ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಸಿಎ ಚುನಾವಣೆ ಇಂದು

Last Updated 2 ಅಕ್ಟೋಬರ್ 2019, 19:34 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಡಳಿತ ಸಮಿತಿಯ ಚುನಾವಣೆಯು ಗುರುವಾರ ನಡೆಯಲಿದೆ.

ಐವರು ಪದಾಧಿಕಾರಿಗಳ ಸ್ಥಾನಗಳಿಗೆ 12 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ವ್ಯವಸ್ಥಾಪನ ಸಮಿತಿ ಸದಸ್ಯರ 11 ಸ್ಥಾನಗಳಿಗೆ 15 ಮಂದಿ ಸ್ಥರ್ಧಿಸಿದ್ದಾರೆ.ಅಂತರರಾಷ್ಟ್ರೀಯ ಕ್ರಿಕೆಟಿಗ ರೋಜರ್ ಬಿನ್ನಿ ಮತ್ತು ಕ್ಯಾಪ್ಟನ್ ಹರೀಶ್ ಅವರು ಅಧ್ಯಕ್ಷ ಸ್ಥಾನಕ್ಕೆ ಪೈಪೊಟಿ ನಡೆಸುತ್ತಿದ್ದಾರೆ. ಅವರಿಬ್ಬರ ಬಣಗಳ ಅಭ್ಯರ್ಥಿಗಳ ಬೇರೆ ಬೇರೆ ಸ್ಥಾನಗಳಿಗೆ ಸ್ಪರ್ಧಾ ಕಣಕ್ಕೆ ಇಳಿದಿದ್ದಾರೆ.

ಒಟ್ಟು ಎರಡು ಸಾವಿರಕ್ಕೂ ಹೆಚ್ಚು ಸದಸ್ಯರು ಮತ ಚಲಾಯಿಸಲು ವೇದಿಕೆ ಸಿದ್ಧವಾಗಿದೆ. ಇದರಲ್ಲಿ ಆಜೀವ ಸದಸ್ಯರು, ಕ್ರಿಕೆಟ್‌ ಕ್ಲಬ್‌ ಪ್ರತಿನಿಧಿಗಳು, ಅಂತರರಾಷ್ಟ್ರೀಯ ಪುರುಷ ಮತ್ತು ಮಹಿಳಾ ಕ್ರಿಕೆಟಿಗರು ಸೇರಿದ್ದಾರೆ. ಗುರುವಾರ ಬೆಳಿಗ್ಗೆ 11 ಗಂಟೆಯಿಂದ ಸಂಜೆ 7ರವರೆಗೆ ಮತದಾನ ನಡೆಯಲಿದೆ. ನಂತರ ಮತ ಎಣಿಕೆಯು ನಡೆಯಲಿದೆ. ಚುನಾವಣಾಧಿಕಾರಿ ಎಂ.ಆರ್. ಹೆಗಡೆ ಅವರ ಮಾರ್ಗದರ್ಶನದಲ್ಲಿ ಎಲ್ಲ ಪ್ರಕ್ರಿಯೆಗಳೂ ನಡೆಯಲಿವೆ.

2014ರಲ್ಲಿ ಕೆಎಸ್‌ಸಿಎಗೆ ಚುನಾವಣೆ ನಡೆದಿತ್ತು. 2017ರಲ್ಲಿ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಅವರ ಶಿಫಾರಸುಗಳ ಜಾರಿಗೆ ಸುಪ್ರೀಂಕೋರ್ಟ್‌ ಆದೇಶ ನೀಡಿತ್ತು.ಆಗ ಒಂಬತ್ತು ವರ್ಷಕ್ಕಿಂತ ಹೆಚ್ಚಿನ ಅವಧಿ ಪೂರೈಸಿದ, 70 ವರ್ಷ ವಯಸ್ಸು ಮೀರಿದ ಪದಾಧಿಕಾರಿಗಳನ್ನು ಕೆಳಗಿಳಿಸಬೇಕು ಎಂದು ಸೂಚಿಸಲಾಗಿತ್ತು. ಆದ್ದರಿಂದ ಆಗ ಅಧ್ಯಕ್ಷರಾಗಿದ್ದ ಅಶೋಕಾನಂದ ಮತ್ತು ಕಾರ್ಯದರ್ಶಿಯಾಗಿದ್ದ ಬ್ರಿಜೇಶ್ ಪಟೇಲ್ ಅವರು ತಮ್ಮ ಸ್ಥಾನಗಳನ್ನು ತೊರೆದಿದ್ದರು. ಒಂಬತ್ತು ವರ್ಷಗಳಿಗಿಂತ ಹೆಚ್ಚು ಕೆಎಸ್‌ಸಿಎಯ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿರುವ ಹಿರಿಯ ಕ್ರಿಕೆಟಿಗ ಬ್ರಿಜೇಶ್ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಅವರು ರೋಜರ್‌ ಬಿನ್ನಿ ಬಳಗವನ್ನು ಬೆಂಬಲಿಸಿದ್ದಾರೆ.

ಹೋದ ಎರಡೂವರೆ ವರ್ಷಗಳಿಂದ ಹಂಗಾಮಿ ಆಡಳಿತ ಮಂಡಳಿಯು ಕಾರ್ಯನಿರ್ವಹಿಸಿತು. ಸಂಜಯ್ ದೇಸಾಯಿ ಮತ್ತು ಸುಧಾಕರ್ ರಾವ್ ಅವರು ಕ್ರಮವಾಗಿ ಅಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಈ ಬಣದಿಂದ ಈಗಾಗಲೇ ನಾಲ್ಕು ವಲಯಗಳಿಂದ ವ್ಯವಸ್ಥಾಪನ ಸಮಿತಿಯ ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ.

ಸುಧಾಕರ್ ರೈ (ಮೈಸೂರು), ಕೆ. ಶಶಿಧರ್ (ತುಮಕೂರು), ಅವಿನಾಶ್ ಪೋತದಾರ (ಧಾರವಾಡ) ಮತ್ತು ಡಿ.ಎಸ್. ಅರುಣ್ (ಶಿವಮೊಗ್ಗ) ಅವರು ಆಯ್ಕೆಯಾಗಿದ್ದಾರೆ.

ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಬಿಸಿಸಿಐ ಕ್ರಿಕೆಟ್‌ ಆಡಳಿತ ಸಮಿತಿಯು ಸೆಪ್ಟೆಂಬರ್ 28ರೊಳಗೆ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಚುನಾವಣೆ ಮುಗಿಸಬೇಕು ಎಂದು ಆಗಸ್ಟ್‌ ಅಂತ್ಯದಲ್ಲಿ ಸೂಚನೆ ನೀಡಿತ್ತು. ಹೋದ ತಿಂಗಳ ಮಧ್ಯದಲ್ಲಿ ಕೆಎಸ್‌ಸಿಎ ನೀಡಿದ್ದ ಪರಿಷ್ಕೃತ ನಿಯಮಾವಳಿಗೆ ಅನುಮೋದನೆ ನೀಡಿತ್ತು.

ಅಭಿವೃದ್ಧಿ ಕಾರ್ಯಗಳು ಬಹಳಷ್ಟಾಗಿವೆ: ಬಿನ್ನಿ

ಕೆಎಸ್‌ಸಿಎ ಮೇಲೆ ಕೆಲವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಕಳೆದ ಆರು ವರ್ಷಗಳಲ್ಲಿ ಸಂಸ್ಥೆಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ಉತ್ತಮವಾಗಿದೆ. ಅತ್ಯಂತ ಪಾರದರ್ಶಕವಾದ ಆಡಳಿತ ನಡೆಸಲಾಗಿದೆ ಎಂದು ಕೆಎಸ್‌ಸಿಎ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ರೋಜರ್ ಬಿನ್ನಿ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾವು ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಕ್ರಿಕೆಟ್‌ ಮತ್ತು ಕ್ರಿಕೆಟಿಗರ ಅಭಿವೃದ್ಧಿಯೇ ನಮ್ಮ ಗುರಿ. ಪಂದ್ಯ ವೀಕ್ಷಣೆಗೆ ಬರುವ ಪ್ರೇಕ್ಷಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುತ್ತೇವೆ. ಕ್ರಿಕೆಟ್‌ ಸಂಬಂಧಿತ ವೃತ್ತಿಗಳಲ್ಲಿ ಆಟಗಾರರಿಗೆ ಅವಕಾಶ ನೀಡಲಾಗುವುದು. ಅದಕ್ಕೆ ತಕ್ಕ ತರಬೇತಿ ಮತ್ತಿತರ ಸೌಲಭ್ಯಗಳನ್ನು ನೀಡುತ್ತೇವೆ. ವಿಮಾ ಯೋಜನೆಯನ್ನು ವಿಸ್ತರಿಸುತ್ತೇವೆ’ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯದರ್ಶಿ ಸ್ಥಾನದ ಅಭ್ಯರ್ಥಿ ಸಂತೋಷ್ ಮೆನನ್, ‘ಕೆಪಿಎಲ್ ಟೂರ್ನಿಯಲ್ಲಿ ಫಿಕ್ಸಿಂಗ್ ಆರೋಪಗಳ ಕುರಿತು ಪೊಲೀಸ್ ಇಲಾಖೆಯಿಂದ ನಮಗೆ ಸಮಗ್ರ ಮಾಹಿತಿ ಬರಬೇಕಿದೆ. ತಪ್ಪು ಯಾರದ್ದೇ ಆಗಿದ್ದರೂ ಕಠಿಣ ಕ್ರಮ ಕೈಗೊಳ್ಳುವ ಸೂಚನೆ ನೀಡಲಾಗುವುದು’ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT