ಶುಕ್ರವಾರ, ಮಾರ್ಚ್ 24, 2023
23 °C
ಕ್ರಿಕೆಟ್‌: ನ್ಯೂಜಿಲೆಂಡ್‌ ವಿರುದ್ಧದ ಕೊನೆಯ ಏಕದಿನ ಪಂದ್ಯ

ನ್ಯೂಜಿಲೆಂಡ್‌ ವಿರುದ್ಧ ಕೊನೆ ಏಕದಿನ ಪಂದ್ಯ: ಭಾರತಕ್ಕೆ ಸರಣಿ ಸ್ವೀಪ್‌ ಗುರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಂದೋರ್‌: ಸರಣಿ ಕ್ಲೀನ್‌ಸ್ವೀಪ್‌ ಮೇಲೆ ಕಣ್ಣಿಟ್ಟಿರುವ ರೋಹಿತ್‌ ಶರ್ಮಾ ಬಳಗ, ಮೂರನೇ ಹಾಗೂ ಕೊನೆಯ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಮಂಗಳವಾರ ಇಲ್ಲಿ ನ್ಯೂಜಿಲೆಂಡ್‌ ವಿರುದ್ಧ ಪೈಪೋಟಿ ನಡೆಸಲಿದೆ.

ಮೂರು ಪಂದ್ಯಗಳ ಸರಣಿಯನ್ನು ಈಗಾಗಲೇ 2–0 ರಲ್ಲಿ ಕೈವಶಮಾಡಿಕೊಂಡಿರುವ ಭಾರತ ತಂಡ, ಈ ಪಂದ್ಯದಲ್ಲಿ ಕೆಲವು ಪ್ರಯೋಗಗಳಿಗೆ ಮುಂದಾಗುವ ನಿರೀಕ್ಷೆಯಿದೆ. ಮೊದಲ ಎರಡು ಪಂದ್ಯಗಳಲ್ಲಿ ಆಡಲು ಅವಕಾಶ ಸಿಗದ ಕೆಲವರು ಇಂದೋರ್‌ನಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ಆರಂಭಿಕ ಬ್ಯಾಟರ್‌ ಶುಭಮನ್‌ ಗಿಲ್‌ ಮತ್ತು ರೋಹಿತ್‌ ಅವರು ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ದ್ವಿಶತಕ ಗಳಿಸಿದ್ದ ಗಿಲ್‌, ಎರಡನೇ ಪಂದ್ಯದಲ್ಲಿ ಅಜೇಯ 40 ರನ್‌ ಪೇರಿಸಿದ್ದರು. ಇಶಾನ್‌ ಕಿಶನ್‌, ಹಾರ್ದಿಕ್‌ ಪಾಂಡ್ಯ ಮತ್ತು ಸೂರ್ಯಕುಮಾರ್‌ ಯಾದವ್ ಅವರಿಗೆ ‘ಬ್ಯಾಟಿಂಗ್‌ ಪ್ರಾಕ್ಟೀಸ್‌’ ಮಾಡಲು ಈ ಪಂದ್ಯ ಉತ್ತಮ ಅವಕಾಶ ಕಲ್ಪಿಸಿದೆ.

ನಾಲ್ಕು ಇನಿಂಗ್ಸ್‌ಗಳಲ್ಲಿ ಮೂರು ಶತಕ ಗಳಿಸಿ ಮಿಂಚಿದ್ದ ವಿರಾಟ್‌ ಕೊಹ್ಲಿ, ಈ ಸರಣಿಯಲ್ಲಿ ವಿಫಲರಾಗಿದ್ದಾರೆ. ಎರಡೂ ಪಂದ್ಯಗಳಲ್ಲಿ ಅವರು ಮಿಚೆಲ್‌ ಸ್ಯಾಂಟನರ್‌ಗೆ ವಿಕೆಟ್‌ ಒಪ್ಪಿಸಿದ್ದರು. ಎಡಗೈ ಸ್ಪಿನ್ನರ್‌ಗಳನ್ನು ಎದುರಿಸುವಲ್ಲಿ ಅವರು ತಡಬಡಾಯಿಸುವರು ಎಂಬುದು ಮತ್ತೆ ಬಯಲಾಗಿದೆ.

ಹಾರ್ದಿಕ್‌ ಪಾಂಡ್ಯ ಮತ್ತು ಸೂರ್ಯಕುಮಾರ್‌ ಯಾದವ್‌ ಅವರಿಗೆ ಟಿ20ಯಲ್ಲಿ ತೋರಿದ್ದ ಅಬ್ಬರದ ಆಟವನ್ನು ಏಕದಿನ ಪಂದ್ಯಗಳಲ್ಲೂ ಮುಂದುವರಿಸಲು ಆಗಿಲ್ಲ. ಇಂದೋರ್‌ನಲ್ಲಿ ಅವರಿಂದ ಸ್ಫೋಟಕ ಆಟವನ್ನು ನಿರೀಕ್ಷಿಸಲಾಗುತ್ತಿದೆ.

ಆತಿಥೇಯ ತಂಡದ ಬೌಲಿಂಗ್ ವಿಭಾಗದಲ್ಲಿ ಕೆಲವೊಂದು ಬದಲಾವಣೆಗಳನ್ನು ನಿರೀಕ್ಷಿಸಬಹುದು. ಇದುವರೆಗೆ ಅವಕಾಶ ಪಡೆಯದಿರುವ ಉಮ್ರಾನ್‌ ಮಲಿಕ್‌ ಮತ್ತು ಯಜುವೇಂದ್ರ ಚಾಹಲ್‌ ಅವರನ್ನು ಆಡಿಸುವ ಸಾಧ್ಯತೆಯಿದೆ. ಕುಲದೀಪ್‌ ಯಾದವ್‌ಗೆ ವಿಶ್ರಾಂತಿ ನೀಡಬಹುದು. ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ವೇಗಿಗಳು ಮತ್ತು ಸ್ಪಿನ್ನರ್‌ಗಳು ಶಿಸ್ತಿನ ದಾಳಿ ನಡೆಸಿದ್ದರು.

ಮತ್ತೊಂದೆಡೆ ನ್ಯೂಜಿಲೆಂಡ್‌ ತಂಡ ಅಂತಿಮ ಪಂದ್ಯದಲ್ಲಿ ಸಮಾಧಾನಕರ ಗೆಲುವು ಪಡೆಯಲು ಪ್ರಯತ್ನಿಸಲಿದೆ. ಅದು ಸಾಧ್ಯವಾಗಬೇಕಾದರೆ ಬ್ಯಾಟಿಂಗ್‌ನಲ್ಲಿನ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಮೈಕಲ್‌ ಬ್ರೇಸ್‌ವೆಲ್ ಮತ್ತು ಮಿಚೆಲ್‌ ಸ್ಯಾಂಟನರ್‌ ಹೊರತುಪಡಿಸಿ ಉಳಿದವರಿಗೆ ದೊಡ್ಡ ಇನಿಂಗ್ಸ್‌ ಕಟ್ಟಲು ಸಾಧ್ಯವಾಗಿಲ್ಲ.

ಹೋಲ್ಕರ್‌ ಕ್ರೀಡಾಂಗಣದ ಪಿಚ್‌ ಬ್ಯಾಟರ್‌ಗಳಿಗೆ ನೆರವಾಗುವ ಸಾಧ್ಯತೆಯಿರುವುದರಿಂದ ಬೌಲರ್‌ಗಳ ಮೇಲೆ ಹೆಚ್ಚಿನ ಸವಾಲು ಇದೆ.

ತಂಡಗಳು: ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್ (ವಿಕೆಟ್‌ಕೀಪರ್), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆ.ಎಸ್. ಭರತ್ (ವಿಕೆಟ್‌ಕೀಪರ್), ರಜತ್ ಪಾಟೀದಾರ್, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹಮದ್, ಶಾರ್ದೂಲ್ ಠಾಕೂರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್

ನ್ಯೂಜಿಲೆಂಡ್: ಟಾಮ್ ಲಥಾಮ್ (ನಾಯಕ), ಫಿನ್ ಅಲೆನ್, ಡಫ್ ಬ್ರೆಸ್‌ವೆಲ್, ಮೈಕಲ್‌ ಬ್ರೆಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೆ, ಜೇಕಬ್ ಡಫಿ, ಲಾಕಿ ಫರ್ಗ್ಯುಸನ್, ಡೆರಿಲ್ ಮಿಚೆಲ್, ಹೆನ್ರಿ ನಿಕೊಲ್ಸ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟನರ್, ಹೆನ್ರಿ ಶಿಪ್ಲಿ, ಈಶ್ ಸೋಧಿ, ಬ್ಲೇರ್ ಟಿಕ್ನರ್

ಪಂದ್ಯ ಆರಂಭ: ಮಧ್ಯಾಹ್ನ 1.30 

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು