ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಮಾತಿನ ಮಂಟಪದಲ್ಲಿ ಕನ್ನಡ: ಕನ್ನಡ ಕ್ರಿಕೆಟ್ ಕಾಮೆಂಟರಿಯ ಆಸಕ್ತಿಕರ ಮಾಹಿತಿ

ಗಿರೀಶ ದೊಡ್ಡಮನಿ ಲೇಖನ..
Published 28 ಮೇ 2023, 0:00 IST
Last Updated 28 ಮೇ 2023, 0:00 IST
ಅಕ್ಷರ ಗಾತ್ರ
ಮೇ 28 ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ20 ಕ್ರಿಕೆಟ್‌ನ ಫೈನಲ್ ಪಂದ್ಯ. ಕನ್ನಡದಲ್ಲಿ ಈಗ ಕ್ರಿಕೆಟ್ ವೀಕ್ಷಕ ವಿವರಣೆ ಬೇರೆಯದೇ ಧ್ವನಿಯನ್ನು ಪಡೆದುಕೊಂಡಿದೆ. ಕನ್ನಡ ಕ್ರಿಕೆಟ್ ಕಾಮೆಂಟರಿಯ ಸುತ್ತಲಿನ ಆಸಕ್ತಿಕರ ಮಾಹಿತಿ ಈ ಬರಹದಲ್ಲಿದೆ..

’ನಮ್ಮಲ್ಲಿ ಕೆಲವು ಕ್ರಿಕೆಟಿಗರು ಕನ್ನಡ ಮಾತನಾಡುವುದೇ ಅವಮಾನವೆಂದುಕೊಳ್ಳುತ್ತಾರೆ. ಯಾಕೆ ಅಂತ ಗೊತ್ತಿಲ್ಲ. ಆದರೆ ಇದು ನಮ್ಮ ಮಾತೃಭಾಷೆ, ಅನ್ನದ ಭಾಷೆ. ಇವತ್ತು ನನ್ನ ಕುಟುಂಬವನ್ನು ಸಲಹುತ್ತಿದೆ. ಈ ಭಾಷೆಯನ್ನು ಪೂಜಿಸುತ್ತೇನೆ‘

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮತ್ತು ಸ್ಟಾರ್ ಸ್ಪೋರ್ಟ್ಸ್‌ ಕನ್ನಡ ವಾಹಿನಿಯ ವೀಕ್ಷಕ ವಿವರಣೆಗಾರ ವಿಜಯ್ ಭಾರದ್ವಾಜ್ ಅವರ ಅಂತರಾಳದ ಮಾತಿದು.

ಇಂಗ್ಲೆಂಡ್‌ನಲ್ಲಿ ಜನಿಸಿದ ಕ್ರಿಕೆಟ್ ಇವತ್ತು ಭಾರತದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆ. ಕ್ರಿಕೆಟ್‌ ಜಗತ್ತಿಗೆ ಭಾರತವೇ ದೊಡ್ಡಣ್ಣ. ಆದರೆ ಬಹುಭಾಷೆ ಮತ್ತು ಬಹುಸಂಸ್ಕೃತಿಗಳ ದೇಶದಲ್ಲಿ ದೃಶ್ಯ ಮಾಧ್ಯಮದಲ್ಲಿ ಕ್ರಿಕೆಟ್‌ ವೀಕ್ಷಕ ವಿವರಣೆ ಇಂಗ್ಲಿಷ್‌ನಲ್ಲಿ ಮಾತ್ರ ಇರಬೇಕೆ ಎಂಬ ಪ್ರಶ್ನೆಗೆ ಉತ್ತರರೂಪದಲ್ಲಿ ಪ್ರಾದೇಶಿಕ ಭಾಷೆಗಳ ವಿವರಣೆ ನಿಧನಿಧಾನವಾಗಿ ಜನಪ್ರಿಯವಾಗುತ್ತಿದೆ. ಇದರ ಹಿಂದೆ ಪ್ರಾದೇಶಿಕ ಹಾಗೂ ಗ್ರಾಮಾಂತರ ಮಾರುಕಟ್ಟೆಗಳನ್ನು ಸೆಳೆಯುವ ಉದ್ದೇಶ ಇದ್ದರೂ ಕನ್ನಡ ಭಾಷೆಯನ್ನು ಕ್ರಿಕೆಟ್ ಹಾಗೂ ಇತರ ಕ್ರೀಡೆಗಳೊಂದಿಗೆ ಬೆಸೆಯುವ ಹೊಸ ಅವಕಾಶವನ್ನೂ ತೆರೆದಿಟ್ಟಿದೆ. ಈ ಬೆಳವಣಿಗೆಯೊಂದಿಗೆ ಕನ್ನಡ ವೀಕ್ಷಕ ವಿವರಣೆ ಒಂದು ವೃತ್ತಿಯಾಗಿಯೂ ಗಟ್ಟಿಗೊಳ್ಳುತ್ತಿರುವುದು ಆಸಕ್ತಿಕರ.

ಪ್ರೊ ಕಬಡ್ಡಿ, ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಹಾಗೂ ಖೇಲೊ ಇಂಡಿಯಾ ಸೇರಿ ಸ್ಟಾರ್ ನೆಟ್‌ವರ್ಕ್ ಪ್ರಸಾರ ಹಕ್ಕುಗಳಿರುವ ಕ್ರೀಡಾ ಚಟುವಟಿಕೆಗಳಲ್ಲಿ ಈಗ ಕನ್ನಡ ಅನುರಣಿಸುತ್ತಿದೆ.

ಈ ಬಾರಿಯ ಇಂಡಿಯನ್ ಪ್ರೀಮಿಯರ್‌ ಲೀಗ್ ಕ್ರಿಕೆಟ್ ಟೂರ್ನಿಯ ಮೂಲಕ ಡಿಜಿಟಲ್ ಆ್ಯಪ್ ಮೂಲಕ ಕನ್ನಡದಲ್ಲಿ ಕಾಮೆಂಟ್ರಿ ಕೇಳುತ್ತ ಪಂದ್ಯ ವೀಕ್ಷಿಸುವ ಅವಕಾಶ ಲಭಿಸಿದೆ. ಈ ಸಲ ಮಾಧ್ಯಮ ಹಕ್ಕುಗಳ ಹರಾಜಿನಿಂದಲೇ ಬಿಸಿಸಿಐ ಭರ್ತಿ ₹ 48 ಸಾವಿರ ಕೋಟಿ ಗಳಿಸಿದೆ.

ಟಿವಿ ಹಾಗೂ ಡಿಜಿಟಲ್ ಪ್ರಸಾರ ಹಕ್ಕುಗಳನ್ನು ಪ್ರತ್ಯೇಕವಾಗಿ ಬಿಸಿಸಿಐ ಹರಾಜು ಮಾಡಿತ್ತು. ಅದರಿಂದಾಗಿ ಟಿ.ವಿ. ಹಕ್ಕುಗಳು ಸ್ಟಾರ್ ಸ್ಪೋರ್ಟ್ಸ್‌ಗೆ ಲಭಿಸಿವೆ. ವಯಾಕಾಮ್ 18 (ಜಿಯೋ ಸಿನೆಮಾ) ಡಿಜಿಟಲ್ ಹಕ್ಕುಗಳನ್ನು ಪಡೆದಿತ್ತು. 

2015ರಿಂದಲೇ ಸ್ಟಾರ್ ನೆಟ್‌ವರ್ಕ್ ಕನ್ನಡ ಕಾಮೆಂಟ್ರಿಗೆ ಶ್ರೀಕಾರ ಹಾಕಿತು. ಹಾಟ್‌ಸ್ಟಾರ್ ಆ್ಯಪ್ ಹಾಗೂ ವಾಹಿನಿ ಮೂಲಕ ಹಂತಹಂತವಾಗಿ ವಾಹಿನಿ ಬೆಳೆಯಿತು. ಅದರೊಂದಿಗೆ ಮಾಜಿ ಆಟಗಾರರೂ ವೀಕ್ಷಕ ವಿವರಣೆಗಾರರಾಗಿ ಬೆಳೆಯುತ್ತಿದ್ದಾರೆ.

ಭಾರದ್ವಾಜ್ ಅವರ ತಂಡದಲ್ಲಿ ಜಿ.ಕೆ. ಅನಿಲ್‌ಕುಮಾರ್, ಶ್ರೀನಿವಾಸ್ ಮೂರ್ತಿ, ರಣಜಿ ಆಟಗಾರರಾದ ಭರತ್ ಚಿಪ್ಲಿ, ಪವನ್ ದೇಶಪಾಂಡೆ ಹಾಗೂ ಅಖಿಲ್ ಬಾಲಚಂದ್ರ ಇದ್ದಾರೆ. ಪರಿಣತರಾಗಿ ಜಿ.ಆರ್. ವಿಶ್ವನಾಥ್ ಮತ್ತು ಸುನಿಲ್ ಜೋಶಿ ಆಗಾಗ ಕಾಣಿಸಿಕೊಂಡಿದ್ದರು.

‘ನನಗಂತೂ ಕಳೆದ ಏಳೆಂಟು ವರ್ಷಗಳಿಂದ ವೀಕ್ಷಕ ವಿವರಣೆಯೇ ಪೂರ್ಣಾವಧಿ ವೃತ್ತಿಯಾಗಿದೆ. ಕ್ರಿಕೆಟ್ ಆಟ, ತರಬೇತಿ ಎಲ್ಲವನ್ನೂ ಬಿಟ್ಟಿದ್ದೇನೆ. ಕ್ರಿಕೆಟ್‌ ಅನ್ನು ನನ್ನ ಭಾಷೆಯ ಮೂಲಕ ನಮ್ಮ ರಾಜ್ಯದ ಜನರಿಗೆ ತಲುಪಿಸುವ ಸಾರ್ಥಕ ಕೆಲಸ ಇದು. ನಾನು ಇತ್ತೀಚೆಗೆ ಒಂದು ಮದುವೆಗೆ ಹೋಗಿದ್ದೆ. ಅಲ್ಲಿ 80 ದಾಟಿದ್ದ ಮಹಿಳೆಯೊಬ್ಬರು ನನ್ನನ್ನು ಮಾತನಾಡಿಸಿದರು. ನಿಮ್ಮ ಕಾಮೆಂಟ್ರಿ ಕೇಳಲು ಶುರು ಮಾಡಿದಾಗಿನಿಂದ ಎಲ್‌ಬಿಡಬ್ಲ್ಯು, ಡಿಆರ್‌ಎಸ್‌ಗಳೆಲ್ಲ ಆರ್ಥ ಆಗ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದಕ್ಕಿಂತ ದೊಡ್ಡ ಪ್ರಶಸ್ತಿ ಇನ್ನೇನು ಬೇಕು‘ ಎಂದು ಭಾರದ್ವಾಜ್ ಭಾವುಕರಾಗುತ್ತಾರೆ.

ಸುಮಾರು ಒಂದು ದಶಕದಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ವಿಜಯ್ ಮತ್ತು ಅವರ ತಂಡದ ವಾಗ್ಝರಿ ಹರಿಯುತ್ತಿದೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ ಸುಮಾರು ಒಂದೂವರೆ ಕೋಟಿಗೂ ಹೆಚ್ಚು ಜನರು ಈ ವಾಹಿನಿಯ ಮೂಲಕ ಐಪಿಎಲ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾರೆ.

ಈ ಬಾರಿ ಜಿಯೊ ಸಿನೆಮಾ ಕೂಡ ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ವೀಕ್ಷಕ ವಿವರಣೆಗಳನ್ನು ನೀಡುತ್ತಿದೆ. ಅದರಲ್ಲಿಯೂ ಕರ್ನಾಟಕದ ಮಾಜಿ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್, ಎಸ್. ಅರವಿಂದ್, ಅಮಿತ್ ವರ್ಮಾ, ವೇದಾ ಕೃಷ್ಣಮೂರ್ತಿ, ದೀಪಕ್ ಚೌಗುಲೆ ಹಾಗೂ ಎಚ್‌. ಶರತ್ ಗಮನ ಸೆಳೆಯುತ್ತಿದ್ದಾರೆ.

ಐತಿಹಾಸಿಕ ನಂಟು

ಕ್ರಿಕೆಟ್ ಮತ್ತು ಕಾಮೆಂಟ್ರಿಗೆ ದೀರ್ಘ ಕಾಲದ ನಂಟಿದೆ. ಇಂಗ್ಲಿಷ್ ವೀಕ್ಷಕ ವಿವರಣೆ ಹಾಗೂ ಬರವಣಿಗೆಗಳಿಂದಾಗಿಯೇ ಜಾಗತಿಕಮಟ್ಟದಲ್ಲಿ ಕ್ರಿಕೆಟ್ ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಯಿತು. ನೆವಿಲ್ ಕಾರ್ಡಸ್ ಅವರ ಕ್ರಿಕೆಟ್‌ ಲೇಖನಗಳು ಇಂದಿಗೂ ಪ್ರಸ್ತುತ.  ಬಿಬಿಸಿ ರೇಡಿಯೊ ಹಾಗೂ ಟಿ.ವಿಯಲ್ಲಿ ಇಂಗ್ಲಿಷ್ ಕಾಮೆಂಟ್ರಿ ಕೇಳಲು ಜನರು ಪಾಕೆಟ್ ರೇಡಿಯೊಗಳನ್ನು ಕಿವಿಗಂಟಿಸಿಕೊಂಡಿರುತ್ತಿದ್ದರು. ಭಾರತದಲ್ಲಿ 1950ರ ದಶಕದಲ್ಲಿಯೇ ಕ್ರಿಕೆಟ್ ಕಾಮೆಂಟ್ರಿ ಆರಂಭವಾಗಿತ್ತು. 

ಭಾರತ ಟೆಸ್ಟ್ ತಂಡದ ಮೊದಲ ನಾಯಕ ಕರ್ನಲ್ ಸಿ.ಕೆ. ನಾಯ್ಡು ಅವರ ಮಗಳು ಚಂದ್ರಾ ನಾಯ್ಡು ಭಾರತದ ಮೊಟ್ಟಮೊದಲ ಇಂಗ್ಲಿಷ್ ವೀಕ್ಷಕ ವಿವರಣೆಗಾರರಾಗಿದ್ದರು. ಅದೇ ರೀತಿ ಹಿಂದಿಯಲ್ಲಿ ಪ್ರಥಮ ಕಾಮೆಂಟೆಟರ್ ಆಗಿದ್ದ ಸುಶೀಲ್ ದೋಶಿ ಶಾರೀರ ಬಹುಕಾಲ ಕ್ರಿಕೆಟ್‌ ಅಭಿಮಾನಿಗಳನ್ನು ರಂಜಿಸಿತ್ತು. ಟಿ20 ಕ್ರಿಕೆಟ್ ಕಾಲದಲ್ಲಿಯೂ ಅವರ ವಾಗ್ಜರಿಗೆ ಮನಸೋತವರೆಷ್ಟೋ ಮಂದಿ. ಕನ್ನಡದಲ್ಲಿ ಮೊದಲಿಗೆ ಕಾಮೆಂಟ್ರಿ ಆರಂಭಿಸಿದ ಶ್ರೇಯ ಬಾನುಲಿಗೇ ಸಲ್ಲುತ್ತದೆ. 1960ರಲ್ಲಿ ಕೃಷ್ಣಮೂರ್ತಿ, ಸೂರ್ಯನಾರಾಯಣ ಅವರ ಧ್ವನಿಗಳು ಜನಪ್ರಿಯವಾಗಿದ್ದವು.

ಚಂದ್ರಮೌಳಿ ಕಣವಿ ಅವರು ಕ್ರಿಕೆಟ್, ಕಬಡ್ಡಿ, ಫುಟ್‌ಬಾಲ್ ಕ್ರೀಡೆಗಳಲ್ಲಿ ದಶಕಗಳಿಂದಲೂ ವೀಕ್ಷಕ ವಿವರಣೆಗಾರರಾಗಿ ಗುರುತಿಸಿಕೊಂಡಿದ್ದಾರೆ. ಬಾನುಲಿಯ ದಿನಗಳಲ್ಲಿಯೂ ಜನಪ್ರಿಯರಾಗಿದ್ದ ಅವರು ಸದ್ಯ ಸ್ಟಾರ್ ನೆಟ್‌ವರ್ಕ್‌ನಲ್ಲಿ ಪ್ರಮುಖ ಕಾಮೆಂಟೆಟರ್‌ ಆಗಿದ್ದಾರೆ.

’ರಣಜಿ ಟ್ರೋಫಿಯಂತಹ ದೇಶಿ ಟೂರ್ನಿಗಳಿಗೆ ಕಾಮೆಂಟ್ರಿ ನೀಡುತ್ತಿದ್ದೆವು. ಬಾನುಲಿಗೆ ಮಾಡುವ ದಿನಗಳಲ್ಲಿ ಹಲವು ಸವಾಲುಗಳಿದ್ದವು. ಅದರೆ ಜನರಿಂದ ಸಿಗುತ್ತಿದ್ದ ಪ್ರತಿಕ್ರಿಯೆ ಅದ್ಭುತವಾಗಿರುತ್ತಿತ್ತು. ಕನ್ನಡದಲ್ಲಿ ಟಿವಿಯ ಮೂಲಕ ಕಾಮೆಂಟ್ರಿ 1990ರ ದಶಕದಲ್ಲಿ ಹಂತಹಂತವಾಗಿ ಶುರುವಾಯಿತು. 2011ರಲ್ಲಿ ಸೆಲಿಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಿಗಾಗಿ ಕನ್ನಡದ ವಾಹಿನಿಗಳಲ್ಲಿ ಕಾಮೆಂಟ್ರಿ ಇತ್ತು. ಅದಕ್ಕೂ ಮುನ್ನ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯಲ್ಲಿಯೂ ಪ್ರಯೋಗ ಇತ್ತು. ಆದರೆ ಸ್ಟಾರ್ ನೆಟ್‌ವರ್ಕ್ ಕನ್ನಡ ಆರಂಭಿಸಿದ ನಂತರ ನಿರಂತರವಾಗಿ ನಡೆಯುತ್ತಿದೆ‘ ಎಂದು ಕಣವಿ ವಿವರಿಸುತ್ತಾರೆ.

ಆಟದ ಕುರಿತು ಜನರಿಗೆ ಮನದಟ್ಟು ಮಾಡುವಂತೆ ಮಾತನಾಡುವುದು ಸುಲಭವಲ್ಲ. ಬಹಳಷ್ಟು ಪೂರ್ವ ಸಿದ್ಧತೆ ಮತ್ತು ಆಟದ ಜ್ಞಾನ ಬೇಕು.

’ಪ್ರತಿಯೊಂದು ಕ್ರೀಡೆಯ ವೀಕ್ಷಕ ವಿವರಣೆಗೆ ತನ್ನದೇ ಆದ ಸವಾಲುಗಳು ಇರುತ್ತವೆ. ನಮ್ಮಲ್ಲಿ ಕ್ರಿಕೆಟ್ ಬಗ್ಗೆ ಚಿಕ್ಕಮಕ್ಕಳಿಂದ ವಯೋವೃದ್ಧರವರೆಗೆ ಅಪಾರ ತಿಳಿವಳಿಕೆ ಇರುತ್ತದೆ. ಅಲ್ಲಿ ನಮ್ಮ ಒಂದು ಅತಿ ಸಣ್ಣ ತಪ್ಪನ್ನು ಕೂಡ ಗುರುತಿಸಿಬಿಡುತ್ತಾರೆ. ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ಟೀಕೆಗಳು ಮಹಾಪೂರವಾಗುತ್ತವೆ. ಅದೇ ಕಬಡ್ಡಿಯ ವೀಕ್ಷಕ ವಿವರಣೆ ಮಾಡುವಾಗ ಈ ಆಟದ ಕುರಿತು ತಿಳಿವಳಿಕೆ ಇಲ್ಲದವರಿಗೂ ಸಂವಹನ ಮಾಡುವ ಕಲೆ ಬೇಕು. ತುಸು ವೇಗವಾಗಿ ಈ ಆಟ ನಡೆಯುತ್ತದೆ. ಅದಕ್ಕೆ ತಕ್ಕಂತೆ ನಮ್ಮ ಕಾಮೆಂಟ್ರಿ ಇರಬೇಕು. ಭಾಷೆ, ಧ್ವನಿಯ ಏರಿಳಿತ ಮತ್ತು ತಾಂತ್ರಿಕ ಅಂಶಗಳನ್ನು ಕರಾರುವಾಕ್ಕಾಗಿ ಹೇಳಬೇಕು. ಫುಟ್‌ಬಾಲ್‌ನಲ್ಲಿಯೂ ಇದೇ ಕೌಶಲ ಬೇಕು. ಆದರೆ, ಕಬಡ್ಡಿ ಹಾಗೂ ಫುಟ್‌ಬಾಲ್‌ನಲ್ಲಿ ಆಟಗಾರರ ಕುರಿತ ವಿವರಗಳನ್ನು ತಿಳಿದುಕೊಂಡಿರಬೇಕು. ಅದಕ್ಕಾಗಿ ಪ್ರತಿದಿನ ಐದಾರು ಗಂಟೆ ಅವಧಿಯ ಪೂರ್ವತಯಾರಿ ಅಗತ್ಯ‘ ಎಂದು ಕಣವಿ ಹೇಳುತ್ತಾರೆ.

ಕ್ರಿಕೆಟ್ ಇಂಗ್ಲಿಷರ ಆಟ. ಆದನ್ನು ಕನ್ನಡಕ್ಕೆ ಅಕ್ಷರಶಃ ತರ್ಜುಮೆ ಮಾಡುವುದು ಸಾಧ್ಯವಿಲ್ಲದ ಕೆಲಸ. ಆಡುಭಾಷೆಯಲ್ಲಿ ತಾಂತ್ರಿಕ ಭಾಷೆಯನ್ನು ಮಿಶ್ರ ಮಾಡಿ ಕಾಮೆಂಟ್ರಿ ಮಾಡುವುದೇ ದಾರಿ ಎಂಬುದು ವಿಜಯ್ ಭಾರದ್ವಾಜ್ ಮತ್ತು ಕಣವಿ ಅವರಿಬ್ಬರ ಅಭಿಪ್ರಾಯವೂ ಹೌದು. ಹೊಸಪೀಳಿಗೆಯ ಕಾಮೆಂಟೆಟರ್‌ಗಳಾದ ಅರವಿಂದ್ ಮತ್ತು ಪವನ್ ಕೂಡ ಇದೇ ಮಾತು ಹೇಳುತ್ತಾರೆ.

ಕನ್ನಡ ಕಾಮೆಂಟ್ರಿ ಕೇವಲ ರಾಜ್ಯದ ಮಾರುಕಟ್ಟೆಯನ್ನು ಸೆಳೆಯಲಷ್ಟೇ ಮಾಧ್ಯಮವಾಗಬಾರದು. ಕ್ರಿಕೆಟ್‌ ಮತ್ತು ಕ್ರಿಕೆಟಿಗರಲ್ಲಿ ಕನ್ನಡದ ಬಳಕೆ ವ್ಯಾಪಕವಾಗುವಂತೆ ಮಾಡಬೇಕು ಎಂಬ ಅಭಿಯಾನವೂ ಈಗ ಆರಂಭವಾಗುತ್ತಿರುವುದು ಆಶಾದಾಯಕ. 

ಅಖಿಲ್ ಬಾಲಚಂದ್ರ ವಿಜಯ್ ಭಾರದ್ವಾಜ್ ಮತ್ತು ಜಿ.ಕೆ. ಅನಿಲ್‌ ಕುಮಾರ್
ಅಖಿಲ್ ಬಾಲಚಂದ್ರ ವಿಜಯ್ ಭಾರದ್ವಾಜ್ ಮತ್ತು ಜಿ.ಕೆ. ಅನಿಲ್‌ ಕುಮಾರ್
ಜಿ.ಕೆ. ಅನಿಲಕುಮಾರ್ ಮತ್ತು ವಿಜಯ್ ಭಾರದ್ವಾಜ್
ಜಿ.ಕೆ. ಅನಿಲಕುಮಾರ್ ಮತ್ತು ವಿಜಯ್ ಭಾರದ್ವಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT