ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ: ಕರ್ನಾಟಕಕ್ಕೆ ಕಿಶನ್, ವೈಶಾಖ ಆಸರೆ

ಮಯಂಕ್ ಅಗರವಾಲ್ ಅರ್ಧಶತಕ; ರಾಣಾಗೆ ಮೂರು ವಿಕೆಟ್
Published 26 ಜನವರಿ 2024, 20:11 IST
Last Updated 26 ಜನವರಿ 2024, 20:11 IST
ಅಕ್ಷರ ಗಾತ್ರ

ಅಗರ್ತಲಾ: ಪದಾರ್ಪಣೆ ಪಂದ್ಯದಲ್ಲಿ ಮಿಂಚಿದ ಕಿಶನ್ ಬೆದರೆ ಮತ್ತು ವೈಶಾಖ ವಿಜಯಕುಮಾರ್ ಅವರು ಇಲ್ಲಿ  ತ್ರಿಪುರ ತಂಡದ ಎದುರು ಶುಕ್ರವಾರ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಆಸರೆಯಾದರು.

ಸಿ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ತ್ರಿಪುರ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕರ್ನಾಟಕ ತಂಡವು ದಿನದಾಟದ ಮುಕ್ತಾಯಕ್ಕೆ 78 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 241 ರನ್‌ ಗಳಿಸಿತು. ನಾಯಕ ಮಯಂಕ್ ಅಗರವಾಲ್ (51; 100ಎ) , ಚೊಚ್ಚಲ ಪಂದ್ಯವಾಡಿದ ಕಿಶನ್ (62; 121ಎ) ಹಾಗೂ ಎಂಟನೇ ಕ್ರಮಾಂಕದ ಬ್ಯಾಟರ್ ವೈಶಾಖ (ಬ್ಯಾಟಿಂಗ್ 50) ಅವರ ಅರ್ಧಶತಕಗಳಿಂದಾಗಿ  ಈ ಗೌರವಾರ್ಹ ಮೊತ್ತವು ಸೇರಿತು.

ತ್ರಿಪುರ ತಂಡದ  ರಾಣಾ ದತ್ತಾ ಮತ್ತು ದೇವನಾಥ್ ಅವರ ಬೌಲಿಂಗ್ ಮುಂದೆ ಆರಂಭದಲ್ಲಿಯೇ ಕುಸಿತ ಕಂಡಿದ್ದ ತಂಡಕ್ಕೆ ಈ ಮೂವರ ಬ್ಯಾಟಿಂಗ್ ಮರುಜೀವ ನೀಡಿತು. ಕರ್ನಾಟಕ ತಂಡದ ಖಾತೆಗೆ 16 ರನ್‌ಗಳು ಸೇರುವಷ್ಟರಲ್ಲಿ ಮೂರು ವಿಕೆಟ್‌ಗಳು ಪತನವಾದವು. ಅನುಭವಿ ಸಮರ್ಥ್, ಪದಾರ್ಪಣೆ ಮಾಡಿದ ಕೆ.ವಿ. ಅನೀಶ್ ಮತ್ತು ನಿಕಿನ್ ಜೋಸ್ ಅವರು ಔಟಾದರು. ಮನೀಷ್ ಪಾಂಡೆ, ದೇವದತ್ತ ಪಡಿಕ್ಕಲ್ ಅವರ ಗೈರುಹಾಜರಿಯಲ್ಲಿ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಆತಂಕ ಎದುರಾಗಿತ್ತು.

ಈ ಹಂತದಲ್ಲಿ ಗಟ್ಟಿಯಾಗಿ ನಿಂತ ಮಯಂಕ್ ಮತ್ತು ಕಿಶನ್ ತಾಳ್ಮೆಯ ಜೊತೆಯಾಟದಿಂದಾಗಿ ನಾಲ್ಕನೇ ವಿಕೆಟ್‌ಗೆ 87 ರನ್‌ಗಳು ಸೇರಿದವು. ಬೌಲರ್ ದೇವನಾಥ್ ಊಟದ ವಿರಾಮದ ನಂತರದಲ್ಲಿ ಮಯಂಕ್ ವಿಕೆಟ್ ಗಳಿಸಿ ಜೊತೆಯಾಟ ಮುರಿದರು.

ನೆಲಕಚ್ಚಿ ಆಡಿದ ಕಿಶನ್, ಶರತ್ ಶ್ರೀನಿವಾಸ್ (25 ರನ್) ಅವರೊಂದಿಗೆ  50 ರನ್‌ಗಳ ಜೊತೆಯಾಟಕ್ಕೆ ಕಾರಣವಾದರು. ಇದಕ್ಕಾಗಿ ಇಬ್ಬರೂ 122 ಎಸೆತಗಳನ್ನು ಆಡಿದರು.  ಎ.ಕೆ. ಸರ್ಕಾರ್ ಬೌಲಿಂಗ್‌ನಲ್ಲಿ ಕಿಶನ್ ಔಟಾಗುವುದರೊಂದಿಗೆ ಜೊತೆಯಾಟ ಮುರಿಯಿತು. ನಂತರದ ಹತ್ತು ರನ್‌ಗಳ ಅಂತರದಲ್ಲಿ ಮತ್ತಿಬ್ಬರು ಬ್ಯಾಟರ್‌ಗಳಾದ ಶರತ್ ಮತ್ತು ಹಾರ್ದಿಕ್ ರಾಜ ಅವರೂ ಔಟಾದರು.

ಈ ಹಂತದಲ್ಲಿ ಕ್ರೀಸ್‌ಗೆ ಬಂದ ವೈಶಾಖ ಅವರು ಬೌಲರ್‌ಗಳನ್ನು ದಿಟ್ಟತನದಿಂದ ಎದುರಿಸಿದರು. ಅವರಿಗೆ ಕೆ. ಶಶಿಕುಮಾರ್ (19 ರನ್) ಉತ್ತಮ ಜೊತೆ ನೀಡಿದರು. ಇಬ್ಬರೂ ಎಂಟನೇ ವಿಕೆಟ್ ಜೊತೆಯಾಟದಲ್ಲಿ 60 ರನ್ ಸೇರಿಸಿದ್ದರಿಂದ ತಂಡದ ಮೊತ್ತವು 200ರ ಗಡಿ ದಾಟಿತು.

ತ್ರಿಪುರ ತಂಡದ ರಾಣಾ ದತ್ತಾ ಮೂರು, ಮುರಾಸಿಂಗ್ ಮತ್ತು ಸರ್ಕಾರ್ ತಲಾ ಎರಡು ವಿಕೆಟ್ ಗಳಿಸಿದರು. 

‘ನಾಲ್ವರು ಆಟಗಾರರ ಪದಾರ್ಪಣೆ‘

ಅನುಭವಿ ಮನೀಷ್ ಪಾಂಡೆ ಗಾಯಗೊಂಡಿದ್ದಾರೆ. ದೇವದತ್ತ ಪಡಿಕ್ಕಲ್ ಅವರು ಭಾರತ  ಎ ತಂಡದಲ್ಲಿ ಆಡಲು ತೆರಳಿದ್ದಾರೆ. ಆದ್ದರಿಂದ ಯುವ ಪ್ರತಿಭೆಗಳಿಗೆ ಅವಕಾಶ ಕೊಡುವುದು ಅಗತ್ಯವಾಗಿತ್ತು. ಈ ಪಂದ್ಯದಲ್ಲಿ ನಾಲ್ವರು ಆಟಗಾರರಾದ ಕಿಶನ್ ಬೆದರೆ ಕೆ.ವಿ. ಅನಿಶ್ 17 ವರ್ಷದ ಹಾರ್ದಿಕ್ ರಾಜ್ ಮತ್ತು ಕೆ. ಶಶಿಕುಮಾರ್ ಅವರಿಗೆ ಪದಾರ್ಪಣೆ ಮಾಡಲು ಅವಕಾಶ ನೀಡಲಾಗಿದೆ’ ಎಂದು ಕರ್ನಾಟಕ ತಂಡದ ಮುಖ್ಯ ಕೋಚ್ ಪಿ.ವಿ. ಶಶಿಕಾಂತ್ ‘ಪ್ರಜಾವಾಣಿ‘ಗೆ ತಿಳಿಸಿದರು.

‘ಇನಿಂಗ್ಸ್‌ನಲ್ಲಿ ಬೇಗನೆ ವಿಕೆಟ್‌ಗಳು ಪತನವಾಗಿದ್ದರು. ಆದರೆ ನಾಯಕ ಮಯಂಕ್ ಜವಾಬ್ದಾರಿಯುತ ಇನಿಂಗ್ಸ್ ಆಡಿದರು. ಅವರೊಂದಿಗೆ ಕಿಶನ್ ವೈಶಾಖ ಮತ್ತು ಶಶಿಕುಮಾರ್ ಅವರೂ  ಉತ್ತಮವಾಗಿ ಆಡಿದರು. ಇದರಿಂದಾಗಿ ದಿನದಾಟದಲ್ಲಿ ನಾವು ಚೇತರಿಸಿಕೊಂಡಿದ್ದೇವೆ. ಮುಂದಿನ ಹಂತದಲ್ಲಿ ಇನ್ನಷ್ಟು ಉತ್ತಮವಾಗಿ ಆಡಿ ಗೆಲ್ಲುವುದೇ ಗುರಿ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT