ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ರಾಜಸ್ಥಾನ್‌– ಮುಂಬೈಗೆ ಪ್ಲೇ ಆಫ್‌ ಕನಸು

ಸೋಲುವ ತಂಡಕ್ಕೆ ಪ್ಲೇ ಆಫ್ ಅವಕಾಶವಿಲ್ಲ; ಗೆಲ್ಲುವ ತಂಡಕ್ಕೆ ಉತ್ತಮ ರನ್‌ ರೇಟ್ ಕಾಯ್ದುಕೊಳ್ಳುವ ಸವಾಲು
Last Updated 4 ಅಕ್ಟೋಬರ್ 2021, 18:05 IST
ಅಕ್ಷರ ಗಾತ್ರ

ಶಾರ್ಜಾ: ದಿಢೀರ್ ಕುಸಿತ ಕಂಡಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ ಲಯಕ್ಕೆ ಮರಳುವ ಛಲದೊಂದಿಗೆ ಕಣಕ್ಕೆ ಇಳಿಯಲಿದೆ.

ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲಿದೆ. ಪ್ಲೇ ಆಫ್ ಹಂತದ ಕನಸು ಜೀವಂತವಾಗಿರಿಸಲು ಉಭಯ ತಂಡಗಳಿಗೂ ಈ ಪಂದ್ಯದಲ್ಲಿ ಜಯ ಅನಿವಾರ್ಯವಾಗಿದೆ. ಆದ್ದರಿಂದ ಜಿದ್ದಾಜಿದ್ದಿಯ ಪೈಪೋಟಿ ನಿರೀಕ್ಷಿಸಲಾಗಿದೆ.

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಪ್ರಶಸ್ತಿ ಗಳಿಕೆಯಲ್ಲಿಹ್ಯಾಟ್ರಿಕ್ ಸಾಧಿಸಿ ದಾಖಲೆ ಬರೆಯುವ ಗುರಿಯೊಂದಿಗೆ ಈ ಬಾರಿ ಟೂರ್ನಿಗೆ ಬಂದಿತ್ತು. ಮೊದಲ ಭಾಗದಲ್ಲಿ ಉತ್ತಮ ಸಾಮರ್ಥ್ಯ ತೋರಿತ್ತು. ಆದರೆ ಯುಎಇಯಲ್ಲಿ ನಡೆಯುತ್ತಿರುವ ಎರಡನೇ ಹಂತದ ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡುತ್ತಿದೆ.

‘ಹ್ಯಾಟ್ರಿಕ್’ ಸೋಲಿನ ನಂತರ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಸಮಾಧಾನಪಟ್ಟುಕೊಂಡಿದ್ದ ತಂಡಕ್ಕೆ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಘಾತ ನೀಡಿತ್ತು. ರಾಜಸ್ಥಾನ್ ರಾಯಲ್ಸ್ ಹಿಂದಿನ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಚೆನ್ನೈ ವಿರುದ್ಧ ಗೆಲುವು ದಾಖಲಿಸಿತ್ತು. 190 ರನ್‌ಗಳು ಗುರಿ ಬೆನ್ನತ್ತಿದ್ದ ತಂಡಕ್ಕೆ ಮುಂಬೈಕರ್‌ಗಳಾದ ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಏಳು ವಿಕೆಟ್‌ಗಳ ಜಯ ತಂದುಕೊಟ್ಟಿದ್ದರು.

ಭಾರಿ ಅಂತರದ ಜಯ ಅಗತ್ಯ

ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಲು ಎರಡೂ ತಂಡಗಳಿಗೆ ಉಳಿದಿರುವ ಎರಡೂ ಪಂದ್ಯಗಳಲ್ಲಿ ಜಯ ಅಗತ್ಯ. ಆದರೆ ರನ್ ರೇಟ್ ಕಡಿಮೆ ಇರುವುದರಿಂದ ಭಾರಿ ಅಂತರದಿಂದ ಜಯ ಗಳಿಸಲು ಉಭಯ ತಂಡಗಳು ಪ್ರಯತ್ನಿಸಲಿವೆ. ರಾಜಸ್ಥಾನ್ ಸದ್ಯ-0.337 ರನ್‌ ರೇಟ್ ಹೊಂದಿದ್ದು ಕಳೆದ ಪಂದ್ಯದಲ್ಲಿ ನೀರಸ ಬ್ಯಾಟಿಂಗ್ ಮಾಡಿದ್ದರಿಂದ ಮುಂಬೈನ ರನ್ ರೇಟ್ -0.453ಕ್ಕೆ ಕುಸಿದಿದೆ.

ಮಂಗಳವಾರದ ಪಂದ್ಯದಲ್ಲಿ ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದೆ. ಗೆಲ್ಲುವ ತಂಡ ಕೋಲ್ಕತ್ತ ನೈಟ್‌ ರೈಡರ್ಸ್‌ಗಿಂತ ಅಧಿಕ ರನ್‌ ರೇಟ್ ಹೊಂದಬೇಕಾಗಿದೆ. 14 ಪಾಯಿಂಟ್ ಗಳಿಸಿರುವ ಕೋಲ್ಕತ್ತ +0.294 ರನ್ ರೇಟ್ ಹೊಂದಿದೆ.

ಮಂಗಳವಾರದ ಪಂದ್ಯದಲ್ಲಿ ಮುಂಬೈ ಜಯ ಗಳಿಸಿ ಕೊನೆಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದರೂ ಹಾದಿ ಸುಗಮವಲ್ಲ. ಸನ್‌ರೈಸರ್ಸ್ ಎದುರಿನ ಕಳೆದ ಪಂದ್ಯದಲ್ಲಿ ಜಯ ಗಳಿಸಿದ್ದರಿಂದ ಕೋಲ್ಕತ್ತ ಈಗ ಸುಭದ್ರ ಸ್ಥಿತಿಯಲ್ಲಿದೆ. ರಾಜಸ್ಥಾನ್ ಎದುರಿನ ಕೊನೆಯ ಪಂದ್ಯದಲ್ಲಿ ಸೋತರೂ ತಂಡದ ಪ್ಲೇಆಫ್ ಆಸೆ ಜೀವಂತವಾಗಿಯೇ ಇರುತ್ತದೆ.

ಮುಂದಿನ ಎರಡೂ ಪಂದ್ಯಗಳಲ್ಲಿ ಭರ್ಜರಿ ರನ್‌ ರೇಟ್ ಕಾಯ್ದುಕೊಂಡು ಜಯ ಗಳಿಸುವ ಹೊಣೆ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್‌, ಕ್ವಿಂಟನ್ ಡಿ ಕಾಕ್ ಮತ್ತು ಕೀರನ್ ಪೊಲಾರ್ಡ್‌ ಅವರ ಮೇಲಿದೆ. ಮುಸ್ತಫಿಜುರ್ ರಹಮಾನ್, ಚೇತನ್ ಸಕಾರಿಯ ಮುಂತಾದವರನ್ನು ಒಳಗೊಂಡ ವೇಗದ ದಾಳಿಯನ್ನು ಮುಂಬೈ ಬ್ಯಾಟರ್‌ಗಳು ಮೀರಿ ನಿಲ್ಲುವರೇ ಎಂಬುದು ಕುತೂಹಲದ ವಿಷಯ.

ಸಜ್‌ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್‌, ರಾಹುಲ್ ಚಾಹರ್ ಅವರ ದಾಳಿಯನ್ನು ಸಮರ್ಥವಾಗಿ ಎದುರಿಸುವ ಸವಾಲು ರಾಜಸ್ಥಾನ್ ರಾಯಲ್ಸ್‌ನ ಯಶಸ್ವಿ ಜೈಸ್ವಾಲ್‌, ಎವಿನ್ ಲೂಯಿಸ್‌ ಮತ್ತಿತರರಿಗೆ ಇದೆ.

ಮುಖಾಮುಖಿ

ಪಂದ್ಯಗಳು 24

ಮುಂಬೈ ಗೆಲುವು 12

ರಾಜಸ್ಥಾನ್ ಜಯ 11

ಫಲಿತಾಂಶವಿಲ್ಲ 1

ಮುಖಾಮುಖಿಯಲ್ಲಿ ಗರಿಷ್ಠ ಮೊತ್ತ

ಮುಂಬೈ 212

ರಾಜಸ್ಥಾನ್ 208

ಮುಖಾಮುಖಿಯಲ್ಲಿ ಕನಿಷ್ಠ ಮೊತ್ತ

ರಾಜಸ್ಥಾನ್ 103

ಮುಂಬೈ 92

ಪಂದ್ಯ ಆರಂಭ: 70.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ಆರ್‌ಸಿಬಿಯಲ್ಲಿ ಲಯ ಕಂಡೆ: ಮ್ಯಾಕ್ಸ್‌ವೆಲ್‌

ದುಬೈ:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ ನಂತರ ಟಿ20 ಕ್ರಿಕೆಟ್‌ನಲ್ಲಿ ಲಯ ಕಂಡುಕೊಂಡಿರುವುದಾಗಿ ಸ್ಫೋಟಕ ಶೈಲಿಯ ಬ್ಯಾಟರ್ ಆಸ್ಟ್ರೇಲಿಯಾದ ಗ್ಲೆನ್‌ ಮ್ಯಾಕ್ಸ್‌ವೆಲ್ ಅಭಿಪ್ರಾಯಪಟ್ಟಿದ್ದಾರೆ.

ಸತತ ಮೂರು ಪಂದ್ಯಗಳಲ್ಲಿ ಅರ್ಧಶತಕಗಳನ್ನು ಗಳಿಸಿದ್ದ ಮ್ಯಾಕ್ಸ್‌ವೆಲ್‌ ಅವರು ಬೆಂಗಳೂರು ತಂಡದ ಪ್ಲೇ ಆಫ್ ಹಾದಿಯನ್ನು ಸುಗಮಗೊಳಿಸಿದ್ದರು. ಇನ್ನೂ ಒಂದು ಪಂದ್ಯ ಉಳಿದಿರುವಂತೆಯೇ ತಂಡ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ 33 ಎಸೆತಗಳಲ್ಲಿ 57 ರನ್ ಗಳಿಸಿದ್ದರು.

‘ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ಅಷ್ಟು ಸುಲಭವಲ್ಲ. ಆದರೆ ಬೆಂಗಳೂರು ತಂಡದಲ್ಲಿ ಆರಂಭಿಕ ಬ್ಯಾಟರ್‌ಗಳು ಉತ್ತಮ ಅಡಿಪಾಯ ಹಾಕಿಕೊಡುತ್ತಿರುವುದರಿಂದ ನನ್ನ ಮೇಲೆ ಒತ್ತಡ ಇರುವುದಿಲ್ಲ’ ಎಂದು ಪಂಜಾಬ್ ಕಿಂಗ್ಸ್ ತಂಡದಿಂದ ಬಂದಿರುವ ಮ್ಯಾಕ್ಸ್‌ವೆಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT