ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಜ ಟ್ರೋಫಿ: ಕಣಕ್ಕೆ ಮರಳಲು ಪ್ರಸಿದ್ಧ ಕೃಷ್ಣ ಸಿದ್ಧ

ಮಹಾರಾಜ ಟ್ರೋಫಿ: ಮೈಸೂರು ವಾರಿಯರ್ಸ್‌ ಬಳಗದಲ್ಲಿ ವೇಗಿ
Published 11 ಆಗಸ್ಟ್ 2023, 16:13 IST
Last Updated 11 ಆಗಸ್ಟ್ 2023, 16:13 IST
ಅಕ್ಷರ ಗಾತ್ರ

ಬೆಂಗಳೂರು:  ದೀರ್ಘ ಸಮಯದಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಪ್ರಸಿದ್ಧಕೃಷ್ಣ ಈಗ ಮತ್ತೆ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. 

ಹೋದ ವರ್ಷದ ಆಗಸ್ಟ್‌ನಿಂದಲೇ ಬೆನ್ನುನೋವಿನಿಂದ ಬಳಲಿದ್ದ ಅವರು ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ನಂತರ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಆರೈಕೆ ಪಡೆದಿದ್ದರು. ಐಪಿಎಲ್‌ನಲ್ಲಿಯೂ ಆಡಿರಲಿಲ್ಲ. ಇದೀಗ ಅವರು ಮಹಾರಾಜ ಟ್ರೋಫಿಯಲ್ಲಿ ಆಡುವ ಮೂಲಕ ಕಣಕ್ಕೆ ಮರಳಲು ಸಿದ್ಧರಾಗಿದ್ದಾರೆ. ಅಲ್ಲದೇ ಐರ್ಲೆಂಡ್‌ ಟಿ20 ಸರಣಿ ಆಡಲು ತೆರಳಲಿರುವ ಭಾರತ ತಂಡದೊಂದಿಗೆ ಪ್ರಯಾಣ ಬೆಳೆಸಲು ಸಜ್ಜಾಗಿದ್ದಾರೆ.

ಇದೇ 13ರಂದು ಆರಂಭವಾಗಲಿರುವ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಪ್ರಸಿದ್ಧಕೃಷ್ಣ ಅವರು ಮೈಸೂರು ವಾರಿಯರ್ಸ್ ತಂಡವನ್ನು ಪ್ರತಿನಿಧಿಸುವರು.

ಶುಕ್ರವಾರ ತಂಡದ ನಾಯಕ ಮತ್ತು ಮುಖ್ಯ ಕೋಚ್ ಅವರನ್ನು ಪ್ರಕಟಿಸುವ ಕಾರ್ಯಕ್ರಮದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಸಿದ್ಧ, ‘ಸಂಪೂರ್ಣ ಫಿಟ್ ಆಗಿದ್ದೇನೆ. ಮೈಸೂರಿನಲ್ಲಿ ಉತ್ತಮ ಅಭ್ಯಾಸ ಮಾಡಿದ್ದೇನೆ. ಐರ್ಲೆಂಡ್‌ಗೆ ಹೋಗಲು ಸಿದ್ಧವಾಗಿರುವೆ‘ ಎಂದರು. ಸೋಮವಾರ ಅವರು ಐರ್ಲೆಂಡ್‌ಗೆ ತೆರಳುವ ಸಾಧ್ಯತೆ ಇದ್ದು. ಭಾನುವಾರ ಆರಂಭವಾಗುವ ಮಹಾರಾಜ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ.

ಈ ಸಂದರ್ಭದಲ್ಲಿ ತಂಡದ ನಾಯಕನಾಗಿ ನೇಮಕವಾದ ಕರುಣ್ ನಾಯರ್, ‘ಮೈಸೂರು ವಾರಿಯರ್ಸ್‌ನಲ್ಲಿ  ಉತ್ತಮ ಆಟಗಾರರಿದ್ದಾರೆ. ಇಂತಹ ಬಳಗವನ್ನು ಮುನ್ನಡೆಸಲು ಸಂತಸವಾಗುತ್ತಿದೆ. ಈ ಟೂರ್ನಿಯಲ್ಲಿ ತಂಡವು ಉನ್ನತ ಸಾಧನೆ ಮಾಡಲಿದೆ‘ ಎಂದು ವಿಶ್ವಾಸವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಂಡದ ಮುಖ್ಯ ಕೋಚ್ ಆರ್‌.ಎಕ್ಸ್‌. ಮುರಳೀಧರ್, ‘ತಂಡದಲ್ಲಿರುವ ಉದಯೋನ್ಮುಖ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಲು ಸಂತಸವಾಗುತ್ತಿದೆ. ಭವಿಷ್ಯದಲ್ಲಿ ರಾಷ್ಟ್ರೀಯ ತಂಡದಲ್ಲಿಯೂ ಆಡುವಂತೆ ಅವರನ್ನೆಲ್ಲ ಸಿದ್ಧಗೊಳಿಸುವುದು ನಮ್ಮ ಗುರಿ‘ ಎಂದರು.

‘ನಮ್ಮ ಫ್ರ್ಯಾಂಚೈಸಿಯು ಕ್ರಿಕೆಟ್ ತಂಡ ಮಾತ್ರವಲ್ಲ. ಸಮಾಜಮುಖಿಯಾಗಿ ಹಲವು ಉತ್ತಮ ಕಾರ್ಯಗಳಲ್ಲಿ ಭಾಗಿಯಾಗಿದೆ. ಕ್ರಿಕೆಟ್‌ನಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತಿದೆ. ಪ್ರತಿಭಾಶೋಧದಲ್ಲಿ ಈ ಬಾರಿ ಲಂಕೇಶ್ ಮತ್ತು ಗೌತಮ್ ಸಾಗರ್ ಎಂಬ ಪ್ರತಿಭಾವಂತರನ್ನು ಆಯ್ಕೆ ಮಾಡಿದ್ದೇವೆ‘ ತಂಡದ ಮಾಲೀಕರೂ ಮತ್ತು ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗಾ ಹೇಳಿದರು.  

ತಂಡದ ಸಹಾಯಕ ಕೋಚ್ ವಿಜಯ್ ಮದ್ಯಾಳ್ಕರ್, ಬೌಲಿಂಗ್ ಕೋಚ್ ಆದಿತ್ಯ ಸಾಗರ್, ಫಿಸಿಯೊ ಶ್ರೀರಂಗ, ಟ್ರೈನರ್ ಅರ್ಜುನ್ ಹೊಯ್ಸಳ ಹಾಗೂ ಪರ್ಫಾರ್ಮೆನ್ಸ್‌ ಅ್ಯನಾಲಿಸ್ಟ್ ಸಚ್ಚಿದಾನಂದ ಹಾಗೂ ಷಣ್ಮುಗಂ ಮಸ್ಸಾರ್ ಮತ್ತು ಆಟಗಾರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT