ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 RCB vs KKR: ಕೆಕೆಆರ್ ವಿರುದ್ಧ ಆರ್‌ಸಿಬಿಗೆ 3 ವಿಕೆಟ್ ಅಂತರದ ರೋಚಕ ಜಯ

Last Updated 31 ಮಾರ್ಚ್ 2022, 3:58 IST
ಅಕ್ಷರ ಗಾತ್ರ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಮೂರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಈ ಮೂಲಕ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿರುವ ಆರ್‌ಸಿಬಿ, ಅಂಕಪಟ್ಟಿಯಲ್ಲಿ ಖಾತೆ ತೆರೆದುಕೊಂಡಿದೆ.

ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 129 ರನ್ ಗುರಿ ಬೆನ್ನತ್ತಿದ ಆರ್‌ಸಿಬಿ ಇನ್ನೂ ನಾಲ್ಕು ಎಸೆತಗಳು ಬಾಕಿ ಉಳಿದಿರುವಂತೆಯೇ 19.2 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಸುಲಭ ಗುರಿ ಬೆನ್ನತ್ತಿದ ಆರ್‌ಸಿಬಿ ಆರಂಭ ಉತ್ತಮವಾಗಿರಲಿಲ್ಲ. ತಂಡವು 17 ರನ್ ಗಳಿಸುವಷ್ಟರಲ್ಲಿ ಅನುಜ್ ರಾವತ್ (0), ನಾಯಕ ಫಫ್ ಡುಪ್ಲೆಸಿ (5) ಹಾಗೂ ವಿರಾಟ್ ಕೊಹ್ಲಿ (12) ವಿಕೆಟ್‌ಗಳು ನಷ್ಟವಾದವು.

ಈ ಹಂತದಲ್ಲಿ ಜೊತೆಗೂಡಿದ ಡೇವಿಡ್ ವಿಲ್ಲಿ ಹಾಗೂ ಶೆರ್ಫಾನ್ ರುಥರ್‌ಫೋರ್ಡ್ ತಂಡವನ್ನು ನಿಧಾನವಾಗಿ ಮುನ್ನಡೆಸಿದರು. ಈ ನಡುವೆ 18 ರನ್ ಗಳಿಸಿದ ಡೇವಿಡ್ ವಿಕೆಟ್ ನಷ್ಟವಾಯಿತು.

ಬಳಿಕ ಶಹಬಾಜ್ ಅಹಮದ್ ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆದರು. ಇನ್ನೊಂದೆಡೆ ರುಥರ್‌ಫೋರ್ಡ್ ಅವರಿಂದಲೂ ಉತ್ತಮ ಬೆಂಬಲ ದೊರಕಿತು.

ಅಂತಿಮ ಐದು ಓವರ್‌ಗಳಲ್ಲಿ ಆರ್‌ಸಿಬಿ ಗೆಲುವಿಗೆ 36 ರನ್‌ಗಳ ಅವಶ್ಯಕತೆಯಿತ್ತು. ಈ ವೇಳೆ ಉತ್ತಮವಾಗಿ ಆಡುತ್ತಿದ್ದ ಶಹಬಾಜ್ (27) ವಿಕೆಟ್ ನಷ್ಟವಾಯಿತು. ಬೆನ್ನಲ್ಲೇ ರುಥರ್‌ಫೋರ್ಡ್ (28) ಕೂಡ ಔಟ್ ಆದರು.

ಅಂತಿಮ ಹಂತದಲ್ಲಿ ದಿನೇಶ್ ಕಾರ್ತಿಕ್ (14*) ಹಾಗೂ ಹರ್ಷಲ್ ಪಟೇಲ್ (10*) ಮುರಿಯದ ಎಂಟನೇ ವಿಕೆಟ್‌ಗೆ 21 ರನ್‌ಗಳ ಜೊತೆಯಾಟ ಕಟ್ಟುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಕೆಕೆಆರ್ ಪರ ಟಿಮ್ ಸೌಥಿ ಮೂರು, ಉಮೇಶ್ ಯಾದವ್ ಎರಡು ಮತ್ತು ಸುನಿಲ್ ನಾರಾಯಣ್ ಹಾಗೂ ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದರು.

ಕೆಕೆಆರ್ 128ಕ್ಕೆ ಆಲೌಟ್...
ಈ ಮೊದಲು ವನಿಂದು ಹಸರಂಗ (20ಕ್ಕೆ 4 ವಿಕೆಟ್) ಸೇರಿದಂತೆ ಆರ್‌ಸಿಬಿ ಸಾಂಘಿಕ ಬೌಲಿಂಗ್‌ಗೆ ತತ್ತರಿಸಿದ ಕೋಲ್ಕತ್ತ ನೈಟ್ ರೈಡರ್ಸ್, 18.5 ಓವರ್‌ಗಳಲ್ಲಿ 128 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಟಾಸ್ ಗೆದ್ದ ಆರ್‌ಸಿಬಿ ನಾಯಕ ಫಫ್ ಡುಪ್ಲೆಸಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರ ಸರಿಯೆಂದು ಸಾಬೀತುಪಡಿಸಿದ ಆರ್‌ಸಿಬಿ ಬೌಲರ್‌ಗಳು ಶಿಸ್ತಿನ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾದರು. ಕಳೆದ ಪಂದ್ಯದಲ್ಲಿ ಕಳಪೆ ಬೌಲಿಂಗ್‌ನಿಂದಾಗಿ ಆರ್‌ಸಿಬಿ ಹಿನ್ನಡೆ ಅನುಭವಿಸಿತ್ತು.

ವನಿಂದು ಹಸರಂಗ, ಹರ್ಷಲ್ ಪಟೇಲ್, ಆಕಾಶ್ ದೀಪ್ ಹಾಗೂ ಮೊಹಮ್ಮದ್ ಸಿರಾಜ್, ಕೆಕೆಆರ್ ಓಟಕ್ಕೆ ಕಡಿವಾಣ ಹಾಕಿದರು. ಪರಿಣಾಮ 87ಕ್ಕೆ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಅಜಿಂಕ್ಯ ರಹಾನೆ (9), ವೆಂಕಟೇಶ್ ಅಯ್ಯರ್ (10), ನಾಯಕ ಶ್ರೇಯಸ್ ಅಯ್ಯರ್ (13), ನಿತೀಶ್ ರಾಣಾ (10), ಸುನಿಲ್ ನಾರಾಯಣ್ (12), ಸ್ಯಾಮ್ ಬಿಲ್ಲಿಂಗ್ಸ್ (14) ಹಾಗೂ ವಿಕೆಟ್ ಕೀಪರ್ ಶೆಲ್ಡನ್ ಜ್ಯಾಕ್ಸನ್ (0) ನಿರಾಸೆ ಅನುಭವಿಸಿದರು.

ಈ ವೇಳೆ ಕೌಂಟರ್ ಅಟ್ಯಾಕ್ ಮಾಡಿದ ಆ್ಯಂಡ್ರೆ ರಸೆಲ್ ಅಲ್ಪ ಹೊತ್ತು ಆತಂಕ ಸೃಷ್ಟಿಸಿದರು. ಈ ಸಂದರ್ಭದಲ್ಲಿ ರಸೆಲ್ ವಿಕೆಟ್ ಪಡೆದ ಹರ್ಷಲ್ ಪಟೇಲ್ ಆರ್‌ಸಿಬಿ ಕ್ಯಾಂಪ್‌ನಲ್ಲಿ ಮಂದಹಾಸ ಬೀರಿದರು. 18 ಎಸೆತಗಳನ್ನು ಎದುರಿಸಿದ ರಸೆಲ್ ಒಂದು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 25 ರನ್ ಗಳಿಸಿದರು.

ಆದರೆ ಕೊನೆಯ ವಿಕೆಟ್‌ಗೆ 27 ರನ್‌ಗಳ ಜೊತೆಯಾಟ ಕಟ್ಟಿದ ಉಮೇಶ್ ಯಾದವ್ (18) ಹಾಗೂ ವರುಣ್ ಚಕ್ರವರ್ತಿ (10*), ಕೆಕೆಆರ್ 128 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಆರ್‌ಸಿಬಿ ಪರ ಹಸರಂಗ ನಾಲ್ಕು, ಆಕಾಶ್ ಮೂರು, ಹರ್ಷಲ್ ಎರಡು ಹಾಗೂ ಸಿರಾಜ್ ಒಂದು ವಿಕೆಟ್ ಕಿತ್ತು ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT