ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಲ್‌ ಕ್ರಿಕೆಟ್ ಟೂರ್ನಿ: ಪ್ಲೇ ಆಫ್‌ ಸ್ಥಾನಕ್ಕೆ ಹೆಚ್ಚಿದ ಪೈಪೋಟಿ

ಇಂದಿನಿಂದ ಮೈಸೂರಿನಲ್ಲಿ ಪಂದ್ಯ
Last Updated 24 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

‌ಮೈಸೂರು: ದಸರಾ ಉತ್ಸವಕ್ಕೆ ಸಜ್ಜಾಗುತ್ತಿರುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇನ್ನೊಂದು ವಾರ ಟ್ವೆಂಟಿ–20 ಕ್ರಿಕೆಟ್‌ನ ಕಲರವ. ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಟೂರ್ನಿಯ ಪಂದ್ಯಗಳಿಗೆ ಇಲ್ಲಿನ ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣ ವೇದಿಕೆ ಒದಗಿಸಲಿದೆ.

ಭಾನುವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್–ಶಿವಮೊಗ್ಗ ಲಯನ್ಸ್ ಪೈಪೋಟಿ ನಡೆಸಲಿದ್ದು, ಎರಡನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ಎದುರಾಗಲಿವೆ.

ಟೂರ್ನಿಯ ಬೆಂಗಳೂರು ಲೆಗ್‌ನ ಪಂದ್ಯಗಳಿಗೆ ಶುಕ್ರವಾರ ತೆರೆಬಿದ್ದಿತ್ತು. ಕೊನೆಯ ಆರು ಲೀಗ್‌ ಪಂದ್ಯಗಳು, ಮೂರು ಪ್ಲೇ ಆಫ್‌ ಪಂದ್ಯಗಳು ಮತ್ತು ಫೈನಲ್‌ ಹಣಾಹಣಿಗೆ ಮೈಸೂರು ಆತಿಥ್ಯ ವಹಿಸಲಿದೆ.

ಹೆಚ್ಚಿದ ಪೈಪೋಟಿ: ಟೂರ್ನಿಯು ಕೊನೆಯ ಹಂತಕ್ಕೆ ತಲುಪಿದ್ದು, ಪ್ಲೇ ಆಫ್‌ನಲ್ಲಿ ಸ್ಥಾನ ಪಡೆಯಲು ಪೈಪೋಟಿ ಹೆಚ್ಚಿದೆ. ಐದು ಪಂದ್ಯಗಳಿಂದ ಎಂಟು ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿರುವ ಬಳ್ಳಾರಿ ಟಸ್ಕರ್ಸ್‌ ತಂಡ ಪ್ಲೇ ಆಫ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿದೆ. ಆರು ಪಾಯಿಂಟ್‌ ಗಳಿಸಿದ ಶಿವಮೊಗ್ಗ ಲಯನ್ಸ್‌ ಕೂಡಾ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಬಹುದು.

ಇನ್ನುಳಿದ ಎರಡು ಸ್ಥಾನಗಳಿಗೆ ಐದು ತಂಡಗಳ ನಡುವೆ ಸ್ಪರ್ಧೆಯಿದೆ. ಹುಬ್ಬಳ್ಳಿ ಟೈಗರ್ಸ್‌ ಮತ್ತು ಬೆಂಗಳೂರು ಬ್ಲಾಸ್ಟರ್ಸ್‌ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನಗಳಲ್ಲಿವೆ. ಬೆಳಗಾವಿ ಪ್ಯಾಂಥರ್ಸ್‌, ಬಿಜಾಪುರ ಬುಲ್ಸ್‌ ಮತ್ತು ಮೈಸೂರು ವಾರಿಯರ್ಸ್ ತಂಡಗಳ ಕನಸು ಕೂಡ ಜೀವಂತವಾಗಿದೆ.

ವಾರಿಯರ್ಸ್‌ ಗೆಲ್ಲಲೇಬೇಕು: ಪಾಯಿಂಟ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ವಾರಿಯರ್ಸ್‌ ತಂಡ ಭಾನುವಾರ ಗೆಲ್ಲಲೇಬೇಕು. ಮತ್ತೊಂದು ಸೋಲು ಎದುರಾದರೆ ಅಮಿತ್‌ ವರ್ಮಾ ನೇತೃತ್ವದ ತಂಡ ಟೂರ್ನಿಯಿಂದ ಹೊರಬೀಳಲಿದೆ.

ಈ ತಂಡದ ಎರಡು ಪಂದ್ಯಗಳು ಮಳೆಯಿಂದ ರದ್ದುಗೊಂಡಿವೆ. ಇನ್ನುಳಿದ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು, ಕೇವಲ ಎರಡು ಪಾಯಿಂಟ್‌ ಹೊಂದಿದೆ. ಸ್ಥಳೀಯ ಅಭಿಮಾನಿಗಳ ಮುಂದೆ ಕೆಚ್ಚೆದೆಯ ಪ್ರದರ್ಶನ ನೀಡುವ ಸವಾಲು ವಾರಿಯರ್ಸ್‌ ಮುಂದಿದೆ. ಎದುರಾಳಿ ಹುಬ್ಬಳ್ಳಿ ಟೈಗರ್ಸ್‌ ತಂಡಕ್ಕೂ ಗೆಲುವು ಅನಿವಾರ್ಯವಾಗಿದ್ದು, ತುರುಸಿನ ಪೈಪೋಟಿ ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT