ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧಿಮಾನ್ ಸಹಾಗೆ ಬೆದರಿಕೆ: ಪತ್ರಕರ್ತ ಮಜುಂದಾರ್‌ಗೆ ಎರಡು ವರ್ಷ ನಿರ್ಬಂಧ

ಬಿಸಿಸಿಐ ತೀರ್ಮಾನ
Last Updated 4 ಮೇ 2022, 13:52 IST
ಅಕ್ಷರ ಗಾತ್ರ

ಮುಂಬೈ: ಭಾರತ ಕ್ರಿಕೆಟ್ ತಂಡದ ವಿಕೆಟ್‌ಕೀಪರ್– ಬ್ಯಾಟರ್ ವೃದ್ಧಿಮಾನ್ ಸಹಾ ಅವರನ್ನು ಬೆದರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಬೊರಿಯಾ ಮಜುಂದಾರ್ ಅವರಿಗೆ ಮುಂದಿನ ಎರಡು ವರ್ಷಗಳ ಕಾಲ ಕ್ರೀಡಾಂಗಣಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಈ ಅವಧಿಯಲ್ಲಿ ಅವರಿಗೆ ಬಿಸಿಸಿಐನಿಂದ ಮಾನ್ಯತಾ ಪತ್ರ ಸಿಗುವುದಿಲ್ಲ ಅವರು ಯಾವುದೇ ಕ್ರಿಕೆಟಿಗನನ್ನೂ ಸಂದರ್ಶನ ಮಾಡುವಂತೆ ಇಲ್ಲ. ದೇಶಿ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆಯುವ ಕ್ರೀಡಾಂಗಣಗಳನ್ನು ಪ್ರವೇಶಿಸುವಂತಿಲ್ಲ. ಬಿಸಿಸಿಐ ಅಧೀನ ಸಂಸ್ಥೆಗಳು, ಸದಸ್ಯರೊಂದಿಗೆ ಸಂಪರ್ಕ ಇಟ್ಟುಕೊಳ್ಳುವಂತಿಲ್ಲ. ಮಂಡಳಿಯ ಯಾವುದೇ ಸೌಲಭ್ಯವನ್ನೂ ಬಳಸಿಕೊಳ್ಳುವಂತಿಲ್ಲ.

ತಮಗೆ ಬೆದರಿಕೆಯೊಡ್ಡಿದ್ದ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಸಹಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆದರೆ ಆ ಸಂದರ್ಭದಲ್ಲಿ ತಮಗೆ ಬೆದರಿಕಯೊಡ್ಡಿದ ಪತ್ರಕರ್ತನ ಹೆಸರು ಬಹಿರಂಗಪಡಿಸಲು ಸಹಾ ಒಪ್ಪಿರಲಿಲ್ಲ.

ಫೆ. 25ರಂದು ಈ ಪ್ರಕರಣದ ವಿಚಾರಣೆಗಾಗಿ ಬಿಸಿಸಿಐ ಮೂವರು ಸದಸ್ಯರ ಸಮಿತಿಯೊಂದನ್ನು ರಚಿಸಿತು. ಮಂಡಳಿಯ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಖಜಾಂಚಿ ಅರುಣಸಿಂಗ್ ಧುಮಾಲ್ ಮತ್ತು ಕೌನ್ಸಿಲರ್ ಪ್ರಭತೇಜ್ ಸಿಂಗ್ ಭಾಟಿಯಾ ಅವರ ಸಮಿತಿಯು ನಡೆಸಿದ ವಿಚಾರಣೆಯಲ್ಲಿ ಸಹಾ ಅವರು ತಮಗೆ ಬೊರಿಯಾ ಮಜುಂದಾರ್ ಎಂಬ ಪತ್ರಕರ್ತ ಬೆದರಿಕೆ ಸಂದೇಶ ಕಳುಹಿಸಿರುವುದಾಗಿ ತಿಳಿಸಿದ್ದರು.

‘ವೃದ್ಧಿಮಾನ್ ಸಹಾ ಅವರು ಪತ್ರಕರ್ತನ ಬೆದರಿಕೆ ಸಂದೇಶಗಳ ಸ್ಕ್ರೀನ್‌ ಶಾಟ್‌ಗಳನ್ನು ಹಂಚಿಕೊಂಡಿದ್ದರು. ವಿಚಾರಣೆ ಸಮಯದಲ್ಲಿ ಅವರು ಪತ್ರಕರ್ತನ ಹೆಸರು ವಿವರಗಳನ್ನು ಬಹಿರಂಗಗೊಳಿಸಿದ್ದರು. ಬೊರಿಯಾ ಅವರನ್ನೂ ವಿಚಾರಣೆ ಮಾಡಲಾಯಿತು. ಸಮಿತಿಯು ಇಬ್ಬರ ಹೇಳಿಕೆಗಳನ್ನು ಪಡೆದ ನಂತರ ತೀರ್ಮಾನ ಕೈಗೊಂಡಿದೆ. ಅಪೆಕ್ಸ್‌ ಕೌನ್ಸಿಲ್‌ ಅನುಮೋದನೆ ನೀಡಿದೆ. ಆ ಪ್ರಕಾರ ಕ್ರಮ ಜರುಗಿಸಲಾಗಿದೆ’ ಎಂದು ಬಿಸಿಸಿಐ ಹಂಗಾಮಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಮಂಗ್ ಅಮಿನ್ ತಿಳಿಸಿದ್ದಾರೆ.

ಟ್ವೀಟ್‌ನಲ್ಲಿ ಏನಿತ್ತು
ಬೊರಿಯಾ ತಮಗೆ ಟ್ವೀಟ್ ಮಾಡಿದ್ದ ಸ್ಕ್ರೀನ್‌ ಶಾಟ್‌ಗಳನ್ನು ಫೆಬ್ರುವರಿ19ರಂದು ಸಾಮಾಜಿಕ ಜಾಲತಾಣಗಳಲ್ಲಿ ಸಹಾ ಹಂಚಿಕೊಂಡಿದ್ದರು.

‘ನನಗೆ ಸಂದರ್ಶನ ಕೊಡಿ ಮುಂದೆ ಒಳ್ಳೆಯದಾಗುತ್ತದೆ. ತಂಡದಲ್ಲಿ 11 ಜನರಲ್ಲಿ ಒಬ್ಬ ವಿಕೆಟ್‌ಕೀಪರ್‌ನನ್ನು ಆಯ್ಕೆ ಮಾಡುತ್ತಾರೆ. ಆದರೆ, ನೀವು 11 ಉತ್ತಮರಲ್ಲದ ಪತ್ರಕರ್ತರನ್ನು ಆಯ್ಕೆ ಮಾಡಿಕೊಂಡಿರುವುದು ಸರಿಯಲ್ಲ. ನಿಮಗೆ ನೆರವು ನೀಡಬಲ್ಲ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ’ ಎಂದು ಸರಣಿ ಸಂದೇಶಗಳನ್ನು ಬೊರಿಯಾ ಕಳಿಸಿದ್ದರು. ಸಹಾಗೆ ವಾಟ್ಸ್‌ಆಪ್ ಕರೆಯನ್ನೂ ಮಾಡಿದ್ದರು. ಅದನ್ನು ಸಹಾ ಸ್ವೀಕರಿಸಿರಲಿಲ್ಲ.

ಅದರಿಂದ ಕುಪಿತಗೊಂಡಿದ್ದ ಬೊರಿಯಾ, ‘ನೀವು ನನಗೆ ಮರಳಿ ಕರೆ ಮಾಡಿಲ್ಲ. ಈ ಅವಮಾನವನ್ನು ನಾನು ಮರೆಯುವುದಿಲ್ಲ. ಮುಂದೆಂದೂ ನಿಮ್ಮ ಸಂದರ್ಶನ ಮಾಡುವುದಿಲ್ಲ. ಇಂತಹ ಕೆಲಸ ನಿಮ್ಮಿಂದ ನಿರೀಕ್ಷಿರಲಿಲ್. ಇದನ್ನು ಎಂದಿಗೂ ಮರೆಯುವುದಿಲ್ಲ’ ಎಂದು ಸಂದೇಶ ಕಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT