ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: DC vs SRH– ಸನ್‌ರೈಸರ್ಸ್‌ಗೆ ಮಣಿದ ಕ್ಯಾಪಿಟಲ್ಸ್‌

ಹೈದರಾಬಾದ್‌ ತಂಡದಿಂದ ಮತ್ತೊಮ್ಮೆ ರನ್‌ ಪ್ರವಾಹ: ಟ್ರಾವಿಸ್ ಹೆಡ್–ಅಭಿಷೇಕ್ ಶರ್ಮಾ ಮಿಂಚಿನ ಬ್ಯಾಟಿಂಗ್
Published 20 ಏಪ್ರಿಲ್ 2024, 18:40 IST
Last Updated 20 ಏಪ್ರಿಲ್ 2024, 18:40 IST
ಅಕ್ಷರ ಗಾತ್ರ

ನವದೆಹಲಿ: ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಬ್ಯಾಟರ್‌ಗಳು ಮತ್ತೊಮ್ಮೆ ಹರಿಸಿದ ರನ್‌ ಪ್ರವಾಹಕ್ಕೆ ಉತ್ತರವಾಗಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಆರಂಭದಲ್ಲಿ ಹೋರಾಟ ನೀಡುವಂತೆ ಕಂಡಿತು. ಆದರೆ, ಆತಿಥೇಯ ತಂಡದ ಓಟಕ್ಕೆ ಬೌಲರ್‌ಗಳು ಕಡಿವಾಣ ಹಾಕಿ 67 ರನ್‌ಗಳ ಗೆಲುವು ತಂದುಕೊಟ್ಟರು.

ಶನಿವಾರ ರಾತ್ರಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ ಪಂದ್ಯದಲ್ಲಿ ಆರಂಭಿಕ ಜೋಡಿ ಟ್ರಾವಿಸ್ ಹೆಡ್ (89; 32ಎ, 4X11, 6X6) ಮತ್ತು ಅಭಿಷೇಕ್ ಶರ್ಮಾ (46; 12ಎ, 4X2, 6X6) ಅವರ ಸ್ಫೋಟಕ ಶೈಲಿಯ ಬ್ಯಾಟಿಂಗ್‌ ರಂಗೇರಿತು. ಪವರ್‌ ಪ್ಲೇ ಓವರ್‌ಗಳಲ್ಲಿಯೇ ದಾಖಲೆಯ 125 ರನ್‌ ಕಲೆಹಾಕಿದರು. ಅವರ ಬಿರುಸಿನ ಆಟದ ಬಲದಿಂದ ಹೈದರಾಬಾದ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 266 ರನ್ ಗಳಿಸಿತು.

ಈ ಬೃಹತ್‌ ಗುರಿಯನ್ನು ಬೆನ್ನತ್ತಿದ ಡೆಲ್ಲಿ ತಂಡಕ್ಕೆ ಎದುರಾಳಿ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದರು. ಆರಂಭಿಕ ಓವರ್‌ನಲ್ಲಿ ಸತತ ನಾಲ್ಕು ಬೌಂಡರಿ ಬಾರಿಸಿದ ಪೃಥ್ವಿ ಶಾ (16; 5ಎ) ಮತ್ತು ಡೇವಿಡ್‌ ವಾರ್ಡರ್‌ (0) ಬೇಗನೇ ನಿರ್ಗಮಿಸಿದರು. ನಂತರದಲ್ಲಿ ಜೇಕ್‌ ಫ್ರೇಸರ್‌ ಮೆಕ್‌ಗುರ್ಕ್‌ (65; 18ಎ, 4x5, 6x7) ಮತ್ತು (ಅಭಿಷೇಕ್ ಪೊರೆಲ್‌ (42; 22ಎ, 4x7, 6x1) ಸ್ಫೋಟಕ ಬ್ಯಾಟಿಂಗ್‌ ನಡೆಸಿ ಮೂರನೇ ವಿಕೆಟ್‌ಗೆ 80 ರನ್‌ (30ಎ) ಸೇರಿಸಿದರು. ಹೀಗಾಗಿ, ಪವರ್‌ಪ್ಲೇ ಅವಧಿಯಲ್ಲಿ 88 ರನ್‌ಗಳು ಹರಿದುಬಂದವು. 

ಅವರು ನಿರ್ಗಮಿಸಿದ ನಂತರ ನಾಯಕ ರಿಷಭ್‌ ಪಂತ್‌ (44; 35ಎ, 4x5, 6x1) ಕೊಂಚ ಹೋರಾಟ ತೋರಿದರು. ಉಳಿದಂತೆ ಟಿಸ್ಟನ್‌ ಸ್ಟಬ್ಸ್‌ (10), ಲಿಖಿತ್‌ ಯಾದವ್‌ (7), ಅಕ್ಷರ್‌ ಪಟೇಲ್‌ (6) ನಿರಾಸೆ ಅನುಭವಿಸಿದರು. ತಂಡವು 19.1 ಓವರ್‌ಗಳಲ್ಲಿ 199 ರನ್‌ಗೆ ಕುಸಿಯಿತು. ಟಿ. ನಟರಾಜನ್‌ ನಾಲ್ಕು ವಿಕೆಟ್ ಪಡೆದರೆ, ಮಯಂಕ್‌ ಮಾರ್ಕಂಡೆ ಮತ್ತು ನಿತೀಶ್ ಕುಮಾರ್ ರೆಡ್ಡಿ ತಲಾ ಎರಡು ವಿಕೆಟ್‌ ಪಡೆದರು.

ಈ ಗೆಲುವಿನೊಂದಿಗೆ ಹೈದರಾಬಾದ್‌ ತಂಡವು 10 ಅಂಕಗಳೊಂದಿಗೆ ಪಾಯಿಂಟ್‌ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆಯಿತು. ಡೆಲ್ಲಿ ತಂಡವು 6ರಿಂದ 7ನೇ ಸ್ಥಾನಕ್ಕೆ ಕುಸಿಯಿತು.

ಇದಕ್ಕೂ ಮೊದಲು ಟಾಸ್ ಗೆದ್ದ ಡೆಲ್ಲಿ ತಂಡದ ನಾಯಕ ರಿಷಭ್ ಪಂತ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಅವರ ನಿರ್ಧಾರ ತಪ್ಪು ಎಂಬುದನ್ನು ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ತೋರಿಸಿಕೊಟ್ಟರು. ಮೊದಲ 3 ಓವರ್‌ಗಳಲ್ಲಿಯೇ ತಂಡದ ಮೊತ್ತವು 62 ರನ್‌ಗಳಾಯಿತು. ಅದರಲ್ಲಿ ಹೆಡ್ 16 ಎಸೆತಗಳಲ್ಲಿ 54 ರನ್‌ ಗಳಿಸಿದರು. ಅದರಲ್ಲಿ ಏಳು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಬಾರಿಸಿದರು. ಅಭಿಷೇಕ್ 2 ಎಸೆತಗಳಲ್ಲಿ 8 ರನ್ ಗಳಿಸಿದ್ದರು. 

ಅವರ ಆಟದ ರಭಸಕ್ಕೆ ಎಡಗೈ ವೇಗಿ ಖಲೀಲ್ ಅಹಮದ್, ಲಲಿತ್ ಯಾದವ್ ಮತ್ತು ಹೆನ್ರಿಚ್ ನಾಕಿಯಾ ಕನಲಿ ಹೋದರು. ನಂತರದ ಮೂರು ಓವರ್‌ಗಳಲ್ಲಿ ಹೆಡ್ ಜೊತೆಗೆ ಅಭಿಷೇಕ್ ಕೂಡ ಅಬ್ಬರಿಸಿದರು. ಐದು ಓವರ್‌ಗಳಲ್ಲಿಯೇ ತಂಡವು ಶತಕದ ಗಡಿ ದಾಟಿತು. 

ಮುಂಬೈ ಎದುರಿನ ಪಂದ್ಯದಲ್ಲಿ 16 ಎಸೆತಗಳಲ್ಲಿ ಅರ್ಧಶತಕ ಹೊಡೆದಿದ್ದ ಅಭಿಷೇಕ್ ಇಲ್ಲಿ 12 ಎಸೆತಗಳಲ್ಲಿ 46 ರನ್‌ ಗಳಿಸಿದರು.  ಮುಂದಡಿಯಿಟ್ಟು ಸಿಕ್ಸರ್‌ಗಳನ್ನು ಸಿಡಿಸಿದರು. ಇವರಿಬ್ಬರ ಆಟದ ಭರಾಟೆ ನೋಡಿದರೆ ತಂಡವು 300 ರನ್‌ಗಳ ಮೊತ್ತದ ಗಡಿ ದಾಟಿ ದಾಖಲೆ ಬರೆಯುವ ಸಾಧ್ಯತೆ ಇತ್ತು. 

ಕುಲದೀಪ್–ಅಕ್ಷರ್ ಸ್ಪಿನ್: ಆದರೆ ಡೆಲ್ಲಿ ತಂಡದ ಎಡಗೈ ಸ್ಪಿನ್ ಜೋಡಿ ಕುಲದೀಪ್ ಯಾದವ್ (55ಕ್ಕೆ4) ಮತ್ತು ಅಕ್ಷರ್ ಪಟೇಲ್ (29ಕ್ಕೆ1) ಸನ್‌ರೈಸರ್ಸ್‌ ಓಟಕ್ಕೆ ತಡೆಯೊಡ್ಡಿದರು.  ಏಳನೇ ಓವರ್‌ನಲ್ಲಿ ಕುಲದೀಪ್ ಯಾದವ್ ಎಸೆತವನ್ನು ಹೊಡೆಯುವ ಭರದಲ್ಲಿ ಅಕ್ಷರ್ ಪಟೇಲ್‌ಗೆ ಕ್ಯಾಚಿತ್ತರು. ಅದೇ ಓವರ್‌ನಲ್ಲಿ ಏಡನ್ ಮರ್ಕರಂ (1 ರನ್) ಕೂಡ ಅಕ್ಷರ್‌ಗೆ ಕ್ಯಾಚಿತ್ತರು. 

ಎರಡು ಸಿಕ್ಸರ್ ಹೊಡೆದ ಹೆನ್ರಿಚ್ ಕ್ಲಾಸೆನ್ (15; 8ಎ) ಅವರನ್ನು ಅಕ್ಷರ್ ಕ್ಲೀನ್‌ ಬೌಲ್ಡ್ ಮಾಡಿದರು. ಇನ್ನೊಂದು ಬದಿಯಲ್ಲಿದ್ದ ಹೆಡ್ ಅವರೊಂದಿಗೆ ಸೇರಿದ ನಿತೀಶ್ ರೆಡ್ಡಿ (37; 27ಎ) ಅವರು  ಐದನೇ ವಿಕೆಟ್ ಜೊತೆಯಾಟದಲ್ಲಿ 67 ರನ್‌ ಸೇರಿಸಿದರು. ಟೂರ್ನಿಯಲ್ಲಿ
ಎರಡನೇ ಶತಕ ಗಳಿಸುವ ಹಾದಿಯಲ್ಲಿದ್ದ ಹೆಡ್ ಅವರ ಆಟಕ್ಕೆ ಕುಲದೀಪ್ ತಡೆಯೊಡ್ಡಿದರು. ಟ್ರಿಸ್ಟನ್ ಸ್ಟಬ್ಸ್ ಪಡೆದ ಕ್ಯಾಚ್‌ಗೆ ಹೆಡ್ ನಿರ್ಗಮಿಸಿದರು. 

ಶಾಬಾಜ್ ಮಿಂಚು: ಕೊನೆಯ ಹಂತದ ಓವರ್‌ಗಳಲ್ಲಿ ರನ್‌ ಗಳಿಸುವ ಹೊಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಶಾಬಾಜ್ ಅಹಮದ್ (ಔಟಾಗದೇ 59; 29ಎ, 4X2, 6X5) ತಂಡದ ಮೊತ್ತವನ್ನು ಹೆಚ್ಚಿಸಿದರು.  ಅವರೊಂದಿಗೆ ಅಬ್ದುಲ್ ಸಮದ್ (13) ಕೂಡ ಕಾಣಿಕೆ ನೀಡಿದರು. 

ಈ ಬಾರಿಯ ಟೂರ್ನಿಯಲ್ಲಿ ಸನ್‌ರೈಸರ್ಸ್ ತಂಡವು ಮೂರನೇ ಸಲ 250 ರನ್‌ಗಳಿಗಿಂತಲೂ ಹೆಚ್ಚಿನ ಮೊತ್ತ ಕಲೆಹಾಕಿತು. ಈ ಮೊದಲು ತಂಡವು ಆರ್‌ಸಿಬಿ ಎದುರು 3ಕ್ಕೆ287, ಮುಂಬೈ ಎದುರು 3ಕ್ಕೆ277 ರನ್‌ ಗಳಿಸಿ ದಾಖಲೆ ಬರೆದಿತ್ತು. 

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಸಂಭ್ರಮ  –ಎಎಫ್‌ಪಿ ಚಿತ್ರ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಸಂಭ್ರಮ  –ಎಎಫ್‌ಪಿ ಚಿತ್ರ
ಸನ್‌ರೈಸರ್ಸ್ ಹೈದರಾಬಾದ್ ತಂಡದ ಶಾಬಾಜ್ ಅಹಮದ್ ಅರ್ಧಶತಕ ಸಂಭ್ರಮ  –ಪಿಟಿಐ ಚಿತ್ರ
ಸನ್‌ರೈಸರ್ಸ್ ಹೈದರಾಬಾದ್ ತಂಡದ ಶಾಬಾಜ್ ಅಹಮದ್ ಅರ್ಧಶತಕ ಸಂಭ್ರಮ  –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT