ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 LSG vs GT: ಪ್ಲೇ ಆಫ್‌ಗೆ ಗುಜರಾತ್ ಟೈಟನ್ಸ್‌

ರಶೀದ್ ಖಾನ್ ಸ್ಪಿನ್ ಮೋಡಿ, ಮಧ್ಯಮವೇಗಿ ಯಶ್‌ ದಯಾಳ್‌ ಬೌಲಿಂಗ್‌ಗೆ ಕುಸಿದ ಲಖನೌ
Last Updated 11 ಮೇ 2022, 4:52 IST
ಅಕ್ಷರ ಗಾತ್ರ

ಪುಣೆ:ಸ್ಪಿನ್ ಮೋಡಿಗಾರ ರಶೀದ್ ಖಾನ್ ಮತ್ತು ಯುವ ಮಧ್ಯಮವೇಗಿ ಯಶ್ ದಯಾಳ್ ಅವರ ಅಮೋಘ ಬೌಲಿಂಗ್‌ನಿಂದಾಗಿ ಗುಜರಾತ್ ಟೈಟನ್ಸ್ ತಂಡ ಜಯಭೇರಿ ಬಾರಿಸಿತು. ಇದೇ ಮೊದಲ ಬಾರಿ ಐಪಿಎಲ್‌ನಲ್ಲಿ ಆಡುತ್ತಿರುವ ಗುಜರಾತ್ ತಂಡವು ಪ್ಲೇ ಆಫ್‌ಗೆ ಲಗ್ಗೆ ಇಟ್ಟಿತು.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂಸಿಎ) ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಗುಜರಾತ್ 62 ರನ್‌ಗಳಿಂದ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಜಯಿಸಿತು. 12 ಪಂದ್ಯಗಳನ್ನು ಆಡಿರುವ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್‌ಗೆ ಇದು ಒಂಬತ್ತನೇ ಜಯ. ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ತಂಡವು ಎಂಟು ಪಂದ್ಯಗಳನ್ನು ಜಯಿ ಸಿದ್ದು ಅಂಕಪಟ್ಟಿಯ 2ನೇ ಸ್ಥಾನದಲ್ಲಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 144 ರನ್‌ ಗಳಿಸಿತು. ಗಿಲ್ (ಔಟಾಗದೆ 63; 49ಎಸೆತ, 4X7) ಅರ್ಧಶತಕ ಗಳಿಸಿ, ತಂಡವು ಅಲ್ಪಮೊತ್ತಕ್ಕೆ ಕುಸಿಯವುದನ್ನು ತಪ್ಪಿಸಿದರು. ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ರಾಹುಲ್ ಬಳಗಕ್ಕೆ ರಶೀದ್ (24ಕ್ಕೆ4) ಮತ್ತು ಯಶ್ (24ಕ್ಕೆ2) ಅಡ್ಡಿಯಾದರು. ಇದರಿಂದಾಗಿ ಲಖನೌ ತಂಡವು 13.5 ಓವರ್‌ಗಳಲ್ಲಿ 82 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಲಖನೌ ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಯಶ್ ದಯಾಳ್ ಎಸೆತದಲ್ಲಿ ಕ್ವಿಂಟನ್ ಡಿಕಾಕ್ ಔಟಾದರು. ಅನುಭವಿ ಬೌಲರ್‌ ಶಮಿ, ಲಖನೌ ನಾಯಕ ರಾಹುಲ್ ವಿಕೆಟ್ ಕಬಳಿಸಿದರು. ಇನಿಂಗ್ಸ್‌ಗೆ ಬಲ ತುಂಬಲು ಪ್ರಯತ್ನಿಸಿದ ದೀಪಕ್ ಹೂಡಾ, ಆಲ್‌ರೌಂಡರ್ ಕೃಣಲ್ ಪಾಂಡ್ಯ, ಜೇಸನ್ ಹೋಲ್ಡರ್ ಮತ್ತು ಕೊನೆಯ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಎರಡು ಸಿಕ್ಸರ್ ಸಿಡಿಸಿದ ಆವೇಶ್ ಖಾನ್ ವಿಕೆಟ್‌ಗಳನ್ನು ರಶೀದ್ ಗಳಿಸಿದರು. ಇದರಿಂದಾಗಿ ಲಖನೌ ತಂಡವು ಕುಸಿಯಿತು.

ಗಿಲ್ ಹೋರಾಟ:ಗುಜರಾತ್ ತಂಡದ ಆರಂಭ ಕೂಡ ಚೆನ್ನಾಗಿರಲಿಲ್ಲ. ಅಲ್ಪಮೊತ್ತಕ್ಕೆ ಕುಸಿಯುವ ಆತಂಕ ಎದುರಿಸಿದ್ದ ತಂಡಕ್ಕೆ ಯುವ ಬ್ಯಾಟರ್ ಶುಭಮನ್ ಗಿಲ್ ಆಸರೆಯಾದರು.ತಂಡವು 51 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಹಂತದಲ್ಲಿ ಗಿಲ್ ಮತ್ತು ಡೇವಿಡ್ ಮಿಲ್ಲರ್ (26; 24ಎ) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 52 ರನ್‌ ಸೇರಿಸಿದರು. ಜೇಸನ್ ಹೋಲ್ಡರ್‌ 16ನೇ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ವಿಕೆಟ್ ಗಳಿಸಿ ಜೊತೆಯಾಟವನ್ನು ಮುರಿದರು.

ಕ್ರೀಸ್‌ಗೆ ಬಂದ ರಾಹುಲ್ ತೆವಾಟಿಯಾಗೆ ಒಂದೂ ಸಿಕ್ಸರ್ ಹೊಡೆಯುವ ಅವಕಾಶವನ್ನು ಲಖನೌ ಬೌಲರ್‌ಗಳು ಕೊಡಲಿಲ್ಲ. ಇದರ ನಡುವೆಯೂ ಗಿಲ್ ಮತ್ತು ತೆವಾಟಿಯಾ ಸೇರಿ ಕೊನೆಯ ನಾಲ್ಕು ಓವರ್‌ಗಳಲ್ಲಿ ಕೇವಲ 41 ರನ್‌ ಗಳಿಸುವಲ್ಲಿ ಯಶಸ್ವಿಯಾದರು.

ಆರಂಭದಲ್ಲಿ ವಿಕೆಟ್ ಕುಸಿತದ ಆಘಾತದ ನಡುವೆ ಗುಜರಾತ್‌ ತಂಡಕ್ಕೆ ಕೊನೆಯವರೆಗೂ ಆಸರೆಯಾಗಿ ನಿಂತವರು ಶುಭಮನ್ ಗಿಲ್‌. ಅವರ ಅರ್ಧಶತಕದ ನೆರವಿನಿಂದ ತಂಡವು 140 ರನ್‌ ಗಡಿ ದಾಟಿತು. 49 ಎಸೆತಗಳನ್ನು ಎದುರಿಸಿದ ಅವರು ಏಳು ಫೋರ್‌ ಸಹಿತ ಅಜೇಯ 63 ರನ್‌ ದಾಖಲಿಸಿದರು. ನಿಗದಿತ 20 ಓವರ್‌ಗಳಲ್ಲಿ ತಂಡವು ನಾಲ್ಕು ವಿಕೆಟ್‌ ಕಳೆದುಕೊಂಡು 144 ರನ್‌ ಗಳಿಸಿತು.

ಡೇವಿಡ್‌ ಮಿಲ್ಲರ್‌ (26) ಮತ್ತು ರಾಹುಲ್ ತೆವಾಟಿಯಾ (22) ಆಟವು ತಂಡಕ್ಕೆ ನೆರವಾಯಿತು. ಅಪಾಯಕಾರಿ ಆಗಬಹುದಾಗಿದ್ದ ನಾಯಕ ಹಾರ್ದಿಕ್‌ ಪಾಂಡ್ಯ (11) ಮತ್ತು ಮ್ಯಾಥ್ಯು ವೇಡ್‌ (10) ಅವರನ್ನು ಆವೇಶ್‌ ಖಾನ್‌ ಬಹುಬೇಗ ನಿಯಂತ್ರಿಸಿ ಪೆವಿಲಿಯನ್‌ ಹಾದಿ ತೋರಿಸಿದರು. ಆರಂಭಿಕರಾಗಿ ಕಣಕ್ಕಿಳಿದ ವೃದ್ಧಿಮಾನ್ ಸಹಾ (5), ಮೊಹಸಿನ್ ಖಾನ್‌ ಎಸೆತದಲ್ಲಿ ಕ್ಯಾಚ್‌ ಕೊಟ್ಟು ಹೊರ ನಡೆದರು.

ಆವೇಶ್‌ ಖಾನ್‌ ಎರಡು ವಿಕೆಟ್‌, ಮೊಹಸಿನ್‌ ಮತ್ತು ಜೇಸನ್‌ ಹೋಲ್ಡರ್ ತಲಾ ಒಂದು ವಿಕೆಟ್‌ ಪಡೆದರು.

ಎರಡೂ ತಂಡಗಳು ಈ ಟೂರ್ನಿಯಲ್ಲಿ ಎರಡನೇ ಬಾರಿಗೆ ಎದುರಾಗುತ್ತಿದ್ದು, ಮೊದಲ ಪಂದ್ಯದಲ್ಲಿ ಗುಜರಾತ್‌ ಗೆಲುವು ಸಾಧಿಸಿತ್ತು. ಇವತ್ತು ಗೆಲ್ಲುವ ತಂಡವು ಪ್ಲೇಆಫ್‌ಗೆ ಅರ್ಹತೆ ಪಡೆಯಲಿರುವ ಮೊದಲ ತಂಡವಾಗಲಿದೆ.

ಗುಜರಾತ್‌ ಮತ್ತು ಲಖನೌ ಎರಡೂ ತಂಡಗಳು ಈ ಕ್ರೀಡಾಂಗಣದಲ್ಲಿ ಆಡಿರುವ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಇಲ್ಲಿ ನಡೆದಿರುವ 11 ಪಂದ್ಯಗಳ ಪೈಕಿ ಮೊದಲು ಬ್ಯಾಟಿಂಗ್‌ ನಡೆಸಿರುವ ತಂಡಗಳು ಒಟ್ಟು 8 ಬಾರಿ ಗೆಲುವು ಸಾಧಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT