ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IPL: ರಾಯಲ್ಸ್ ಗೆಲುವಿನಲ್ಲಿ ಮಿಂಚಿದ ಸಂಜು

ಐಪಿಎಲ್‌: ಅರ್ಧ ಶತಕ ಗಳಿಸಿದ ರಾಹುಲ್, ಪೂರನ್
Published 24 ಮಾರ್ಚ್ 2024, 16:13 IST
Last Updated 24 ಮಾರ್ಚ್ 2024, 16:13 IST
ಅಕ್ಷರ ಗಾತ್ರ

ಪಿಟಿಐ: ನಾಯಕ ಸಂಜು ಸ್ಯಾಮ್ಸನ್ ಹೊಣೆಗಾರಿಕೆಯ ಬ್ಯಾಟಿಂಗ್ (ಔಟಾಗದೇ 82) ನೆರವಿನಿಂದ ರಾಜಸ್ತಾನ ರಾಯಲ್ಸ್ ತಂಡ ಐಪಿಎಲ್ ಪಂದ್ಯದಲ್ಲಿ ಭಾನುವಾರ ಲಖನೌ ಸೂಪರ್‌ ಜೈಂಟ್ಸ್ ತಂಡದ ಮೇಲೆ 20 ರನ್‌ಗಳ ಜಯ ಪಡೆಯಿತು. ಆ ಮೂಲಕ ಗೆಲುವಿನೊಡನೆ ಅಭಿಯಾನ ಆರಂಭಿಸಿತು.

52 ಎಸೆತಗಳ ಸೊಗಸಾದ ಇನಿಂಗ್ಸ್‌ನಲ್ಲಿ ಅವರು ಅರ್ಧ ಡಜನ್ ಸಿಕ್ಸರ್‌ಗಳ ಜೊತೆ ಮೂರು ಬೌಂಡರಿ ಬಾರಿಸಿದರು. ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ರಾಯಲ್ಸ್ ಪವರ್‌ಪ್ಲೇ ಅವಧಿಯೊಳಗೆ ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ಅವರ ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಸಂಜು ಅವರು ರಿಯಾನ್ ಪರಾಗ್ (43) ಜೊತೆ ಅತ್ಯುಪಯುಕ್ತ 93 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ತಂಡ ಅಂತಿಮವಾಗಿ 4 ವಿಕೆಟ್‌ಗೆ 193 ರನ್‌ಗಳ ಉತ್ತಮ ಮೊತ್ತ ಕಲೆಹಾಕಿತು.

ಟ್ರೆಂಟ್‌ ಬೌಲ್ಟ್‌ ದಾಳಿಗೆ ಸಿಲುಕಿ 11 ರನ್‌ಗಳಾಗುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿದ್ದ ಲಖನೌ ಸೂಪರ್‌ಜೈಂಟ್ಸ್‌ ಅಂತಿಮವಾಗಿ 6 ವಿಕೆಟ್‌ಗೆ 173 ರನ್ ಗಳಿಸಲಷ್ಟೇ ಶಕ್ಯವಾಯಿತು.

ಈ ಲೀಗ್‌ ಮೂಲಕ ಕ್ರಿಕೆಟ್‌ಗೆ ಮರಳಿದ ನಾಯಕ ಕೆ.ಎಲ್‌.ರಾಹುಲ್ ಆಕರ್ಷಕ ಅರ್ಧ ಶತಕ ಗಳಿಸಿದರು. ಅವರ 58 ರನ್‌ಗಳು (44 ಎ) ನಾಲ್ಕು ಬೌಂಡರಿ, ಎರಡು ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಜೊತೆಗೆ ಕೀಪಿಂಗ್ ಸಹ ಮಾಡಿ ಫಿಟ್ನೆಸ್‌ ಬಗ್ಗೆಯಿದ್ದ ಸಂದೇಹಗಳನ್ನು ದೂರ ಮಾಡಿದರು.

17ನೇ ಓವರ್‌ನಲ್ಲಿ ರಾಹುಲ್ ನಿರ್ಗಮನ ಬಳಿಕ ವೆಸ್ಟ್‌ ಇಂಡೀಸ್‌ ಆಟಗಾರ ಪೂರನ್ ಹೋರಾಟ ಮುಂದುವರಿಸಿದರೂ ಗೆಲುವು ದೂರವಿತ್ತು. ಅವರೂ 41 ಎಸೆತಗಳಲ್ಲಿ 64 ರನ್ ಬಾರಿಸಿ (4x4, 6x4) ಅಜೇಯರಾಗಿ ಉಳಿದರು.

ಲಖನೌ ಆರಂಭದಲ್ಲೇ ಕುಸಿತ ಅನುಭವಿಸಿತು. ಬೌಲ್ಟ್‌ (35ಕ್ಕೆ2) ಮತ್ತು ಮೊದಲ ಪಂದ್ಯವಾಡಿದ ನಾಂಡ್ರೆ ಬರ್ಗರ್ (30ಕ್ಕೆ1) ಪೆಟ್ಟುನೀಡಿದರು. ಬರ್ಗರ್‌ ಇಂಪ್ಯಾಕ್ಟ್‌ ಸಬ್‌ ಆಗಿ ಆಡಲಿಳಿದರು. ಕ್ವಿಂಟನ್, ಲೆಗ್‌ಸ್ಟಂಪ್‌ನತ್ತ ಬಂದ ಚೆಂಡನ್ನು ಹೊಡೆಯಲು ಹೋಗಿ ಫೈನ್‌ಲೆಗ್‌ನಲ್ಲಿ ಕ್ಯಾಚಿತ್ತರು. ದೇವದತ್ತ ಪಡಿಕ್ಕಲ್‌ ಅವರು ಶಾರ್ಟ್‌ಬಾಲ್‌ ಎದುರಿಸಲು ಹೋದಾಗ ಚೆಂಡು ಹೆಲ್ಮೆಟ್‌ಗೆ ತಗುಲಿ ಮಿಡ್ಲ್ ಸ್ಟಂಪ್‌ ಮೇಲೆ ಬಿತ್ತು. ಆಯುಷ್ ಬಡೋನಿ ಕೂಡ (1) ಹೆಚ್ಚು ಹೊತ್ತು ನಿಲ್ಲಲಿಲ್ಲ. ದೀಪಕ್ ಹೂಡ (26, 13ಎ) ಚೇತರಿಕೆಗೆ ನೆರವಾದರು. ಆದರೆ ಗಳಿಸಬೇಕಾದ ರನ್ ದರ ಹೆಚ್ಚುತ್ತ ಹೋಯಿತು. ರಾಹುಲ್ ಜೊತೆ ನಾಲ್ಕನೇ ವಿಕೆಟ್‌ಗೆ 49 ರನ್ ಸೇರಿಸಿದ ನಂತರ ಚಾಹಲ್‌ ಬೌಲಿಂಗ್‌ನಲ್ಲಿ ನಿರ್ಗಮಿಸಿದರು.

ರಾಹುಲ್ ಆಗಲಿ, ಪೂರನ್ ಆಗಲಿ ಸಾಹಸದ ಹೊಡೆತಗಳಿಗೆ ಹೋಗಲಿಲ್ಲ. ಸಂದೀಪ್‌ ಶರ್ಮಾ 17ನೇ ಓವರ್‌ನಲ್ಲಿ ರಾಹುಲ್ ವಿಕೆಟ್‌ ಪಡೆದರು. ಅಪಾಯಕಾರಿ ಆಟಗಾರ ಸ್ಟೊಯಿನಿಸ್‌ ಬೇಗ ನಿರ್ಗಮಿಸಿದ ಮೇಲೆ ರಾಯಲ್ಸ್ ಕೈಮೇಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT