ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪಿಲ್‌ದೇವ್‌ಗೆ ಹೃದಯ ಶಸ್ತ್ರಚಿಕಿತ್ಸೆ

ಇನ್ನೊಂದೆರಡು ದಿನಗಳಲ್ಲಿ ಗುಣಮುಖರಾಗಿ ಮನೆಗೆ ಮರಳುವರು: ವ್ಯದ್ಯರು
Last Updated 23 ಅಕ್ಟೋಬರ್ 2020, 12:15 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರಿಗೆ ಶುಕ್ರವಾರ ಇಲ್ಲಿಯ ಫೋರ್ಟಿಸ್ ಎಸ್ಕಾರ್ಟ್ಸ್‌ ಆಸ್ಪತ್ರೆಯಲ್ಲಿ ಆ್ಯಂಜಿಯೊಪ್ಲಾಸ್ಟಿ ಚಿಕಿತ್ಸೆ ನೀಡಲಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ಗುರುವಾರ ಮಧ್ಯರಾತ್ರಿ ಕಪಿಲ್ ದೇವ್, ಹೃದಯಾಘಾತಕ್ಕೊಳಗಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

’ಕಪಿಲ್ ಅವರಿಗೆ ಹೃದಯಾಘಾತವಾಗಿತ್ತು. ಆದ್ದರಿಂದ ಅವರಿಗೆ ತುರ್ತಾಗಿ ಕೊರೊನರಿ ಆ್ಯಂಜಿಯೊಪ್ಲಾಸ್ಟಿ ಚಿಕಿತ್ಸೆ ನೀಡಲಾಗಿದೆ. ಡಾ. ಅತುಲ್ ಮಾಥುರ್ ನೇತೃತ್ವದ ವೈದ್ಯರ ತಂಡವು ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ನೀಡಿದ್ದಾರೆ. ಕಪಿಲ್ ಆರೋಗ್ಯ ಸ್ಥಿರವಾಗಿದ್ದು, ಇನ್ನೊಂದೆರಡು ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಮನೆಗೆ ತೆರಳುತ್ತಾರೆ‘ ಎಂದು ಫೋರ್ಟೀಸ್ ಎಸ್ಕಾರ್ಟ್ಸ್‌ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೃದಯದ ಧಮನಿಗಳಲ್ಲಿ ಶೇಖರವಾಗಿರುವ ಕೊಬ್ಬಿನಂಶವನ್ನು ತೆಗೆದುಹಾಕಿ ರಕ್ತಪರಿಚಲನೆಯನ್ನು ಸಹಜಗೊಳಿಸಲು ಈ ಚಿಕಿತ್ಸೆಯನ್ನು ನೀಡಲಾಗುತ್ತದೆ.

’ಅವರು ಚೇತರಿಸಿಕೊಳ್ಳುತ್ತಿದ್ದಾರೆಂದು ಕಪಿಲ್ ಪತ್ನಿ ರೋಮಿ ಹೇಳಿದ್ದಾರೆ. ನಿನ್ನೆ (ಗುರುವಾರ) ಕಪಿಲ್ ಎದೆನೋವು ಅನುಭವಿಸಿದ್ದರಿಂದ ಅಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಕೆಲವು ತಪಾಸಣೆಗಳನ್ನು ನಡೆಸಿದ ವೈದ್ಯರು ಅಗತ್ಯ ಚಿಕಿತ್ಸೆ ನೀಡಿದ್ದಾರೆ‘ ಎಂದು ಕಪಿಲ್ ದೇವ್ ಸ್ನೇಹಿತರೂ ಆಗಿರುವ ಭಾರತೀಯ ಕ್ರಿಕೆಟಿಗರ ಸಂಘಟನೆಯ (ಐಸಿಎ) ಅಧ್ಯಕ್ಷ ಅಶೋಕ್ ಮಲ್ಹೋತ್ರಾ ತಿಳಿಸಿದ್ದಾರೆ.

1983ರ ಏಕದಿನ ಕ್ರಿಕೆಟ್ ವಿಶ್ವಕಪ್ ಜಯಿಸಿದ ಭಾರತ ತಂಡಕ್ಕೆ ಕಪಿಲ್ ದೇವ್ ನಾಯಕರಾಗಿದ್ದರು. ವಿಶ್ವದ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಕಪಿಲ್ ಪ್ರಮುಖರಾಗಿದ್ದಾರೆ.

ಅವರು ಬೇಗನೆ ಗುಣಮುಖರಾಗಲಿ ಎಂದು ಹಲವು ಕ್ರಿಕೆಟಿಗರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾರೈಸುತ್ತಿದ್ದಾರೆ.

’ಶೀಘ್ರ ಗುಣಮುಖರಾಗಿ ಬನ್ನಿ‘ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ದಿಗ್ಗಜ ಸಚಿನ್ ತೆಂಡೂಲ್ಕರ್, ಬ್ಯಾಟ್ಸ್‌ಮನ್ ಶಿಖರ್ ಧವನ್, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಕಪಿಲ್ ಅವರೊಂದಿಗೆ ಆಡಿದ್ದ ಮದನ್ ಲಾಲ್ ಮತ್ತಿತರರು ಸಂದೇಶ ಹಾಕಿದ್ದಾರೆ.

ಕಪಿಲ್ 131 ಟೆಸ್ಟ್ ಮತ್ತು 225 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 434 ವಿಕೆಟ್ ಮತ್ತು ಐದು ಸಾವಿರಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ.

1999–2000ರಲ್ಲಿ ಭಾರತ ತಂಡದ ಕೋಚ್ ಕೂಡ ಅಗಿದ್ದರು. 2010ರಲ್ಲಿ ಐಸಿಸಿ ಹಾಲ್ ಆಫ್‌ ಫೇಮ್‌ ಗೌರವ ಗಳಿಸಿದ್ದಾರೆ.

’ವಿಶಾಲ ಹೃದಯಿ ಕಪಿಲ್ ನಮ್ಮ ಸಾರ್ವಕಾಲೀಕ ನಾಯಕ. ಛಲ ಬಿಡದ ವ್ಯಕ್ತಿ. ಅವರಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಅವರು ಈ ಸಂಕಷ್ಟವನ್ನು ಗೆದ್ದು ಬರುತ್ತಾರೆ‘ ಎಂದು ಕ್ರಿಕೆಟಿಗ ಕೀರ್ತಿ ಆಜಾದ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT