ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಸಿಸಿ ವಿಜಯಪುರ ತಂಡಕ್ಕೆ ಗೆಲುವು

ಅಂತರ ಜಿಲ್ಲಾ ಟ್ವೆಂಟಿ–20 ಕ್ರಿಕೆಟ್ ಟೂರ್ನಿ
Last Updated 9 ನವೆಂಬರ್ 2020, 12:24 IST
ಅಕ್ಷರ ಗಾತ್ರ

ಹುಮನಾಬಾದ್‌: ಕರ್ನಾಟಕ ಕ್ರಿಕೆಟ್ ಕ್ಲಬ್ (ಕೆಸಿಸಿ) ವಿಜಯಪುರ ತಂಡವು ಅಂತರ ಜಿಲ್ಲಾ 19 ವರ್ಷದೊಳಗಿನವರ ಟ್ವೆಂಟಿ –20 ಕ್ರಿಕೆಟ್ ಟೂರ್ನಿಯಲ್ಲಿ ಮಾಣಿಕ ಸ್ಪೋರ್ಟ್ಸ್ ಅಕಾಡೆಮಿ ಹುಮನಾಬಾದ್ ವಿರುದ್ಧ 64 ರನ್‌ಗಳ ಜಯ ಪಡೆಯಿತು.

ಇಲ್ಲಿಯ ಶ್ರೀ ಸಿದ್ಧರಾಜ ಟರ್ಫ್‌ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಕೆಸಿಸಿ ವಿಜಯಪುರ ತಂಡವು ಬ್ಯಾಟಿಂಗ್ ಮಾಡಿತು.

ತಂಡದ ಮೊತ್ತ 3 ರನ್ ಆಗಿದ್ದಾಗ ಆರಂಭಿಕ ಆಟಗಾರ ಸಿದ್ದು ವಿಕೆಟ್ ಒಪ್ಪಿಸಿದರು. ನಂತರ ಓಂಕಾರ್ ಬಿ (36) ಮತ್ತು ಪ್ರತೀಕ್ ಚವಾಣ್ (24) ರನ್ ಗಳಿಸಿ ಎರಡನೇ ವಿಕೆಟ್‌ಗೆ 60 ರನ್ ಸೇರಿಸುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ನಂತರ ಬಂದ ಸಚಿನ್ ಬಿ., 26 ಎಸೆತಗಳಲ್ಲಿ ಏಳು ಬೌಂಡರಿ ಸಹಿತ 44 ರನ್ ಬಾರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಅಫ್ಫನ್ ಪಿ. 17 ರನ್ ಗಳಿಸಿದರು. ಅಂತಿಮವಾಗಿ ಕೆಸಿಸಿ ವಿಜಯಪುರ ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿತು. ಸುಮಿತ್ ಮತ್ತು ಪ್ರಜ್ವಲ್ ತಲಾ ಒಂದು ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ಮಾಣಿಕ ಸ್ಪೋರ್ಟ್ಸ್ ಅಕಾಡೆಮಿ ಹುಮನಾಬಾದ್ ತಂಡವು 19.3 ಓವರ್‌ಗಳಲ್ಲಿ 92 ರನ್‌ಗಳಿಗೆ ಆಲ್‌ಔಟ್ ಆಯಿತು.

ಸುಧನ್ವ ಮಣೂರು 24, ಸಾಗರ್ ಕಾಶಿನಾಥ್ 21 ಮತ್ತು ಸಮ್ಯಕ್ ಶಾ 12 ಹೊರತುಪಡಿಸಿ ಉಳಿದವರು ಎರಡಂಕಿ ಮೊತ್ತ ಗಳಿಸಲಿಲ್ಲ.

ಅಮೋಘ ಬೌಲಿಂಗ್ ಮಾಡಿದ ಅನೂಪ್ ಬಿ. 21 ರನ್ ನೀಡಿ 4 ವಿಕೆಟ್ ಕಬಳಿಸಿದರು. ಯಶ್ ಮಠ 25ಕ್ಕೆ 3 ವಿಕೆಟ್ ಪಡೆದರು. ಅನೂಪ್ ಬಿ. ಪಂದಶ್ರೇಷ್ಠ ಪ್ರಶಸ್ತಿ ಪಡೆದರು.

ಗ್ಯಾಲಕ್ಸಿ ಕ್ರಿಕೆಟ್ ಕ್ಲಬ್‌ಗೆ 9 ವಿಕೆಟ್ ಜಯ

ಟೂರ್ನಿಯ ಇನ್ನೊಂದು ಪಂದ್ಯದಲ್ಲಿ ಗ್ಯಾಲಕ್ಸಿ ಕ್ರಿಕೆಟ್‌ ಕ್ಲಬ್ (ಜಿಸಿಸಿ) ಕಲಬುರ್ಗಿ ತಂಡವು ಕಾಸ್ಮೋಸ್‌ ಕ್ರಿಕೆಟ್‌ ಕ್ಲಬ್ ಕಲಬುರ್ಗಿ ವಿರುದ್ಧ 9 ವಿಕೆಟ್‌ಗಳಿಂದ ಗೆಲುವು ಸಾಧಿಸಿತು.

ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕಾಸ್ಮೋಸ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ತಂಡದ ಮೊತ್ತ 8 ರನ್ ಆಗುವಷ್ಟರಲ್ಲಿ ಪ್ರಮುಖ ಆಟಗಾರರಾದ ಓಂಕಾರ್‌ ಶ್ರೀರಾಮ್ ಮತ್ತು ನಂದೀಶ್ ಆರ್‌.ಎಚ್. ಶೂನ್ಯಕ್ಕೆ ಔಟ್‌ ಆದರು.

ವಿವೇಕ್ ಹಿರೇಗೌಡರ ಮತ್ತು ಮಯೂರ ದೇಶಮುಖ ಅವರು ತಲಾ 17 ರನ್ ಗಳಿಸಿ ಚೇತರಿಕೆ ತುಂಬಲು ಯತ್ನಿಸಿದರು. ಅವರು ಔಟಾದ ಬಳಿಕ ಉಳಿದ ಆಟಗಾರರಿಂದ ಉತ್ತಮ ಆಟ ಮೂಡಿ ಬರಲಿಲ್ಲ.

ಕಾಸ್ಮೋಸ್ ತಂಡವು 19 ಓವರ್‌ಗಳಲ್ಲಿ 71ಕ್ಕೆ ಆಲ್‌ಔಟ್ ಆಯಿತು. ಕರಣ್ ರಾಠೋಡ 9ಕ್ಕೆ 3, ಸಂತೋಷ್ ಹಟ್ಟಿ 9ಕ್ಕೆ 2 ಮತ್ತು ಅತ್ಥರ್ ಹುಸೇನ್ 21ಕ್ಕೆ 2 ವಿಕೆಟ್ ಪಡೆದರು.

ಅಲ್ಪ ಗುರಿಯನ್ನು ಗ್ಯಾಲಕ್ಸಿ ಕ್ರಿಕೆಟ್ ಕ್ಲಬ್ ತಂಡವು 5.5 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಮುಟ್ಟಿತು.
ಕರಣ್ ರಾಠೋಡ 17 ಎಸೆತಗಳಲ್ಲಿ ಎಂಟು ಬೌಂಡರಿ ಸಹಿತ 39 ಮತ್ತು ಸನ್ಮಯ್ ಎ.ಆರ್. 19 ರನ್ ಗಳಿಸಿದರು. ಸಂಗಮೇಶ 29ಕ್ಕೆ 1 ವಿಕೆಟ್ ಪಡೆದರು.

ಆಲ್‌ರೌಂಡ್ ಆಟವಾಡಿದ ಕರಣ್ ರಾಠೋಡ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇಂದಿನ ಪಂದ್ಯ

ಕರ್ನಾಟಕ ಕ್ರಿಕೆಟ್ ಕ್ಲಬ್ ವಿಜಯಪುರ ಮತ್ತು ಕರ್ನಾಟಕ ಕ್ರಿಕೆಟ್ ಕ್ಲಬ್ ಕಲಬುರ್ಗಿ. ಮಾಣಿಕ ಸ್ಪೋರ್ಟ್ಸ್ ಅಕಾಡೆಮಿ ಹುಮನಾಬಾದ್ ಮತ್ತು ಕಾಸ್ಮೋಸ್ ಕ್ರಿಕೆಟ್ ಕ್ಲಬ್ ಕಲಬುರ್ಗಿ. ಸಮಯ: ಬೆಳಿಗ್ಗೆ 8.30 ಮತ್ತು ಮಧ್ಯಾಹ್ನ 12.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT