ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ಹರಾಜು‌ ಇಂದು: ಕೊರೊನಾ ಕಾಲದಲ್ಲಿ ‘ಲಕ್ಷ್ಮೀ ಕಟಾಕ್ಷ’ದ ನಿರೀಕ್ಷೆ

ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿ; ಮ್ಯಾಕ್ಸ್‌ವೆಲ್ ಮೇಲೆ ಆರ್‌ಸಿಬಿ ಕಣ್ಣು
Last Updated 17 ಫೆಬ್ರುವರಿ 2021, 20:13 IST
ಅಕ್ಷರ ಗಾತ್ರ

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ 14ನೇ ಆವೃತ್ತಿಯಲ್ಲಿ ಆಡುವ ತಂಡಗಳ ಆಟಗಾರರ ಹರಾಜು ಪ್ರಕ್ರಿಯೆ ಗುರುವಾರ ನಡೆಯಲಿದೆ.

ಒಟ್ಟು 292 ಆಟಗಾರರು ಕಣದಲ್ಲಿದ್ದಾರೆ. ಎಂಟು ಫ್ರ್ಯಾಂಚೈಸಿಗಳು ತಮ್ಮ ತಂಡವನ್ನು ಬಲಿಷ್ಠಗೊಳಿಸಿಕೊಳ್ಳಲು ಘಟಾನುಘಟಿ ಆಟಗಾರರ ಮೇಲೆ ಕಣ್ಣಿಟ್ಟಿದ್ದಾರೆ. ಸ್ಫೋಟಕ ಶೈಲಿಯ ಬ್ಯಾಟ್ಸ್‌ಮನ್‌ಗಳು ಮತ್ತು ಮಧ್ಯಮವೇಗದ ಬೌಲರ್‌ಗಳಿಗೆ ಹೆಚ್ಚು ಮೌಲ್ಯ ದೊರೆಯುವ ಸಾಧ್ಯತೆ ಇದೆ.

ಅದರಲ್ಲಿ ಪ್ರಮುಖವಾಗಿ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್, ಇಂಗ್ಲೆಂಡ್‌ನ ಮೋಯಿನ್ ಅಲಿ, ಡೇವಿಡ್ ಮಲಾನ್ ಮತ್ತು ಕೇರಳ ರಾಜ್ಯ ತಂಡದ ಮೊಹಮ್ಮದ್ ಅಜರುದ್ದೀನ್‌ ಅವರಿಗೆ ಹೆಚ್ಚು ಬೇಡಿಕೆ ಕುದುರುವ ನಿರೀಕ್ಷೆ ಇದೆ.ಐಪಿಎಲ್‌ ಇತಿಹಾಸದಲ್ಲಿ ಒಂದು ಸಲವೂ ಕಪ್ ಗೆಲ್ಲದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಮತ್ತು ಹೋದ ವರ್ಷದ ಟೂರ್ನಿಯಲ್ಲಿ ಪ್ಲೇ ಆಫ್‌ ತಲುಪಲು ವಿಫಲವಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ತಂಡಗಳು ಗ್ಲೆನ್‌ ಮ್ಯಾಕ್ಸ್‌ವೆಲ್ ಅವರನ್ನು ಬುಟ್ಟಿಗೆ ಹಾಕಿಕೊಳ್ಳಲು ಪೈಪೋಟಿ ನಡೆಸುವ ಸಾಧ್ಯತೆಗಳು ಹೆಚ್ಚಿವೆ.

ಹೋದ ವರ್ಷ ಮ್ಯಾಕ್ಸ್‌ವೆಲ್ ಪಂಜಾಬ್ ಕಿಂಗ್ಸ್‌ ತಂಡದಲ್ಲಿ ಆಡಿದ್ದರು. ಒಟ್ಟು 82 ಪಂದ್ಯಗಳಲ್ಲಿ ಆಡಿರುವಅನುಭವಿಯಾಗಿದ್ದಾರೆ. ಆರ್‌ಸಿಬಿಯಲ್ಲಿ ಗರಿಷ್ಠ 11 ಸ್ಥಾನಗಳಿಗೆ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ತಂಡವು ₹ 35.4 ಕೋಟಿಯ ಪರ್ಸ್ ಹೊಂದಿದೆ. ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಗರಿಷ್ಠ ಮೂರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು. ತನ್ನ ಖಾತೆಯಲ್ಲಿ ₹ 10.75 ಕೋಟಿ ಉಳಿಸಿಕೊಂಡಿದೆ.

ಕನ್ನಡಿಗ ಅನಿಲ್ ಕುಂಬ್ಳೆ ಮುಖ್ಯ ಕೋಚ್ ಆಗಿರುವ ಪಂಜಾಬ್ ಕಿಂಗ್ಸ್ ತಂಡವು ಗರಿಷ್ಠ ಮೊತ್ತದ (₹53.20 ಕೋಟಿ) ಮಿತಿ ಹೊಂದಿದೆ. ಆದರೆ, ಒಂಬತ್ತು ಆಟಗಾರರನ್ನು ಮಾತ್ರ ಖರೀದಿಸಲು ಅವಕಾಶವಿದೆ. ಹೋದ ವರ್ಷ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಕೂಡ ಹರಾಜಿಗೆ ಲಭ್ಯವಿದ್ಧಾರೆ. ಟಿ20 ಕ್ರಿಕೆಟ್‌ನ ಅಗ್ರಶ್ರೇಯಾಂಕದ ಬ್ಯಾಟ್ಸ್‌ಮನ್ ಡೇವಿಡ್ ಮಲಾನ್ ಅವರನ್ನು ಖರೀದಿಸಲೂ ಹೆಚ್ಚಿನ ಸ್ಪರ್ಧೆ ನಡೆಯಬಹುದು. ಅವರು ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 150ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ತಂಡವು ಅನುಭವಿಗಳಿಗೆ ಮಣೆ ಹಾಕುವ ತನ್ನ ಸಂಪ್ರದಾಯವನ್ನು ಮುಂದುವರಿಸುವ ನಿರೀಕ್ಷೆ ಇದೆ. ಈಚೆಗೆ ಟ್ರೇಡ್‌ನಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪ ಅವರನ್ನು ತನ್ನ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.

ಹೋದ ವರ್ಷ ಭಾರತದಲ್ಲಿ ಕೊರೊನಾ ವೈರಸ್ ಪ್ರಸರಣ ಹೆಚ್ಚಾಗಿದ್ದ ಕಾರಣ ಐಪಿಎಲ್ ಅನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆಯೋಜಿಸಲಾಗಿತ್ತು. ಆದರೆ ಈ ಸಲ ಏಪ್ರಿಲ್–ಮೇ ನಲ್ಲಿ ಭಾರತದಲ್ಲಿಯೇ ಆಯೋಜಿಸಲು ಬಿಸಿಸಿಐ ಸಿದ್ಧತೆ ನಡೆಸಿದೆ. ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಆಕಾಂಕ್ಷಿಗಳು
ವಿದೇಶಿ ಆಟಗಾರರು: ಜೇಸನ್ ರಾಯ್ (ಇಂಗ್ಲೆಂಡ್), ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಆ್ಯರನ್ ಫಿಂಚ್ (ಆಸ್ಟ್ರೇಲಿಯಾ), ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ), ಲಿಯಾಮ್ ಪ್ಲಂಕೆಟ್(ಇಂಗ್ಲೆಂಡ್), ಶೆಲ್ಡನ್ ಕಾಟ್ರೆಲ್ (ವೆಸ್ಟ್ ಇಂಡೀಸ್), ಮುಸ್ತಫಿಜುರ್ ರೆಹಮಾನ್ (ಬಾಂಗ್ಲಾ), ಟಿಮ್ ಸೌಥಿ (ನ್ಯೂಜಿಲೆಂಡ್), ಮಾರ್ಕ್ ವುಡ್ (ಇಂಗ್ಲೆಂಡ್), ಅಲ್ಜರಿ ಜೋಸೆಫ್ (ವೆಸ್ಟ್ ಇಂಡೀಸ್), ಸ್ಯಾಮ್ ಬಿಲಿಂಗ್ಸ್ (ಇಂಗ್ಲೆಂಡ್), ಅಲೆಕ್ಸ್ ಕ್ಯಾರಿ (ಆಸ್ಟ್ರೇಲಿಯಾ), ಶಕೀಬ್ ಅಲ್ ಹಸನ್ (ಬಾಂಗ್ಲಾ), ಮೋಯಿನ್ ಅಲಿ (ಇಂಗ್ಲೆಂಡ್), ಕೈಲ್ ಜೆಮೀಸನ್ (ನ್ಯೂಜಿಲೆಂಡ್), ಡರೆನ್ ಬ್ರಾವೊ (ವಿಂಡೀಸ್), ಅಲೆಕ್ಸ್ ಹೇಲ್ಸ್‌(ಇಂಗ್ಲೆಂಡ್), ಶಾನ್ ಮಾರ್ಷ್ (ಆಸ್ಟ್ರೇಲಿಯಾ).

ಭಾರತದ ಆಟಗಾರರು: ಹರಭಜನ್‌ ಸಿಂಗ್, ಕೇದಾರ್ ಜಾಧವ್, ಮೊಹಮ್ಮದ್ ಅಜರುದ್ದೀನ್, ವಿಷ್ಣು ಸೋಳಂಕಿ, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ಕೃಷ್ಣಪ್ಪ ಗೌತಮ್, ಜೆ. ಸುಚಿತ್, ಉಮೇಶ್ ಯಾದವ್, ಪಿಯೂಷ್ ಚಾವ್ಲಾ, ಅರುಣ್ ಕಾರ್ತಿಕ್, ಕುಲದೀಪ್ ಯಾದವ್, ವಿಷ್ಣು ವಿನೋದ್, ಶಿವಂ ದುಬೆ, ಪವನ್ ನೇಗಿ, ಬಾಬಾ ಅಪರಾಜಿತ್, ಅರ್ಜುನ್ ತೆಂಡೂಲ್ಕರ್, ರಿಷಿ ಧವನ್, ಕುಲವಂತ್ ಖೆಜ್ರೋಲಿಯಾ, ಶಾರೂಕ್ ಖಾನ್.

ನೇರಪ್ರಸಾರ: ಸ್ಟಾರ್‌ ನೆಟ್‌ವರ್ಕ್‌
ಸಮಯ: ಮಧ್ಯಾಹ್ನ 2 ಗಂಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT