ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Cricket | ಸಮಾನತೆ ಸೂಚಿಸುವ ಪದ ಬಳಕೆ: ಬರಲಿದೆ ಬ್ಯಾಟ್ಸ್‌ಮನ್ ಬದಲಿಗೆ ಬ್ಯಾಟರ್‌

Last Updated 22 ಸೆಪ್ಟೆಂಬರ್ 2021, 13:30 IST
ಅಕ್ಷರ ಗಾತ್ರ

ಮುಂಬೈ: ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್ ಪದದ ಬದಲಿಗೆ ಲಿಂಗಸಮಾನತೆ ಸೂಚಿಸುವ ‘ಬ್ಯಾಟರ್’ ಪದ ಇನ್ನು ಮುಂದೆ ಬಳಕೆಗೆ ಬರಲಿದೆ. ಇದಕ್ಕೆ ಸಂಬಂಧಿಸಿ ನಿಯಮ ರೂಪಿಸಲಾಗಿದ್ದು ಬದಲಾವಣೆ ತಕ್ಷಣದಿಂದ ಜಾರಿಯಾಗಿದೆ ಎಂದು ಮೆರಿಲ್‌ಬಾರ್ನ್‌ ಕ್ರಿಕೆಟ್ ಕ್ಲಬ್‌ (ಎಂಸಿಸಿ) ಬುಧವಾರ ತಿಳಿಸಿದೆ.

ಮಹಿಳಾ ಕ್ರಿಕೆಟ್ ಇತ್ತೀಚಿನ ವರ್ಷಗಳಲ್ಲಿ ಉತ್ತಮ ಹೆಸರು ಗಳಿಸಿದ್ದರೂ ಬ್ಯಾಟಿಂಗ್ ಮಾಡುವವರನ್ನು ಸೂಚಿಸಲು ಸಮಾನ ಪದ ಜಾರಿಯಲ್ಲಿ ಇರಲಿಲ್ಲ. ಮಹಿಳಾ ಕ್ರಿಕೆಟ್‌ನಲ್ಲಿ ಬ್ಯಾಟರ್ ಎಂದು ಬಳಸಲಾಗುತ್ತಿದ್ದರೂ ಬ್ಯಾಟ್ಸ್‌ಮನ್ ಎಂಬ ಪದವೇ ವಿಜೃಂಭಿಸುತ್ತಿತ್ತು. ಹೀಗಾಗಿ ಒಂದೇ ಪದವನ್ನು ಬಳಕೆಗೆ ತರಲು ನಿರ್ಧರಿಸಲಾಗಿದೆ.

2017ರಲ್ಲಿ ನಡೆದ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ವೀಕ್ಷಿಸಲು ಲಾರ್ಡ್ಸ್ ಅಂಗಣದಲ್ಲಿ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು. ಮೆಲ್ಬರ್ನ್‌ನಲ್ಲಿ ಕಳೆದ ವರ್ಷದ ನಡೆದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯವನ್ನು 80 ಸಾವಿರ ಮಂದಿ ವೀಕ್ಷಿಸಿದ್ದರು. ಇದು, ಮಹಿಳಾ ಕ್ರಿಕೆಟ್‌ ಹೆಸರು ಗಳಿಸಿರುವುದಕ್ಕೆ ಸಾಕ್ಷಿಯಾಗಿತ್ತು.

1787ರಲ್ಲಿ ಸ್ಥಾಪನೆಯಾದ ಎಂಸಿಸಿ ಕ್ರಿಕೆಟ್‌ಗೆ ಸಂಬಂಧಿಸಿದ ನಿಯಮ ರೂಪಿಸುವ ಏಕೈಕ ಸಂಸ್ಥೆಯಾಗಿದೆ. ಲಿಂಗ ಸಮಾನತೆ ಸೂಚಿಸುವ ಪದ ಜಾರಿಗೆ ಬರುವುದರ ಮೂಲಕ ಕ್ರಿಕೆಟ್‌ನ ಘನತೆ ಇನ್ನಷ್ಟು ಹೆಚ್ಚಲಿದ್ದು ಎಲ್ಲರನ್ನೂ ಒಳಗೊಳ್ಳಿಸುವ ಕ್ರೀಡೆಯಾಗಿ ಮುಂದುವರಿಯಲಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

‘ಕ್ರಿಕೆಟ್ ಸಂಬಂಧಿಸಿದ ಅನೇಕ ಸಂಸ್ಥೆಗಳು ಆಟದ ಸಂದರ್ಭದಲ್ಲಿ ಮತ್ತು ಮಾಧ್ಯಮಗಳು ವರದಿ ಮಾಡುವ ಸಂದರ್ಭದಲ್ಲಿ ಈಗಾಗಲೇ ‘ಬ್ಯಾಟರ್‌’ ಪದ ಬಳಸುತ್ತಿವೆ. ಇದನ್ನು ಎಲ್ಲರೂ ಬಳಸುವಂತಾಗಬೇಕು ಎಂಬುದು ನಮ್ಮ ಆಶಯ ಎಂದು ಎಂಸಿಸಿ ಅಭಿಪ್ರಾಯಪಟ್ಟಿದೆ.

ಎಂಸಿಸಿ ಅಧ್ಯಕ್ಷ ಕುಮಾರ ಸಂಗಕ್ಕಾರ ಅವರ ಅವಧಿ ಮುಂದಿನ ತಿಂಗಳು ಮುಕ್ತಾಯಗೊಳ್ಳಲಿದೆ. ಇಂಗ್ಲೆಂಡ್ ತಂಡದ ಮಾಜಿ ನಾಯಕಿ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಮಹಿಳಾ ಕ್ರಿಕೆಟ್‌ ವಿಭಾಗದ ವ್ಯವಸ್ಥಾಪಕ ನಿರ್ದೇಶಕಿ ಎಂಸಿಸಿಯ ಮುಂದಿನ ಅಧ್ಯಕ್ಷೆಯಾಗಲಿದ್ದಾರೆ. ಈ ಮೂಲಕ ಮೊದಲ ಬಾರಿ ಕ್ಲಬ್‌ನ ಚುಕ್ಕಾಣಿ ಮಹಿಳೆಯೊಬ್ಬರ ಕೈಗೆ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT