ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2023: ಚೆನ್ನೈ ಸೂಪರ್ ಕಿಂಗ್ಸ್‌ಗೆ ತಲೆಬಾಗಿದ ಡೆಲ್ಲಿ

Published 10 ಮೇ 2023, 19:34 IST
Last Updated 10 ಮೇ 2023, 19:34 IST
ಅಕ್ಷರ ಗಾತ್ರ

ಚೆನ್ನೈ: ಬುಧವಾರ ರಾತ್ರಿ ಚೆಪಾಕ್ ಕ್ರೀಡಾಂಗಣದಲ್ಲಿ ಸೇರಿದ್ದ ತನ್ನ ಅಭಿಮಾನಿಗಳಿಗೆ ಮಹೇಂದ್ರಸಿಂಗ್ ಧೋನಿ ಬಳಗವು ಗೆಲುವಿನ ಕಾಣಿಕೆ ನೀಡಿತು.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 27 ರನ್‌ಗಳಿಂದ ಜಯಿಸಿತು. ಇದರೊಂದಿಗೆ ಪ್ಲೇಆಫ್‌ ಪ್ರವೇಶದ್ವಾರಕ್ಕೆ ಮತ್ತಷ್ಟು ಸನಿಹ ಬಂದು ನಿಂತಿತು. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 167 ರನ್‌ಗಳನ್ನು ಪೇರಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 140 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

ಚೆನ್ನೈ ತಂಡದ ಅನುಭವಿ ಬೌಲರ್ ದೀಪಕ್ ಚಾಹರ್ (28ಕ್ಕೆ2) ಹಾಗೂ ಯುವ ಬೌಲರ್ ಮಥೀಷ್ ಪಥಿರಾಣ (37ಕ್ಕೆ3) ಅಮೋಘ ಬೌಲಿಂಗ್ ಮಾಡಿದರು. ಡೆಲ್ಲಿ ತಂಡದ ಬ್ಯಾಟಿಂಗ್‌ ಪಡೆಗೆ ತಡೆಯೊಡ್ಡಿದರು.

ಡೆಲ್ಲಿಗೆ ಇನಿಂಗ್ಸ್‌ನ ಮೊದಲ ಓವರ್‌ನಲ್ಲಿಯೇ ದೀಪಕ್ ಚಾಹರ್ ಆಘಾತ ನೀಡಿದರು. ಡೇವಿಡ್ ವಾರ್ನರ್ ವಿಕೆಟ್ ಉರುಳಿಸಿದ ದೀಪಕ್ ಸಂಭ್ರಮಿಸಿದರು. ಮೂರನೇ ಓವರ್‌ನಲ್ಲಿ ಫಿಲಿಪ್ ಸಾಲ್ಟ್ ವಿಕೆಟ್ ಕೂಡ ದೀಪಕ್ ಪಾಲಾಯಿತು. ಮಧ್ಯಮ ಕ್ರಮಾಂಕದ ಮನೀಷ್ ಪಾಂಡೆ, ಅಕ್ಷರ್ ಪಟೇಲ್ ಹಾಗೂ ಕೊನೆಯಲ್ಲಿ ಲಲಿತ್ ಯಾದವ್ ವಿಕೆಟ್‌ಗಳನ್ನು ಪಥಿರಾಣ ತಮ್ಮ ಬುಟ್ಟಿಗೆ ಹಾಕಿಕೊಂಡರು. 

ಮಿಂಚಿನ ಫೀಲ್ಡಿಂಗ್ ಪ್ರದರ್ಶಿಸಿದ ಅಜಿಂಕ್ಯ ರಹಾನೆ ಹಾಗೂ ಮೋಯಿನ್ ಅಲಿ ಅವರು ಎರಡು ರನ್‌ ಔಟ್‌ಗಳಿಗೆ ಕಾರಣರಾದರು. ಇದರಿಂದಾಗಿ ತಂಡದ ರನ್‌ ಗಳಿಕೆಯ ವೇಗಕ್ಕೆ ಕಡಿವಾಣ ಬಿದ್ದಿತು. ತುಸು ಹೋರಾಟ ತೋರಿದ ರಿಲಿ ರೊಸೊ (35; 37ಎ) ಅವರಿಗೂ ಜಡೇಜ ತಡೆಯೊಡ್ಡುವಲ್ಲಿ ಸಫಲರಾದರು.

ಮನ ಗೆದ್ದ ಧೋನಿ: ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಅಗ್ರಕ್ರಮಾಂಕದ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಆದರೆ, ಧೋನಿ ತಮ್ಮ ತೋಳಿನಲ್ಲಿ ಇನ್ನೂ ಸಿಕ್ಸರ್‌ ಎತ್ತುವ ತಾಕತ್ತು ಇದೆ ಎಂಬುದನ್ನು ತೋರಿಸಿದರು. 9 ಎಸೆತಗಳಲ್ಲಿ 20 ರನ್‌ ಗಳಿಸಿದ ಅವರ ಆಟದಿಂದ ಚೆನ್ನೈ  ಹೋರಾಟದ ಮೊತ್ತ ಗಳಿಸಿತು.

ಡೆಲ್ಲಿ ಸ್ಪಿನ್ನರ್ ಅಕ್ಷರ್ ಪಟೇಲ್ (27ಕ್ಕೆ2) ಹಾಗೂ ಮಧ್ಯಮವೇಗಿ ಮಿಚೆಲ್ ಮಾರ್ಷ್ (18ಕ್ಕೆ3) ಅವರ ಉತ್ತಮ ಬೌಲಿಂಗ್‌ನಿಂದಾಗಿ ಚೆನ್ನೈ ತಂಡದ ಬ್ಯಾಟರ್‌ಗಳು ಬೀಸಾಟವಾಡಲು ಸಾಧ್ಯವಾಗಲಿಲ್ಲ.  ಇನಿಂಗ್ಸ್‌ನ ಐದನೇ ಓವರ್‌ನಲ್ಲಿ ಅಕ್ಷರ್ ಎಸೆತದಲ್ಲಿ ಡೆವೊನ್ ಕಾನ್ವೆ ಔಟಾದರು. ಏಳನೇ ಓವರ್‌ನಲ್ಲಿ ಋತುರಾಜ್ ಕೂಡ ಅಕ್ಷರ್‌ಗೆ ವಿಕೆಟ್ ಒಪ್ಪಿಸಿದರು.

ಇದರೊಂದಿಗೆ ಇನಿಂಗ್ಸ್‌ ಮೇಲೆ ಬಿಗಿಹಿಡಿತ ಸಾಧಿಸುವಲ್ಲಿ ಡೆಲ್ಲಿ ಬೌಲಿಂಗ್ ಪಡೆ ಬಹುತೇಕ ಯಶಸ್ವಿಯಾಯಿತು. ಅಜಿಂಕ್ಯ ರಹಾನೆ (21; 20ಎ) , ಶಿವಂ ದುಬೆ (25; 12ಎ) ಹಾಗೂ  ಅಂಬಟಿ ರಾಯುಡು (23; 17ಎ) ಇನಿಂಗ್ಸ್‌ಗೆ ಬಲ ತುಂಬಲು ಪ್ರಯತ್ನಿಸಿದರು.

ಆದರೆ ಮಧ್ಯಮ ಕ್ರಮಾಂಕವನ್ನು ಲಲಿತ್ ಯಾದವ್, ಕುಲದೀಪ್ ಯಾದವ್ ಮತ್ತು ಖಲೀಲ್ ಅಹಮದ್ ಕಾಡಿದರು. ರನ್‌ ಗಳಿಕೆಗೆ ಕಡಿವಾಣ ಹಾಕಿದರು. ಇದರಿಂದಾಗಿ ತಂಡವು 126 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಕ್ರೀಸ್‌ಗೆ ಬಂದ ಧೋನಿಗೆ ಅಭಿಮಾನಿಗಳು ಹರ್ಷೋದ್ಘಾರಗಳೊಂದಿಗೆ ಸ್ವಾಗತಿಸಿದರು. ಇನ್ನೊಂದೆಡೆ ರವೀಂದ್ರ ಜಡೇಜ ಇದ್ದರು.

ಇವರಿಬ್ಬರ ಚುರುಕಿನ ಆಟದಿಂದಾಗಿ ಕೊನೆಯ 22 ಎಸೆತಗಳಲ್ಲಿ 40 ರನ್‌ಗಳು ಹರಿದುಬರುವಂತಾಯಿತು. ಮಾರ್ಷ್ ಹಾಕಿದ ಕೊನೆಯ ಓವರ್‌ನಲ್ಲಿ  ಜಡೇಜ ಹಾಗೂ ಧೋನಿ ಔಟಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT