ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ–ಡೆಲ್ಲಿ ಮುಖಾಮುಖಿ ಇಂದು: ಪ್ರಖರವಾಗಿ ಬೆಳಗುವರೇ ’ಸೂರ್ಯ’?

Published 6 ಏಪ್ರಿಲ್ 2024, 23:30 IST
Last Updated 6 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಮುಂಬೈ: ಫಿಟ್‌ ಆಗಿ ತಂಡಕ್ಕೆ ಮರಳಿರುವ ಟಿ20 ಪರಿಣತ ಬ್ಯಾಟರ್‌ ಸೂರ್ಯಕುಮಾರ್ ಯಾದವ್ ಅವರಿಂದ ಮುಂಬೈ ತಂಡ ಈಗ ಒಳ್ಳೆಯ ಕೊಡುಗೆ ನಿರೀಕ್ಷಿಸುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಭಾನುವಾರ ಮಧ್ಯಾಹ್ನ ನಡೆಯುವ ಐಪಿಎಲ್‌ ಪಂದ್ಯದಲ್ಲಿ ಎದುರಿಸಲಿರುವ ಮುಂಬೈ ಇಂಡಿಯನ್ಸ್ ಆರಂಭದ ಹಿನ್ನಡೆಯಿಂದ ಹೊರಬರುವ ಯತ್ನದಲ್ಲಿದೆ.

ಮುಂಬೈ ತಂಡ ಸತತ ಮೂರು ಸೋಲುಗಳೊಡನೆ ಈ ಋತುವನ್ನು ಆರಂಭಿಸಿದ್ದು, ಇಂಥ ಆರಂಭ ತಂಡಕ್ಕೆ ಹೊಸದೇನಲ್ಲ. ಮುಂಬೈ ತಳದಲ್ಲಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್‌ ಒಂದು ಸ್ಥಾನ ಮೇಲೆ, ಅಂದರೆ ಒಂಬತ್ತರಲ್ಲಿದೆ. ಡೆಲ್ಲಿ ತನ್ನ ಕೊನೆಯ ಪಂದ್ಯದಲ್ಲಿ ಕೆಕೆಆರ್ ಕೈಲಿ ಹೀನಾಯವಾಗಿ ಸೋತಿತ್ತು. ಆಡಿದ ನಾಲ್ಕರಲ್ಲಿ ಮೂರು ಸೋತಿದೆ.

‌ಟಿ20 ವಿಶ್ವಕಪ್ ಹತ್ತಿರದಲ್ಲೇ ಇರುವುದರಿಂದ ಸೂರ್ಯಕುಮಾರ್ ಅವರ ಪ್ರದರ್ಶನದ ಮೇಲೆ ಎಲ್ಲರಿಗೂ ಕುತೂಹಲ ಇದೆ. ಅವರ ಲಯ ಮತ್ತು ಫಿಟ್ನೆಸ್‌ ಎರಡೂ ಭಾರತ ತಂಡದ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಪಾದದ ಗಾಯ ಮತ್ತು ಸ್ಪೋರ್ಟ್ಸ್ ಹರ್ನಿಯಾದಿಂದ ಅವರು ಮೂರು ತಿಂಗಳು ಕ್ರಿಕೆಟ್‌ನಿಂದ ದೂರವಿದ್ದರು.

ಶುಕ್ರವಾರ ತಂಡದ ಜೊತೆ ಮೊದಲ ಬಾರಿ ಸಿದ್ಧತೆಯಲ್ಲಿ ಕಾಣಿಸಿಕೊಂಡರು. ಆದರೆ ಬ್ಯಾಟಿಂಗ್ ವೇಳೆ ಅವರು ತೊಂದರೆಯಲ್ಲಿದ್ದಂತೆ ಕಾಣಲಿಲ್ಲ. ಈಗ ತಂಡದ ಪ್ರಮುಖ ಬ್ಯಾಟರ್‌ಗಳು ಪರದಾಡುತ್ತಿರುವ ವೇಳೆ ಸೂರ್ಯ ಹೆಗಲ ಮೇಲೆ ಹೆಚ್ಚಿನ ಭಾರವಿದೆ.

ಆರಂಭದಲ್ಲಿ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಅಂಥ ತಾರೆಗಳಿದ್ದರೂ, ಇಬ್ಬರೂ ದೊಡ್ಡ ಮೊತ್ತ ಗಳಿಸಿಲ್ಲ. ತಿಲಕ್‌ ವರ್ಮಾ ಮತ್ತು ನಮನ್ ಧೀರ್ ಕೂಡ ನಿರೀಕ್ಷಿತ ಮಟ್ಟದಲ್ಲಿ ಆಡುತ್ತಿಲ್ಲ. ಹಾರ್ದಿಕ್ ಪಾಂಡ್ಯ ಅವರಿಗೂ ಕೂಡ ತಂಡದಲ್ಲಿ ಸ್ಫೂರ್ತಿಯ ವಾತಾವರಣ ಮೂಡಿಸಲು ಆಗಿಲ್ಲ. ಅವರೇ ಪ್ರೇಕ್ಷಕರ ಮೂದಲಿಕೆಗೆ ಒಳಗಾಗಿದ್ದಾರೆ. ಭಾನುವಾರ ಪಂದ್ಯಕ್ಕೆ 20,000 ಮಕ್ಕಳು ಬರುವುದರಿಂದ ಅವರು ಸ್ವಲ್ಪ ನಿರಾಶರಾಗಬಹುದು.

ಈ ಹಿಂದಿನ ಪಂದ್ಯದಲ್ಲಿ ಆಕಾಶ್‌ ಮಧ್ವಾಲ್ ಅವರು ಪಡೆದ ಮೂರು ವಿಕೆಟ್‌ಗಳು ತಂಡದ ಪಾಲಿಗೆ ಬೆಳ್ಳಿಗೆರೆಯಂತೆ ಮೂಡಿದವು. ಬೂಮ್ರಾ ಅವರನ್ನು ಹಿಂದಿನಂತೆ ಆರಂಭದಲ್ಲೇ ಬಳಸುತ್ತಿಲ್ಲ. ಕಳೆದ ಪಂದ್ಯದಲ್ಲಿ ಅವರು ಬೇಗ ಬೌಲಿಂಗ್ ಮಾಡಿದರೂ, ಎದುರಾಳಿ ರಾಜಸ್ತಾನ ರಾಯಲ್ಸ್‌ಗೆ ಗುರಿ ದೊಡ್ಡದಿರಲಿಲ್ಲ.

ಡೆಲ್ಲಿ ತಂಡದ ಸ್ಟಾರ್ ಆಟಗಾರ ರಿಷಭ್ ಪಂತ್ (152 ರನ್) ನಿಧಾನವಾಗಿ ಲಯಕಂಡಿದ್ದಾರೆ. ಆದರೆ ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಬೌಲರ್‌ಗಳ ‍ಪ್ರದರ್ಶನ ಸಪ್ಪೆಯಾಗಿದ್ದು, ಕೆಕೆಆರ್ ತಂಡ 7 ವಿಕೆಟ್‌ಗೆ 272 ರನ್‌ಗಳ ದೊಡ್ಡ ಮೊತ್ತ ಪೇರಿಸಿತ್ತು. ನಂತರ ಡೆಲ್ಲಿ ಬ್ಯಾಟರ್‌ಗಳು ಅಷ್ಟೇನೂ ಹೋರಾಟ ತೋರಿರಲಿಲ್ಲ. ಡೇವಿಡ್‌ ವಾರ್ನರ್ (148), ಟ್ರಿಸ್ಟನ್ ಸ್ಟಬ್ಸ್‌ ಕೆಲಮಟ್ಟಿಗೆ ಆಡಿದ್ದಾರೆ. ಆದರೆ ತಂಡ ಪೃಥ್ವಿ ಶಾ ಅವರಿಂದ ದೊಡ್ಡ ಇನಿಂಗ್ಸ್‌ನ ನಿರೀಕ್ಷೆಯಲ್ಲಿದೆ. ಮಿಚೆಲ್ ಮಾರ್ಷ್ ಇದುವರೆಗೆ ನಿರಾಸೆ ಮೂಡಿಸಿದ್ದಾರೆ.

ಪಂದ್ಯ ಆರಂಭ: ಮಧ್ಯಾಹ್ 3.30,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT