ಮಂಗಳವಾರ, ಅಕ್ಟೋಬರ್ 20, 2020
25 °C
ರಾಜಸ್ಥಾನ್ ರಾಯಲ್ಸ್‌ ತಂಡಕ್ಕೆ 175 ರನ್‌ಗಳ ಗುರಿ

ಕೆಕೆಆರ್‌ಗೆ ಗಿಲ್ ಆಸರೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಮೂರು ರನ್‌ಗಳ  ಅಂತರದಿಂದ ಅರ್ಧಶತಕ ತಪ್ಪಿಸಿಕೊಂಡ ಶುಭಮನ್ ಗಿಲ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ಏಯಾನ್ ಮಾರ್ಗನ್ ಆಟದಿಂದಾಗಿ ಕೋಲ್ಕತ್ತ ನೈಟ್ ರೈಡರ್ಸ್‌ ತಂಡವು ಹೋರಾಟದ ಮೊತ್ತ ಗಳಿಸಲು ಸಾಧ್ಯವಾಯಿತು.

ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.  ಆರಂಭಿಕ ಬ್ಯಾಟ್ಸ್‌ಮನ್ ಗಿಲ್ (47; 34ಎಸೆತ, 5ಬೌಂಡರಿ,  1ಸಿಕ್ಸರ್) ಮತ್ತು ಮಾರ್ಗನ್ (ಔಟಾಗದೆ 34; 23ಎ, 1ಬೌಂ, 2ಸಿ) ಅವರ  ಆಟದ ಬಲದಿಂದಾಗಿ ಕೆಕೆಆರ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 174 ರನ್ ಗಳಿಸಿತು.

ಗಿಲ್ ಮತ್ತು ಸುನೀಲ್ ನಾರಾಯಣ್ ಮೊದಲ ವಿಕೆಟ್‌ಗೆ 36 ರನ್‌ ಗಳಿಸಿ ಉತ್ತಮ ಆರಂಭ ನೀಡಲು ಪ್ರಯತ್ನಿಸಿದರ.

ಈ ಜೊತೆಯಾಟವನ್ನು ಎಡಗೈ ಮಧ್ಯಮವೇಗಿ ಜಯದೇವ್ ಉನದ್ಕತ್ ಮುರಿದರು. ಚೆಂಡಿನ ಸ್ವಿಂಗ್‌ ಗುರುತಿಸುವಲ್ಲಿ ವಿಫಲರಾದ ಸುನೀಲ್ ಕ್ಲೀನ್‌ಬೌಲ್ಡ್ ಆದರು.

ಗಿಲ್ ಮತ್ತು ನಿತೀಶ್ ರಾಣಾ ಕೂಡಿ ಇನಿಂಗ್ಸ್‌ ಕಟ್ಟುವ ಪ್ರಯತ್ನ ಮಾಡಿದರು. ಹತ್ತನೇ ಓವರ್‌ನಲ್ಲಿ ರಾಹುಲ್ ತೆವಾಟಿಯಾ ಎಸೆತವನ್ನು ಅಂದಾಜಿಸುವಲ್ಲಿ ಎಡವಿದ ರಾಣಾ (22; 17ಎ) ರಿಯಾನ್‌ ಪರಾಗ್‌ಗೆ ಕ್ಯಾಚಿತ್ತರು. ಕ್ರೀಸ್‌ಗೆ ಬಂದ ಸ್ಫೋಟಕ ಬ್ಯಾಟ್ಸ್‌ಮನ್ ಆ್ಯಂಡ್ರೆ ರಸೆಲ್ (24;14ಎ) ಮೂರು ಸಿಕ್ಸರ್‌ ಸಿಡಿಸಿ ಬೌಲರ್‌ಗಳಿಗೆ ನಡುಕ ಹುಟ್ಟಿಸಿದರು.

ಆದರೆ ರಾಯಲ್ಸ್ ನಾಯಕ ಸ್ಟೀವನ್ ಸ್ಮಿತ್ ಎದೆಗುಂದಲಿಲ್ಲ. ಅದಕ್ಕೆ ತಕ್ಕಂತೆ ಜೋಫ್ರಾ ಆರ್ಚರ್ ತಮ್ಮ ನೇರ ಎಸೆತದಲ್ಲಿ ಗಿಲ್ ವಿಕೆಟ್ ಗಳಿಸಿದರು. ಹೋದ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ್ದ ಗಿಲ್‌ಗೆ ಇಲ್ಲಿ ಅದೃಷ್ಟ ಕೈಕೊಟ್ಟಿತು.

ನಾಯಕ ದಿನೇಶ್ ಕಾರ್ತಿಕ್ ಕೇವಲ ಒಂದು ರನ್ ಗಳಿಸಿ ಜೋಫ್ರಾ ಆರ್ಚರ್ ಬೌಲಿಂಗ್‌ನಲ್ಲಿ ಔಟ್ ಆದರು.  ಕೆಲವೇ ನಿಮಿಷಗಳ ನಂತರ ರಸೆಲ್‌ಗೆ ಅಂಕಿತ್ ರಜಪೂತ್ ಪೆವಿಲಿಯನ್ ದಾರಿ ತೋರಿಸಿದರು.

ಇದರಿಂದಾಗಿ ರನ್‌ ಗಳಿಕೆಯ ವೇಗ ಸ್ವಲ್ಪ ಕಡಿಮೆಯಾಯಿತು.

ಇಂಗ್ಲೆಂಡ್ ಬ್ಯಾಟ್ಸ್‌ಮನ್ ಮಾರ್ಗನ್ ಬಿರುಸಿನ ಬ್ಯಾಟಿಂಗ್ ಮಾಡಿದರು. ತಂಡದ ಮೊತ್ತವನ್ನು ಸಾಧ್ಯವಾದಷ್ಟು ಹೆಚ್ಚಿಸುವ ಪ್ರಯತ್ನ ಮಾಡಿದರು. ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು. ಪ್ಯಾಟ್ ಕಮಿನ್ಸ್‌ ಕೂಡ 12 ರನ್ ಗಳಿಸಿದರು.

ರಾಯಲ್ಸ್‌ನ ಏಳು ಮಂದಿ ಬೌಲಿಂಗ್ ಮಾಡಿದರು. ಕೆಕೆಅರ್ ಇನ್ನೂರರ ಗಡಿ ದಾಟದಂತೆ ತಡೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು