ಭಾನುವಾರ, ಸೆಪ್ಟೆಂಬರ್ 15, 2019
30 °C
ಲಯನ್ಸ್‌ ವಿರುದ್ಧ ಪ್ಯಾಂಥರ್ಸ್‌ಗೆ 9 ವಿಕೆಟ್‌ಗಳ ಗೆಲುವು

ಕೆಪಿಎಲ್‌: ಸ್ಟಾಲಿನ್‌ ಹೂವರ್‌ ಶತಕ ವೈಭವ

Published:
Updated:
Prajavani

ಮೈಸೂರು: ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಭಾನುವಾರ ಬಿರುಸಿನ ಶತಕ ಗಳಿಸಿದ ಸ್ಟಾಲಿನ್‌ ಹೂವರ್‌ (ಅಜೇಯ 108, 50 ಎಸೆತ, 11 ಬೌಂ, 6 ಸಿ) ಅವರು ಬೆಳಗಾವಿ ಪ್ಯಾಂಥರ್ಸ್‌ಗೆ ಭರ್ಜರಿ ಜಯ ತಂದುಕೊಟ್ಟರು.

ಕೆಪಿಎಲ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಪ್ಯಾಂಥರ್ಸ್‌ ತಂಡ 9 ವಿಕೆಟ್‌ಗಳಿಂದ ಶಿವಮೊಗ್ಗ ಲಯನ್ಸ್‌ ತಂಡವನ್ನು ಮಣಿಸಿತು. ಟೂರ್ನಿಯಲ್ಲಿ ಎರಡನೇ ಗೆದ್ದ ಪ್ಯಾಂಥರ್ಸ್‌ ತಂಡ ಐದು ಪಾಯಿಂಟ್‌ಗಳನ್ನು ಹೊಂದಿದ್ದು, ಪ್ಲೇ ಆಫ್‌ ಪ್ರವೇಶದ ಸಾಧ್ಯತೆ ಜೀವಂತವಾಗಿರಿಸಿಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ಲಯನ್ಸ್‌ ತಂಡ ಅರ್ಜುನ್‌ ಹೊಯ್ಸಳ (77, 58 ಎಸೆತ, 3 ಬೌಂ, 4 ಸಿ) ಮತ್ತು ಪವನ್‌ ದೇಶಪಾಂಡೆ (59, 35 ಎಸೆತ, 3 ಬೌಂ, 3 ಸಿ) ಅವರ ಜವಾಬ್ದಾರಿಯುತ ಆಟದ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 175 ರನ್‌ ಕಲೆಹಾಕಿತು.

ಸ್ಟಾಲಿನ್‌ ಅಬ್ಬರದ ಎದುರು ಈ ಸ್ಕೋರ್‌ ಅಲ್ಪ ಮೊತ್ತದಂತೆ ಕಂಡಿತು. ಪ್ಯಾಂಥರ್ಸ್‌ 14.4 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್‌ ಕಳೆದುಕೊಂಡು 180 ರನ್‌ ಗಳಿಸಿ ಜಯ ಸಾಧಿಸಿತು.

ಆರ್‌.ಸಮರ್ಥ್‌ (14) ಜತೆ ಇನಿಂಗ್ಸ್‌ ಆರಂಭಿಸಿದ ಸ್ಟಾಲಿನ್‌ ಅವರು ಮೊದಲ ವಿಕೆಟ್‌ಗೆ 4 ಓವರ್‌ಗಳಲ್ಲಿ 44 ರನ್‌ ಸೇರಿಸಿದರು. ಎರಡನೇ ವಿಕೆಟ್‌ಗೆ ಜತೆಯಾದ ನಾಯಕ ಮನೀಷ್‌ ಪಾಂಡೆ ಮತ್ತು ಸ್ಟಾಲಿನ್‌ ಅವರು ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಎದುರಾಳಿ ತಂಡದ ಎಲ್ಲ ಬೌಲರ್‌ಗಳ ಬೆಂಡೆತ್ತಿದ ಸ್ಟಾಲಿನ್‌ ನೆರೆದ ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿದರು.

22 ಎಸೆತಗಳಲ್ಲಿ 50 ರನ್‌ ಪೂರೈಸಿದ ಅವರು 44 ಎಸೆತಗಳಲ್ಲಿ ಶತಕದ ಗಡಿ ದಾಟಿದರು. ಮತ್ತೊಂದೆಡೆ ಪಾಂಡೆ (ಅಜೇಯ 53, 26 ಎಸೆತ, 4 ಬೌಂ, 4ಸಿ) ಕೂಡಾ ಬಿರುಸಿನ ಆಟವಾಡಿದರು. ಇವರು ಎರಡನೇ ವಿಕೆಟ್‌ಗೆ 64 ಎಸೆತಗಳಲ್ಲಿ 135 ರನ್‌ ಸೇರಿಸಿದರು.

ಮೊದಲು ಬ್ಯಾಟ್‌ ಮಾಡಿದ ಲಯನ್ಸ್‌ ತಂಡಕ್ಕೆ ಅರ್ಜುನ್‌ ಮತ್ತು ಪವನ್‌ ಆಸರೆಯಾದರು. ಇವರು ಮೂರನೇ ವಿಕೆಟ್‌ಗೆ 69 ಎಸೆತಗಳಲ್ಲಿ 106 ರನ್‌ ಕಲೆಹಾಕಿದ್ದರಿಂದ ತಂಡ ಸವಾಲಿನ ಮೊತ್ತ ಪೇರಿಸಿತು.

ಸಂಕ್ಷಿಪ್ತ ಸ್ಕೋರು: ಶಿವಮೊಗ್ಗ ಲಯನ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 175 (ಅರ್ಜುನ್‌ ಹೊಯ್ಸಳ 77, ಅಭಿಮನ್ಯು ಮಿಥುನ್ 22, ಪವನ್‌ ದೇಶಪಾಂಡೆ 59, ಡಿ.ಅವಿನಾಶ್‌ 32ಕ್ಕೆ 3).

ಬೆಳಗಾವಿ ಪ್ಯಾಂಥರ್ಸ್: 14.4 ಓವರ್‌ಗಳಲ್ಲಿ 1 ವಿಕೆಟ್‌ಗೆ 180 (ಆರ್‌.ಸಮರ್ಥ್‌ 14, ಸ್ಟಾಲಿನ್‌ ಹೂವರ್ ಅಜೇಯ 108, ಮನೀಷ್ ಪಾಂಡೆ ಅಜೇಯ 53)

ಫಲಿತಾಂಶ: ಬೆಳಗಾವಿ ಪ್ಯಾಂಥರ್ಸ್‌ಗೆ 9 ವಿಕೆಟ್‌ ಗೆಲುವು

ಮೈಸೂರಿಗೆ ಮೊದಲ ಜಯ
ಮೈಸೂರು:
ವಿನಯ್‌ ಸಾಗರ್ (51, 37 ಎಸೆತ) ಮತ್ತು ಅನಿರುದ್ಧ ಜೋಶಿ (ಅಜೇಯ 46, 17 ಎಸೆತ) ಅವರ ಆಕರ್ಷಕ ಆಟದ ನೆರವಿನಿಂದ ಮೈಸೂರು ವಾರಿಯರ್ಸ್‌ ತಂಡ ಕೆಪಿಎಲ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿತು.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ವಾರಿಯರ್ಸ್ 9 ವಿಕೆಟ್‌ಗಳಿಂದ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಮಣಿಸಿತು.

ಸಂಕ್ಷಿಪ್ತ ಸ್ಕೋರು: ಹುಬ್ಬಳ್ಳಿ ಟೈಗರ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 151 (ಲವನೀತ್‌ ಸಿಸೋಡಿಯಾ 29, ಪ್ರವೀಣ್‌ ದುಬೆ 52, ರಾಮ್‌ ಸಾರಿಖ್‌ ಯಾದವ್ 26ಕ್ಕೆ 2, ವೈಶಾಖ್‌ ವಿಜಯಕುಮಾರ್ 30ಕ್ಕೆ 2 )

ಮೈಸೂರು ವಾರಿಯರ್ಸ್: 16 ಓವರ್‌ಗಳಲ್ಲಿ 1 ವಿಕೆಟ್‌ಗೆ 154 (ವಿನಯ್‌ ಸಾಗರ್‌ 51, ಕೆ.ವಿ.ಸಿದ್ಧಾರ್ಥ್ ಅಜೇಯ 48, ಅನಿರುದ್ಧ್‌ ಜೋಶಿ ಅಜೇಯ 46)

ಪಂದ್ಯಶ್ರೇಷ್ಠ: ಅನಿರುದ್ಧ ಜೋಶಿ

ಫಲಿತಾಂಶ: ಮೈಸೂರು ವಾರಿಯರ್ಸ್‌ಗೆ ಒಂಬತ್ತು ವಿಕೆಟ್‌ಗಳ ಗೆಲುವು

***
ಇಂದಿನ ಪಂದ್ಯಗಳು
ಬೆಳಗಾವಿ ಪ್ಯಾಂಥರ್ಸ್– ಬಿಜಾಪುರ ಬುಲ್ಸ್
ಮಧ್ಯಾಹ್ನ 3

**
ಮೈಸೂರು ವಾರಿಯರ್ಸ್– ಬಳ್ಳಾರಿ ಟಸ್ಕರ್ಸ್
ಸಂಜೆ 7

Post Comments (+)