ಮಂಗಳವಾರ, ನವೆಂಬರ್ 24, 2020
25 °C

IPL-2020: RCB vs MI: ಬೆಂಗಳೂರಿಗೆ ಮುಂಬೈ ಪೆಟ್ಟು

ಪಿಟಿಐ Updated:

ಅಕ್ಷರ ಗಾತ್ರ : | |

ಅಬುಧಾಬಿ: ಸಾಧಾರಣ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೆಡವಿದ ಮುಂಬೈ ಇಂಡಿಯನ್ಸ್ ಸುಲಭವಾಗಿ ಗುರಿ ಬೆನ್ನತ್ತಿ ಅಮೋಘ ಜಯ ಸಾಧಿಸಿತು.

ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಜಸ್‌ಪ್ರೀತ್ ಬೂಮ್ರಾ ಅವರ ಪರಿಣಾಮಕಾರಿ ಬೌಲಿಂಗ್ ಮತ್ತು ಸೂರ್ಯಕುಮಾರ್ ಯಾದವ್ (ಔಟಾಗದೆ 79; 43 ಎಸೆತ, 10 ಬೌಂಡರಿ, 3 ಸಿಕ್ಸರ್) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮುಂಬೈ ಐದು ವಿಕೆಟ್‌ಗಳ ಗೆಲುವು ಸಾಧಿಸಿತು. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ಎದುರಾಳಿಯನ್ನು 164 ರನ್‌ಗಳಿಗೆ ನಿಯಂತ್ರಿಸಿತು. ಗುರಿ ಬೆನ್ನತ್ತಿದ ತಂಡಕ್ಕೆ ಕ್ವಿಂಟನ್ ಡಿಕಾಕ್ ಮತ್ತು ಇಶಾನ್ ಕಿಶನ್ ಉತ್ತಮ ಅಡಿಪಾಯ ಹಾಕಿಕೊಟ್ಟರು.

ಕ್ವಿಂಟನ್ ವಿಕೆಟ್ ಕಬಳಿಸಿ ಈ ಜೊತೆಯಾಟವನ್ನು ಮೊಹಮ್ಮದ್ ಸಿರಾಜ್ ಮುರಿದರು. ಇಶಾನ್ ಅವರನ್ನು ಯಜುವೇಂದ್ರ ಚಾಹಲ್ ಔಟ್ ಮಾಡಿದರು. ಸೌರಭ್ ತಿವಾರಿ ವಿಕೆಟ್ ಕೂಡ ಸಿರಾಜ್ ಪಾಲಾಯಿತು. ನಂತರ ಸೂರ್ಯಕುಮಾರ್‌ಗೆ ಕೃಣಾಲ್ ಪಾಂಡ್ಯ ಮತ್ತು ಹಾರ್ದಿಕ್ ಪಾಂಡ್ಯ ಉತ್ತಮ ಸಹಕಾರ ನೀಡಿದರು.

ದೇವದತ್ತಗೆ ಅರ್ಧಶತಕ; ಬೂಮ್ರಾಗೆ ‘ಶತಕ’: ರಾಯಲ್ ಚಾಲೆಂಜರ್ಸ್‌ ಹೋರಾಟದ ಮೊತ್ತ ಕಲೆಹಾಕಲು ಬೆಂಗಳೂರು ಹುಡುಗ ದೇವದತ್ತ ಪಡಿಕ್ಕಲ್ ಅವರ ಸುಂದರ ಅರ್ಧಶತಕ ನೆರವಾಯಿತು.

ದೇವದತ್ತ (74; 45ಎ, 12ಬೌಂ, 1ಸಿ) ಮತ್ತು ಜೋಶ್ ಫಿಲಿಪ್ (33; 24ಎ, 4ಬೌಂ, 1ಸಿ) ಮೊದಲ ವಿಕೆಟ್‌ಗೆ 71 ರನ್‌ ಸೇರಿಸಿದರು. ಆದರೆ ಇದರ ಸದುಪಯೋಗ ಪಡೆದುಕೊಂಡು ದೊಡ್ಡ ಮೊತ್ತ ಗಳಿಸುವ ಬೆಂಗಳೂರಿನ ಆಸೆಗೆ ಜಸ್‌ಪ್ರೀತ್ ಬೂಮ್ರಾ ಅಡ್ಡಿಯಾದರು.

ಇನಿಂಗ್ಸ್‌ನ ಕೊನೆಯ ಐದು ಓವರ್‌ಗಳಲ್ಲಿ ಬೆಂಗಳೂರಿನ ನಾಲ್ಕು ವಿಕೆಟ್‌ಗಳು ಪತನವಾದವು. ಅದರಲ್ಲಿ ಎರಡನ್ನು ಬೂಮ್ರಾ ಕಬಳಿಸಿದರು. ಈ ಓವರ್‌ಗಳಲ್ಲಿ ಕೇವಲ 35 ರನ್‌ಗಳು ಮಾತ್ರ ಗಳಿಕೆಯಾದವು.

ಆ್ಯರನ್ ಫಿಂಚ್ ಬದಲಿಗೆ ಸ್ಥಾನ ಪಡೆದ ಜೋಶ್ ಫಿಲಿಪ್ ಅವರು ದೇವದತ್ತ ಜೊತೆಗೂಡಿ ಉತ್ತಮವಾಗಿ ಬ್ಯಾಟ್ ಬೀಸಿದರು. ಇವರಿಬ್ಬರೂ ಕ್ರೀಸ್‌ನಲ್ಲಿರುವವರೆಗೂ ಪ್ರತಿ ಓವರ್‌ಗೆ ಸರಾಸರಿ ಹತ್ತು ರನ್‌ಗಳು ಹರಿದುಬಂದವು.

ಸ್ಪಿನ್ನರ್ ರಾಹುಲ್ ಚಾಹರ್ ಎಂಟನೇ ಓವರ್‌ನಲ್ಲಿ ಫಿಲಿಪ್ ವಿಕೆಟ್ ಗಳಿಸಿ ಜೊತೆಯಾಟ ಮುರಿದರು. ದೇವದತ್ತ ತಮ್ಮ ಆಟವನ್ನು ಮತ್ತಷ್ಟು ಬಿರುಸುಗೊಳಿಸಿ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಟೂರ್ನಿಯಲ್ಲಿ ಇದು ಅವರ ನಾಲ್ಕನೇ ಅರ್ಧಶತಕ. 

ಇನ್ನೊಂದು ಬದಿಯಲ್ಲಿದ್ದ ವಿರಾಟ್ ಕೊಹ್ಲಿ ನಿಧಾನವಾಗಿ ಆಡಿದರು. 12ನೇ ಓವರ್‌ನಲ್ಲಿ ಬೂಮ್ರಾ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ಕೊಹ್ಲಿ ಫೀಲ್ಡರ್ ಸೌರಭ್ ತಿವಾರಿಗೆ ಕ್ಯಾಚಿತ್ತರು. ಇದರೊಂದಿಗೆ ಬೂಮ್ರಾ ಐಪಿಎಲ್‌ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದರು. ಒಂದು ಬೌಂಡರಿ ಮತ್ತು ಸಿಕ್ಸರ್ ಬಾರಿಸಿದ ಎಬಿ ಡಿವಿಲಿಯರ್ಸ್ ಮುಂಬೈ ಬಳಗದಲ್ಲಿ ನಡುಕ ಮೂಡಿಸಿದರು. ಆದರೆ, ಕೀರನ್ ಪೊಲಾರ್ಡ್ ಬೌಲಿಂಗ್‌ನಲ್ಲಿ ಎಬಿಡಿ ಔಟಾದರು. ಕೊನೆಯ ಹಂತದ ಸ್ಪೆಲ್ ಮಾಡಲು ಚೆಂಡು ಪಡೆದ ಬೂಮ್ರಾ 17ನೇ ಓವರ್‌ನಲ್ಲಿ ದೇವದತ್ತ ಮತ್ತು ಶಿವಂ ದುಬೆ ಇಬ್ಬರನ್ನೂ ಪೆವಿಲಿಯನ್‌ಗೆ ಕಳಿಸಿದರು. ಗುರುಕೀರತ್ ಸಿಂಗ್ ಮತ್ತು ವಾಷಿಂಗ್ಟನ್ ಸುಂದರ್ ಸ್ಕೋರ್ ಹೆಚ್ಚಿಸುವ ಪ್ರಯತ್ನ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು