ಮಂಗಳವಾರ, ಮೇ 17, 2022
24 °C
ಮೊದಲ ಗೆಲುವಿನ ತವಕದಲ್ಲಿ ಮುಂಬೈ; ದಿನೇಶ್ ಕಾರ್ತಿಕ್, ಇಶಾನ್ ಕಿಶನ್ ಆಕರ್ಷಣೆ

IPL 2022 RCB vs MI: ಮುಂಬೈ ಗಾಯಕ್ಕೆ ಬರೆ ಎಳೆಯುವುದೇ ಬೆಂಗಳೂರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪುಣೆ: ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಣ ಪಂದ್ಯವು ಇಬ್ಬರು ವಿಕೆಟ್‌ಕೀಪರ್‌ಗಳ ನಡುವಣ ಜಿದ್ದಾಜಿದ್ದಿಗೆ ವೇದಿಕೆಯಾಗುವ ನಿರೀಕ್ಷೆಯಿದೆ. 

ಬೆಂಗಳೂರು ತಂಡದಲ್ಲಿರುವ ಅನುಭವಿ ದಿನೇಶ್ ಕಾರ್ತಿಕ್ ಮತ್ತು ಮುಂಬೈ ತಂಡದ ಯುವ ಆಟಗಾರ ಇಶಾನ್ ಕಿಶನ್ ಅವರಿಬ್ಬರಲ್ಲಿ ಯಾರು ತಮ್ಮ ತಂಡಕ್ಕೆ ಜಯದ ಕಾಣಿಕೆ ನೀಡುವರೆಂಬ ಕುತೂಹಲ ಗರಿಗೆದರಿದೆ. ಆರ್‌ಸಿಬಿಯು ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಜಯಿಸಲು ದಿನೇಶ್ ಆಟವೇ ಕಾರಣವಾಗಿತ್ತು. ಇನ್ನೊಂದೆಡೆ ಇಶಾನ್ ನಿರಂತರವಾಗಿ ಉತ್ತಮ ಸಾಧನೆ ಮಾಡುತ್ತಿದ್ದರೂ ಮುಂಬೈ ತಂಡವು ಒಂದೂ ಪಂದ್ಯದಲ್ಲಿ ಜಯಿಸಿಲ್ಲ. 

ಆರ್‌ಸಿಬಿಯು ಆಡಿದ ಕಳೆದೆರಡೂ ಪಂದ್ಯಗಳಲ್ಲಿ ಅಗ್ರಕ್ರಮಾಂಕದ ಬ್ಯಾಟರ್‌ಗಳು ನಿರೀಕ್ಷೆ ಹುಸಿಗೊಳಿಸಿದ್ದರು. ಆ ಸಂದರ್ಭದಲ್ಲಿ ದಿನೇಶ್ ‘ಫಿನಿಷರ್’ ಆಗಿ ತಂಡವನ್ನು ಗೆಲುವಿನ ಗೆರೆ ಮುಟ್ಟಿಸಿದ್ದರು. ಏಳನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿಯುತ್ತಿರುವ ದಿನೇಶ್ ಅವರನ್ನು ಕಟ್ಟಿಹಾಕಲು ಮುಂಬೈ ಬೌಲರ್‌ಗಳು ವಿಶೇಷ ತಂತ್ರಗಾರಿಕೆ ರೂಪಿಸಲೇಬೇಕು. ಇಲ್ಲದಿದ್ದರೆ ಇನಿಂಗ್ಸ್‌ ಕೊನೆಯ ಹಂತದ ಓವರ್‌ಗಳಲ್ಲಿ ರನ್‌ಗಳ ಹೊಳೆ ಹರಿಯುವುದನ್ನು ತಡೆಯುವುದು ಕಷ್ಟ. 

ರಾಜಸ್ಥಾನ್ ರಾಯಲ್ಸ್ ಎದುರಿನ ಪಂದ್ಯದಲ್ಲಿ ಆರನೇ ಕ್ರಮಾಂಕದಲ್ಲಿ ಶಾಬಾಜ್ ನದೀಂ ಕೂಡ ಮಿಂಚಿದ್ದರು. ಆರಂಭಿಕ ಜೋಡಿ ಫಫ್ ಡುಪ್ಲೆಸಿ, ಅನುಜ್ ರಾವತ್ ಮತ್ತು ವಿರಾಟ್ ಕೊಹ್ಲಿಯವರು ತಮ್ಮ ಎಂದಿನ ಲಯಕ್ಕೆ ಮರಳಿದರೆ ಮುಂಬೈ ತಂಡದ ಮೇಲಿನ ಒತ್ತಡ ಹೆಚ್ಚುವುದರಲ್ಲಿ ಸಂದೇಹವಿಲ್ಲ. 

ಸತತ ಮೂರು ಪಂದ್ಯಗಳಲ್ಲಿ ಸೋತಿರುವ ರೋಹಿತ್ ಶರ್ಮಾ ಬಳಗವು ಟೂರ್ನಿಯಲ್ಲಿ ಮೊದಲ ಗೆಲುವಿಗಾಗಿ ಪರಿತಪಿಸುತ್ತಿದೆ.  ರೋಹಿತ್, ಸೂರ್ಯಕುಮಾರ್ ಯಾದವ್, ಪೊವೆಲ್, ತಿಲಕ್ ವರ್ಮಾ ಅವರಿರುವ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಇಶಾನ್ ಒಟ್ಟು 149 ರನ್‌ಗಳಿಸಿದ್ದಾರೆ. ಅದರಲ್ಲಿ ಎರಡು ಅರ್ಧಶತಕಗಳು ಸೇರಿವೆ. 

ಜಸ್‌ಪ್ರೀತ್ ಬೂಮ್ರಾ, ಬಾಸಿಲ್ ಥಂಪಿ, ಸ್ಪಿನ್ನರ್ ಮುರುಗನ್ ಅಶ್ವಿನ್ ಅವರಿರುವ ಬೌಲಿಂಗ್ ವಿಭಾಗವೂ ಸಮರ್ಥವಾಗಿದೆ. ಆದರೂ ತಂಡವು ಸತತ ಸೋಲಿನ ಸುಳಿಯಲ್ಲಿ ಸಿಲುಕಿದೆ. ನಾಯಕ ರೋಹಿತ್ ತಂತ್ರಗಾರಿಕೆಗೆ ತಕ್ಕ ಫಲ ಸಿಗುತ್ತಿಲ್ಲ.  ಅದರಿಂದಾಗಿ ತೀವ್ರ ಒತ್ತಡದಲ್ಲಿರುವ ಮುಂಬೈ ಬಳಗವನ್ನು ಸುಲಭವಾಗಿ ಮಣಿಸುವ ಲೆಕ್ಕಾಚಾರದಲ್ಲಿ ಆರ್‌ಸಿಬಿ ಇದೆ. 

ರಾತ್ರಿಯ ಪಂದ್ಯ ಇದಾಗಿರುವುದರಿಂದ ಮೆಲ್ಲಗೆ ಸುರಿಯುವ ಇಬ್ಬನಿಯಲ್ಲಿ ಟಾಸ್ ಗೆದ್ದವರು ತೆಗೆದುಕೊಳ್ಳುವ ನಿರ್ಧಾರವೂ ಮಹತ್ವದ್ದಾಗಲಿದೆ. 

ತಂಡಗಳು

ಬಲಾಬಲ

ಪಂದ್ಯ;29

ಆರ್‌ಸಿಬಿ ಜಯ;12

ಮುಂಬೈ ಜಯ; 17

––

ಗರಿಷ್ಠ ಸ್ಕೋರು

ಬೆಂಗಳೂರು;235

ಮುಂಬೈ;213

ಕನಿಷ್ಠ ಸ್ಕೋರು

ಬೆಂಗಳೂರು;122

ಮುಂಬೈ;111

ನಿರೀಕ್ಷಿತ ದಾಖಲೆಗಳು

5; ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಐದನೂರು ಬೌಂಡರಿ ಮೈಲುಗಲ್ಲು ಮುಟ್ಟಲು ಬೇಕಾಗಿರುವ ಬೌಂಡರಿಗಳು. ವಿರಾಟ್ ಕೊಹ್ಲಿ, ಶಿಖರ್ ಧವನ್, ಡೇವಿಡ್ ವಾರ್ನರ್ ಮತ್ತು ಸುರೇಶ್ ರೈನಾ ಈಗಾಗಲೇ ಈ ಸಾಧನೆ ಮಾಡಿದ್ದಾರೆ

10; ನಾಲ್ಕನೂರು ಬೌಂಡರಿ ಸಾಧಿಸಲು ದಿನೇಶ್ ಕಾರ್ತಿಕ್‌ಗೆ ಇನ್ನೂ 10 ಬೌಂಡರಿಗಳ ಅಗತ್ಯ ಇದೆ

27; ಶೇನ್ ವಾಟ್ಸನ್ ದಾಖಲೆ (3876 ರನ್) ಮುರಿಯಲು ದಿನೇಶ್ ಕಾರ್ತಿಕ್‌ಗೆ (3848) ಬೇಕಿರುವ ರನ್‌ಗಳು. ಈ ಸಾಧನೆ ಮಾಡಿದರೆ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 13ನೇ ಆಟಗಾರನಾಗಲಿದ್ದಾರೆ.

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಹಾಟ್‌ಸ್ಟಾರ್

ಪಂದ್ಯ ಆರಂಭ: ರಾತ್ರಿ 7.30

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು