ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯನ ಆಟಕ್ಕೆ ಮನಸೋತ ವಿರಾಟ್

ಏಷ್ಯಾಕಪ್ ಟಿ20 ಕ್ರಿಕೆಟ್: ಸೂಪರ್ ಫೋರ್ ಹಂತಕ್ಕೆ ಭಾರತ, ಹಾಂಗ್‌ಕಾಂಗ್ ವಿರುದ್ಧ 40 ರನ್‌ಗಳ ಜಯ
Last Updated 1 ಸೆಪ್ಟೆಂಬರ್ 2022, 14:44 IST
ಅಕ್ಷರ ಗಾತ್ರ

ದುಬೈ: ಮುಂಬೈನ ಸೂರ್ಯಕುಮಾರ್ ಯಾದವ್ ಮಂಗಳವಾರ ಹಾಂಗ್‌ಕಾಂಗ್ ಎದುರಿನ ಪಂದ್ಯದಲ್ಲಿ ಸಿಡಿಸಿದ ಅರ್ಧ ಡಜನ್ ಸಿಕ್ಸರ್ ಹಾಗೂ ಬೌಂಡರಿಗಳ ಆಟಕ್ಕೆ ‘ರನ್‌ ಯಂತ್ರ’ ವಿರಾಟ್ ಕೊಹ್ಲಿ ಕೂಡ ಮನಸೋತರು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಹಾಂಗ್‌ಕಾಂಗ್ ತಂಡವು ಇನಿಂಗ್ಸ್‌ ಆರಂಭದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿತು. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬೇಗನೆ ಔಟ್ ಕೂಡ ಆದರು. ಕೆ.ಎಲ್. ರಾಹುಲ್ ಕೂಡ ವೇಗವಾಗಿ ಆಡದಂತೆ ಬೌಲರ್‌ಗಳು ನೋಡಿಕೊಂಡರು. ಆದರೆ, ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಮುರಿಯದ ಮೂರನೇ ವಿಕೆಟ್ ಜೊತೆಯಾಟದಲ್ಲಿ 98 ರನ್ ಸೇರಿಸಿದರು. ಇದರಲ್ಲಿ ಸೂರ್ಯ ಪಾಲು 68 ರನ್‌. ಅದರಿಂದಾಗಿ ಭಾರತ ತಂಡವು 192 ರನ್‌ಗಳ ಮೊತ್ತವನ್ನು ಗಳಿಸಿತು.

ಇನಿಂಗ್ಸ್‌ನ ಕೊನೆಯಲ್ಲಿ ವಿರಾಟ್ ಕೊಹ್ಲಿ ಅವರು ಸೂರ್ಯಕುಮಾರ್‌ ಮುಂದೆ ನಿಂತು ತಮ್ಮ ಎದೆ ಮೇಲೆ ಕೈಯಿಟ್ಟು ತಲೆ ಸ್ವಲ್ಪ ತಗ್ಗಿಸಿ ಅಭಿನಂದಿಸಿದರು. ವಿರಾಟ್ ಮೆಚ್ಚುಗೆಯಿಂದಾಗಿ ಸೂರ್ಯ ಪುಳಕಿತರಾದರು.

ಈ ಕುರಿತು ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಸೂರ್ಯ, ‘ವಿರಾಟ್‌ ನಡವಳಿಕೆಯು ಹೃದಯಸ್ಪರ್ಶಿಯಾಗಿತ್ತು. ನನಗೆ ಇದೊಂದು ಅನಿರೀಕ್ಷಿತ ಹಾಗೂ ಸಂತಸದ ಸಂಗತಿಯಾಗಿದೆ. ಪೆವಿಲಿಯನ್‌ಗೆ ಮರಳುವಾಗಲೂ ಅವರು ನನ್ನನ್ನು ಮುಂದೆ ಸಾಗಲು ಬಿಟ್ಟು ತಾವು ಹಿಂದುಳಿದರು. ಕೆಲವು ಕ್ಷಣಗಳ ನಂತರ ನನಗೆ ಇದರ ಅರಿವಾಯಿತು. ಮತ್ತೆ ಅವರ ಬಳಿ ಮರಳಿಹೋದೆ. ನನ್ನೊಂದಿಗೆ ಹೆಜ್ಜೆ ಹಾಕಲು ಕೇಳಿಕೊಂಡೆ’ ಎಂದರು.

‘ವಿರಾಟ್ ಜೊತೆಗೆ ಕ್ರೀಸ್‌ನಲ್ಲಿ ಬ್ಯಾಟಿಂಗ್ ಮಾಡಿದ್ದು ಅದ್ಭುತವಾದ ಅನುಭವ. ಅವರದ್ದು ಅಪಾರ ಅನುಭವ. ಕಡಿಮೆ ಟಿ20 ಪಂದ್ಯಗಳನ್ನು ಆಡಿರುವ ನನಗೆ ಅವರ ಮಾರ್ಗದರ್ಶನ ಉಪಯುಕ್ತವಾಯಿತು. ಅವರಂತಹ ಶ್ರೇಷ್ಠ ಬ್ಯಾಟರ್ ಪಿಚ್‌ನ ಇನ್ನೊಂದು ತುದಿಯಲ್ಲಿದ್ದ ಕಾರಣ ನನ್ನ ಆತ್ಮವಿಶ್ವಾಸ ದುಪ್ಪಟ್ಟಾಗಿತ್ತು’ ಎಂದು ವಿವರಿಸಿದರು.

ಸೂರ್ಯ 26 ಎಸೆತಗಳಲ್ಲಿ 68 ರನ್‌ ಗಳಿಸಿದರು. ವಿರಾಟ್ 44 ಎಸೆತಗಳಲ್ಲಿ 59 ರನ್‌ ಗಳಿಸಿದರು. ಇಬ್ಬರೂ ಅಜೇಯರಾಗುಳಿದರು.

ಗುರಿ ಬೆನ್ನಟ್ಟಿದ ಹಾಂಗ್‌ಕಾಂಗ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 152 ರನ್‌ ಗಳಿಸಿತು. 40 ರನ್‌ಗಳಿಂದ ಸೋತಿತು. ಭಾರತವು ಸೂಪರ್ ಫೋರ್ ಹಂತಕ್ಕೆ ತಲುಪಿತು.

ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 192 (ಕೆ.ಎಲ್. ರಾಹುಲ್ 36, ರೋಹಿತ್ ಶರ್ಮಾ 21, ವಿರಾಟ್ ಕೊಹ್ಲಿ ಔಟಾಗದೆ 59, ಸೂರ್ಯಕುಮಾರ್ ಯಾದವ್ ಔಟಾಗದೆ 68, ಆಯುಶ್ ಶುಕ್ಲಾ 29ಕ್ಕೆ1, ಮೊಹಮ್ಮದ್ ಘಜನ್‌ಫಾರ್ 19ಕ್ಕೆ1) ಹಾಂಗ್‌ಕಾಂಗ್: 20 ಓವರ್‌ಗಳಲ್ಲಿ 5ಕ್ಕೆ152 (ಬಾಬಾರ್ ಹಯಾತ್ 41, ಕಿಂಚಿತ್ ಶಾ 30, ಜಿಶನ್ ಅಲಿ ಔಟಾಗದೆ 26, ಸ್ಕಾಟ್ ಮಕೆನಿ ಔಟಾಗದೆ 16, ಭುವನೇಶ್ವರ್ ಕುಮಾರ್ 15ಕ್ಕೆ1, ಆರ್ಷದೀಪ್ ಸಿಂಗ್ 44ಕ್ಕೆ1, ರವೀಂದ್ರ ಜಡೇಜ 15ಕ್ಕೆ1, ಆವೇಶ್ ಖಾನ್ 53ಕ್ಕೆ1) ಫಲಿತಾಂಶ: ಭಾರತಕ್ಕೆ 40 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT