ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

IPL 2024 | ಈ ಸಲವೂ ಕಪ್ ಆರ್‌ಸಿಬಿಗಿಲ್ಲ

ಎರಡನೇ ಕ್ವಾಲಿಫೈಯರ್‌ಗೆ ರಾಜಸ್ಥಾನ ರಾಯಲ್ಸ್ l ಯಶಸ್ವಿ, ಅಶ್ವಿನ್ ಮಿಂಚು l ಫಫ್ ಪಡೆ ಹೋರಾಟ ಅಂತ್ಯ
Published 22 ಮೇ 2024, 18:05 IST
Last Updated 22 ಮೇ 2024, 18:05 IST
ಅಕ್ಷರ ಗಾತ್ರ

ಅಹಮದಾಬಾದ್‌: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಟ್ರೋಫಿ ಜಯಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕನಸು ಸತತ 17ನೇ ವರ್ಷವೂ ಕಮರಿತು. 

ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಎಲಿಮಿನೇಟರ್‌ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡವು 4 ವಿಕೆಟ್‌ಗಳಿಂದ ಜಯಿಸಿ ಎರಡನೇ ಕ್ವಾಲಿಫೈಯರ್‌ಗೆ ಅರ್ಹತೆ ಗಿಟ್ಟಿಸಿತು. ಇದರೊಂದಿಗೆ ಟೂರ್ನಿಯ ಇತಿಹಾಸದಲ್ಲಿ ಎರಡನೇ ಬಾರಿ ಚಾಂಪಿಯನ್ ಆಗುವ ರಾಜಸ್ಥಾನದ ಕನಸು ಜೀವಂತವಾಗುಳಿಯಿತು.

ರಾಜಸ್ಥಾನ ತಂಡವು ಶುಕ್ರವಾರ ಚೆನ್ನೈನಲ್ಲಿ ನಡೆಯುವ ಎರಡನೇ ಕ್ವಾಲಿಫೈಯರ್‌ ಪಂದ್ಯ ದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದೆ.  ಆ ಪಂದ್ಯದಲ್ಲಿ ಗೆದ್ದ ತಂಡವು ಫೈನಲ್‌ನಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದೊಂದಿಗೆ ಸೆಣಸಲಿದೆ.

ಆರ್‌ಸಿಬಿ ತಂಡವು ಲೀಗ್ ಹಂತದಲ್ಲಿ ತನ್ನ ಮೊದಲ ಎಂಟು ಪಂದ್ಯಗಳಲ್ಲಿ ಏಳರಲ್ಲಿ ಸೋತಿತ್ತು. ನಂತರದ ಆರು ಪಂದ್ಯಗಳಲ್ಲಿ ಸತತ ಜಯ ಸಾಧಿಸಿತ್ತು. ಅದರಲ್ಲೂ ಬೆಂಗಳೂರಿನಲ್ಲಿ ನಡೆದಿದ್ದ ಕೊನೆಯ ಲೀಗ್‌ ಪಂದ್ಯದಲ್ಲಿ ಫಫ್ ಡುಪ್ಲೆಸಿ ಬಳಗವು, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಎದುರು ಅಮೋಘ ಜಯದೊಂದಿಗೆ ಪ್ಲೇ ಆಫ್‌ ಪ್ರವೇಶಿಸಿತ್ತು. 

ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ದೊಂದಿಗೆ ಪ್ಲೇ ಆಫ್‌ಗೆ ಪ್ರವೇಶ ಪಡೆದಿದ್ದ ಬೆಂಗಳೂರು ಬಳಗದ ಓಟಕ್ಕೆ ತಡೆ ಬಿತ್ತು. ಗೆಲುವಿನ ಸಂಭ್ರಮ ಆಚರಿಸುವ ಸಿದ್ಧತೆ ಯಲ್ಲಿದ್ದ ಅಭಿಮಾನಿ ಬಳಗವು ನಿರಾಶೆಯ ಮೌನಕ್ಕೆ ಜಾರಿತು. ಆದರೆ ಯೋಜನಾಬದ್ಧವಾಗಿ ಆಡಿದ ಸಂಜು ಬಳಗವು ಗೆದ್ದಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿ ಕೊಂಡ ರಾಜಸ್ಥಾನ ತಂಡದ ಬೌಲರ್‌ಗಳು ಆರ್‌ಸಿಬಿ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿ ದರು. ಇದರಿಂದಾಗಿ ಫಫ್  ಬಳಗವು 20 ಓವರ್‌
ಗಳಲ್ಲಿ 8 ವಿಕೆಟ್‌ಗಳಿಗೆ 172 ರನ್‌ ಗಳಿಸಿತು. 

ವೇಗಿ ಟ್ರೆಂಟ್ ಬೌಲ್ಟ್ (16ಕ್ಕೆ1), ಆವೇಶ್ ಖಾನ್ (44ಕ್ಕೆ3) ಹಾಗೂ ಸ್ಪಿನ್ನರ್ ಆರ್‌ ಅಶ್ವಿನ್ (19ಕ್ಕೆ2) ಅವರು ಆರ್‌ಸಿಬಿ ಬ್ಯಾಟರ್‌ಗಳಿಗೆ ಅಡ್ಡಿಯಾದರು. ಈ ನಡುವೆಯೂ ಮಿಂಚಿದ ವಿರಾಟ್ ಕೊಹ್ಲಿ  (33;24ಎ),   ರಜತ್ ಪಾಟೀದಾರ್ (34; 22ಎ) ಮತ್ತು ಮಹಿಪಾಲ್ ಲೊಮ್ರೊರ್ (32; 17ಎ) ತಂಡವು ಹೋರಾಟದ ಮೊತ್ತ ಗಳಿಸಲು ಕಾಣಿಕೆ ನೀಡಿದರು. ಆದರೆ, ಖಾತೆ ತೆರೆಯದ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ದಿನೇಶ್ ಕಾರ್ತಿಕ್ (11;13ಎ) ಅವರ ವೈಫಲ್ಯದಿಂದಾಗಿ ಆರ್‌ಸಿಬಿ
ದೊಡ್ಡ  ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. 

ಗುರಿ ಬೆನ್ನಟ್ಟಿದ ರಾಜಸ್ಥಾನಕ್ಕೆ   ಯಶಸ್ವಿ ಜೈಸ್ವಾಲ್ (45; 30ಎ) ಉತ್ತಮ ಆರಂಭ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ರಿಯಾನ್ ಪರಾಗ್ (36; 26ಎ, 4X2, 6X2) ಹಾಗೂ ಶಿಮ್ರೊನ್ ಹೆಟ್ಮೆಯರ್ (26; 14ಎ) ತಂಡದ ಹೋರಾಟಕ್ಕೆ ಬಲ ತುಂಬಿದರು.  

ಭರವಸೆ ಮೂಡಿಸಿದ್ದ ಸಿರಾಜ್: ಕೊನೆಯ 3 ಓವರ್‌ಗಳಲ್ಲಿ ರಾಜಸ್ಥಾನ ತಂಡದ ಗೆಲುವಿಗೆ 18 ರನ್‌ಗಳ ಅಗತ್ಯವಿತ್ತು. ರಿಯಾನ್ ಮತ್ತು ಹೆಟ್ಮೆಯರ್ ಕ್ರೀಸ್‌ನಲ್ಲಿದ್ದ ಕಾರಣಕ್ಕೆ ಇದೇನೂ ಕಠಿಣವೇನಾಗಿರಲಿಲ್ಲ. ಆದರೆ 18ನೇ ಓವರ್‌ ಬೌಲಿಂಗ್ ಮಾಡಿದ ಸಿರಾಜ್ ಎರಡನೇ ಎಸೆತದಲ್ಲಿಯೇ ರಿಯಾನ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದರು. ಕೊನೆಯ ಎಸೆತದಲ್ಲಿ ಡುಪ್ಲೆಸಿ ಓಡಿ ಹೋಗಿ ಪಡೆದ ಆಕರ್ಷಕ ಕ್ಯಾಚ್‌ಗೆ ಹೆಟ್ಮೆಯರ್ ಔಟಾದರು. ಇದರಿಂದಾಗಿ ಆರ್‌ಸಿಬಿ ಪಾಳೆಯದಲ್ಲಿ ಗೆಲುವಿನ ಆಸೆ ಮತ್ತೆ ಚಿಗುರಿತ್ತು. 

ಆದರೆ ಲಾಕಿ ಫರ್ಗ್ಯುಸನ್ ಹಾಕಿದ 19ನೇ ಓವರ್‌ನಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಎತ್ತಿದ ರೋವ್ಮನ್ ಪೊವೆಲ್ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು.  ತಂಡವು 19 ಓವರ್‌ಗಳಿಗೆ 6 ವಿಕೆಟ್‌ಗೆ 174 ರನ್‌ ಗಳಿಸಿತು.

ಆರ್‌ಸಿಬಿ ತಂಡದ ಬ್ಯಾಟಿಂಗ್‌ ವೇಳೆ ಪೊವೆಲ್ ಫೀಲ್ಡಿಂಗ್‌ನಲ್ಲಿಯೂ ಮಿಂಚಿದ್ದರು. ಬೌಂಡರಿಗೆರೆಯ ಬಳಿ ಚುರುಕಾಗಿದ್ದ ಅವರು ನಾಲ್ಕು ಕ್ಯಾಚ್‌ಗಳನ್ನು ಪಡೆದಿದ್ದರು.

ವಿರಾಟ್‌ ಕೊಹ್ಲಿ 8000 ರನ್
ವಿರಾಟ್ ಕೊಹ್ಲಿ ಅವರು ಐಪಿಎಲ್ ಟೂರ್ನಿಯಲ್ಲಿ 8000 ರನ್ ಗಳಿಸಿದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಶಿಖರ್ ಧವನ್ ಅವರು (6769) ಅವರು ಎರಡನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ 244 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿ ದ್ದಾರೆ. ಇದರಲ್ಲಿ 8 ಶತಕಗಳು ಹಾಗೂ 55 ಅರ್ಧಶತಕಗಳು ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT