ಗುರುವಾರ , ಮೇ 6, 2021
33 °C
ಶುಭಾರಂಭ ಕಂಡಿರುವ ಕೋಲ್ಕತ್ತ ನೈಟ್ ರೈಡರ್ಸ್‌ಗೆ ರೋಹಿತ್ ಶರ್ಮಾ ಬಳಗದ ಸವಾಲು

IPL 2021| ಮೊದಲ ಜಯದ ನಿರೀಕ್ಷೆಯಲ್ಲಿ ಚಾಂಪಿಯನ್ನರು

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ರತಿರೋಧವನ್ನು ಸಮರ್ಥವಾಗಿ ನಿಭಾಯಿಸಿ ಮೊದಲ ಪಂದ್ಯದಲ್ಲಿ ಗೆಲುವಿನ ನಗೆ ಸೂಸಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಮಂಗಳವಾರ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕೆ ಇಳಿಯಲಿದೆ.

ಹಿಂದಿನ ಎರಡು ಆವೃತ್ತಿಗಳಲ್ಲಿ ಪ್ಲೇ ಆಫ್ ಹಂತಕ್ಕೇರಲು ವಿಫಲವಾಗಿರುವ ಕೋಲ್ಕತ್ತ ಈ ಬಾರಿ ಯಾವುದೇ ತಂಡದ ಸವಾಲನ್ನು ಸ್ವೀಕರಿಸಲು ಸಜ್ಜಾಗಿದೆ ಎಂಬುದನ್ನು ಮೊದಲ ಪಂದ್ಯದಲ್ಲಿ ಸಾಬೀತು ಮಾಡಿದೆ.

ಭಾನುವಾರ  ಸನ್‌ರೈಸರ್ಸ್ ಎದುರಿನ ಪಂದ್ಯದಲ್ಲಿ ನಾಯಕ ಏಯಾನ್ ಮಾರ್ಗನ್ ಹೆಣೆದ ತಂತ್ರಗಳು ಕೂಡ ಫಲ ನೀಡಿದ್ದವು. ಸುನಿಲ್ ನಾರಾಯಣ್ ಅವರಿಗೆ ವಿಶ್ರಾಂತಿ ನೀಡಿ ನಿತೀಶ್ ರಾಣಾ ಮತ್ತು ಶುಭಮನ್ ಗಿಲ್ ಅವರನ್ನು ಇನಿಂಗ್ಸ್ ಆರಂಭಿಸಲು ಕಳುಹಿಸಿದ ಮಾರ್ಗನ್ ಯಶಸ್ಸು ಕಂಡಿದ್ದರು. 

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತನ್ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಎರಡು ವಿಕೆಟ್‌ಗಳಿಂದ ಸೋತಿತ್ತು. ಈ ಆಘಾತದಿಂದ ಚೇತಿಸಿಕೊಳ್ಳಲು ರೋಹಿತ್ ಶರ್ಮಾ ಬಳಗ ಪ್ರಯತ್ನಿಸಲಿದೆ. ಕೋಲ್ಕತ್ತಕ್ಕೆ ಮೊದಲ ಪಂದ್ಯದಲ್ಲಿ ಗಳಿಸಿದ ಗೆಲುವಿನ ಮನೋಬಲದ ಬೆಂಬಲವಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಒಟ್ಟಾರೆ 21 ಪಂದ್ಯಗಳನ್ನು ಸೋತಿರುವ ನೈಟ್ ರೈಡರ್ಸ್‌ ಹಿಂದಿನ 12 ಪಂದ್ಯಗಳ ಪೈಕಿ ಒಂದರಲ್ಲಿ ಮಾತ್ರ ಜಯ ಕಂಡಿದೆ.

ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಚುಟುಕು ಕ್ರಿಕೆಟ್‌ನಲ್ಲಿ ರನ್ ಕಲೆ ಹಾಕಲು ಪರದಾಡುತ್ತಿರುವುದು ಕೋಲ್ಕತ್ತ ತಂಡದ ಆತಂಕಕ್ಕೆ ಕಾರಣವಾಗಿದೆ. ಮುಂಬೈ ಇಂಡಿಯನ್ಸ್‌ನ ಪ್ರಮುಖ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಇನ್ನೂ ಕ್ವಾರಂಟೈನ್‌ನಲ್ಲಿದ್ದು ಅವರ ಬದಲಿಗೆ ಕಣಕ್ಕೆ ಇಳಿದಿದ್ದ ಕ್ರಿಸ್ ಲಿನ್ ಭರವಸೆ ಮೂಡಿಸಿದ್ದಾರೆ. ಮಧ್ಯಮ ಕ್ರಮಾಂಕದ ಸೂರ್ಯಕುಮಾರ್ ಯಾದವ್‌, ಇಶಾನ್ ಕಿಶನ್‌, ಹಾರ್ದಿಕ್ ಮತ್ತು ಕೃಣಾಲ್ ಪಾಂಡ್ಯ ಫಾರ್ಮ್ ಕಂಡುಕೊಳ್ಳಬೇಕಾದ ಅಗತ್ಯವಿದೆ.

ಬ್ಯಾಟಿಂಗ್ ಬಳಗ ಬಲಿಷ್ಠವಾಗಿದೆ: ಮಾರ್ಗನ್‌

‘ಕೋಲ್ಕತ್ತ ತಂಡ ಬಲಿಷ್ಠ ಬ್ಯಾಟಿಂಗ್ ಬಳಗವನ್ನು ಹೊಂದಿದ್ದು ಮೊದಲ ಪಂದ್ಯದಲ್ಲಿ ನಮ್ಮ ಬ್ಯಾಟಿಂಗ್ ಶಕ್ತಿ ಏನೆಂದು ಸಾಬೀತಾಗಿದೆ’ ಎಂದು ನಾಯಕ ಏಯಾನ್ ಮಾರ್ಗನ್ ಅಭಿಪ್ರಾಯಪಟ್ಟರು.

ತಂಡ ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿದೆ. ಅದರಲ್ಲೂ ಸ್ಫೋಟಕ ಬ್ಯಾಟ್ಸ್‌ಮನ್‌ಗಳು ಬೆನ್ನೆಲುಬು ಆಗಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ರಾಹುಲ್ ತ್ರಿಪಾಠಿ ಅಮೋಘ ಸಾಮರ್ಥ್ಯ ತೋರಿದ್ದರು. ದಿನೇಶ್ ಕಾರ್ತಿಕ್, ಆ್ಯಂಡ್ರೆ ರಸೆಲ್ ಮುಂತಾದವರು ಯಾವುದೇ ಪರಿಸ್ಥಿತಿಯಲ್ಲಿ ಎದೆಗುಂದದೇ ಆಡಬಲ್ಲರು’ ಎಂದು ಮಾರ್ಗನ್ ಹೇಳಿದರು.

ಹಾರ್ದಿಕ್ ಪಾಂಡ್ಯ ಬೌಲಿಂಗ್‌ಗೆ ಸಜ್ಜು: ಜಹೀರ್

ಭುಜದ ನೋವಿನಿಂದಾಗಿ ಮೊದಲ ಪಂದ್ಯದಲ್ಲಿ ಬೌಲಿಂಗ್ ಮಾಡದೇ ಇದ್ದ ಹಾರ್ದಿಕ್ ಪಾಂಡ್ಯ ಎರಡನೇ ಪಂದ್ಯದಲ್ಲಿ ಬೌಲಿಂಗ್ ಮಾಡಬಲ್ಲರು ಎಂದು ಮುಂಬೈ ಇಂಡಿಯನ್ಸ್‌ನ ಕ್ರಿಕೆಟ್ ಆಪರೇಷನ್ಸ್ ನಿರ್ದೇಶಕ ಜಹೀರ್ ಖಾನ್ ತಿಳಿಸಿದರು. 

ಆಲ್‌ರೌಂಡರ್ ಪಾಂಡ್ಯ ಎಲ್ಲ ವಿಭಾಗಗಳಲ್ಲೂ ಸಮರ್ಥವಾಗಿ ಆಡಲು ಸಾಧ್ಯವಾದರೆ ತಂಡಕ್ಕೆ ಭಾರಿ ಅನುಕೂಲ ಆಗಲಿದೆ. ಇದು ಎಲ್ಲರಿಗೂ ತಿಳಿದಿದೆ. ಮೊದಲ ಪಂದ್ಯದಲ್ಲಿ ವಿಶ್ರಾಂತಿ ನೀಡುವುದಕ್ಕಾಗಿ ಅವರ ಕೈಗೆ ಚೆಂಡನ್ನು ನೀಡಿರಲಿಲ್ಲ. ಮಂಗಳವಾರದ ಪಂದ್ಯದಲ್ಲಿ ಅವರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಪ್ರಯತ್ನಿಸಲಾಗುವುದು. ವೆಸ್ಟ್ ಇಂಡೀಸ್‌ನ ಕೀರನ್ ಪೊಲಾರ್ಡ್‌ ಅವರನ್ನು ಆರನೇ ಬೌಲರ್ ಆಗಿ ಬಳಸಿಕೊಳ್ಳಲಾಗುವುದು’ ಎಂದು ಅವರು ವಿವರಿಸಿದರು.

ಪಂದ್ಯಗಳು 27

ಮುಂಬೈ ಜಯ 21

ಕೋಲ್ಕತ್ತ ಜಯ 6

 

ಗರಿಷ್ಠ ಮೊತ್ತ

ಕೋಲ್ಕತ್ತ 232

ಮುಂಬೈ 210

ಕನಿಷ್ಠ ಮೊತ್ತ

ಕೋಲ್ಕತ್ತ 67

ಮುಂಬೈ 108

ಆರ್‌ಸಿಬಿ ಹೈದರಾಬಾದ್‌

ಪಂದ್ಯ 18

ಹೈದರಾಬಾದ್ ಜಯ 10

ಬೆಂಗಳೂರು ಗೆಲುವು 7

ಫಲಿತಾಂಶವಿಲ್ಲ 1

ಗರಿಷ್ಠ ಮೊತ್ತ

ಹೈದರಾಬಾದ್ 231

ಬೆಂಗಳೂರು 227

ಕನಿಷ್ಠ ಮೊತ್ತ

ಬೆಂಗಳೂರು 113

ಹೈದರಾಬಾದ್ 135

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು