ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 CSK vs MI: ಮುಂಬೈ ಜಯಭೇರಿ; ಹಾಲಿ ಚಾಂಪಿಯನ್ ಚೆನ್ನೈ ಔಟ್

ಅಕ್ಷರ ಗಾತ್ರ

ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಗುರುವಾರ ವಾಂಖೆಡೆ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧನಡೆದ ಪಂದ್ಯದಲ್ಲಿ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.

ಮುಂಬೈನ ಈ ಗೆಲುವಿನೊಂದಿಗೆ ಹಾಲಿ ಚಾಂಪಿಯನ್ ಚೆನ್ನೈ ತಂಡದ ಪ್ಲೇ-ಆಫ್ ಕನಸು ಭಗ್ನಗೊಂಡಿದೆ.

ಇದರೊಂದಿಗೆ ಮುಂಬೈ ಬಳಿಕ ಟೂರ್ನಿಯಿಂದ ನಿರ್ಗಮಿಸಿದ ಎರಡನೇ ತಂಡವೆಂಬ ಅಪಖ್ಯಾತಿಗೊಳಗಾಗಿದೆ.

ಐಪಿಎಲ್‌ನಲ್ಲಿ ಮುಂಬೈ ಅತಿ ಹೆಚ್ಚು ಐದು ಬಾರಿ ಹಾಗೂ ಚೆನ್ನೈ ನಾಲ್ಕು ಬಾರಿ ಟ್ರೋಫಿ ಗೆದ್ದಿತ್ತುಎಂಬುದು ಇಲ್ಲಿ ಗಮನಾರ್ಹ.

ಮುಂಬೈ ಬೌಲರ್‌ಗಳ ನಿಖರ ದಾಳಿಗೆ ತತ್ತರಿಸಿದ ಚೆನ್ನೈ 16 ಓವರ್‌ಗಳಲ್ಲಿ 97 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಆದರೆ ಮುಂಬೈ ಗೆಲುವು ನಿರೀಕ್ಷಿಸಿದಷ್ಟು ಸುಲಭವಾಗಿರಲಿಲ್ಲ. 33ಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಶಾನ್ ಕಿಶನ್ (6), ನಾಯಕ ರೋಹಿತ್ ಶರ್ಮಾ (18), ಡ್ಯಾನಿಯಲ್ ಸ್ಯಾಮ್ಸ್ (1), ಚೊಚ್ಚಲ ಪಂದ್ಯ ಆಡುತ್ತಿರುವ ಟ್ರಿಸ್ಟನ್ ಸ್ಟಬ್ಸ್ (0) ನಿರಾಸೆ ಮೂಡಿಸಿದರು.

ಆದರೆ ಯುವ ಬ್ಯಾಟರ್ ತಿಲಕ್ ವರ್ಮಾ ಉಪಯುಕ್ತ ಇನ್ನಿಂಗ್ಸ್ (34*) ಕಟ್ಟುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಅವರಿಗೆ ಹೃತಿಕ್ ಶೋಕಿನ್ (18) ಹಾಗೂ ಟಿಮ್ ಡೇವಿಡ್ (16*) ಉತ್ತಮ ಬೆಂಬಲ ನೀಡಿದರು.

ಈ ಮೂಲಕ 14.5 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಚೆನ್ನೈ ಪರ ಮುಖೇಶ್ ಚೌಧರಿ ಮೂರು ವಿಕೆಟ್ ಗಳಿಸಿದರು.

ಮುಂಬೈ ಬೌಲರ್‌ಗಳ ಮಿಂಚು, ಚೆನ್ನೈ 97ಕ್ಕೆ ಆಲೌಟ್...

ಈ ಮೊದಲು ಡ್ಯಾನಿಯಲ್ ಸ್ಯಾಮ್ಸ್ (16ಕ್ಕೆ 3) ಸೇರಿದಂತೆ ಮುಂಬೈ ಇಂಡಿಯನ್ಸ್ ಬೌಲರ್‌ಗಳ ನಿಖರ ದಾಳಿಗೆ ತತ್ತರಿಸಿರುವ ಚೆನ್ನೈ ಸೂಪರ್ ಕಿಂಗ್ಸ್, 16 ಓವರ್‌ಗಳಲ್ಲಿ 97 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.

ನಾಯಕ ಮಹೇಂದ್ರ ಸಿಂಗ್ ಧೋನಿ 36 ರನ್ ಗಳಿಸಿ ಔಟಾಗದೆ ಉಳಿದರು.

ಮೊದಲ ಓವರ್‌ನಲ್ಲೇ ಡ್ಯಾನಿಯಲ್ ಸ್ಯಾಮ್ಸ್ ಡಬಲ್ ಆಘಾತ ನೀಡಿದರು. ಸತತ ಮೂರು ಪಂದ್ಯಗಳಲ್ಲಿ ಅರ್ಧಶತಕ ಗಳಿಸಿರುವ ಡೆವೊನ್ ಕಾನ್ವೆ ಈ ಬಾರಿ ಖಾತೆ ತೆರೆಯುವಲ್ಲಿ ವಿಫಲರಾದರು. ಆದರೆ ವಿದ್ಯುತ್ ಅಡಚಣೆಯಿಂದಾಗಿ ಡಿಆರ್‌ಎಸ್ ಅಲಭ್ಯವಾಗಿದ್ದರಿಂದ ವಿವಾದಾತ್ಮಕ ತೀರ್ಪಿಗೆ ಔಟ್ ಆದರು.

ಮೊಯಿನ್ ಅಲಿ (0), ಋತುರಾಜ್ ಗಾಯಕವಾಡ್ (7), ರಾಬಿನ್ ಉತ್ತಪ್ಪ (1) ಹಾಗೂ ಅಂಬಟಿ ರಾಯುಡು (10) ನಿರಾಸೆ ಮೂಡಿಸಿದರು. ಪರಿಣಾಮ 29 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಬಳಿಕ ಕ್ರೀಸಿಗಿಳಿದ ನಾಯಕ ಮಹೇಂದ್ರ ಸಿಂಗ್ ಧೋನಿ ವಿಕೆಟ್‌ನ ಇನ್ನೊಂದು ತುದಿಯಿಂದ ಉತ್ತಮ ಬೆಂಬಲ ದೊರಕದೆ ಹಿನ್ನಡೆ ಅನುಭವಿಸಿದರು.

ಶಿವಂ ದುಬೆ 10 ಹಾಗೂ ಡ್ವೇನ್ ಬ್ರಾವೊ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಅಂತಿಮವಾಗಿ ಚೆನ್ನೈ 16ಓವರ್‌ಗಳಲ್ಲಿ 97 ರನ್ನಿಗೆ ಆಲೌಟ್ ಆಯಿತು. 33 ಎಸೆತಗಳನ್ನು ಎದುರಿಸಿದ ಮಹಿ, ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 36 ರನ್ ಗಳಿಸಿ ಔಟಾಗದೆ ಉಳಿದರು.

ಮುಂಬೈ ಪರ ಡ್ಯಾನಿಯಲ್ ಸ್ಯಾಮ್ಸ್ ಮೂರು ಮತ್ತು ರಿಲೆ ಮೆರಿಡಿತ್ ಹಾಗೂ ಕುಮಾರ್ ಕಾರ್ತಿಕೇಯ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು.

ಮುಂಬೈ ಪೀಲ್ಡಿಂಗ್ ಆಯ್ಕೆ...

ಈ ಮೊದಲು ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನಗಳಲ್ಲಿರುವತಂಡಗಳ ನಡುವೆ ಪೈಪೋಟಿ ಏರ್ಪಟ್ಟಿವೆ. ಪ್ಲೇ-ಆಫ್ ಪ್ರವೇಶದ ಕನಸನ್ನು ಜೀವಂತವಾಗಿರಿಸಲು ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೆ ಚೆನ್ನೈ ಸಿಲುಕಿದೆ.

ಧೋನಿ ಮತ್ತೆ ನಾಯಕತ್ವ ವಹಿಸಿದ ಬಳಿಕ ಉತ್ತಮ ಲಯಕ್ಕೆ ಮರಳಿರುವ ಚೆನ್ನೈ, ಗೆಲುವಿನ ಓಟ ಮುಂದುವರಿಸುವ ಇರಾದೆಯಲ್ಲಿದೆ. ಹಾಗೊಂದು ವೇಳೆ ಈ ಪಂದ್ಯದಲ್ಲಿ ಸೋತರೆ ನಿರ್ಗಮನದ ಹಾದಿ ಹಿಡಿಯಲಿದೆ.

ಹಾಲಿ ಚಾಂಪಿಯನ್ ಚೆನ್ನೈ, 11 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ಒಟ್ಟು ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.

ಅತ್ತ ಟೂರ್ನಿಯಿಂದ ನಿರ್ಗಮಿಸಿರುವ ಐದು ಬಾರಿಯ ಚಾಂಪಿಯನ್ ಮುಂಬೈ ಪಾಲಿಗೆ ಉಳಿದಿರುವ ಪಂದ್ಯಗಳು ಪ್ರತಿಷ್ಠೆಗಷ್ಟೇ ಸೀಮಿತಗೊಂಡಿದೆ.

ರೋಹಿತ್ ಶರ್ಮಾ ಬಳಗವು ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ ಒಂಬತ್ತು ಸೋಲು ಅನುಭವಿಸಿದೆ. ಅಲ್ಲದೆ ಕೊನೆಯ ಸ್ಥಾನದಲ್ಲಿದೆ.

ಹನ್ನೊಂದರ ಬಳಗ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT