ಸೋಮವಾರ, ಆಗಸ್ಟ್ 8, 2022
22 °C
ವಿಶ್ವ ಟೆಸ್ಟ್ ಫೈನಲ್ ಅಂಗವಾಗಿ 10 ದಿಗ್ಗಜರಿಗೆ ಗೌರವ

ಐಸಿಸಿ ಹಾಲ್‌ ಆಫ್‌ ಫೇಮ್‌ಗೆ ವಿನೂ ಮಂಕಡ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಭಾರತದ ವಿನೂ ಮಂಕಡ್ ಸೇರಿದಂತೆ ವಿಶ್ವದ ಹತ್ತು ಮಂದಿ ದಿಗ್ಗಜ ಕ್ರಿಕೆಟಿಗರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಪಿಎಲ್) ಹಾಲ್‌ ಆಫ್ ಫೇಮ್ ಗೌರವ ನೀಡಲಾಗಿದೆ.

ಇದೇ 18ರಂದು ಸೌತಾಂಪ್ಟನ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ನಡೆಯಲಿದೆ. ಇದರ ಅಂಗವಾಗಿ 1918ರಿಂದ 2016ರವರೆಗಿನ ಐದು ಕಾಲಘಟ್ಟಗಳಲ್ಲಿ ತಲಾ ಇಬ್ಬರನ್ನು ಆಯ್ಕೆ ಮಾಡಲಾಗಿದೆ.

1918ಕ್ಕೂ ಮುಂಚಿನ ಕಾಲಘಟ್ಟದಲ್ಲಿ ದಕ್ಷಿಣ ಆಫ್ರಿಕಾದ ಆಬ್ರೆ ಫಾಕ್ನರ್ ಮತ್ತು ಆಸ್ಟ್ರೇಲಿಯಾದ ಮಾಂಟಿ ನೊಬಲ್; ಮಹಾಯುದ್ಧ ಕಾಲಘಟ್ಟದಲ್ಲಿ (1918–1945)  ವೆಸ್ಟ್ ಇಂಡೀಸ್‌ನ ಸರ್ ಲೇರಿ ಕಾನ್ಸಟೆಂಟಿನ್,  ಆಸ್ಟ್ರೇಲಿಯಾದ ಸ್ಟಾನ್ ಮೆಕ್‌ಕೆಬ್; ಮಹಾಯುದ್ಧಾನಂತರ (1946–1970) ಕಾಲದಲ್ಲಿ ಭಾರತದ ವಿನೂ ಮಂಕಡ್ ಮತ್ತು ಇಂಗ್ಲೆಂಡ್‌ನ ಟೆಡ್ ಡೆಕ್ಸಟರ್ ಅವನ್ನು  ಆಯ್ಕೆ ಮಾಡಲಾಗಿದೆ. 

ಏಕದಿನ ಕ್ರಿಕೆಟ್ ಕಾಲಘಟ್ಟ ದಲ್ಲಿ (1971–1995) ವೆಸ್ಟ್‌ ಇಂಡೀಸ್‌ನ ಡೆಸ್ಮಂಡ್ ಹೆಯ್ನ್ಸ್‌, ಇಂಗ್ಲೆಂಡ್‌ನ ಬಾಬ್ ವಿಲ್ಲಿಸ್,  ಆಧುನಿಕ ಕಾಲಘಟ್ಟ (1996–2016) ದಲ್ಲಿ  ಜಿಂಬಾಬ್ವೆಯ ಆ್ಯಂಡಿ ಫ್ಲವರ್ ಮತ್ತು ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರನ್ನು  ಆಯ್ಕೆ ಮಾಡಲಾಗಿದೆ.

ಭಾರತದ ಸಾರ್ವಕಾಲಿಕ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿರುವ ವಿನೂ ಮಂಕಡ್ ಆರಂಭಿಕ ಬ್ಯಾಟ್ಸ್‌ಮನ್ ಮತ್ತು ಎಡಗೈ ಸ್ಪಿನ್ನರ್ ಆಗಿದ್ದರು. ಅವರು 44 ಟೆಸ್ಟ್‌ಗಳಲ್ಲಿ ಆಡಿದ್ದರು. 2109 ರನ್‌ಗಳನ್ನು 31.47ರ ಸರಾಸರಿಯಲ್ಲಿ ಗಳಿಸಿದ್ದರು.  162 ವಿಕೆಟ್‌ಗಳನ್ನು ಗಳಿಸಿದ್ದರು. ತಂಡದ ಎಲ್ಲ ಕ್ರಮಾಂಕಗಳಲ್ಲಿಯೂ ಬ್ಯಾಟಿಂಗ್ ಮಾಡಿದ ಭಾರತದ ಮೂವರು ಬ್ಯಾಟ್ಸ್‌ಮನ್‌ಗಳಲ್ಲಿ ಮಂಕಡ್ ಕೂಡ ಒಬ್ಬರು.

‘ವಿನೂ ಮಂಕಡ್ ಆತ್ಮವಿಶ್ವಾಸದ ಪ್ರತೀಕವಾಗಿದ್ದರು. ಎಂದಿಗೂ ಸೋಲೊಪ್ಪದ ಮನೋಭಾವ ಅವರದ್ದು. ಸತತವಾಗಿ ರನ್ ಗಳಿಸುತ್ತಿರು. ಶತಕ ಬಾರಿಸಿದಾಗಲೂ ನಿನ್ನತ್ತ ಆಯ್ಕೆದಾರರು ನೋಡಲಿಲ್ಲವೆಂದರೆ, ನಂತರದ ಪಂದ್ಯದಲ್ಲಿ ದ್ವಿಶತಕ ಬಾರಿಸು. ನಿನ್ನ ಸಾಮರ್ಥ್ಯವನ್ನು ಇನ್ನಷ್ಟು ಜೋರಾಗಿ ಜಗಜ್ಜಾಹೀರು ಮಾಡು ಎಂದು ನನಗೆ ಯಾವಾಗಲೂ ಹೇಳುತ್ತಿದ್ದರು. ಅವರ ಮಾತುಗಳೇ ನನಗೆ ಪ್ರೇರಣೆಯಾಗಿದ್ದವು‘ ಎಂದು ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಸ್ಮರಿಸಿದ್ದಾರೆ. 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು