ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜಾಪುರ ಬುಲ್ಸ್‌ – ಬೆಳಗಾವಿ ಪ್ಯಾಂಥರ್ಸ್ ಪಂದ್ಯ ರದ್ದು

ಕೆಪಿಎಲ್‌ ಟೂರ್ನಿ
Last Updated 21 ಆಗಸ್ಟ್ 2018, 17:49 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಮಂಗಳವಾರ ಪದೇ ಪದೇ ಮಳೆ ಸುರಿದ ಕಾರಣ ಕೆಪಿಎಲ್‌ ಟೂರ್ನಿಯ ಬಿಜಾಪುರ ಬುಲ್ಸ್‌ ಮತ್ತು ಬೆಳಗಾವಿ ಪ್ಯಾಂಥರ್ಸ್ ತಂಡಗಳ ನಡುವಿನ ಪಂದ್ಯ ರದ್ದಾಯಿತು.

ಮಧ್ಯಾಹ್ನ ಸುಮಾರು ಒಂದು ತಾಸು ಜೋರಾಗಿ ಮಳೆ ಬಂದಿದ್ದರಿಂದ ಮೈದಾನವೆಲ್ಲ ಒದ್ದೆಯಾಗಿತ್ತು. ಮಳೆ ನಿಂತ ಕೂಡಲೇ ಕ್ರೀಡಾಂಗಣದ ಸಿಬ್ಬಂದಿ ನೀರು ಹೊರಹಾಕುವ ಕಾರ್ಯ ಆರಂಭಿಸಿದರು. ಪಂದ್ಯ ನಿಗದಿಯಾಗಿದ್ದ ಸಂಜೆ 6.45ಕ್ಕೆ ಮೈದಾನ ಪರಿಶೀಲಿಸಿದ ಅಂಪೈರ್‌ಗಳು ಮೊದಲು ಒಂದು ಗಂಟೆ ಪಂದ್ಯ ಮುಂದೂಡಿದರು.

7.45ಕ್ಕೆ, 8.20 ಮತ್ತು 9ಕ್ಕೆ ಪರಿಶೀಲಿಸಿದ ಬಳಿಕ ಪಂದ್ಯ ಆರಂಭಿಸಲು ಮೈದಾನ ಯೋಗ್ಯವಾಗಿಲ್ಲ ಎಂದು ಅಂಪೈರ್‌ಗಳಾದ ಅಭಿಜಿತ್‌ ಬೆಂಗೇರಿ ಮತ್ತು ಎಲ್‌. ವಿಕಾಸ್‌ ತಿಳಿಸಿದರು. ಆದ್ದರಿಂದ ಪಂದ್ಯ ರದ್ದು ಮಾಡಲು ತೀರ್ಮಾನಿಸಿ ಉಭಯ ತಂಡಗಳಿಗೆ ತಲಾ ಒಂದು ಪಾಯಿಂಟ್ಸ್ ಹಂಚಲಾಯಿತು. ಟಾಸ್‌ ಕೂಡ ಆಗಲಿಲ್ಲ.

ತಮ್ಮ ಮೊದಲಿನ ಪಂದ್ಯಗಳಲ್ಲಿ ಬಿಜಾಪುರ ಬುಲ್ಸ್‌ ತಂಡ ಹುಬ್ಬಳ್ಳಿ ಟೈಗರ್ಸ್‌ ಮೇಲೂ, ಬೆಳಗಾವಿ ಪ್ಯಾಂಥರ್ಸ್‌ ತಂಡ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಸೋಲು ಕಂಡಿದ್ದವು. ಇಲ್ಲಿ ಗೆಲುವಿನ ಖಾತೆ ತೆರೆಯಲು ಎರಡೂ ತಂಡಗಳು ಕಾದಿದ್ದವು. ಆದರೆ, ವರುಣ ಅವಕಾಶ ಕೊಡಲಿಲ್ಲ.

ಗುಟ್ಟು ಹೇಳಿಕೊಟ್ಟ ಜಾನ್ಸ್‌:ನಿಗದಿತ ಸಮಯಕ್ಕೆ ಪಂದ್ಯ ಆರಂಭವಾಗದ ಕಾರಣ ವೀಕ್ಷಕ ವಿವರಣೆ ಕೊಠಡಿಯಿಂದ ಬಿಜಾಪುರ ಬುಲ್ಸ್ ಆಟಗಾರರ ಬಳಿ ಬಂದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್‌ ಜೋನ್ಸ್‌ ಒಂದಷ್ಟು ಕೌಶಲ ಹೇಳಿಕೊಟ್ಟರು.

ಸುಮಾರು 20 ನಿಮಿಷ ಬುಲ್ಸ್ ಆಟಗಾರರ ಜೊತೆ ಕಳೆದ ಅವರು ಬೌಲಿಂಗ್‌ ಕೌಶಲ, ಬ್ಯಾಟಿಂಗ್ ಮಾಡುವಾಗ ವಹಿಸಬೇಕಾದಎಚ್ಚರದ ಬಗ್ಗೆ ಸಲಹೆ ನೀಡಿದರು. ಕ್ಯಾಚ್‌ ಹಿಡಿತದ ತಂತ್ರದ ಬಗ್ಗೆಯೂ ಹೇಳಿಕೊಟ್ಟರು.

ಮಿಷೆಲ್‌ ಜಾನ್ಸನ್‌ ವೀಕ್ಷಕ ವಿವರಣೆ: ಕೆಪಿಎಲ್‌ ಪಂದ್ಯಗಳ ವೀಕ್ಷಕ ವಿವರಣೆ ನೀಡಲು ಆಸ್ಟ್ರೇಲಿಯಾದ ಕ್ರಿಕೆಟಿಗ ಮಿಷೆಲ್‌ ಜಾನ್ಸನ್‌ ಇಲ್ಲಿಗೆ ಬಂದಿದ್ದಾರೆ. ಮೊದಲ ಎರಡೂ ಪಂದ್ಯಗಳಿಗೆ ಅವರು ವೀಕ್ಷಕ ವಿವರಣೆ ನೀಡಿದ್ದರು.

‘ಶ್ರೇಷ್ಠ ಆಟಗಾರರ ಜೊತೆ ವೀಕ್ಷಕ ವಿವರಣೆ ನೀಡಲು ಇಲ್ಲಿಗೆ ಬಂದಿದ್ದಕ್ಕೆ ಸಂತೋಷವಾಗಿದೆ. ನಮ್ಮ ಅನುಭವಗಳನ್ನು ಹಂಚಿಕೊಳ್ಳಲು, ಅವರ ಅನುಭವಗಳನ್ನು ತಿಳಿದುಕೊಳ್ಳಲು ಟೂರ್ನಿ ವೇದಿಕೆಯಾಗಿದೆ. ಪ್ರಾದೇಶಿಕ ಭಾಷೆಯಲ್ಲಿಯೂ ವೀಕ್ಷಕ ವಿವರಣೆ ಲಭಿಸುತ್ತಿರುವುದರಿಂದ ಸ್ಥಳೀಯ ಕ್ರಿಕೆಟ್‌ ಪ್ರೇಮಿಗಳಿಗೂ ಸಂತೋಷವಾಗಿದೆ ಎಂದು ಭಾವಿಸುತ್ತೇನೆ’ ಎಂದು ಮಿಷೆಲ್‌ ಜಾನ್ಸನ್‌ ಅನಿಸಿಕೆ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT