಗೂ ಋತುರಾಜ್ ಗಾಯಕವಾಡ್ ಅರ್ಧಶತಕದ ಜೊತೆಯಾಟ ಮತ್ತು ಕೊನೆಯಲ್ಲಿ ರವೀಂದ್ರ ಜಡೇಜ ಸೂಪರ್ ಡ್ಯೂಪರ್ ಆಟದ ನೆರವಿನೊಂದಿಗೆ ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕು ವಿಕೆಟ್ ನಷ್ಟಕ್ಕೆ 191 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತ್ತು.

ಕೇವಲ 25 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಜಡೇಜ ಅಬ್ಬರಿಸಿದರು. ಆರ್‌ಸಿಬಿ ವೇಗದ ಬೌಲರ್ ಹರ್ಷಲ್ ಪಟೇಲ್ ಮೊದಲಿಗೆ ಮೂರು ವಿಕೆಟ್ ಕಬಳಿಸಿದರೂ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ 37 ರನ್ ಬಿಟ್ಟುಕೊಡುವ ಮೂಲಕ ದುಬಾರಿಯೆನಿಸಿದರು. ಈ ಓವರ್‌ನಲ್ಲಿ ಜಡೇಜ ಸತತ ನಾಲ್ಕು ಸೇರಿದಂತೆ ಒಟ್ಟು ಐದು ಸಿಕ್ಸರ್‌ಗಳನ್ನು ಚಚ್ಚಿದ್ದರು.

ಕೇವಲ 28 ಎಸೆತಗಳನ್ನು ಎದುರಿಸಿದ ಜಡೇಜ ನಾಲ್ಕು ಬೌಂಡರಿ ಹಾಗೂ ಐದು ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 62 ರನ್ ಗಳಿಸಿ ಅಜೇಯರಾಗುಳಿದರು. ಈ ಮೂಲಕ ಓವರ್‌ವೊಂದರಲ್ಲಿ ಗರಿಷ್ಠ 36 ರನ್ ಗಳಿಸಿದ ಕ್ರಿಸ್ ಗೇಲ್ ದಾಖಲೆಯನ್ನು ಸರಿಗಟ್ಟಿದ್ದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ತಂಡಕ್ಕೆ ಫಾಫ್ ಡು ಪ್ಲೆಸಿಸ್ ಹಾಗೂ ಋತುರಾಜ್ ಗಾಯಕವಾಡ್ (33) ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 9.1 ಓವರ್‌ಗಳಲ್ಲೇ 74 ರನ್‌ಗಳ ಜೊತೆಯಾಟ ನೀಡಿದರು.

ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಡುಪ್ಲೆಸಿ ಆಕರ್ಷಕ ಅರ್ಧಶತಕ ಸಾಧನೆ ಮಾಡಿದರು. ಇವರಿಗೆ ಸುರೇಶ್ ರೈನಾ ಅತ್ಯುತ್ತಮ ಸಾಥ್ ನೀಡಿದರು.

ಈ ಹಂತದಲ್ಲಿ ದಾಳಿಗಿಳಿದ ಹರ್ಷಲ್ ಪಟೇಲ್, ಇನ್ನಿಂಗ್ಸ್‌ನ 14ನೇ ಓವರ್‌ನಲ್ಲಿ ಸೆಟ್ ಬ್ಯಾಟ್‌ಮನ್‌ಗಳಾದ ಸುರೇಶ್ ರೈನಾ (24) ಹಾಗೂ ಫಫ್ ಡುಪ್ಲೆಸಿ (50) ಅವರನ್ನು ಹೊರದಬ್ಬುವ ಮೂಲಕ ಡಬಲ್ ಆಘಾತ ನೀಡಿದರು. 41 ಎಸೆತಗಳನ್ನು ಎದುರಿಸಿದ ಡುಪ್ಲೆಸಿ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು. ಹಾಗೆಯೇ ರೈನಾ ಮೂರು ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸಿದ್ದರು.

ಆದರೆ ಹರ್ಷಲ್ ಪಟೇಲ್ ಎಸೆದ ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಐದು ಸಿಕ್ಸರ್ ಸಿಡಿಸಿದ ಜಡೇಜ, ಚೆನ್ನೈ ತಂಡವು ಬೃಹತ್ ಮೊತ್ತ ಪೇರಿಸಲು ನೆರವಾದರು. ಇದರಲ್ಲಿ ಸತತ ನಾಲ್ಕು ಸಿಕ್ಸರ್‌ಗಳು ಸೇರಿದ್ದವು. ಈ ಮೂಲಕ ಚೆನ್ನೈ 191 ರನ್‌‌ಗಳ ಬೃಹತ್ ಮೊತ್ತ ಪೇರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT