ಶನಿವಾರ, ಫೆಬ್ರವರಿ 27, 2021
19 °C

ಸ್ಲಿಂಗ್‌...ಸ್ವಿಂಗ್; ಲಸಿತ್ ಕಿಂಗ್

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

ಏಕದಿನ ಕ್ರಿಕೆಟ್‌ನಲ್ಲಿ ಮೂರು ಬಾರಿ ಹ್ಯಾಟ್ರಿಕ್ ಗಳಿಸಿದ ವಿಶ್ವದ ಏಕೈಕ ಬೌಲರ್ ಯಾರು...? ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಎರಡು ಹ್ಯಾಟ್ರಿಕ್ ಸಾಧನೆ ಮಾಡಿರುವ ಒಬ್ಬನೇ ಒಬ್ಬ ಬೌಲರ್ ಯಾರು...? ಏಕದಿನ ಮಾದರಿಯಲ್ಲಿ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಬೀಳಿಸಿದ ಬೌಲರ್ ಯಾರಾದರೂ ಇದ್ದಾರೆಯೇ...?

ಕ್ರಿಕೆಟ್‌ಗೆ ಸಂಬಂಧಿಸಿದ ಇಂಥ ಇನ್ನೂ ಅನೇಕ ಪ್ರಶ್ನೆಗಳಿಗೆ ಉತ್ತರ ಒಂದೇ-ಶ್ರೀಲಂಕಾದ ಲಸಿತ್ ಮಾಲಿಂಗ. ವಿಶ್ವ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನರಾಗಿದ್ದ ಮಾಲಿಂಗ ಏಕದಿನ ಕ್ರಿಕೆಟ್‌ನಲ್ಲಿ ವಿಶೇಷ ಛಾಪು ಮೂಡಿಸಿದ್ದಾರೆ. ತವರಿನಲ್ಲಿ ಬಾಂಗ್ಲಾದೇಶ ಎದುರಿನ ಸರಣಿಯ ಮೊದಲ ಪಂದ್ಯದ ನಂತರ ನಿಗದಿತ ಓವರ್‌ಗಳ ಕ್ರಿಕೆಟ್‌ಗೆ ಅವರು ವಿದಾಯ ಹೇಳಿದ್ದಾರೆ. ಇದರೊಂದಿಗೆ ವಿಶಿಷ್ಟ ಬೌಲಿಂಗ್ ಶೈಲಿ, ಬಣ್ಣಬಣ್ಣದ ಕೂದಲಿನ ಮೂಲಕ ಕ್ರಿಕೆಟ್ ಅಂಗಣವನ್ನು ರಂಗಾಗಿಸಿದ್ದ ಆಟಗಾರನೊಬ್ಬ ತೆರೆಯ ಮರೆಗೆ ಸರಿದಂತಾಗಿದೆ.

2014ರ ಟ್ವೆಂಟಿ-20 ವಿಶ್ವಕಪ್ ಪ್ರಶಸ್ತಿ ಗೆದ್ದ ತಂಡವನ್ನುಮುನ್ನಡೆಸಿದ್ದ ಮಾಲಿಂಗ 2007 ಮತ್ತು 2011ರ ವಿಶ್ವಕಪ್ ಟೂರ್ನಿಗಳಲ್ಲಿ ಫೈನಲ್ ಪ್ರವೇಶಿಸಿದ ತಂಡದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಸತತ ಗಾಯದ ಸಮಸ್ಯೆಯಿಂದಾಗಿ ನಾಯಕತ್ವ ತ್ಯಜಿಸಬೇಕಾಗಿ ಬಂದರೂ ಫೀನಿಕ್ಸ್ ನಂತೆ ಮೇಲೆದ್ದು ರಾಷ್ಟ್ರೀಯ ತಂಡದ ಸಾಧನೆಗಳಲ್ಲಿ ಭಾಗಿಯಾಗಿದ್ದರು. ಈ ಬಾರಿಯ ಐಪಿಎಲ್ ಟೂರ್ನಿ ಸಂದರ್ಭದಲ್ಲಿ 12 ತಾಸುಗಳ ಒಳಗೆ ಎರಡು ದೇಶಗಳಲ್ಲಿ ಒಟ್ಟು 10 ವಿಕೆಟ್ ಉರುಳಿಸಿ ಮಾಲಿಂಗ ಸುದ್ದಿಯಾಗಿದ್ದರು. ಏಪ್ರಿಲ್ ಮೂರರಂದು ಮುಂಬೈಯಲ್ಲಿ ನಡೆದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಅವರು ಮರುದಿನ ಮುಂಜಾನೆ ವಿಮಾನದಲ್ಲಿ ತಾಯ್ನಾಡಿಗೆ ಮರಳಿ ದೇಶಿ ಏಕದಿನ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಮುಂಬೈಯಲ್ಲಿ 34ಕ್ಕೆ3 ವಿಕೆಟ್ ಕಬಳಿಸಿದ್ದ ಡೆತ್ ಓವರ್ ಪರಿಣತ ಲಂಕಾದ ಕ್ಯಾಂಡಿಯಲ್ಲಿ ಗಾಲ್ ತಂಡವನ್ನು ಮುನ್ನಡೆಸಿದ್ದರು. ಕ್ಯಾಂಡಿ ಎದುರಿನ ಈ ಪಂದ್ಯದಲ್ಲಿ 49ಕ್ಕೆ7 ವಿಕೆಟ್ ಪಡೆದಿದ್ದರು. ಇದು, ಮಾಲಿಂಗ ಅವರ ಬದ್ಧತೆ ಮತ್ತು ಆಟದ ಮೇಲಿನ ಪ್ರೀತಿಯ ಪ್ರತೀಕ.

ಕಡಲ ಕಿನಾರೆಯ ಮರಳಲ್ಲಿ ಆರಂಭ

ಸಮುದ್ರ ಕಿನಾರೆಯ ಗ್ರಾಮದಲ್ಲಿ ಜನಿಸಿದ ಮಾಲಿಂಗ ಮೊದ ಮೊದಲು ಮರಳಿನಲ್ಲಿ ಕ್ರಿಕೆಟ್ ಆಡುತ್ತಿದ್ದರು. ಅವರು ಬಳಸುತ್ತಿದ್ದ ಬ್ಯಾಟ್ ತೆಂಗಿನ ಗರಿಯ ದಿಂಡಿನಲ್ಲಿ ಮಾಡಿದ್ದು. ಮೆಕ್ಯಾನಿಕ್ ಆಗಿದ್ದ ತಂದೆ, ಮಗನಿಗೆ ಶಿಕ್ಷಣ ಮತ್ತು ಕ್ರಿಕೆಟ್‌ನಲ್ಲಿ ತರಬೇತಿ ಕೊಡಿಸಿದರು.

ಕಾಲೇಜು ದಿನಗಳಲ್ಲಿ ಅವರಲ್ಲಿದ್ದ ಕ್ರಿಕೆಟ್ ಪ್ರತಿಭೆಯನ್ನು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಚಂಪಕ ರಾಮನಾಯಕೆ ಗುರುತಿಸಿದರು. ಅಲ್ಲಿಂದ ಮಾಲಿಂಗ ಅವರ ಬದುಕು ತಿರುವು ಪಡೆಯಿತು. ಸ್ಲಿಂಗ್‌ ಶೈಲಿಯ, ಇನ್‌ಸ್ವಿಂಗ್ ಬೌಲಿಂಗ್ ಮೂಲಕ ವೃತ್ತಿ ಬದುಕನ್ನು ವರ್ಣರಂಜಿತವಾಗಿಸಿದರು.

ನುವಾನ್ ತುಷಾರ ಎಂಬ ‘ಪೊಡಿ’ ಮಾಲಿಂಗ

‘ಸ್ಲಿಂಗ್’ ಬೌಲಿಂಗ್ ಮೂಲಕ ವಿಶ್ವದ ಗಮನ ಸೆಳೆದಿರುವ ಲಸಿತ್ ಮಾಲಿಂಗ ಅವರದೇ ಶೈಲಿಯಲ್ಲಿ ಚೆಂಡು ಎಸೆಯುವ ಬೌಲರ್ ಶ್ರೀಲಂಕಾದಲ್ಲಿ ಇದ್ದಾರೆ. ಪೊಡಿ (ಮರಿ) ಮಾಲಿಂಗ ಎಂದೇ ಕರೆಯಲಾಗುವ ಈ ಆಟಗಾರನ ಹೆಸರು ನುವಾನ್ ತುಷಾರ. ಮಾಲಿಂಗ ಅವರಿಗಿಂತ ತುಸು ಹೆಚ್ಚು ರನ್ ಅಪ್ ಮಾಡುವ ಇವರು ಚೆಂಡನ್ನು ರಿಲೀಸ್ ಮಾಡುವ ಶೈಲಿ ಥೇಟ್ ಮಾಲಿಂಗ ಅವರದ್ದೆ.

ದಪ್ಪವಾದ ಕಣ್ಣಿನ ಹುಬ್ಬು, ಗುಂಗುರು ಕೂದಲ ರಾಶಿ ಮತ್ತು ಉರುಟು ಮುಖ ಮಾಲಿಂಗ ಅವರನ್ನೇ ಹೋಲುವಂತೆ ಇದೆ. ಹೀಗಾಗಿ ಮರಿ ಮಾಲಿಂಗ ಎಂಬ ಹೆಸರು ಅನ್ವರ್ಥ ಆಗುವಂತೆ ಇದೆ.

‘ನಾನು ಮಾಲಿಂಗ ಅವರ ಶೈಲಿಯನ್ನು ಬೇಕೆಂದೇ ಅಭ್ಯಾಸ ಮಾಡಲಿಲ್ಲ. ಬಾಲ್ಯದಿಂದಲೇ ನಾನು ಹೀಗೆಯೇ ಬೌಲಿಂಗ್ ಮಾಡುತ್ತಿದ್ದೇನೆ. ಸಾಫ್ಟ್ ಬಾಲ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದ ನನ್ನನ್ನು ಗೆಳೆಯನೊಬ್ಬ ಕೊಲಂಬೊಗೆ ಕರೆದುಕೊಂಡು ಹೋಗಿ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ಗೆ ಸೇರಿಸಿದ. ನಂತರ ಕೊಲಂಬೊ ಕ್ರಿಕೆಟ್ ಕ್ಲಬ್ ಸೇರಿಕೊಂಡೆ. ಕ್ರಿಕೆಟ್‌ನಲ್ಲಿ ಸಾಧನೆ ಮಾಡಬೇಕೆಂಬ ಆಸೆ ಇದೆ. ಆದರೆ ಮನೆಯಲ್ಲಿ ಪರಿಸ್ಥಿತಿ ಉತ್ತಮವಾಗಿಲ್ಲ. ತಂದೆ ಕಟ್ಟಡ ನಿರ್ಮಾಣ ಕಾರ್ಮಿಕನಾಗಿದ್ದು ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ’ ಎನ್ನುತ್ತಾರೆ ತುಷಾರ.

ಲಸಿತ್ ಮಾಲಿಂಗ ಅವರನ್ನು ತುಷಾರ ಒಂದೆರಡು ಬಾರಿ ಭೇಟಿ ಮಾಡಿದ್ದು ಸಲಹೆ ಪಡೆದಿದ್ದಾರೆ. ‘ಕೆಲವು ಸಂದರ್ಭದಲ್ಲಿ ನುವಾನ್ ತುಷಾರ ಬೌಲಿಂಗ್ ಮಾಡುವುದನ್ನು ನೋಡಿದ್ದೇನೆ. ಅವರಿಗೆ ಉತ್ತಮ ಭವಿಷ್ಯವಿದೆ’ ಎಂದು ಮಾಲಿಂಗ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು