ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡುಲ್ಜಿಯಿಂದ ಪಕ್ಷಪಾತ, ತೇಜೋವಧೆ ಮಾಡಿದ ರಮೇಶ್: ಮಿಥಾಲಿ ರಾಜ್ ಆಕ್ರೋಶ

ಬಿಸಿಸಿಐಗೆ ಪತ್ರ ಬರೆದ ಹಿರಿಯ ಆಟಗಾರ್ತಿ
Last Updated 27 ನವೆಂಬರ್ 2018, 13:34 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಅವರು ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಸದಸ್ಯೆ ಡಯಾನಾ ಎಡುಲ್ಜಿ ಮತ್ತು ತಂಡದ ಕೋಚ್ ರಮೇಶ್ ಪೋವಾರ್ ವಿರುದ್ಧ ಕಿಡಿ ಕಾರಿದ್ದಾರೆ.

ಈಚೆಗೆ ವೆಸ್ಟ್‌ ಇಂಡೀಸ್‌ನಲ್ಲಿ ನಡೆದಿದ್ದ ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಆಡಿದ ಭಾರತದ ಹನ್ನೊಂದು ಆಟಗಾರ್ತಿಯ ತಂಡದಿಂದ ಮಿಥಾಲಿ ಅವರನ್ನು ಕೈಬಿಡಲಾಗಿತ್ತು. ಪ್ರಕರಣದ ಕುರಿತು ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ‘ಆಯ್ಕೆಯ ಕುರಿತು ಪ್ರಶ್ನಿಸುವುದು ಸರಿಯಲ್ಲ.ಒಂದೊಮ್ಮೆ ಸೆಮಿಫೈನಲ್‌ನಲ್ಲಿ ಭಾರತ ಗೆದ್ದಿದ್ದರೆ ಈ ಮಾತೇ ಬರುತ್ತಿರಲಿಲ್ಲ ಅಲ್ಲವೇ?’ ಎಂದು ಎಡುಲ್ಜಿ ಸೋಮವಾರ ಹೇಳಿಕೆ ನೀಡಿದ್ದರು. ಇದರಿಂದ ಕೆರಳಿರುವ ಮಿಥಾಲಿ ರಾಜ್ ಮಂಗಳವಾರ ಬಿಸಿಸಿಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ರಾಹುಲ್ ಜೊಹ್ರಿ ಮತ್ತು ಕ್ರಿಕೆಟ್ ಆಪರೇಷನ್ಸ್‌ ವಿಭಾಗದ ಮುಖ್ಯ ವ್ಯವಸ್ಥಾಪಕ ಸಾಬಾ ಕರೀಂ ಅವರಿಗೆ ಪತ್ರ ಬರೆದಿದ್ದಾರೆ.

‘ಅಧಿಕಾರದಲ್ಲಿರುವ ಕೆಲವರು ನನ್ನನ್ನು ನಾಶಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಡಯಾನಾ ಎಡುಲ್ಜಿ ಅವರು ತಮ್ಮ ಅಧಿಕಾರವನ್ನು ನನ್ನ ವಿರುದ್ಧ ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಬರೆದಿದ್ದಾರೆ.

‘ಭಾರತ ಟ್ವೆಂಟಿ–20 ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಬಗ್ಗೆ ನನಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ ನನ್ನನ್ನು ತಂಡದಿಂದ ಹೊರಗಿಡಲು ನಿರ್ಧರಿಸಿದ ಕೋಚ್ ರಮೇಶ್ ಪೋವಾರ್ ಅವರ ನಿರ್ಣಯವನ್ನು ಮಾತ್ರ ಅವರು ಬೆಂಬಲಿಸಿದರು. ಅದು ಮಾತ್ರ ನನಗೆ ನೋವು ತಂದಿದೆ’ ಎಂದು ಮಿಥಾಲಿ ಬರೆದಿದ್ಧಾರೆ.

‘20 ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದೇನೆ. ಈ ಸುದೀರ್ಘ ಅವಧಿಯಲ್ಲಿ ಇಷ್ಟೊಂದು ನೋವು ಮತ್ತು ಬೇಸರವಾಗಿರಲಿಲ್ಲ. ದೇಶಕ್ಕಾಗಿ ಆಡುವುದು ಹೆಮ್ಮೆಯ ವಿಷಯ. ಆದರೆ ನನ್ನ ಆತ್ಮವಿಶ್ವಾಸವನ್ನು ಕಡಿತಗೊಳಿಸಲು ಅಧಿಕಾರಸ್ಥರು ಹುನ್ನಾರ ನಡೆಸಿದರು’ ಎಂದು ಕಿಡಿಕಾರಿದ್ಧಾರೆ.

‘ಡಯಾನ ಅವರ ಬಗ್ಗೆ ನನಗೆ ಅಪಾರ ವಿಶ್ವಾಸವಿತ್ತು. ಯಾವಾಗಲೂ ಅವರನ್ನು ಗೌರವಿಸಿದ್ದೇನೆ. ಆದರೆ ಇದೀಗ ಅವರು ತಮ್ಮ ಅಧಿಕಾರವನ್ನು ಈ ರೀತಿ ಬಳಕೆ ಮಾಡಿಕೊಳ್ಳುತ್ತಿರುವುದು ಆಘಾತ ತಂದಿದೆ. ವಿಂಡೀಸ್‌ನಲ್ಲಿ ನಡೆದಿದ್ದರಕುರಿತು ಅವರಿಗೆ ಈ ಮೊದಲೇ ಸಂಪೂರ್ಣವಾಗಿ ವಿವರಿಸಿದ್ದೆ. ಆದರೆ ನನ್ನನ್ನು ಬೆಂಚ್‌ನಲ್ಲಿ ಕೂರಿಸಿದ್ದನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಅವರಿಗೆ ನಿಜ ಸಂಗತಿಗಳು ಗೊತ್ತಿದ್ದೂ ಈ ರೀತಿ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ನನಗೆ ತೀವ್ರ ಬೇಸರವಾಗಿದೆ’ ಎಂದು ಮಿಥಾಲಿ ಬರೆದಿದ್ದಾರೆ.

‘ಪ್ರವಾಸದ ಸಂದರ್ಭದಲ್ಲಿ ನಾನು ಕೋಚ್‌ ಜೊತೆಗೆ ಹಲವು ಬಾರಿ ಮಾತನಾಡಲು ಪ್ರಯತ್ನಿಸಿದೆ. ನೆಟ್ಸ್‌ ಅಭ್ಯಾಸದ ಸಂದರ್ಭದಲ್ಲಿ ಅವರು ನನ್ನಿಂದ ದೂರವೇ ಉಳಿಯುತ್ತಿದ್ದರು. ನಾನಾಗಿಯೇ ಹೋಗಿ ಮಾತನಾಡಿಸಿದಾಗ ಫೋನ್‌ನಲ್ಲಿ ಸಂದೇಶಗಳನ್ನು ಓದುವ ಮತ್ತು ಕರೆಗಳನ್ನು ಮಾಡುವುದರ ಮೂಲಕ ಮಾತುಕತೆಯಿಂದ ದೂರ ಉಳಿಯುತ್ತಿದ್ದರು. ಈ ರೀತಿಯ ವರ್ತನೆಗಳು ಏನು ತೋರಿಸುತ್ತವೆ?’ ಎಂದು ಪ್ರಶ್ನಿಸಿದ್ಧಾರೆ.

35 ವರ್ಷದ ಮಿಥಾಲಿ ರಾಜ್ ಅವರು ವಿಶ್ವಕಪ್ ಟೂರ್ನಿಯ ಎರಡು ಪಂದ್ಯಗಳಲ್ಲಿ ಅರ್ಧಶತಕಗಳನ್ನು ಹೊಡೆದಿದ್ದರು. ಅವರು ಏಕದಿನ ಕ್ರಿಕೆಟ್‌ ತಂಡದ ನಾಯಕಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT